ಒಲುಮೆ, ಹೊಂದಾಣಿಕೆಯೇ ಸುಖಿ ದಾಂಪತ್ಯದ ಗುಟ್ಟು
ಕಲಬುರಗಿ:
ಶರಣರ ದೃಷ್ಟಿಯಲ್ಲಿ ದಾಂಪತ್ಯವು ಕೇವಲ ಲೌಕಿಕ ಭೋಗವಲ್ಲ. ಬದಲಿಗೆ ಕಾಯಕ ಮತ್ತು ದಾಸೋಹ ತತ್ವಗಳ ಮೂಲಕ ಆತ್ಮೋದ್ಧಾರ ಮಾಡಿಕೊಳ್ಳುವ ಪವಿತ್ರ ಅನುಬಂಧವಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಉಪಾದ್ಯಕ್ಷ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಬಸವರಾಜ ಮತ್ತು ಸುಶೀಲಾ ಮೊರಬದ ಅವರ ಮದುವೆಯ ಸುವರ್ಣೋತ್ಸವ ಹಾಗೂ ರಿಷಭನ ಲಿಂಗದೀಕ್ಷಾ ಕಾರ್ಯಕ್ರಮ ನಿಮಿತ್ತ ಜಯನಗರದ ಅನುಭವ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸತಿ ಪತಿಗಳೊಂದಾದ ಭಕ್ತಿ’ ವಿಷಯ ಕುರಿತು ಮಾತನಾಡುತ್ತ, ಗಂಡ-ಹೆಂಡತಿ ಮಧ್ಯೆ ಪ್ರೀತಿ, ಹೊಂದಾಣಿಕೆ, ಸಾಮರಸ್ಯ ಮುಖ್ಯ. ಅವರು 36ರಂತೆ ಇರದೆ ಪರಸ್ಪರ 63ರಂತೆ ಸಂಸಾರ ಸಾಗಿಸಬೇಕು ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪದ ಪೂಜ್ಯ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಕಲಿಸಿಕೊಡುವಲ್ಲಿ ಪಾಲಕರ ಪಾತ್ರ ಬಹಳ ಮಹತ್ವದ್ದಾಗಿದೆ. ಬಸವ ಸಂಸ್ಕೃತಿ ಶ್ರಮ ಸಂಸ್ಕೃತಿಯ ಪ್ರತೀಕವಾಗಿದ್ದು, ಕಾಯಕ- ದಾಸೋಹ ಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಲಬುರಗಿಯ ಅಕ್ಕ ಮಹಾದೇವಿ ಆಶ್ರಮದ ಪೂಜ್ಯ ಪ್ರಭುಶ್ರೀ ತಾಯಿ ಸಾನಿಧ್ಯ, ಬಸವಕಲ್ಯಾಣ ಗುರುಬಸವ ಯೋಗ ಕೇಂದ್ರದ ಪೂಜ್ಯ ಗಾಯತ್ರಿ ತಾಯಿ ಸಮ್ಮುಖ ವಹಿಸಿದ್ದರು.

ಬೀದರ ವಚನ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಲ್ಲಮಪ್ರಭು ನಾವದಗೆರೆ, ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಬೀದರನ ಶರಣ ಚಿಂತಕ ಪ್ರಕಾಶ ಗಂದಿಗುಡೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಜಾಗತಿಕ ಲಿಂಗಾಯತ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಜಿ. ಶೆಟಗಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಕಾರ್ಯಕ್ರಮ ಉದ್ಘಾಟಿಸಿದರು. ನಗರ ಬಸವ ಕೇಂದ್ರದ ಅಧ್ಯಕ್ಷ ರವೀಂದ್ರ ಶಾಬಾದಿ ಅಧ್ಯಕ್ಷತೆ ವಹಿಸಿದ್ದರು. ಬೀದರ್ ನವರಸ ಕಲಾಲೋಕದ ವೈಜನಾಥ ಸಜ್ಜನಶೆಟ್ಟಿ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
