ಆದ್ಯ ವಚನಕಾರ ಜೇಡರ ದಾಸಿಮಯ್ಯನವರ ಸ್ಮರಣೋತ್ಸವ
ಗುಳೇದಗುಡ್ಡ:
ಬಸವ ಕೇಂದ್ರದ ವತಿಯಿಂದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ ಶೇಖರಪ್ಪ ಮಹಾಂತಪ್ಪ ಹುಳಿಪಲ್ಲೇದ ಅವರ ಮನೆಯಲ್ಲಿ ಆದ್ಯ ವಚನಕಾರ ಜೇಡರ ದಾಸಿಮಯ್ಯ ತಂದೆಗಳ ಸ್ಮರಣೋತ್ಸವ ಹಾಗೂ ಮಹಾಮನೆ ಕಾರ್ಯಕ್ರಮ ನಡೆಯಿತು.
ಅಂದು ಚಿಂತನೆಗೆ ಆಯ್ದುಕೊಂಡ ವಚನ –
ಆಚಾರಸಹಿತವಿದ್ದಡೆ ಗುರುವೆಂಬೆ
ಆಚಾರಸಹಿತವಿದ್ದಡೆ ಲಿಂಗವೆಂಬೆ
ಆಚಾರಸಹಿತವಿದ್ದಡೆ ಜಂಗಮವೆಂಬೆ
ಸದಾಚಾರಸಹಿತವಿರದೆ
ಅನ್ಯದೈವ ಭವಿಮಾಟಕೂಟವ
ಮಾಡುವನ ಮನೆಯಲ್ಲಿ
ಲಿಂಗಾರ್ಚನೆಯ ಮಾಡಿದನಾದಡೆ
ನಿಮಗಂದೆ ದೂರವಯ್ಯ, ರಾಮನಾಥ
ಮಹಾಲಿಂಗಪ್ಪ ಕರನಂದಿ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡುತ್ತ, ಶರಣರು ನಮಗೆ ಎಂದೆಂದಿಗೂ ಸ್ಮರಣಾರ್ಹರು. ಅವರು ಬಾಳಿಬದುಕಿದ ರೀತಿಯೇ ನಮಗೆ ಆದರ್ಶಪ್ರಾಯವಾಗಿದೆ. ಆದ್ಯ ವಚನಕಾರ, ವಚನಬ್ರಹ್ಮ ಎನಿಸಿದ ಜೇಡರ ದಾಸಿಮಯ್ಯನವರು ಆದರ್ಶ ಸತಿ ದುಗ್ಗಳೆಯೊಂದಿಗೆ ನಡೆಯಿಸಿದ ಸಂಸಾರ ಲಿಂಗಾಯತ ಧರ್ಮ ಗೃಹಸ್ಥರ ಧರ್ಮವೆ ಹೊರತು ಸನ್ಯಾಸಿಗಳ ಧರ್ಮವಲ್ಲ ಎಂಬುದನ್ನು ಸಾಬೀತು ಪಡಿಸುತ್ತದೆ. ಅವರ ವಚನಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸುಂದರ ಸಮಾಜವನ್ನು ನಿರ್ಮಿಸುವಲ್ಲಿ ಸಹಕಾರಿಯಾಗಿವೆ ಎಂದು ಅಭಿಪ್ರಾಯ ಪಟ್ಟರು.

ಹಿರಿಯರಾದ ಚಿದಾನಂದಸಾ ಕಾಟವಾ ಅವರು, ಜೇಡರ ದಾಸಿಮಯ್ಯನವರು ಅತ್ಯಂತ ಸರಳ ಬದುಕಿನ ಶರಣರಾಗಿದ್ದರು. ಹೇಗೆ ಬದುಕಬೇಕೆಂಬುದನ್ನು ನಡೆದು ತೋರಿಸಿದರು. ಶರಣರು ನೀಡಿದ ಮಾರ್ಗದರ್ಶನದಂತೆ ನಾವು ಅನುಭವಿಗಳಾಗಬೇಕೇ ವಿನಃ ಭವಿಗಳಾಗಬಾರದು. ಜನನ-ಮರಣಗಳ ಸುಳಿಯಿಂದ ಹೊರಬರಲು ನುಡಿದಂತೆ ನಡೆಯುವದು, ನಡೆದಂತೆ ನುಡಿಯುವರು ನಮ್ಮ ಜೀವನದ ಭಾಗವಾಗಬೇಕು. ಹೀಗೆ ತಮ್ಮನ್ನು ತಾವು ಅರಿತುಕೊಂಡವರೇ ಶರಣರು. ಅವರ ಬದುಕನ್ನು ನಾವು ಅನುಸರಿಸಬೇಕೆಂದು ತಿಳಿಹೇಳಿದರು.
ಅನುಭಾವಿ ಉದ್ದಿಮೆದಾರರಾದ ಮಹಾಂತೇಶ ಸಿಂದಗಿ ಮಾತನಾಡುತ್ತ, ಗುರು, ಲಿಂಗ, ಜಂಗಮ ಇವೆಲ್ಲ ಆಚಾರಸಹಿತವಾಗಿರಬೇಕು. ಯಾರು ತಮತಮಗೆ ತಿಳಿದಂತೆ ವರ್ತಿಸುವುದಲ್ಲವೆಂದೇ ಧರ್ಮಗುರು ಬಸವಣ್ಣನವರು ಆಚಾರಸಂಹಿತೆಯನ್ನು ಕಲ್ಪಿಸಿದರು. ಇದಕ್ಕಾಗಿ ಆದ್ಯರ ವಚನಗಳಿವೆ. ಆಚಾರವನ್ನುಳವಡಿಸಿಕೊಳ್ಳಲು ಕೈಯಲ್ಲಿ ಇಷ್ಟಲಿಂಗವಿದೆ. ಜಗದಗಲ ಮುಗಿಲಗಲವಾಗಿರುವ ವಿಶ್ವಚೈತನ್ಯವನ್ನು ಚುಳುಕಾಗಿಸಿ, ಮನದ ಮೈಲಿಗೆ ಕಳೆಯಲು ಈ ಇಷ್ಟಲಿಂಗದ ಮೂಲಕ ಸುಂದರ ಬದುಕನ್ನು ಬದುಕಲು ನಮಗೆ ದಾಸಿಮಯ್ಯ-ದುಗ್ಗಳೆಯರ ಆದರ್ಶ ಬದುಕಿದೆ. ಇಷ್ಟಿದ್ದೂ ಭ್ರಮೆಗೆ ಒಳಗಾಗಿ ಇಲ್ಲದ ನೂರಾರು ದೇವರನ್ನು, ಅಲ್ಲದ ಮಾರ್ಗವನ್ನು ಹಿಡಿಯುವದು ಖೇದಕರ. ಇದರಿಂದ ಹೊರಬರಲು ಜೇಡರ ದಾಸಿಮಯ್ಯ ದಂಪತಿಗಳ ಬದುಕು ಆದರ್ಶಮಯವಾಗಿದೆ ಎಂದರು.

ಪ್ರೊ. ಸುರೇಶ ರಾಜನಾಳ ಅವರು ಜೇಡರ ಕುಲತಿಲಕ ದಾಸಿಮಯ್ಯಗಳ ಕಿರುಪರಿಚಯವನ್ನು ಮಾಡಿಕೊಡುತ್ತ, ಅವರ ವಚನಗಳನ್ನು ಉದಾಹರಿಸಿ ಅವರೊಬ್ಬ ನಿರ್ಭಯ ಸಂಸಾರಿ ಸಂತರು ಎಂದು ಪರಿಚಯಿಸಿದರು. ಅಂದಿನ ಕಾಲದಲ್ಲಿಯೇ ಸಮಾಜವನ್ನು ಸುಂದರಗೊಳಿಸಲು ಅವಶ್ಯವಿರುವ ನೀತಿಗಳನ್ನು ಗಟ್ಟಿ ದನಿಯಲ್ಲಿ ಹೇಳಿದರು.
ಜೊತೆಗೆ ಅಂತಹ ಬದುಕನ್ನು ನಿದರ್ಶನವಾಗಿ ಬದುಕಿ ತೋರಿಸಿದರು. ಅವರ ವಚನಗಳು ಸರ್ವಕಾಲಿಕ ಸತ್ಯವನ್ನು ಸಾರುತ್ತವೆ. ಇಳೆ ನಿಮ್ಮದಾನ, ಕರಿಯನಿತ್ತಡೆ ಒಲ್ಲೆ, ಸತಿಪತಿಗಳೊಂದಾದ ಭಕ್ತಿ, ಒಳಗಿರುವ ಆತ್ಮ ಗಂಡೂ ಅಲ್ಲ, ಹೆಣ್ಣು ಅಲ್ಲ ಎನ್ನುವಂತಹ ವಚನಗಳು ಇಂದಿಗೂ ಜನಮನದ ನಾಲಿಗೆಯ ಮೇಲೆ ನಲಿದಾಡುತ್ತವೆ. ಹೀಗಾಗಿ ಅವರು ಸದಾಸ್ಮರಣೀಯರು ಎಂದು ತಮ್ಮ ಅಭಿಪ್ರಾಯ ಮಂಡಿಸಿದರು.
