‘ಗರ್ಭದಲ್ಲಿಯೇ ಮಗುವಿಗೆ ಇಷ್ಟಲಿಂಗ ಸಂಸ್ಕಾರ ಕೊಡುವ ಆಚರಣೆ 12ನೇ ಶತಮಾನದಿಂದಲೇ ಜಾರಿಯಲ್ಲಿದೆ‘
ಹೊಸಪೇಟೆ:
ವಿಜಯನಗರ ಜಿಲ್ಲೆಯ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ಎಸ್. ಬಸವರಾಜ ಮಾವಿನಹಳ್ಳಿ ಅವರ ಪುತ್ರಿ ಕಾವ್ಯ ಅವರ ಸೀಮಂತ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಗರ್ಭಲಿಂಗಧಾರಣೆ ಸಂಸ್ಕಾರವನ್ನು ಸಿರುಗುಪ್ಪ ಬಸವ ಮಂಟಪದ ವೆಂಕಟಾಪುರ ಬಸವರಾಜಪ್ಪ ಶರಣರು ನೆರವೇರಿಸಿದರು.
ಷಟಸ್ಥಲ ಧ್ವಜಾರೋಹಣದೊಂದಿಗೆ ಆರಂಭವಾದ ಕಾರ್ಯಕ್ರಮ, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವ ಗುರುವಿನ ಪೂಜೆಯ ನಂತರ ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ಸಂಸ್ಕಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಕಾವ್ಯ ಮತ್ತು ಪತಿ ಬಸವರಾಜ ಮೂಲಿಮನಿ ಷಟಸ್ಥಲ ಧ್ವಜಾರೋಹಣವನ್ನು ನೆರವೇರಿಸಿದರು. ಸಹಜ ಶಿವಯೋಗದೊಂದಿಗೆ ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆಯನ್ನು ನೆರವೇರಿಸಿದ ವೆಂಕಟಾಪುರ ಬಸವರಾಜಪ್ಪ ಶರಣರು ಗರ್ಭಲಿಂಗದಾರಣೆಯ ಕುರಿತು ಮಹತ್ವದ ವಿಚಾರಗಳನ್ನು ತಿಳಿಸಿಕೊಟ್ಟರು.
ಉಪಸ್ಥಿತರಿದ್ದ ಇಷ್ಟಲಿಂಗ ಅಧ್ಯಯನ ಕೇಂದ್ರದ ಟಿ. ಹೆಚ್. ಬಸವರಾಜ ಮಾತನಾಡಿ, ಗರ್ಭ ಲಿಂಗಧಾರಣೆ ಲಿಂಗಾಯತರ ನೈಜ ಆಚರಣೆಗಳಲ್ಲಿ ಒಂದು. ಅನ್ಯ ವೈದಿಕ ಧರ್ಮಗಳ ಅತಿಕ್ರಮಣಕ್ಕೆ ಒಳಗಾಗಿರುವ ಲಿಂಗಾಯತರು ಇದನ್ನು ಹೊಸ ಆಚರಣೆಯನ್ನಾಗಿ ನೋಡುತ್ತಿರುವುದು ವಿಷಾದನೀಯ. ಆದರೆ ಲಿಂಗಾಯತ ಧರ್ಮ ಸ್ಥಾಪನೆಯಾದ 12ನೇ ಶತಮಾನದಿಂದಲೂ ಲಿಂಗವಂತರು ತಮ್ಮ ಮನೆಯ ಹೆಣ್ಣುಮಕ್ಕಳು ಗರ್ಭಧರಿಸಿದಾಗ ಗರ್ಭದಲ್ಲಿಯೇ ಮಗುವಿಗೆ ಇಷ್ಟಲಿಂಗ ಸಂಸ್ಕಾರ ಕೊಡುವ ಆಚರಣೆ ಜಾರಿಯಲ್ಲಿತ್ತು.

ಚನ್ನಬಸವಣ್ಣನವರು ಅಕ್ಕನಾಗಮ್ಮನ ಗರ್ಭದಲ್ಲಿದ್ದಾಗಲೇ ಅವರಿಗೆ ಗುರು ಬಸವಣ್ಣನವರು ಗರ್ಭಲಿಂಗ ದಾರಣೆಯ ಸಂಸ್ಕಾರವನ್ನು ನೀಡಿದ್ದರು. ಆ ಕಾರಣಕ್ಕಾಗಿ ಚೆನ್ನಬಸವಣ್ಣನ ಜನನ ಲಿಂಗಾಯತ ಸಂಸ್ಕಾರದೊಂದಿಗೆ ಆದದ್ದನ್ನು ನಾವು ಗಮನಿಸಬಹುದು.
ಈ ಸಂಸ್ಕಾರ ಪಡೆದ ಕಾರಣಕ್ಕಾಗಿ ಅವರಿಗೆ ಆವಿರಳ ಜ್ಞಾನದ ಸಿದ್ಧಿ ಪ್ರಾಪ್ತಿಯಾಯಿತು. ಇದನ್ನು ಇಂದಿನ ವೈದ್ಯಕೀಯ ವಿಜ್ಞಾನ ಕೂಡ ಒಪ್ಪಿಕೊಳ್ಳುತ್ತದೆ. ಲಿಂಗಾಯತ ಧರ್ಮವನ್ನು ಗಟ್ಟಿಗೊಳಿಸಬೇಕಾದರೆ ಎಲ್ಲಾ ಲಿಂಗಾಯತರು ಈ ತರದ ಸಂಸ್ಕಾರ, ಆಚರಣೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಬಾಚಿಗೊಂಡನಹಳ್ಳಿ ತೋಂಟದಾರ್ಯ ಶಾಖಾಮಠದ ಪೂಜ್ಯ ಶಿವಮಹಾಂತ ಸ್ವಾಮೀಜಿ ಅವರು ಆಶೀರ್ವಚನ ನೀಡುತ್ತ, ಎಲ್ಲಾ ಲಿಂಗಾಯತರು ಲಿಂಗಾಯತ ನಿಜದ ಆಚರಣೆಗಳನ್ನು ಮನೆಯಲ್ಲಿ ಜರುಗುವ ಎಲ್ಲಾ ಶುಭ ಸಮಾರಂಭಗಳಲ್ಲಿ ಪರಿಪಾಲಿಸಬೇಕು ಹೇಳಿದರು.
ಇದರೊಂದಿಗೆ ಮುಂದಿನ ತಿಂಗಳು ಬಾಚಿಗೊಂಡನಹಳ್ಳಿಯ ನಮ್ಮ ಶ್ರೀಮಠದಲ್ಲಿ ಜರುಗುವ ಲಿಂಗಾಯತ ತತ್ವದಡಿಯ ಸಾಮೂಹಿಕ ವಚನ ಕಲ್ಯಾಣ ಮಹೋತ್ಸವಕ್ಕೆ ಆಗಮಿಸಿ ಲಿಂಗಾಯತರ ನಿಜವಾದ ಮದುವೆ ಸಮಾರಂಭಗಳನ್ನು ಆಚರಿಸುವುದು ಹೇಗೆ ಅನ್ನುವುದನ್ನು ಕಲಿತುಕೊಳ್ಳಬಹುದಾಗಿದೆ ಎಂದು ನೆರೆದಂತಹ ಎಲ್ಲಾ ಭಕ್ತರನ್ನು ಆಹ್ವಾನಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ಅಕ್ಕನ ಬಳಗದ ತಾಯಂದಿರು, ಇಷ್ಟಲಿಂಗ ಅಧ್ಯಯನ ಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಬಳಗದ ಸದಸ್ಯರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
