ಬಸವ ಜಯಂತಿಯಂದು ಚಿತ್ತಾಪುರದಲ್ಲಿ ಬಸವ ಭವನ, ವಿದ್ಯಾರ್ಥಿನಿ ವಸತಿ ನಿಲಯಕ್ಕೆ ಅಡಿಗಲ್ಲು

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ತಾಪುರ :

ಪಟ್ಟಣದಲ್ಲಿ ಸುಸಜ್ಜಿತ ಬಸವ ಭವನ ಹಾಗೂ ಸಮಾಜದ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಪೂರಕವಾಗುವಂತೆ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಿಸಲು ಉದ್ದೇಶಿಸಲಾಗಿದ್ದು, ಮುಂಬರುವ ಬಸವ ಜಯಂತಿಯ ಪವಿತ್ರ ದಿನ ಅಥವಾ ಅದಕ್ಕೂ ಮೊದಲು ಅಡಿಗಲ್ಲು ಸಮಾರಂಭ ನೆರವೇರಿಸಲಾಗುವುದು ಎಂದು ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಘೋಷಿಸಿದರು.

ಪಟ್ಟಣದ ಉದ್ದೇಶಿತ ಬಸವ ಭವನ ನಿರ್ಮಾಣದ ಆವರಣದಲ್ಲಿ ಹಮ್ಮಿಕೊಂಡಿದ್ದ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಹಾಗೂ ಸಮಾಜದ ಮುಖಂಡರ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸವ ಭವನ ನಿರ್ಮಾಣಕ್ಕಾಗಿ ಈಗಾಗಲೇ ಪಟ್ಟಣದಲ್ಲಿ 2 ಎಕರೆ ಜಮೀನು ಖರೀದಿಸಲಾಗಿದೆ ಎಂದರು.

ಟ್ರಸ್ಟ್‌ನ ಹಣಕಾಸಿನ ವ್ಯವಹಾರಗಳು ಮತ್ತು ಕಾರ್ಯವೈಖರಿಯ ಬಗ್ಗೆ ಕೇಳಿಬಂದಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಸಮಾಜದ ಅಭಿವೃದ್ಧಿಯೇ ನಮ್ಮ ಏಕೈಕ ಗುರಿಯಾಗಿದ್ದು, ಟ್ರಸ್ಟ್‌ನಲ್ಲಿ ಮುಕ್ತ ಸದಸ್ಯತ್ವಕ್ಕೆ ಅವಕಾಶ ನೀಡಲಾಗಿದೆ. 2 ಲಕ್ಷ ರೂಪಾಯಿ ದೇಣಿಗೆ ನೀಡುವವರು ಸದಸ್ಯರಾಗಲು ಅರ್ಹರಾಗಿದ್ದು, ಈಗಾಗಲೇ 33 ಗಣ್ಯರು ಸದಸ್ಯತ್ವ ಪಡೆದಿದ್ದಾರೆ ಎಂದು ಅವರು ವಿವರಿಸಿದರು.

ವೀರಶೈವ ಸಮಾಜವು ಶೈಕ್ಷಣಿಕವಾಗಿ ಹಿಂದುಳಿಯುತ್ತಿರುವುದು ವಿಷಾದನೀಯ. ಸರ್ಕಾರಿ ನೌಕರಿಗಳಲ್ಲಿ ನಮ್ಮವರ ಸಂಖ್ಯೆ ಕ್ಷೀಣಿಸುತ್ತಿದೆ. ಇದನ್ನು ಹೋಗಲಾಡಿಸಲು ವಸತಿನಿಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಅಲ್ಲದೆ ಟ್ರಸ್ಟ್ ಸದಸ್ಯರ ಕುಟುಂಬದವರಿಗೆ ಟ್ರಸ್ಟ್ ವತಿಯಿಂದ ಉಚಿತ ವಿವಾಹ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

ಪಟ್ಟಣದಲ್ಲಿ ಸ್ಥಾಪನೆಯಾಗಿರುವ ಬಸವಣ್ಣನವರ ಭವ್ಯ ಮೂರ್ತಿಯು ಇಡೀ ಕಲಬುರಗಿ ಜಿಲ್ಲೆಯಲ್ಲೇ ಪ್ರಸಿದ್ಧಿ ಪಡೆದಿದೆ. ಟ್ರಸ್ಟ್ ವತಿಯಿಂದ ಪ್ರತಿವರ್ಷ ಬಸವ ಜಯಂತಿ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಕರೋನಾ ನಂತರ ಸಾಮೂಹಿಕ ವಿವಾಹಕ್ಕೆ ಜನರು ಆಸಕ್ತಿ ತೋರಿಸುತ್ತಿಲ್ಲ. ಬಸವ ಭವನ ಮತ್ತು ವಿದ್ಯಾರ್ಥಿನಿಯರಿಗಾಗಿ ಉಚಿತ ವಸತಿ ನಿಲಯ ಅಗತ್ಯವಿರುವುದರಿಂದ ಬಸವ ಭವನ, ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಾಣ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಇಂತಹ ಜನಪರ ಕೆಲಸಗಳಿಗೆ ಜನರ ಸಹಕಾರ ಅಗತ್ಯ ಎಂದು ಅವರು ಹೇಳಿದರು.

ಮುಖಂಡ ಅಂಬರೀಷ ಸುಲೇಗಾಂವ ಮಾತನಾಡಿ, ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುವವರಿಗೆ ಟ್ರಸ್ಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಬಸವ ಭವನ, ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಾಣ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಇದೇ ವೇಳೆ ಬಸವರಾಜ ಕೊಳ್ಳಿ ಅವರು 2 ಲಕ್ಷ ರೂ. ದೇಣಿಗೆ ನೀಡಿ ಟ್ರಸ್ಟ್ ಸದಸ್ಯರಾಗಿ ಸೇವೆ ಸಲ್ಲಿಸುವುದಾಗಿ ತಿಳಿಸಿದರು.

ಟ್ರಸ್ಟ್ ಕಾರ್ಯದರ್ಶಿ ನಾಗರಾಜ ಭಂಕಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖಂಡರಾದ ಡಾ. ಚಂದ್ರಶೇಖರ ಕಾಂತಾ, ಡಾ. ಪ್ರಭುರಾಜ ಕಾಂತಾ, ಅಣ್ಣಾರಾವ ಪಾಟೀಲ ಮೂಡಬೂಳ, ಪ್ರಭುದೇವ ಬಮ್ಮನಳ್ಳಿ, ಮಲ್ಲರೆಡ್ಡಿ ಗೋಪಸೇನ, ಅನಿಲ ವಡ್ಡಡಗಿ, ಅಶೋಕ ನಿಪ್ಪಾಣಿ, ಎಸ್ ಎನ್ ಪಾಟೀಲ, ಶರಣಪ್ಪ ಸಜ್ಜನ, ಶಾಂತಕುಮಾರ ಹತ್ತಿ, ಶ್ರೀನಿವಾಸರೆಡ್ಡಿ ಪಾಲಪ್, ಶಿವರಾಜ ಪಾಳೇದ, ಸುವನರೆಡ್ಡಿ ಪೋತರೆಡ್ಠಿ, ಬಸವರಾಜ ಸಂಕನೂರ, ರಾಜಶೇಖರ ಯದಲಾಪುರ, ಬಸವರಾಜ ಕಾಳಗಿ, ಬಸವರಾಜ ಹೂಗಾರ, ಶ್ರೀಮಂತ ಕುಂಬಾರ, ರವೀಂದ್ರ ಗೊಬ್ಬೂರ, ಮಲ್ಲಿಕಾರ್ಜುನರೆಡ್ಡಿ ಇಜಾರ, ಸಿದ್ದಲಿಂಗ ಅನವಾರ, ಬಸವರಾಜಗೌಡ ಆಲೂರ, ಗೂಳಿನಾಥ ಹಳ್ಭಿಮನಿ, ಶರಣರೆಡ್ಡಿ ಗಡೇಸೂರ, ಅಯ್ಯಣ್ಣಗೌಡ ಗಡೇಸೂರ, ರಾಚಪ್ಪ ಬಮ್ಮನಳ್ಳಿ, ವಿಶಾಲ ದಂಡಗುಂಡ, ಸುಭಾಷಗೌಡ ಪಸಾರ, ಬಸಣ್ಣಗೌಡ ಭೀಮನಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಕೃಪೆ: ವಾರ್ತಾ ಭಾರತಿ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *