ಸತ್ಯಮಂಗಲ (ತಮಿಳುನಾಡು) :
ತಾಲೂಕಿನ ಹೊಂಗಲವಾಡಿ ಗ್ರಾಮದ ಗುರುಮಲ್ಲೇಶ್ವರ ದಾಸೋಹ ಮಠದ ಆವರಣದಲ್ಲಿ ಗುರುವಾರ ಚಾಮರಾಜನಗರ ಜಿಲ್ಲಾ ಬಸವ ಕೇಂದ್ರದ ವತಿಯಿಂದ ಭಕ್ತಿಪೂರ್ಣ ಹಾಗೂ ಚಿಂತನೆ ಪ್ರಧಾನ ಶರಣ ಸಂಗಮ ಕಾರ್ಯಕ್ರಮ ಜೊತೆಗೆ ಒಡೆಯರ್ ಪಾಳ್ಯ ನಂದೀಶ್ ಅವರ ಅಭಿನಂದನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮವಾರಪೇಟೆಯ ಗೌಡರಾಜಪ್ಪ ವಹಿಸಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಚಾಮರಾಜನಗರ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷರಾದ ಹೆಚ್.ಎಸ್. ಮಹದೇವಸ್ವಾಮಿ (ಎನ್‌ರಿಚ್) ಪ್ರಸ್ತಾವಿಕವಾಗಿ ಮಾತನಾಡಿ, ಬಸವೇಶ್ವರ ಹಾಗೂ ಶರಣರ ಚಿಂತನೆಗಳನ್ನು ಜನಮನಗಳಿಗೆ ತಲುಪಿಸುವ ಕಾರ್ಯದಲ್ಲಿ ಬಸವ ಕೇಂದ್ರ ತೊಡಗಿಸಿಕೊಂಡಿದ್ದು, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಸಾಂವಿಧಾನಿಕ ಮಾನ್ಯತೆ ದೊರಕಿಸುವ ಉದ್ದೇಶದಿಂದ “ ಮನೆ ಮನದ ಅಭಿಯಾನ” ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ “ ವಚನಗಳಲ್ಲಿ ಲೋಕಾನುಭವ” ಎಂಬ ವಿಷಯದ ಮೇಲೆ ಕನ್ನಡ ಪಂಡಿತರಾದ ಮಾಸ್ಟರ್ ಮಹದೇವಸ್ವಾಮಿ ಪ್ರವಚನ ನೀಡಿ, ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಬಸವಾದಿ ಶರಣರ ಚಿಂತನೆಗಳಲ್ಲಿ ಶಾಶ್ವತ ಪರಿಹಾರ ಅಡಕವಾಗಿದೆ ಎಂದು ಅಭಿಪ್ರಾಯಪಟ್ಟರು.
ನಂತರ ಇತ್ತೀಚೆಗೆ ಹುತ್ತೂರು ಪ್ರಾಥಮಿಕ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಬಸವ ಅಭಿಮಾನಿ ಒಡೆಯರ್ ಪಾಳ್ಯ ನಂದೀಶ್ ಅವರನ್ನು ಸನ್ಮಾನಿಸಲಾಯಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಚಾಮರಾಜನಗರ ಜಿಲ್ಲಾ ಘಟಕದ ಕಾರ್ಯದರ್ಶಿ ಅಜ್ಜಿಪುರ ಮುರಳಿ ಮಾತನಾಡುತ್ತ, ನಂದೀಶ ಯುವನಾಯಕರಾಗಿ ಸಮಾಜದಲ್ಲಿ ವಿಶಿಷ್ಟ ಗುರುತನ್ನು ಪಡೆದಿದ್ದು, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಹಾಗೂ ಹುತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಫಲವಾಗಿ ಇಂದು ಜನರಿಂದ ಅವಿರೋಧವಾಗಿ ಆಯ್ಕೆಯಾಗಿ ಎಲ್ಲಾ ವರ್ಗದ ಜನರ ವಿಶ್ವಾಸ ಪಡೆದಿದ್ದಾರೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಅವರು ಮೈಸೂರು-ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾಗಲಿ ಎಂದು ಹಾರೈಸಿದರು.

ಚಾಮುಲ್ ನಿರ್ದೇಶಕರು ಹಾಗೂ ಹಿರಿಯ ಸಹಕಾರಿಗಳಾದ ಉದ್ದನೂರು ಪ್ರಸಾದ್ ಅವರು ಸಹಕಾರಿ ಕ್ಷೇತ್ರದ ಸವಾಲುಗಳು ಮತ್ತು ಪರಿಹಾರಗಳ ಕುರಿತು ಮಾತನಾಡಿ, ಸಹಕಾರಿ ವ್ಯವಸ್ಥೆ ರಾಜಕೀಯ ಹಿತಾಸಕ್ತಿಗಳ ಒತ್ತಡಕ್ಕೆ ಒಳಗಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು. ಸಹಕಾರಿ ಸಂಘಗಳನ್ನು ಬಲಪಡಿಸಲು ನಂದೀಶ್ ಅವರಂತಹ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂದು ಕರೆ ನೀಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಹನೂರು ತಾಲೂಕು ಘಟಕದ ಅಧ್ಯಕ್ಷರಾದ ಒಡೆಯರ್ ಪಾಳ್ಯ ಗೌಡರ ಸೋಮಶೇಖರ ಅವರು ಮಾತನಾಡಿ, ತಮಿಳುನಾಡಿನ ಹೊಂಗಲವಾಡಿ ಗ್ರಾಮದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಒಡೆಯರ ಪಾಳ್ಯ ಹಾಗೂ ಹೊಂಗಲವಾಡಿ ಗ್ರಾಮಗಳ ನಡುವಿನ ಅವಿನಾಭಾವ ಸಂಬಂಧ ಮತ್ತು ನಂದೀಶ ಅವರ ಬಾಲ್ಯದ ನೆನಪುಗಳನ್ನು ಸ್ಮರಿಸಿದರು.