ಕೊನೆಯಲ್ಲಿ ಸಮಾರೋಪವನ್ನು ಮಾಡುತ್ತ ಪ್ರೊ. ಸಿದ್ಧಲಿಂಗಪ್ಪ ಬರಗುಂಡಿಯವರು, ಜೇಡರ ದಾಸಿಮಯ್ಯ ತಂದೆಗಳವರ ಒಂದೊಂದು ವಚನವೂ ಅನುಭವದ ವಜ್ರವಿದ್ದಂತೆ. ಅವು ನಮಗೆ ಎಂದೆಂದಿಗೂ ಮಾರ್ಗದರ್ಶಿಗಳಾಗಬಲ್ಲವು. ಇಂದಿನ ವಚನವನ್ನೇ ಗಮನಿಸುವುದಾದರೆ, ಗುರು-ಲಿಂಗ-ಜಂಗಮ ವೆಂಬವು ಆಚಾರಸಹಿತವಾಗಿರಬೇಕು. ಸದಾಚಾರ ವಿರಹಿತವಾದರೆ ಅವು ಉಪಾಸನಾ ಯೋಗ್ಯವಲ್ಲ. ಅಲ್ಲದೆ ಮೂಲತಃ ಗುರು, ಲಿಂಗ, ಜಂಗಮ ಎಂಬುವುಗಳು ಒಂದೇ. ಆ ಪರಶಿವ ಚೈತನ್ಯವೇ ಗುರು, ಲಿಂಗ, ಜಂಗಮವೆಂದು ತ್ರಿವಿಧವಾಗಿದೆಯಲ್ಲದೆ ಅವುಗಳು ಪ್ರತ್ಯೇಕ ಅಸ್ತಿತ್ವವನ್ನು ಹೊಂದಿರುವುದಿಲ್ಲ.

ಇಲ್ಲಿ ಅರಿವು, ಆಚಾರ, ಅನುಭಾವಗಳನ್ನೇ ಗುರು, ಲಿಂಗ, ಜಂಗಮವೆನ್ನಲಾಗಿದೆ. ಈ ತ್ರಿವಿಧಗಳು ತತ್ವಗಳೇ ವಿನಃ ಅವು ಪ್ರತ್ಯೇಕ ವ್ಯಕ್ತಿ ಅಥವಾ ವಸ್ತುಗಳಲ್ಲ. ಅಷ್ಟಾವರಣಗಳಲ್ಲಿನ ಎಂಟೂ ವಸ್ತುಗಳು ಮೂಲ ಸ್ವರೂಪದಿಂದಲೇ ಬಂದಿದ್ದು. ತನ್ನ ಅರಿವು ತನಗೆ ಗುರುವಾಗಬೇಕು. ಲಿಂಗದ ನಡೆಯೇ ವಿಶ್ವ ಚೈತನ್ಯಾತ್ಮಕವಾದ ಲಿಂಗವಾಗಬೇಕು. ಹಾಗೆಯೇ ಪರಿಪೂರ್ಣತೆ ಮತ್ತು ಅನುಭವಗಳೇ ಜಂಗಮವಾಗಬೇಕು.
ಸಧ್ಯಕ್ಕೆ ಇವುಗಳನ್ನು ವ್ಯಕ್ತಿಗಳಿಗೆ ಆರೋಪಿಸಿದ್ದರಿಂದ (ವ್ಯಕ್ತಿಗತವಾಗಿಸಿರುವುದರಿಂದ) ನಾನು ಹೆಚ್ಚು ನಾನು ಹೆಚ್ಚು (ಪೀಠಾಧಿಕಾರಿಗಳಲ್ಲಿ) ಎಂಬ ಮೂರ್ಖ ನಡೆ ಸಮಾಜದಲ್ಲಿ ಕಾಣುತ್ತಿದೆ. ಆ ಪರಾತ್ಪರವಾದ ವಸ್ತುವೇ ತಾನೆ ಗುರುವಾದ ತಾನೆ ಲಿಂಗವಾದ, ತಾನೆ ಜಂಗಮವಾದ ಎಂಬ ಶರಣರ ವಚನದಲ್ಲಿದೆ.
ಪ್ರತಿ ಧರ್ಮದಲ್ಲಿಯೂ ವಿಚಾರ ಮತ್ತು ಆಚಾರಗಳೆಂಬ ಎರಡು ತಾತ್ವಿಕ ನೆಲೆಗಳಿವೆ. ಲಿಂಗಾಯತ ಶರಣ ಧರ್ಮದಲ್ಲಿ ಆಚಾರಗಳಿಗೆ ಬಹಳ ಮಹತ್ವವನ್ನು ನೀಡಲಾಗಿದೆ. ಈ ಆಚಾರಗಳು ಪ್ರಾಣಕ್ಕೆ ಸಮಾನವಾಗಿದ್ದು, ಅಂಗಕ್ಕೆ ಹೋಲಿಸಲಾದ ಅಷ್ಟವರಣಗಳಿಗೂ, ಆತ್ಮಕ್ಕೆ ಹೋಲಿಸಿದ ಷಟ್ಸ್ಥಲಗಳಿಗೂ, ಪ್ರಾಣದಂತೆ ಪಂಚ ಆಚಾರಗಳನ್ನು ಕಲ್ಪಿಸಲಾಗಿದೆ. ಇಲ್ಲಿ ನಡೆ-ನುಡಿಯ ನೀತಿ ಸಂಹಿತೆ ಇದೆ. ಇಂಥ ಆಚಾರಗಳನ್ನು ಐದಾಗಿ ಗುರುತಿಸಲಾಗಿದ್ದು, ಸದಾಚಾರದಲ್ಲಿ ಆಂತರ್ಗತವಾಗಿರುವ ಕಾಯಕ ಹಾಗೂ ದಾಸೋಹ ಬಹಳ ಮುಖ್ಯವಾದವು. ಇವು ಗುರು, ಲಿಂಗ, ಜಂಗಮವೂ ಪಾಲಿಸಬೇಕಾದ ನಿಯಮಗಳನ್ನು ಆಚರಿಸದೆ ಮೌಢ್ಯದಿಂದ ನಡೆಯುವನು ಭವಿ ಎನಿಸುತ್ತಾನೆ. ಅಂಥವರ ಮನೆಯಲ್ಲಿ ಲಿಂಗಾರ್ಚನೆಯು ನಿಷಿದ್ಧವೆಂದು ಆದ್ಯ ವಚನಕಾರ ದಾಸಿಮಯ್ಯನವರು ತಿಳಿಸಿದ್ದಾರೆ ಎಂದು ಬರಗುಂಡಿಯವರು ಹೇಳಿದರು.

ಪ್ರಾರಂಭದಲ್ಲಿ ವಚನ ಪ್ರಾರ್ಥನೆ, ದಾಸಿಮಯ್ಯ ಶರಣರ ಭಾವಚಿತ್ರಕ್ಕೆ ಪುಷ್ಪದಳ ಅರ್ಪಣೆ, ಕೊನೆಯಲ್ಲಿ ವಚನ ಮಹಾಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಪತ್ರಕರ್ತರಾದ ಮಲ್ಲಿಕಾರ್ಜುನ ರಾಜನಾಳ, ಮನೋಹರ ಶೆಟ್ಟರ, ರೇವಣಸಿದ್ಧೇಶ್ವರಮಠ, ಪಾಂಡಪ್ಪ ಕಳಸಾ, ಡಾ. ಗೀರಿಶ ನೀಲಕಂಠಮಠ, ಹುಚ್ಚೇಶ ಯಂಡಿಗೇರಿ, ನೇತ್ರಾವತಿ ರಕ್ಕಸಗಿ, ರೇವಣಸಿದ್ಧೇಶ್ವರಮಠ, ಬಸವರಾಜ ಖಂಡಿ, ದಾಕ್ಷಾಯಣಿ ತೆಗ್ಗಿ, ವಿಶಾಲಕ್ಷಿ ಗಾಳಿ ಇನ್ನಿತರರು, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು ಮೊದಲಾದವರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು ಪ್ರೊ. ಮಹಾದೇವಯ್ಯ ನೀಲಕಂಠಮಠ, ಪ್ರೊ. ಚಂದ್ರಶೇಖರ ಹೆಗಡೆ, ಡಾ. ಶೈಲಾ ಬೆನಕನಾಳ, ಬಸಯ್ಯ ಭಂಡಾರಿ, ಡಾ. ಸಣ್ಣವೀರಣ್ಣ ದೊಡ್ಡಮನಿ, ಜ್ಯೋತಿ ಶೇಬಿನಕಟ್ಟಿ, ಕವಿತಾ ಬರಗುಂಡಿ, ಶಿವಾನಂದ ಸಿಂದಗಿ, ಕಲಬುರ್ಗಿಯಿಂದ ಮಂಗಳೂರ ಸಿ. ಎಸ್., ಮಹೇಂದ್ರಕರ, ಬೆಂಗಳೂರಿನಿಂದ ಶಿರೂರ ಸರ್ ಮುಂತಾದವರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ನಿರೂಪಕರು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಮಾಡಿದರು.
