ದಾವಣಗೆರೆ:
12ನೇ ಶತಮಾನದ ಶರಣ ಸಾಹಿತ್ಯದಲ್ಲಿರುವ ಮಾನವೀಯ ಮೌಲ್ಯಗಳನ್ನು ಮರೆತರೆ ಮನುಕುಲಕ್ಕೆ ನೆಲೆಯಿಲ್ಲ ಎಂದು ಸಿರಿಗೆರೆಯ ಎಂ.ಬಿ.ಆರ್. ಕಾಲೇಜಿನ ವಿಶ್ರಾಂತ ಪ್ರಾಚಾರ್ಯರಾದ ಡಾ. ಲೋಕೇಶ ಒಡೆಯರ್ ಹೇಳಿದರು.
ದಾವಣಗೆರೆಯ ಶರಣ ಸಾಹಿತ್ಯ ಪರಿಷತ್ತು ಮತ್ತು ರಾಘವೇಂದ್ರ ಹೈಟೆಕ್ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಲಿಂಗೈಕ್ಯ ಓಂಕಾರಮ್ಮ, ಲಿಂಗೈಕ್ಯ ವೀರಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು “ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು” ಎನ್ನುವ ವಿಷಯ ಕುರಿತು ಉಪನ್ಯಾಸ ನೀಡಿದರು.

12ನೇ ಶತಮಾನದ ಶರಣರ ಸಾಹಿತ್ಯ ಜಗತ್ತಿನ ಶ್ರೇಷ್ಠ ಸಾಹಿತ್ಯವಾಗಿದ್ದು, ಶರಣರು ತಮ್ಮ ವಚನಗಳಲ್ಲಿ ಮಾನವೀಯ ಮೌಲ್ಯಗಳ ಮೂಲಕ ಮನುಷ್ಯ ಹೇಗೆ ನೆಮ್ಮದಿಯ ಬದುಕನ್ನು ಸಾಗಿಸಬಹುದು ಎಂದು ತಿಳಿಸಿದರು. ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಬಸವಣ್ಣನವರ ಸಪ್ತ ಸೂತ್ರಗಳಾದ ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ಇದಿರು ಅಳಿಯಲುಬೇಡ, ತನ್ನ ಬಣ್ಣಿಸಬೇಡ ಮುಂತಾದವುಗಳನ್ನು ಅಳವಡಿಸಿಕೊಳ್ಳಬೇಕು.
ಮತ್ತು ಪರಧನ, ಪರಸತಿ, ಪರದೈವವ ಒಲ್ಲೆನೆಂಬ, ಲಿಂಗ ಜಂಗಮ ಒಂದೇ ಎಂಬ ಛಲಗಳನ್ನು ರೂಢಿಸಿಕೊಳ್ಳಬೇಕೆಂದು, ಹಾಗೂ ಸಮಾನತೆಯ ಸಮಾಜವನ್ನು ಕಾಯಕ ಪ್ರಸಾದ ದಾಸೋಹ ತತ್ವಗಳ ಆಧಾರದ ಮೇಲೆ ನೆಲೆಗೊಳಿಸಬೇಕೆಂದು ತಿಳಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಬಿ ಪರಮೇಶ್ವರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಶರಣ ಸಾಹಿತ್ಯ ಪರಿಷತ್ತು 1986ರಲ್ಲಿ ಸ್ಥಾಪನೆಯಾಗಿದ್ದು 40 ವರ್ಷಗಳ ಸಂಭ್ರಮದಲ್ಲಿದೆ. ದಾವಣಗೆರೆ ಶರಣ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ 108 ದತ್ತಿಗಳನ್ನು ವಿವಿಧ ಶಾಲಾ ಕಾಲೇಜು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಡೆಸಿ 12ನೇ ಶತಮಾನದ ವಚನ ಸಾಹಿತ್ಯದ ಮೌಲ್ಯಗಳನ್ನು ಜನಮಾನಸದಲ್ಲಿ ಬಿತ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.
ಪರಿಷತ್ತಿನ ಯುವ ಘಟಕದ ಅಧ್ಯಕ್ಷರಾದ ಡಾ. ಶಿವರಾಜ ಕಣ್ಣೂ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಿಲಕುಮಾರ್ ಶ್ಯಾಗಲೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಮಮತಾ ನಾಗರಾಜ, ಭರಮಪ್ಪ ಮೈಸೂರು, ಆರ್ ಸಿದ್ದೇಶಪ್ಪ, ಬಿ.ಟಿ. ಪ್ರಕಾಶ, ಎಂ ನಾಗರಾಜ, ಶಿವರಾಜ್ ಎನ್. ಪಾಟೀಲ್, ನಿರ್ಮಲ ಶಿವಕುಮಾರ್, ವಿನೋದ ಅಜಗಣ್ಣನವರ್ ಮುಂತಾದವರು ಹಾಜರಿದ್ದರು.
ವಚನ ಮಂಗಲದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.
