ಸವದತ್ತಿ :
ಸ್ಥಳೀಯ ಪದಕಿಪುರಂ ಬಡಾವಣೆಯ ವೈದ್ಯಾಧಿಕಾರಿ ಡಾ. ಆನಂದ ಬಾಳಿ ಮತ್ತು ದಂತವೈದ್ಯೆ ಡಾ. ವಿದ್ಯಾ ಬಾಳಿ ದಂಪತಿಗಳು ನೂತನವಾಗಿ ನಿರ್ಮಿಸಿರುವ ತಮ್ಮ ಮನೆಯ ಪ್ರವೇಶವನ್ನು ತಮ್ಮ ಮಕ್ಕಳಾದ ಸಿಂಚಲಿ ಹಾಗೂ ಸ್ನಿಗ್ದಾ ಅವರೊಂದಿಗೆ ವಿಶ್ವಗುರು ಬಸವೇಶ್ವರರ ಪ್ರವೇಶದೊಂದಿಗೆ ನೆರವೇರಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿ ಅನುಭಾವದ ನುಡಿಗಳನ್ನಾಡುತ್ತ ಪ್ರೇಮಕ್ಕ ಅಂಗಡಿ ಅವರು, ಲಿಂಗಾಯತರ ಎಲ್ಲ ಆಚರಣೆಗಳು ವಿಶ್ವಗುರು ಬಸವಣ್ಣನವರ ಪೂಜೆ ಹಾಗೂ ಗುರುಲಿಂಗ ಜಂಗಮರ ಆರಾಧನೆಯೊಂದಿಗೆ ನಡೆಯಬೇಕು ಎಂದರು.

ಅಂಗದ ಮೇಲೆ ಲಿಂಗ ಧರಿಸಿದವರೆಲ್ಲರೂ ಲಿಂಗಾಯತರು. ಲಿಂಗಾಯತರ ಧರ್ಮ ಸಿದ್ಧಾಂತವಾದ ಅಷ್ಟಾವರಣ, ಪಂಚಾಚಾರ, ಷಟಸ್ಥಲಗಳನ್ನು ಅರಿತು ಆಚರಿಸುವುದರ ಮೂಲಕ ನಿಜ ಲಿಂಗಾಯತರಾಗಬೇಕು. ಬರೀ ಮಾತಿನಿಂದ ಲಿಂಗಾಯತರಾದರೆ ಸಾಲದು.

ಜಗತ್ತಿನ ಧಾರ್ಮಿಕ ಇತಿಹಾಸದಲ್ಲಿ ಹೆಣ್ಣುಮಕ್ಕಳಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದವರೇ ಅನುಭವ ಮಂಟಪದ ನಿರ್ಮಾಪಕ ವಿಶ್ವಗುರು ಬಸವಣ್ಣನವರು ಎಂದು ಪ್ರೇಮಕ್ಕ ಇದೇ ಸಂದರ್ಭದಲ್ಲಿ ನುಡಿದರು.

ವಿಶ್ವನಾಥ, ಸೀಮಾ ಬಾಳಿ ದಂಪತಿಗಳು ಬಸವಪೂಜೆ ನೆರವೇರಿಸಿದರು. ಹಾವೇರಿ ಬಸವ ಬಳಗದ ಗಂಗಾಧರ ಮಾಸೂರ ಉದ್ಘಾಟಿಸಿದರು. ಮನವಳ್ಳಿಯ ಹಿರಿಯ ಶರಣ ದಂಪತಿಗಳಾದ ನೀಲಾಂಬಿಕಾ ಷಡಕ್ಷರಿ ಬಾಳಿ, ಶರಣಜೀವಿ ಪಾರಕ್ಕ ಶೇಬಬಣ್ಣವರ, ಸೌದತ್ತಿಯ ಪ್ರಭಣ್ಣವರ ಬಂಧುಗಳು, ನರಗುಂದದ ಖ್ಯಾತ ನರರೋಗ ತಜ್ಞರಾದ ಡಾ. ಸುರೇಶ ಬೂಮಣ್ಣವರ, ವೈದ್ಯೆ ವೀಣಾ ಭೂಮಣ್ಣವರ, ಸವದತ್ತಿ ಶರಣ ಸಾಹಿತ್ಯ ಪರಿಷತ್ ತಾಲೂಕ ಘಟಕದ ಅಧ್ಯಕ್ಷ ಉಮೇಶ್ ಬಾಳಿ, ಬಂಧು-ಬಳಗ, ಮಿತ್ರರು ಭಾಗಿಗಳಾಗಿ ಸಂತಸಪಟ್ಟರು.

ಒಳ್ಳೆಯ ಆಚರಣೆ. ಪ್ರೇಮಕ್ಕ ಅಂಗಡಿಯವರು ಅನುಭಾವಿಗಳು.ಬಸವಾದಿ ಪ್ರಮಥರು ತಮ್ಮ ಕುಟುಂಬದವರಿಗೆ ಆಶೀರ್ವದಿಸಲಿ. 👌🏻🌺💐🏵🌹🏳️🌈🌹🏵💐🌺🙏🏻
Nimma Basava Sankalpakke Shubhavagali Dr. Bali.