ಸಿದ್ದಲಿಂಗ ಸ್ವಾಮಿ ಅವರು ಶುಭ ಹಾರೈಸಿ ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ವೀರಶೈವ ಮಹಾಸಭೆಯ ನಿಕಟ ಪೂರ್ವ ಅಧ್ಯಕ್ಷ ಕಣ್ಣೂರು ಬಸವರಾಜಪ್ಪ, ಮಾಜಿ ತಾಲೂಕು ಪಂಚಾಯತ ಸದಸ್ಯ ಕಾಮಗೆರೆ ನಟೇಶ, ಮಾಜಿ ತಾಲೂಕು ಪಂಚಾಯತ ಉಪಾಧ್ಯಕ್ಷ ದೇಶವಳ್ಳಿ ರವೀಶ, ಹೊಂಗಲವಾಡಿ ಗ್ರಾಮದ ಟೈಲರ್ ಶಿವಶಂಕರಣ್ಣ, ಗುರುಪಾದಸ್ವಾಮಿ, ವಿಜಿಯಣ್ಣ ಸೇರಿದಂತೆ ಅನೇಕ ಬಸವ ಅಭಿಮಾನಿಗಳು ಭಾಗವಹಿಸಿದ್ದರು.
ಈ ಶರಣ ಸಂಗಮ ಕಾರ್ಯಕ್ರಮವು ಬಸವ ತತ್ತ್ವಗಳ ಪ್ರಸಾರಕ್ಕೆ ಮತ್ತೊಂದು ಬಲ ನೀಡುವುದರ ಜೊತೆಗೆ ಸಮಾಜದ ಏಕತೆ ಮತ್ತು ಸಹಕಾರಿ ಮನೋಭಾವವನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಶರಣ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಸವ ಅಭಿಮಾನಿಗಳು ಅಭಿಪ್ರಾಯಪಟ್ಟರು. ಇಂತಹ ಕಾರ್ಯಕ್ರಮಗಳು ತಮಿಳುನಾಡಿನ ಗಡಿ ಭಾಗದಲ್ಲಿ ಹೆಚ್ಚು ಹೆಚ್ಚು ನಡೆಯಬೇಕು ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಇಲ್ಲಿ ಕೇವಲ ಗುರು ಮಲ್ಲೇಶ್ವರ ದಾಸೋಹದ ಬಗ್ಗೆ, ಪುತ್ಥಳಿಯಬಗ್ಗೆ, ಮಾತ್ರ ವಿವರವಿದೆ. ಅದು ಬಸವ ಸಂಸ್ಕೃತಿ ಅಭಿಯಾನದ ಭಾಗವಲ್ಲ. ಪೂರಜವೆನ್ನುವ ಮಾತು ಸತ್ಯ. ಇಲ್ಲಿಬಸವ ಬಳಗದ ಯಾವದೇ ವಚನ, ವಿವರಗಳಿಲ್ಲ. ಬಸವ ಗುರುವಿನ ಒಂದು ಅಂಶವಾದ ದಾಸೋಹ ಮಾತ್ರ ಸಾಧ್ಯ ಮಾಡಿದ್ದಾರೆ. ಇಷ್ಟ ಲಿಂಗದಲ್ಲಿ ನಿಷ್ಠೆ, ವಚನ ಸಾಹಿತ್ಯಕ್ಕೆ ಸಂಬಂಧಿಸಿ ವಿಚಾರಗಳಿಲ್ಲ. ಅಪ್ಪ ಬಸವಣ್ಣನವರು ಚರಿತ್ರೆ, ದೃಷ್ಟಿ ಯೋಗ ಸರಳವಾಗಿ ಆಚರಿಸಿ, ಅನುಭವಿಸಿ, ಶಿವಯೋಗದಿಂದ ಮನದ ಮಾತುಗಳನ್ನು ಹೇಳಲಾಗಿಲ್ಲ. ಸ್ವಾನುಭವ ಚಿಂತನೆಗಳಿಲ್ಲ.
ಇರಲಿ ದೇವರು ಎಲ್ಲರಿಗೆ ಒಳ್ಳೆಯದು ಮಾಡಲಿ, ಶರಣು ಶರಣಾರ್ಥಿ.