ಬೆಳಗಾವಿಯಲ್ಲಿ ವಿಜೃಂಭಣೆಯಿಂದ ಬಸವ ಜಯಂತಿ ಆಚರಿಸಲು ನಿರ್ಧಾರ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವರಾಜ ರೊಟ್ಟಿ ಸಮಿತಿ ಸಂಚಾಲಕರಾಗಿ ಆಯ್ಕೆ

ಬೆಳಗಾವಿ :

ನಗರದಲ್ಲಿ ಬಸವ ಜಯಂತಿ ಉತ್ಸವವನ್ನು ಪ್ರತಿವರ್ಷದಂತೆ ಈ ವರ್ಷವೂ ಅತ್ಯಂತ ಉತ್ಸಾಹ, ವಿಜೃಂಭಣೆ, ಶ್ರದ್ಧಾಭಕ್ತಿಯಿಂದ ಆಚರಿಸಲು  ಲಿಂಗಾಯತ ಸಂಘಟನೆಗಳ ಒಕ್ಕೂಟ ನಿರ್ಣಯಿಸಿದೆ.

ಈಚೆಗೆ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಲಿಂಗಾಯತ, ಬಸವಪರ ಸಂಘಟನೆಗಳ ಸಭೆ ನಡೆದು ನಿರ್ಧಾರಕ್ಕೆ ಬರಲಾಗಿದೆ.

ಸಭೆಯಲ್ಲಿ ಲಿಂಗಾಯತ ಸಂಘಟನೆಗಳ ಒಕ್ಕೂಟದ ವತಿಯಿಂದ ಎಪ್ರೀಲ್ 19ರಂದು ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ನಗರದಾದ್ಯಂತ ಮುಂಜಾನೆ 9 ಗಂಟೆಯಿಂದ ಬೈಕ್ ರ್ಯಾಲಿ ನಡೆಸುವುದು.

ಬೈಕ್ ರ್ಯಾಲಿಯ ಜೊತೆಗೆ ಬಸವೇಶ್ವರ ವೃತ್ತದಲ್ಲಿ ಪ್ರತಿಷ್ಠಾಪಿಸಬೇಕೆಂದಿರುವ 15 ಅಡಿ ಎತ್ತರದ ಬಸವಣ್ಣನವರ ಮೂರ್ತಿಯ ಮೆರವಣಿಗೆ ಸಹ ನಡೆಸುವುದು. ಅದು ಚೆನ್ನಮ್ಮ ವೃತ್ತದಿಂದ ಬಸವೇಶ್ವರ ಉದ್ಯಾನವನ, ಬಸವೇಶ್ವರ ಸರ್ಕಲ್, ಗೋವಾ ವೇಸ್ ವರೆಗೆ ಮಾತ್ರ ಆಯೋಜಿಸುವದು ಎಂದು ತೀರ್ಮಾನ ಮಾಡಲಾಗಿದೆ.

ಸಮಾಜದ ಎಲ್ಲ ಬಾಂಧವರಿಗೆ 2026ರ ಬಸವ ಜಯಂತಿಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಈ ಸಲದ ಬಸವ ಜಯಂತಿ ಉತ್ಸವದ ಮೆರವಣಿಗೆ ಕಾರ್ಯಕ್ರಮವನ್ನು ಎಪ್ರೀಲ್ 26 ರವಿವಾರ ಸಾಯಂಕಾಲ ನಾಲ್ಕು ಗಂಟೆಗೆ ರಾಣಿ ಚೆನ್ನಮ್ಮ ವೃತ್ತದಿಂದ ಆಯೋಜಿಸಲು ತೀರ್ಮಾನಿಸಲಾಯಿತು.

ಎಲ್ಲಾ ಕಾರ್ಯಕ್ರಮಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಲು ಸಂಚಾಲಕ ಮಂಡಳಿಯನ್ನು ರಚಿಸಲಾಯಿತು.

ಸಂಚಾಲಕರಾಗಿ ಬಸವರಾಜ ರೊಟ್ಟಿ ನ್ಯಾಯವಾದಿ ಅವರು, ಸಹಸಂಚಾಲಕರಾಗಿ ರತ್ನಪ್ರಭಾ ಬೆಲ್ಲದ ಅಧ್ಯಕ್ಷರು ವೀರಶೈವ ಲಿಂಗಾಯತ ಮಹಾಸಭಾ, ಈರಣ್ಣ ದೇಯನ್ನವರ ಅಧ್ಯಕ್ಷರು ಲಿಂಗಾಯತ ಸಂಘಟನೆ, ಅಶೋಕ ಬೆಂಡಿಗೇರಿ ಅಧ್ಯಕ್ಷರು ರಾಷ್ಟ್ರೀಯ ಬಸವದಳ, ಡಾ. ಎಸ್.ಎಂ. ದೊಡಮನಿ ಅಧ್ಯಕ್ಷರು ಲಿಂಗಾಯತ ಸೇವಾ ಸಮಿತಿ, ಎಸ್. ಜಿ. ಸಿದ್ನಾಳ್ ಅಧ್ಯಕ್ಷರು ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ, ಕಿರಣ ಅಗಡಿ ಲಿಂಗಾಯತ ಬಿಜಿನೆಸ್ ಫೋರಂ, ಮಹಾಂತೇಶ ಗುಡಸ ಅಧ್ಯಕ್ಷರು ಲಿಂಗಾಯತ ಧರ್ಮ ಮಹಾಸಭಾ, ರಮೇಶ ತುಬಚಿ ಅಧ್ಯಕ್ಷರು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್, ಸೂರ್ಯಕಾಂತ್ ಬಾವಿ ಅಧ್ಯಕ್ಷರು ಬಸವ ಕಾಯಕ ಜೀವಿಗಳ ಸಂಘ ಇವರೆಲ್ಲ ಆಯ್ಕೆಗೊಂಡಿರುವರು.

ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ, ಸುಲಭವಾಗಿ ನೆರವೇರಿಸಲು ವಿವಿಧ ಉಪ ಸಮಿತಿಗಳಾದ, ಹಣಕಾಸು, ಪ್ರಚಾರ, ಮೆರವಣಿಗೆ, ಪ್ರಸಾದ ದಾಸೋಹ, ಸಾರಿಗೆ ಸಂಪರ್ಕ ಸಮಿತಿಗಳನ್ನು ಮುಂದಿನ ಸಭೆಯಲ್ಲಿ ರಚಿಸುವ ತೀರ್ಮಾನವಾಗಿದೆ.

ಸಭೆಯ ಕೊನೆಯಲ್ಲಿ ಸಂಚಾಲಕ ಬಸವರಾಜ ರೊಟ್ಟಿ ಮಾತನಾಡಿ, ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಕಾರ್ಯಕ್ರಮವನ್ನು  ಯಶಸ್ವಿಗೊಳಿಸಲು ಸಮಾಜದ ಎಲ್ಲ ಬಾಂಧವರ ಸಂಪೂರ್ಣ ಸಹಕಾರವನ್ನು ಕೋರಿದರು.

ಸಭೆಯಲ್ಲಿ ಬೆಳಗಾವಿ ಮಹಾನಗರದ ಎಲ್ಲ ಬಸವಪರ, ಲಿಂಗಾಯತಪರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ನಗರಸೇವಕರು, ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು, ಲಿಂಗಾಯತ ಸಮಾಜದ ಗಣ್ಯರು, ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *