ವಾಲ್ ಪೋಸ್ಟರ್ ಬಿಡುಗಡೆ
ಭಾಲ್ಕಿ:
ಪಟ್ಟಣದಲ್ಲಿ ಹಿರೇಮಠ ಸಂಸ್ಥಾನ ಮತ್ತು ಅಮೃತ ಮಹೋತ್ಸವ ಸಮಿತಿ ವತಿಯಿಂದ ಬರುವ ಏ.ಪ್ರೀಲ್ 20 ರಿಂದ 22ರ ವರೆಗೆ ಮೂರು ದಿವಸಗಳ ಕಾಲ ನಡೆಯಲಿರುವ ಐತಿಹಾಸಿಕ ಸಮಾರಂಭದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ, ರಾಜ್ಯ ಮತ್ತು ಕೇಂದ್ರದ ಸಚಿವರು, ಪ್ರತಿಪಕ್ಷದ ನಾಯಕರು ಭಾಗವಹಿಸುವ ಸಾಧ್ಯತೆ ಇದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ವರ್ಷ ಬಸವ ಜಯಂತಿ, ವಚನ ಜಾತ್ರೆ-2026, ಡಾ. ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೋತ್ಸವ ಮತ್ತು ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಏಕಕಾಲಕ್ಕೆ ತ್ರಿವೇಣಿ ಸಂಗಮದಂತೆ ಕೂಡಿ ಬಂದಿರುವುದು ಅತ್ಯಂತ ಖುಷಿ ತಂದುಕೊಟ್ಟಿದೆ.
ಪಟ್ಟಣದಲ್ಲಿನ ಮೂರು ದಿವಸದ ಸಮಾರಂಭದಲ್ಲಿ ಭಾಗವಹಿಸುವ ನಾನಾ ಮಠಾಧೀಶರು, ಗಣ್ಯರಿಗೆ ಉತ್ತಮ ಆತಿಥ್ಯ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ವ್ಯವಸ್ಥೆಯಲ್ಲಿ ಕುಂದು ಕೊರತೆ ಆಗದಂತೆ ವ್ಯವಸ್ಥೆ ನೋಡಿಕೊಳ್ಳುವ ಸಮಿತಿ ಪದಾಧಿಕಾರಿಗಳು ನಿಗಾ ವಹಿಸಬೇಕು.
ಈ ಐತಿಹಾಸಿಕ ಸಮಾರಂಭಕ್ಕೆ ಕರ್ನಾಟಕ ಅಲ್ಲದೇ ನೆರೆಯ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯ ಸೇರಿ ಮುಂತಾದ ಕಡೆಗಳಿಂದ ಲಕ್ಷಾಂತರ ಭಕ್ತರ ಸಮಾಗಮ ಆಗಲಿದೆ. ಹಾಗಾಗಿ ಈ ಮೂರು ಕಾರ್ಯಕ್ರಮಗಳು ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸಮಾರಂಭದ ಪ್ರಚಾರ ಸೇರಿ ಆಗಮಿಸುವ ಗಣ್ಯರು, ಭಕ್ತರಿಗೆ ವಸತಿ, ದಾಸೋಹ ವ್ಯವಸ್ಥೆ ಸೇರಿ ಮುಂತಾದ ವ್ಯವಸ್ಥೆಗಳು ಭರದಿಂದ ಸಾಗಿವೆ ಎಂದು ತಿಳಿಸಿದರು.
ನೇತೃತ್ವ ವಹಿಸಿದ್ದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಮೂರು ದಿವಸದ ಸಮಾರಂಭದಲ್ಲಿ ಭಾಗಹಿಸುವುದು ನಮ್ಮೆಲ್ಲರ ಸೌಭಾಗ್ಯ ಎನಿಸಿದೆ. ಎಲ್ಲ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಭಕ್ತರು ತನು, ಮನ, ಧನದಿಂದ ಸೇವೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.
ಮೂರು ಸಮಾರಂಭಗಳು ತ್ರಿವೇಣಿ ಸಂಗಮದಂತೆ ಏಕಕಾಲಕ್ಕೆ ಕೂಡಿ ಬಂದಿವೆ. ಡಾ. ಬಸವಲಿಂಗ ಪಟ್ಟದ್ದೇವರು ಸಲ್ಲಿಸುತ್ತಿರುವ ಸಮಾಜ ಸೇವೆ ನಮ್ಮೆಲ್ಲರಿಗೆ ಪ್ರೇರಣೆಯಾಗಿದೆ. ಎಲ್ಲರೂ ಸೇರಿ ಪೂಜ್ಯರ ಅಮೃತ ಮಹೋತ್ಸವ ಅರ್ಥಪೂರ್ಣ ಮಾಡಿ ನಿಜವಾದ ಗೌರವ ಸಲ್ಲಿಸಬೇಕು ಎಂದರು.
ಸಂಸದ ಸಾಗರ ಖಂಡ್ರೆ ಸಮಾರಂಭದ ವಾಲ್ ಪೋಸ್ಟರ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಶಶಿಧರ ಕೋಸಂಬೆ, ದಾಸೋಹ ಸಮಿತಿ ಅಧ್ಯಕ್ಷ ಚಂದ್ರಕಾಂತ ಪಾಟೀಲ, ವಾಲಿಬಾಲ್ ಪಂದ್ಯಾವಳಿ ಸಮಿತಿ ಅಧ್ಯಕ್ಷ ವಿಲಾಸ ಬಕ್ಕಾ, ಯೋಗ ಸಮಿತಿ ಅಧ್ಯಕ್ಷ ಚಂದ್ರಕಾಂತ ಹೈಬತಪೂರೆ, ಪ್ರವಚನ ಸೇವಾ ಸಮಿತಿ ಅಧ್ಯಕ್ಷೆ ಮಲ್ಲಮ್ಮ ಆರ್. ಪಾಟೀಲ, ಪ್ರಮುಖರಾದ ಸಿದ್ದಯ್ಯ ಕವಡಿಮಠ, ಬಸವರಾಜ ಮರೆ, ಮಹಾದೇವ ಬೇಲೂರೆ, ಅಶೋಕ ಬಾವುಗೆ, ಸುನಿತಾ ಮಮ್ಮಾ, ಪಾರ್ವತಿ ಧುಮನಸೂರೆ ಸೇರಿದಂತೆ ಹಲವರು ಇದ್ದರು. ದೀಪಕ ಠಮಕೆ ನಿರೂಪಿಸಿ, ವಂದಿಸಿದರು.
