ವಿಶ್ವ ಶಾಂತಿಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡಲು ಗಂಗಾ ಮಾತಾಜಿ ಕರೆ

ಎಪ್ರಿಲ್ 1ರಿಂದ 7ರವರೆಗೆ ಸಂಕಲ್ಪ ಸಪ್ತಾಹ

ಬೆಂಗಳೂರು

ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ, ಅಕ್ಕ ನಾಗಲಾಂಬಿಕಾ ಮಹಿಳಾ ಗಣ ಹಾಗೂ ಬಸವಧರ್ಮ ಪೀಠದ ಎಲ್ಲಾ ಅನುಯಾಯಿಗಳು ಹಾಗೂ ವಿಶ್ವ ಕುಟುಂಬಿಗಳಾದ ಲಿಂಗಾಯತ ಬಂಧುಗಳೇ ನಿಮ್ಮೆಲ್ಲರಿಗೆ ಸೃಷ್ಟಿಕರ್ತ ಪರಮಾತ್ಮ ಹಾಗೂ ಧರ್ಮಪಿತ ಗುರು ಬಸವಣ್ಣನವರು ಸನ್ಮಂಗಲವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.

ಶರಣ ಬಂಧುಗಳೇ, ಇವತ್ತಿನ ಈ ಕ್ಲಿಷ್ಟ ಪರಿಸ್ಥಿತಿಯನ್ನು ಗಮನಿಸಿದರೆ ಸೃಷ್ಟಿಯನ್ನು ತಲ್ಲಣಗೊಳಿಸುವಂತಹ ಈ ಭಯಾನಕ ಯುದ್ಧಗಳು ಇಡೀ ಜಗತ್ತನ್ನೇ ಭಯದ ಅಂಚಿಗೆ ತಳ್ಳಿದಂತಿದೆ. ಪರಮಾತ್ಮ ಕೊಟ್ಟಂತಹ ಸೃಷ್ಟಿಯ ಸಂಪತ್ತನ್ನೇ ವಿನಾಶಗೊಳಿಸಿ ಸರ್ವನಾಶದತ್ತ ಸಾಗಿದೆ.

ಬರೀ ಮನುಜಕುಲವನ್ನಷ್ಟೇ ಅಲ್ಲ, ಇಡೀ ಜೀವಸಂಕುಲಗಳನ್ನು ಬರಿದು ಮಾಡಿ, ಚೈತನ್ಯರಹಿತವನ್ನಾಗಿ ಮಾಡಿ, ಜೀವ ಜಗತ್ತನ್ನು ನಿಷ್ಕ್ರಿಯಗೊಳಿಸಲು ಸಂಕಲ್ಪ ತೊಟ್ಟಂತಿದೆ.

ಸಾಂದರ್ಭಿಕ ಚಿತ್ರ

ಈ ಯುದ್ಧಗಳು ಪ್ರಾಣಿ-ಪಕ್ಷಿಗಳು, ಹಾಲುಣ್ಣುವ ಕಂದಮ್ಮಗಳು, ಅನ್ನ ಆಹಾರಗಳಿಲ್ಲದೇ ಹಸಿವಿನಿಂದ ಕಂಗೆಟ್ಟ ದೃಶ್ಯಗಳು, ಭಸ್ಮವಾದ ಮಹಲುಗಳ ಕೆಳಗೆ ಸಿಕ್ಕಾಕಿಕೊಂಡು ಸಣ್ಣ ಧ್ವನಿಯಲ್ಲಿ ಕೇಳಿಸುವ ಚೀರಾಟ, ನರಳಾಟಗಳು. ಸತ್ತವರು ಕಣ್ಮರೆಯಾಗಿ ಸಂಬಂಧಗಳೇ ಸತ್ತಂತಹ ಅನುಭವವಾಗುತ್ತದೆ. ಇಂತಹ ಸಂಧರ್ಭದಲ್ಲಿ “ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದೊಡೆ ನಿಲಬಹುದೇ” ಎಂಬ ಬಸವಣ್ಣನವರ ನುಡಿ ಎಷ್ಟು ಪ್ರಸ್ತುತ ವಾಣಿಯಂತಾಗಿದೆ.

ನಾವೀಗ “ಹಾಡಿದೊಡೆ ಎನ್ನೊಡೆಯನ ಹಾಡುವೆ, ಬೇಡಿದೊಡೆ ಎನ್ನೊಡೆಯನ ಬೇಡುವೆ” ಎನ್ನುವ ಹಾಗೆ ಸೃಷ್ಟಿಕರ್ತನ ಮೊರೆಹೋಗಬೇಕಾಗಿದೆ.

ಈ ಹಿಂದೆ 2000ನೇ ಇಸವಿಯಲ್ಲಿ ವಿಶ್ವಶಾಂತಿಗಾಗಿ ಲಿಂಗೈಕ್ಯ ಶ್ರೀಮನ್ನಿರಂಜನ ಪ್ರಣವ ಸ್ವರೂಪಿ, ಪ್ರಪ್ರಥಮ ಮಹಿಳಾ ಜಗದ್ಗುರು ಡಾ. ಮಾತೆ ಮಹಾದೇವಿ ತಾಯಿಯವರು ಬೆಂಗಳೂರು ಕೆ.ಆರ್. ಮಾರ್ಕೆಟ್ ಆವರಣದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 770 ಅಮರಗಣಂಗಳ ಪ್ರತೀಕವಾಗಿ ಸಾವಿರಾರು ಸಂಖ್ಯೆಯಲ್ಲಿ ಶರಣರನ್ನು ಸೇರಿಸಿ ಸಾಮೂಹಿಕವಾಗಿ ಇಷ್ಟಲಿಂಗ ಪೂಜಾ ಕೈಂಕರ್ಯವನ್ನು ಮಾಡಿಸಿದ್ದನ್ನು ಸ್ಮರಿಸಬಹುದು.

ಈಗ ಎಲ್ಲಾ ಶರಣ ಬಂಧುಗಳು ಏಳು ದಿನಗಳ ಕಾಲ ವಿಶ್ವ ಶಾಂತಿಯ ಸಂಕಲ್ಪದೊಂದಿಗೆ ವೈಯಕ್ತಿಕವಾಗಿ ಆಗಲೀ, ಸಾಮೂಹಿಕವಾಗಿ ಆಗಲೀ ರಾಜ್ಯದಾದ್ಯಂತ ಹಾಗೂ ಹೊರ ರಾಜ್ಯಗಳಾದ ತೆಲಂಗಾಣ. ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತಮಿಳುನಾಡು ಸೇರಿದಂತೆ ಶರಣ ಬಂಧುಗಳು ಇಷ್ಟಲಿಂಗ ಪೂಜೆಯನ್ನು ಮಾಡಿ ನಿವೇದನೆಯನ್ನು ಮಾಡಿಕೊಳ್ಳಲು ಬಸವ ಧರ್ಮಪೀಠ ಆದೇಶಿಸುತ್ತದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
2 Comments
  • ಯವ್ವಾ ನಿನ್ನ ಕರೆ ಗೌರವಿಸುತ್ತೇನೆ. ಮೊದಲು ಮಾತಾಜೀ ಬರೆದ ಧರ್ಮ ಗ್ರಂಥ ಹೊರ ಬರಲಿ. ಅದು ಮಾತಾಜೀ ಬರೆದ ಮೂಲ ಸ್ವರೂಪದಲ್ಲಿರಲಿ ಯಾವುದೇ ಕರಾಮತ್ತ ನಡೆಯ ಬಾರದು. ಆ ಗ್ರಂಥ ನೋಡಿ ಜನ ತಾವೇ ಸುಧಾರಿಸುತ್ತಾರೆ. ಗ್ರಂಥ ಬೇಗ ಹೊರ ಬಂದರೆ ನಿಮ್ಮ ಪೀಠಕ್ಕೆ ಬೆಲೆ ಇರುತ್ತೆ. ಇಲ್ಲವೆಂದರೆ ನೀವೊಬ್ಬರು ನಟನಾ ಪೀಠಾದಿಪತಿ. ಮಾತಾಜೀ ಎಷ್ಟು ತೀವೃತೆ ನಿಮ್ಮಲಿಲ್ಲ ಅದರ ಅರ್ಧನಾದರು ರೂಡಿಸಿ ಕೊಳ್ಳಿ.

  • ಬಸವಾದಿ ಶರಣರ ಶಾಂತಿ ಸಂದೇಶ ವಿಶ್ವದ ಸಕಲ ನಾಯಕರಿಗೆ ತಲುಪಿಸುವ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ.
    ಆದ್ಯ ವಚನಕಾರ ಜೇಡರ ದಾಸಮಪ್ಪನವರ ಈ ವಚನ ವಿಶ್ವ ನಾಯಕರ ಹೃದಯ ಪರಿವರ್ತಿಸಲಿ:
    ನಾನೊಂದು ಸರಿಗೆಯನು ಏನೆಂದು ಹಿಡಿಯಲಿ?
    ಏನ ಕಿತ್ತೇನ ಹಿರಿಯಲಿ?
    ಜಗವೆಲ್ಲಾ ನೀನೇ ತುಂಬಿಕೊಂಡಿರುವಿ! ರಾಮನಾಥ.

Leave a Reply

Your email address will not be published. Required fields are marked *

ಅಧ್ಯಕ್ಷರು, ಬಸವಧರ್ಮ ಪೀಠ, ಕೂಡಲಸಂಗಮ ಹಾಗೂ ರಾಷ್ಟ್ರೀಯ ಬಸವ ದಳ, ಕೇಂದ್ರ ಸಮಿತಿ.