ಲಿಂಗಾಯತ ಮಹಾಮಠದಲ್ಲಿ ಅಕ್ಕನ ದರ್ಶನ ಪ್ರವಚನ ಉದ್ಘಾಟನೆ

ಸುಪ್ರೀತ ಪತಂಗೆ
ಸುಪ್ರೀತ ಪತಂಗೆ

770  ಸಮವಸ್ತ್ರಧಾರಿ ಶರಣೆಯರಿಂದ ಯೋಗಾಂಗ ತ್ರಿವಿಧಿ ಪಾರಾಯಣ

ಬೀದರ :

ಎಪ್ರಿಲ್ 02 ಮತ್ತು 03ರಂದು ನಡೆಯಲಿರುವ ಜಗನ್ಮಾತೆ ಅಕ್ಕಮಹಾದೇವಿ ಜಯಂತ್ಯುತ್ಸವ ಹಾಗೂ 2026ರ ವಚನ ವಿಜಯೋತ್ಸವ ನಿಮಿತ್ಯ ಶ್ರೀಮಠದಲ್ಲಿ ಅಕ್ಕನ ದರ್ಶನ ಪ್ರವಚನ ಪ್ರಾರಂಭಿಸಲಾಗಿದೆ. ಜಯಂತ್ಯುತ್ಸವದಲ್ಲಿ 770 ಸಮವಸ್ತ್ರಧಾರಿ ಶರಣೆಯರಿಂದ ಯೋಗಾಂಗ ತ್ರಿವಿಧಿ ಪಾರಾಯಣ ನಡೆಯಲಿದೆ ಎಂದು ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ತಿಳಿಸಿದರು.

ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಪೂಜ್ಯರು, ಮನುಕುಲದ ಮುಕುಟಮಣಿ ಅಕ್ಕಮಹಾದೇವಿತಾಯಿ. ಸಾವಿಲ್ಲದ ಕೇಡಿಲ್ಲದ ರೋಹಿಲ್ಲದ ಪರಮಾತ್ಮನನ್ನೇ ಪತಿಯಾಗಿ ಪಡೆದವರು. ಮಹಾರಾಜನೆ ಮದುವೆಯಾಗುವೆನೆಂದು ಮುಂದೆ ಬಂದರು, ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು ಎಂದು ದಿಟ್ಟತನದಿಂದ ತಿರಸ್ಕರಿಸಿದವರು. ಶರಣರನ್ನು ಕಾಣುವ ತವಕದಿಂದ ಕಲ್ಯಾಣಕ್ಕೆ ಬಂದು ಗುರುಬಸವಣ್ಣನ ಮುದ್ದಿನ ಮಗಳಾದರು. ಅನುಭವ ಮಂಟಪದಲ್ಲಿ ಅಲ್ಲಮ ಪ್ರಭುದೇವರು ಕೇಳಿದ ಪ್ರಶ್ನೆಗೆ ಸಮಂಜಸ ಉತ್ತರವನಿತ್ತು ತನ್ನ ಪಕ್ವತೆಯನ್ನು ತೋರಿದವಳು.

ಅಂತಹ ಅಕ್ಕನ ಜೀವನ ಜಗತ್ತಿನಾದ್ಯಂತ ಮುಟ್ಟಿಸುವ ಸಂಕಲ್ಪದಿಂದ ಲಿಂಗಾಯತ ಮಹಾಮಠ ಗೋರ್ಟಾ ಗ್ರಾಮದಲ್ಲಿ ಅಕ್ಕನ ಜಯಂತ್ಯುತ್ಸವ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ತನ್ನಿಮಿತ್ಯ ಒಂದು ವಾರದ ಪರಿಯಂತರ ಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರವಚನಕಾರರಾಗಿ ಅನುಭಾವ ನೀಡಿದ ಶಿವಕುಮಾರ ಮಾಶೆಟ್ಟಿಯವರು, ಪ್ರವಚನ ಮಾಡುವ ಉದ್ಧೇಶ ಇಷ್ಟೇ, ಕೇಳುವುದರಿಂದ ದುರ್ಮತಿ ದೂರಾಗುತ್ತವೆ. ಸದ್ಗುಣಗಳು ಬೆಳೆಯುತ್ತವೆ. ಜೀವನ ಅಮೂಲ್ಯವಾದದ್ದು ವಿಷ ದೇಹದಿಂದ ಆತ್ಮ ದೂರಗೊಳಿಸಿದರೆ, ವಿಷಯಗಳು ಪರಮಾತ್ಮನಿಂದ ದೂರಗೊಳಿಸುತ್ತವೆ. ಅಂತೆಯೇ ಬಸವಣ್ಣನವರು ವಿಷಯರಹಿತನ ಮಾಡಿ ಭಕ್ತಿ ದಣಿಯ ಮೇಯಿಸು ಎಂದು ಹಂಬಲಿಸುತ್ತಾರೆ. ನಮ್ಮ ಜೀವನ ಸಾರ್ಥಕವಾಗಬೇಕಾದರೆ ಶರಣರ ನುಡಿಗಡನಗಳು ಕೇಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಬಸವಣ್ಣಪ್ಪ ಚಿಕುರ್ತೆ ಮಾಡಿದರು. ಮುಖ್ಯ ಅತಿಥಿಗಳಾಗಿ ನೀಲಮ್ಮನ ಬಳಗದ ಅಧ್ಯಕ್ಷೆಯಾದ ಶರಣೆ ವಿಜಯಲಕ್ಷ್ಮಿ ರಾಜೋಳೆ ಭಾಗವಹಿಸಿದರು. ಅಧ್ಯಕ್ಷತೆಯನ್ನು ಶರಣೆ ರಂಗಮ್ಮ ಭೂರೆ ವಹಿಸಿದರು.

ಕಾರ್ಯಕ್ರಮದಲ್ಲಿ ಚೆನ್ನಬಸಪ್ಪ ಪತಂಗೆ, ಚಂದ್ರಕಾಂತ ಕಣಜೆ, ಬಾಬುರಾವ ರಾಜೋಳೆ, ಸುಭಾಷ ಪತಂಗೆ ಮತ್ತಿತರರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *