ಮಾತಾಜಿ ಹಾಕಿಕೊಟ್ಟ ಬಸವತತ್ವದ ಮಾರ್ಗದಲ್ಲಿ ಸಾಗೋಣ: ಪದ್ಮಶ್ರೀ ಡಾ. ಸುಶೀಲಮ್ಮ

ಸಂಗಮೇಶ ಜವಾದಿ
ಸಂಗಮೇಶ ಜವಾದಿ

ಬಸವಾತ್ಮಜೆ ಮಹಿಳಾ ಸಹಕಾರ ಸಂಘ ಉದ್ಘಾಟನೆ

ಬಸವಕಲ್ಯಾಣ:

ಈ ಪ್ರಪಂಚಕ್ಕೆ ಬಸವಣ್ಣ, ಬಸವತತ್ವವನ್ನು ತಮ್ಮ ಅಮೋಘ ಪ್ರವಚನಗಳ ಮೂಲಕ ಪರಿಚಯಿಸಿದವರು ಲಿಂಗೈಕ್ಯ ಮಾತೆ ಮಹಾದೇವಿ ಅವರು. ಈಗಿನ ಕಾಲಘಟ್ಟದಲ್ಲಿ ಇಂತಹ ಬಸವತತ್ವ ಚೇತನರ ಅಗತ್ಯವಿದ್ದು, ಅವರ ಸಂತತಿ ಹೆಚ್ಚಾಗಬೇಕಿದೆ ಹಾಗೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದು  ಬೆಂಗಳೂರು ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಪದ್ಮಶ್ರೀ ಡಾ. ಎಸ್ ಜಿ. ಸುಶೀಲಮ್ಮ ನುಡಿದರು.

ನಗರದ ಬಸವಧರ್ಮ ಪೀಠದ ಮಹಾಮನೆ ಮಹಾಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಥಮ ಮಹಿಳಾ ಜಗದ್ಗುರು ಪೂಜ್ಯ ಡಾ. ಮಾತೆ ಮಹಾದೇವಿ ಅವರ 80ನೇ ಜನ್ಮದಿನ ಮತ್ತು 7ನೇ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ಹಾಗೂ ನೂತನ ಬಸವಾತ್ಮಜೆ ಮಹಿಳಾ ಸಹಕಾರ ಸಂಘ ನಿಯಮಿತದ ಉದ್ಘಾಟನಾ ಸಮಾರಂಭ ನೇರವೇರಿಸಿ ಮಾತನಾಡಿದರು.

ಈಗ ಅನೇಕ ಜನ ಬಸವಣ್ಣ, ಬಸವತತ್ವದ ಬಗ್ಗೆ ಮಾತನಾಡುತ್ತಾರೆ. ಒಂದು ಕಾಲದಲ್ಲಿ ಯಾರಿಗೂ ಬಸವಣ್ಣ, ಬಸವತತ್ವದ ಬಗ್ಗೆ ಗೊತ್ತಿರಲಿಲ್ಲ. ಅಂತಹ ಕಾಲದಲ್ಲಿ ಮಾತೆ ಮಹಾದೇವಿ ಅವರು ಪ್ರವಚನಗಳ ಮೂಲಕ ಬಸವಾದಿ ಶರಣರ ವಿಚಾರಗಳನ್ನು ಪ್ರಚಾರ ಮಾಡಿದವರು.  ಬಸವತತ್ವದ ಬೆನ್ನೆಲುಬಾಗಿ ದುಡಿದು, ಬಸವ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಹಗಲಿರುಳೆನ್ನದೆ ಶ್ರಮಿಸಿದ್ದಾರೆ. ವಚನ ಸಾಹಿತ್ಯದ ಪ್ರಸಾರ, ಲಿಂಗಾಯತ ಧರ್ಮ ಮಾನ್ಯತೆಗಾಗಿ ಹೋರಾಡಿದ ಅವರ ಸೇವೆ ಅಪಾರ. ಶರಣ ಸಂಸ್ಕೃತಿಯ ಪ್ರಸಾರಕ್ಕೆ ಅವರು ಸಲ್ಲಿಸಿದ ಅಮೂಲ್ಯ ಸೇವೆ ಮತ್ತು ಮಹಿಳಾ ಸಬಲೀಕರಣಕ್ಕೆ ನೀಡಿದ ಕೊಡುಗೆ ಅನನ್ಯವಾದದ್ದು ಎಂದರು.

ಸಾನಿಧ್ಯ ವಹಿಸಿದ್ದ ಅಲ್ಲಮ ಪ್ರಭು ಶೂನ್ಯ ಪೀಠಾಧಿಪತಿ ಪೂಜ್ಯ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಮಾತಾಜಿಯವರು ಭೌತಿಕವಾಗಿ ದೂರವಾಗಿರಬಹುದು. ಆದರೆ, ಅವರು ಹಚ್ಚಿರುವ ತತ್ವದ ಬೆಳಕಿನ ಜ್ಯೋತಿ ಸಮಾಜದಲ್ಲಿ ಸದಾ ಬೆಳಗುತ್ತಿದೆ. ಮಾತಾಜಿಯವರು ಕಾಲಿಗೆ ಚಕ್ರ ಕಟ್ಟಿಕೊಂಡು ನಾಡಿನಾದ್ಯಂತ ಸಂಚರಿಸಿ ಬಸವತತ್ವ ಪ್ರಸಾರ ಮಾಡಿದವರು. ಹೀಗಾಗಿಯೇ ಇಂದು ಮಾತಾಜಿ ಎಲ್ಲರ ಮನೆ ಮತ್ತು ಮನಗಳಲ್ಲಿ ನೆಲೆಸಿದ್ದಾರೆ.

ಲಿಂಗಾಯತರು ಒಗ್ಗಟ್ಟಾಗಿ ಮುಂದೆ ಸಾಗಬೇಕು. ಲಿಂಗಾಯತರಲ್ಲಿ ಅನೇಕ ಬಡವರಿದ್ದಾರೆ. ಅವರನ್ನು ಮೇಲೆತ್ತುವ ಕೆಲಸ ಮಾಡೋಣ. ನಮಗಾಗಿ ನಮ್ಮ ಕುಟುಂಬಕ್ಕಾಗಿ ಅಲ್ಲ ಬಸವತತ್ವಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಬೇಕು. ಹೊಗಳುಭಟ್ಟರ ಬಗ್ಗೆ ಎಚ್ಚರದಿಂದ ಇರಬೇಕು.

ಬಸವತತ್ವ ಉಳಿದರೆ ಈ ದೇಶ, ಜಗತ್ತು ಉಳಿಯುತ್ತದೆ. ಪ್ರತಿಯೊಬ್ಬ ಮನುಷ್ಯನಲ್ಲಿ ದೇವನಿದ್ದಾನೆ. ಅವನ ಕಲ್ಯಾಣವೇ ಮುಖ್ಯವೆಂದು ಹೇಳಿರುವುದು ಬಸವತತ್ವದ ಮುಖ್ಯ ಉದ್ದೇಶವಾಗಿದೆ. ಮಾತಾಜಿಯವರ ಸಂಕಲ್ಪ ಈಡೇರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅವರೇ ಬಸವತತ್ವದ ಬೀಜ ಬಿತ್ತಿದವರು. ಹೀಗಾಗಿ ಅವರೇ ಲಿಂಗಾಯತ ಧರ್ಮದ ಮಹಾದಂಡನಾಯಕರು. ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ದೊರೆತರೆ ಮಾತೆ ಮಹಾದೇವಿ ಅವರ ಸಂಕಲ್ಪ ಈಡೇರಿಸಿದಂತಾಗುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತೆ ಲಾವಣ್ಯದೇವಿ ಮಾತನಾಡಿ, ಪೂಜ್ಯ ಡಾ. ಮಾತೆ ಮಹಾದೇವಿಯ ಅವರ ಸಾಧನಾ ಸೇವೆಯನ್ನು ಸ್ಮರಿಸಿ, ಅವರ ದಾರಿಯಲ್ಲಿ ಹೋಗೋಣ ಎಂದು ಹೇಳಿ, ಬಸವತ್ಮಾಜೆ ಮಹಿಳಾ ಸಹಕಾರ ಸಂಘ ನಿಯಮಿತದ ಧ್ಯೇಯ, ಉದ್ದೇಶಗಳನ್ನು ತಿಳಿಸಿದರು.

ಸಮಾರಂಭದಲ್ಲಿ ಪೂಜ್ಯ ಜ್ಞಾನೇಶ್ವರಿ ಮಾತಾಜಿ, ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಸ್ವಾಮೀಜಿ, ಪೂಜ್ಯ ಬಸವಯೋಗಿ ಸ್ವಾಮಿಜಿ, ಕೆಎಸ್ಎ ಅಧಿಕಾರಿ ಸಾವಿತ್ರಿ ಸಲಗರ, ಸಾಹಿತಿ ಡಾ. ಸೋಮನಾಥ ಯಾಳವಾರ, ರಾಜೇಶ್ವರಿ ಶ್ರೀಕಾಂತಸ್ವಾಮಿ,

ಪೂಜ್ಯ ನಾಗಲಾಂಬಿಕಾ ಮಾತಾಜಿ , ಜಿಲ್ಲಾ ಶಿಶು ಅಭಿವೃದ್ಧಿ ಅಧಿಕಾರಿ ರೂಪಾ ಕೋಟೆ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಸಂಗಮೇಶ ಜವಾದಿ, ಶಂಕ್ರಪ್ಪ ಪಾಟೀಲ, ಆರ್.ಜಿ. ಶೆಟಕಾರ, ಸೊನಾಲಿ ವಿಜಯಸಿಂಗ್, ಶಾರದಮ್ಮ ಸಂಗನಕಲ್ಲು, ದೇವಕಿ ನಾಗೂರೆ, ವಿಜಯಶ್ರೀ ಬಶೆಟ್ಟಿ, ಕುಶಾಲರಾವ ಪಾಟೀಲ,  ರವೀಂದ್ರ ಕೋಳಕೂರ, ಸಂಜುಕುಮಾರ ಪಾಟೀಲ, ಕಂಟೆಪ್ಪ ಗಂದೆಗುಡಿ, ರಾಜೇಂದ್ರ ಗಂದಗೆ, ರಾಜೇಂದ್ರ ಜೊನ್ನಿಕೇರಿ, ಜಗನ್ನಾಥ ದೇವಣಿ, ಮಹಾದೇವ ಮಹಾಜನ, ವೀರಶೆಟ್ಟಿ ಚಿಟ್ಟೆದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ರವೀಂದ್ರ ಕೋಳಕೂರ ಸ್ವಾಗತಿಸಿದರು, ಸುರೇಶ ಸ್ವಾಮಿ ನಿರೂಪಿಸಿದರು, ರವಿ ಪಾಪಡೆ ಶರಣು ಸಮರ್ಪಣೆ ಮಾಡಿದರು.  ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ವಿವೇಕಾನಂದ ವಸ್ತ್ರದ, ಪ್ರವೀಣ ಎನ್. ಅವರಿಂದ ವಚನ ಗಾಯನ ಜರುಗಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕ ಮಹಿಳೆಯರಿಗೆ ಹಾಗೂ ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿಮ ನೂತನ ಪದಾಧಿಕಾರಿಗಳಿಗೆ ಗೌರವ ಸನ್ಮಾನ ನೇರವೇರಿಸಲಾಯಿತು. ನೆರೆಯ ಮಹಾರಾಷ್ಟ್ರ, ತೆಲಂಗಾಣ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಬಸವಾನುಯಾಯಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *