ಅನುಭವ ಮಂಟಪ ಸ್ಥಾವರವಾಗದೆ, ಜಂಗಮವಾಗಲಿ – ಭಾಗ 1

ಕೂಡಲಸಂಗಮದ ಬಸವ ಅಂತರಾಷ್ಟ್ರೀಯ ಕೇಂದ್ರದ ರೀತಿ ಖಾಲಿ ಬೀಳದಿರಲಿ

ಬೆಂಗಳೂರು

ಮುಂದಿನ ಬಸವ ಜಯಂತಿಯೊಳಗೆ ಬಸವ ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪದ ಭವ್ಯ ಕಟ್ಟಡವನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವುದಾಗಿ ಸಚಿವ ಈಶ್ವರ ಖಂಡ್ರೆ ಹೇಳಿರುವುದು ಸ್ವಾಗತಾರ್ಹ.

ಆದರೆ ಸ್ಥಾವರವನ್ನು ಕಟ್ಟುವುದು ಅಷ್ಟೊಂದು ಕಷ್ಟದ ಕೆಲಸವಲ್ಲ ಎನ್ನುವುದನ್ನು ಎಲ್ಲರೂ ಗಮನಿಸಬೇಕು. ಹಣಕಾಸು ಮತ್ತು ಕಟ್ಟಡದ ಸ್ಪಷ್ಟ ಪರಿಕಲ್ಪನೆ ಇದ್ದರೆ ತಂತ್ರಜ್ಞರು ಕಟ್ಟಡವನ್ನು ಕಟ್ಟಿ ಬೇಗ ಮುಗಿಸುತ್ತಾರೆ.

ಆದರೆ ಅನುಭವ ಮಂಟಪದಲ್ಲಿ ಯಾವ ಯಾವ ಕಾರ್ಯಗಳು, ಎಂತೆಂಥ ಪ್ರಯೋಗಗಳು ನಡೆಯಬೇಕು ಎನ್ನುವುದನ್ನು ನಿರ್ಣಯಿಸುವುದು ಅಷ್ಟು ಸುಲಭದ ಕೆಲಸವಲ್ಲ.

ಅನುಭವ ಮಂಟಪದಲ್ಲಿ ಯಾವ ಯಾವ ಕಾರ್ಯಗಳು
ನಡೆಯಬೇಕು ಎಂದು ನಿರ್ಣಯಿಸುವುದು ಸುಲಭದ ಕೆಲಸವಲ್ಲ.

ಸರ್ಕಾರಿ ನಿಯಂತ್ರಿತ ಯೋಜನೆಗಳಲ್ಲಿ ಇದು ಮತ್ತಷ್ಟು ಕಷ್ಟದ ಕೆಲಸ. ರಾಜಕೀಯ, ಸೈದ್ಧಾಂತಿಕ ಹಿತಾಸಕ್ತಿಗಳು ಅಡಚಣೆಯಾಗಬಹುದು. ಕೆಲವರು ಸಾಮಾಜಿಕ ಉದ್ದೇಶದ ಸೋಗಿನಲ್ಲಿ ತಮ್ಮ ವೈಯಕ್ತಿಕ ಸ್ವಾರ್ಥ ಸಾಧನೆಗಾಗಿ ದಾರಿತಪ್ಪಿಸಲೂ ಬಹುದು.

22 ವರ್ಷಗಳಿಂದ ಖಾಲಿ ಬಿದ್ದಿರುವ ಕೇಂದ್ರ

ಈ ತರಹದ ಸಮಸ್ಯೆಗಳನ್ನು ಕೂಡಲ ಸಂಗಮದಲ್ಲಿನ ಬಸವ ಅಂತರಾಷ್ಟ್ರೀಯ ಕೇಂದ್ರದಲ್ಲಿ ನೋಡಬಹುದು. ಅಲ್ಲಿ ಹದಿನೈದು ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಿದ ಬಸವ ಅಂತರಾಷ್ಟ್ರೀಯ ಕೇಂದ್ರದ ಆರು ಅಂತಸ್ತಿನ ಭವ್ಯ ಕಟ್ಟಡದಲ್ಲಿ ಒಂದು ಮ್ಯೂಜಿಯಮ್ಮನ್ನು ಕಟ್ಟಬೇಕೆಂಬುದು ಮುದ್ನಾಳ ಸಮಿತಿಯ ಶಿಫಾರಸ್ಸಿನಲ್ಲಿದೆ.

ಆ ಕಟ್ಟಡ ಮುಗಿದು 22 ವರ್ಷಗಳಾಗಿವೆ. ಆದರೆ ಅದು ಖಾಲಿ ಬಿದ್ದಿದೆ. ಈವರೆಗೆ ಯಾವುದೇ ಮ್ಯೂಸಿಯಂ ಅಲ್ಲಿ ನಿರ್ಮಾಣವಾಗಿಲ್ಲ, ಅದು ಆಗುವ ಸ್ಥಿತಿಯಲ್ಲೂ ಇಲ್ಲ.

ಆದರೆ ಸುಮಾರು 10 ವರ್ಷಗಳ ಹಿಂದೆ 100 ಕೋಟಿ ರೂ ಖರ್ಚಿನ ಮತ್ತೊಂದು ಅನವಶ್ಯ ಕಟ್ಟಡ ಕೈಗೆತ್ತಿ ಕೊಳ್ಳಲಾಗಿದೆ. ಯಾರು ಅದಕ್ಕೆ ಅಷ್ಟೊಂದು ಹಣ ಕೇಳಿದ್ದರು? ಅದು ಏತಕ್ಕಾಗಿ ಬೇಕು? ಯಾರಿಗೂ ಗೊತ್ತಿಲ್ಲ. 10 ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಆ ಅನವಶ್ಯಕ ಕೆಲಸ ಇನ್ನೂ ಮುಗಿದಿಲ್ಲ.

ನಾಲ್ಕು ಸಭೆಗಳು

ಮ್ಯೂಸಿಯಂನ ರೂಪು ರೇಷೆಯ ಬಗ್ಗೆ ಏನೂ ಕೆಲಸವಾಗಿಲ್ಲ. ಅದರ ರಚನೆ ಹೇಗಿರಬೇಕು, ಅದರಲ್ಲಿ ಬಸವಣ್ಣನವರ ಚರಿತ್ರೆಯ ಯಾವ ಯಾವ ಅಂಶಗಳನ್ನು ಹೇಗೆ ಎಲ್ಲೆಲ್ಲಿ ರಚಿಸಬೇಕೆಂಬ ಬಗ್ಗೆ ನಾಲ್ಕು ಸಲ ಪ್ರಮುಖ ಮಠಾಧಿಶರ ಮತ್ತು ವಚನ ಸಾಹಿತ್ಯದ ದಿಗ್ಗಜರ ಸಭೆ ಕರೆಯಲಾಗಿತ್ತು.

ಅ) ಪ್ರಥಮ ಸಲ ದಿವಂಗತ ಪೂಜ್ಯ ಸಿದ್ದೇಶ್ವರ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಕೂಡಸಂಗಮದಲ್ಲಿ ನಡೆದ ಸಭೆಯಲ್ಲಿ ಅನೇಕ ಹಿರಿಯ ಸ್ವಾಮಿಗಳು, ದಿವಂಗತ ಎಂ.ಪಿ. ಪ್ರಕಾಶ್, ಲೀಲಾದೇವಿ ಪ್ರಸಾದ್, ಡಾ. ಎಂ.ಎಂ. ಕಲಬುರ್ಗಿಯವರಂಥವರು ಭಾಗವಹಿಸಿದ್ದರು. ಅವರೆಲ್ಲ ನೀಡಿದ ನೂರೆಂಟು ಸಲಹೆಗಳ ಮೇಲೆ ಒಮ್ಮತ ಮೂಡಿಸಲು ಸಾಧ್ಯವಾಗಲಿಲ್ಲ.

ಆ) ಎರಡನೇ ಸಭೆಯನ್ನು ಮತ್ತೆ ಕೂಡಲ ಸಂಗಮದಲ್ಲಿಯೇ ಕರೆಯಲಾಗಿತ್ತು. ಅದಕ್ಕೆ ಬೇರೆ ಬೇರೆ ತಜ್ಞರನ್ನು, ಪ್ರಸಿದ್ಧ ಸಾಹಿತಿಗಳನ್ನೂ ಕರೆಸಲಾಗಿತ್ತು. ಅದೂ ಸ್ಪಷ್ಟ ಅಭಿಪ್ರಾಯ ನೀಡಲು ಸಾಧ್ಯವಾಗಲಿಲ್ಲ.

ಇ) ಮೂರನೆಯ ಸಭೆಯನ್ನು ಇಳಕಲ್‍ ಮಠದ ಲಿಂಗೈಕ್ಯ ಪೂಜ್ಯ ಮಹಾಂತ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆದಿತ್ತು. ವಿಶೇಷವಾಗಿ ಅನುಭವ ಮಂಟಪದ ಬಗ್ಗೆ ಹೆಚ್ಚು ತಿಳಿದಿದ್ದ ಎಲ್ಲ ಪ್ರಸಿದ್ಧ ಹಿರಿಯ ಸ್ವಾಮಿಗಳ ಸಭೆ ಅದಾಗಿತ್ತು. ಆದರೆ ಅವರೆಲ್ಲ ಸಹಜವಾಗಿ ಧಾರ್ಮಿಕ ಅಂಶಗಳಿಗೆ ಹೆಚ್ಚು ಮಹತ್ವ ನೀಡಿದರು.

ಈ) ಕೊನೆಯ ಮತ್ತು ನಾಲ್ಕನೇ ಸಭೆಯು ಧಾರವಾಡದಲ್ಲಿ ಐವತ್ತು ದಿಗ್ಗಜ ಸಾಹಿತಿಗಳನ್ನು ಒಳಗೊಂಡಿತ್ತು. ಆ ಸಭೆಯಲ್ಲಿ ಕೆಲವು ವಿಶಾಲ ತಳಹದಿಯ ಅರ್ಥವತ್ತಾದ ಸಲಹೆಗಳು ವ್ಯಕ್ತವಾದವು. ಅವುಗಳ ಆಧಾರದ ಮೇಲೆ ಮ್ಯೂಸಿಯಂನ ರೂಪುರೇಷೆ ತಯಾರಿಸಲು ಕಲಾಕಾರರಿಂದ ಟೆಂಡರ್ ಕರೆಯಲಾಯಿತು. ಅದರಲ್ಲಿ ಬೆಂಗಳೂರಿನ ಒಬ್ಬ ಕಲಾಕಾರ ಟೆಂಡರ್ ಪಡೆದು ಕೆಲವು ಡಿಜೈನುಗಳನ್ನು ಕಳಿಸಿದ್ದರು.

ಬೀಗ ಬಿದ್ದಿರುವ ಬಸವ ಅಂತಾರಾಷ್ಟ್ರೀಯ ಕೇಂದ್ರ

ಈ ಕಲಾಕೃತಿಗಳನ್ನು ಯಾವ ಮಾಧ್ಯಮದಲ್ಲಿ (ಕಲ್ಲು, ಸಿಮೆಂಟ್, ಪ್ಲಾಸ್ಟಿಕ್, ಫೈಬರ್, ಗ್ಲಾಸ್ ಇತ್ಯಾದಿ) ಮಾಡಬೇಕೆಂಬ ಚರ್ಚೆ ನಡೆಯಿತು. ಅದಕ್ಕಾಗಿ ಜಗತ್ಪ್ರಸಿದ್ಧ ಅಕ್ಷರಧಾಮ ಮಾದರಿಯ ಮ್ಯೂಸಿಯಮ್ ನಿರ್ಮಿಸುವ ಕುರಿತು ಹೆಚ್ಚು ತಾಂತ್ರಿಕ ಮಾಹಿತಿ ಪಡೆಯಲು ಗುಜರಾತಿನ ಅಕ್ಷರಧಾಮ ನಿರ್ಮಿಸಿದ ಸ್ವಾಮಿ ನಾರಾಯಣ ಪಂಥದ ಪ್ರಮುಖ ಸ್ವಾಮಿ ಮಹಾರಾಜರೊಂದಿಗೆ ಚರ್ಚಿಸಲು ನಾಲ್ಕು ಎಂಜಿನಿಯರುಗಳ ಒಂದು ತಂಡವನ್ನು ಅಕ್ಷರ ಧಾಮಕ್ಕೆ ಕಳಿಸಲಾಗಿತ್ತು. ಅಲ್ಲಿನ ಪ್ರಮುಖ ಸ್ವಾಮಿಗಳೊಂದಿಗೆ ಚರ್ಚೆ ನಡೆದಿತ್ತು. ಅವರು ಉಚಿತ ತಾಂತ್ರಿಕ ಸಹಾಯ ನೀಡಲು ಒಪ್ಪಿದ್ದರು.

ಆ ಸಮಯದಲ್ಲಿ ಯೋಜನೆಯ ವಿಶೇಷಾಧಿಕಾರಿಗಳು ನಿವೃತ್ತರಾದರು. 2012ರಿಂದ 2025ರವರೆಗೆ, ಅಂದರೆ 22 ವರ್ಷಗಳ ಕಾಲ, ಮ್ಯೂಸಿಯಂ ನಿರ್ಮಿಸುವ ಕೆಲಸ ಸಂಪೂರ್ಣವಾಗಿ ನಿಂತಿದೆ.

2012ರಿಂದ 2025ರವರೆಗೆ ಮ್ಯೂಸಿಯಂ ನಿರ್ಮಿಸುವ ಕೆಲಸ ಸಂಪೂರ್ಣವಾಗಿ ನಿಂತಿದೆ.

ಅಸಂಬದ್ಧ, ಅರ್ಥರಹಿತ ಕಾರ್ಯಕ್ರಮಗಳು ಬೇಡ

ಅನುಭವ ಮಂಟಪದ ಕಟ್ಟಡ ಮುಗಿದ ನಂತರ ಕೂಡಲಸಂಗಮದ ಬಸವ ಅಂತರಾಷ್ಟ್ರೀಯ ಕೇಂದ್ರದ ಹಾಗೆ ಅದು ಖಾಲಿ ಬಿದ್ದರೆ ಸೋಜಿಗವಲ್ಲ.

ಆದ್ದರಿಂದ ಈಗ ಅಲ್ಲಿ ಪ್ರಗತಿಯಲ್ಲಿರುವ ಸ್ಥಾವರ ಕೆಲಸಗಳು ಮುಗಿಯುವ ಮೊದಲೇ ಅದರಲ್ಲಿ ನಡೆಸಬೇಕಾದ ಕಾರ್ಯಕ್ರಮಗಳ ಯೋಜನೆ ತಯಾರಾಗಬೇಕು. ಇಲ್ಲದಿದ್ದರೆ ಆ ಭವ್ಯ ಕಟ್ಟಡ ಖಾಲಿ ಉಳಿವ ಸಾಧ್ಯತೆಯೇ ಹೆಚ್ಚು. ಅಥವಾ ಅಸಂಬದ್ಧ, ಅನುಚಿತ, ಅರ್ಥರಹಿತ, ಆಧಾರರಹಿತ, ನಿರುಪಯುಕ್ತ ಕಾರ್ಯಕ್ರಮಗಳು ಹಣ ಖರ್ಚು ಮಾಡುವ ಉದ್ದೇಶದಿಂದಲೇ ನಡೆಯಬಹುದು.

ನಿರ್ಮಾಣದ ಕೆಲಸ ಮುಗಿಯುವ ಮೊದಲೇ ಅನುಭವ ಮಂಟಪದಲ್ಲಿ ನಡೆಸಬೇಕಾದ ಕಾರ್ಯಕ್ರಮಗಳ ಯೋಜನೆ ತಯಾರಾಗಬೇಕು.

ಅನುಭವ ಮಂಟಪದಲ್ಲಿ ಕಾರ್ಯಕ್ರಮಗಳು ಮೂಲ ಉದ್ದೇಶಕ್ಕೆ ಸರಿಹೊಂದುವಂತಹವು ಆಗಿದ್ದರೆ ಅದಕ್ಕೊಂದು ಅರ್ಥ ಬರುತ್ತದೆ. ಇಲ್ಲದಿದ್ದರೆ ಆ ಭವ್ಯ ಕಟ್ಟಡಕ್ಕೆ ಯಾವುದೇ ಬೆಲೆ ಇರುವುದಿಲ್ಲ. (ಮುಂದುವರೆಯುವುದು)

(ಈ ಸರಣಿ ಲೇಖನಗಳಿಗೆ ನಿಮ್ಮ ಪ್ರತಿಕ್ರಿಯೆ ಹಾಗೂ ಅನುಭವ ಮಂಟಪವನ್ನು ಜಂಗಮವಾಗಿಸುವ ಬಗ್ಗೆ ನಿಮ್ಮ ಸಲಹೆಗಳನ್ನು ಸ್ವಾಗತಿಸುತ್ತೇವೆ. ನಿಮ್ಮ ಫೋನ್ ನಂಬರ್ ಸಹಿತ ನಿಮ್ಮ ಆಲೋಚನೆಗಳನ್ನು ನಮಗೆ ಇಮೇಲ್ ಅಥವಾ ವಾಟ್ಸ್ ಆಪ್ ಮಾಡಬಹುದು. ಇಮೇಲ್ ವಿಳಾಸ -
basavamedia1@gmail.com)

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
5 Comments
  • ನಿಜಾ ಸರ್ ತಮ್ಮ ಅನಿಸಿಕೆ. ಅನುಭವ ಮಂಟಪ ಆ ಹೆಸರಿನಂತೆ ವೈಚಾರಿಕ ಪ್ರಗತಿಪರ ವಿಚಾರಗಳ ವೇದಿಕೆ ಆಗಬೇಕು . ಆದರೆ ಇಂದಿನ ಕಾಲಘಟ್ಟವನ್ನು ನೋಡಿದರೆ ಅದು ಮತ್ತೆ ಸ್ಥಾವರ ಆಗುತ್ತೆ ಎನ್ನುವ ಆತಂಕ ಕಾಡಿದ್ದು ಸುಳ್ಳಲ್ಲ. ಇತ್ತೀಚಿಗೆ ಬೀದರ್ ನಲ್ಲಿ ನಡೆಯದ ಕಾರ್ಯಕ್ರಮಗಳನ್ನು ಗಮನಿಸಿದರೆ ಅನುಭವ ಮಂಟಪ ಮುಂದೊಂದು ದಿನ ಪಟ್ಟಭದ್ರ ಹಿತಾಸಕ್ತಿಗಳ ಕೈ ಸೇರುತ್ತೆ ಎನ್ನುವ ಆತಂಕ ಕಾಡುತ್ತಿದೆ.
    ಶರಣು ಶರಣಾರ್ಥಿಗಳು.

  • ಬಸವ ಅಂತರಾಷ್ಟ್ರೀಯ ಕೇಂದ್ರ ಖಾಲಿ ಬೀಳಲು‌ ಹೊಣೆಗೇಡಿ ಲಿಂಗಾಯತರೆ ಕಾರಣ. ಬೇರೆ ಯಾರನ್ನು ದೂಷಿಸುವುದಿಲ್ಲ‌. ಹುನುಗುಂದ ಮತ ಕ್ಷೇತ್ರದ ಶಾಸಕ‌ ಒಬ್ಬ ಲಿಂಗಾಯತನಾಗಿದ್ದು ಸದಾ ಎಡಬಿಡಂಗಿತನ ಪ್ರದರ್ಶಿಸುವುದಲ್ಲಿ ಎತ್ತಿದ ಕೈ. ಕಾರಣ ಒಂದು ಸಾರಿ ಪಂಚ ಪೀಠದವರನ್ನು ಕರೆಯಿಸಿ ಕ್ಷೇತ್ರ ಶುದ್ದಿ ಮಾಡುತ್ತಾನಂತೆ. ಮತ್ತೊಮ್ಮೆ ಲಿಂಗಾಯತ ಮುಖವಾಡ ಮತ ರಾಜಕಾರಣ ಬಿಟ್ಟು ಮತ್ತೇನು ಇಲ್ಲ. ಇನ್ನೂ ಸ್ವತಃ ಕೂಡಲಸಂಗಮದಲ್ಲಿ ಬಸವ ಧರ್ಮ ಪೀಠವಿದ್ದರು ಇಲ್ಲದಾಗೆ. ಅದು‌ ಈ ಬಾರಿ ಶರಣ ಮೇಳದಲ್ಲಿ ನಿರ್ಣಯ ಅಂಗೀಕರಿಸಿದೆ. ಮಾತಾಜೀ ಲಿಂಗೈಕ್ಯರಾದ ಮೇಲೆ ಪೀಠ ತನ್ನ ದಿಶಕ್ತಿ ಕಳೆದು ಕೊಂಡಿದೆ. ಇನ್ನೂ ಬಾಗಲಕೋಟೆ ಜಿಲ್ಲೆಯಲ್ಲಿ ಬಸವ ಪರ ಸಂಘಟನೆಗಳು ಬಲಿಷ್ಟವಿಲ್ಲ. ಆಟಕ್ಕೂಂಟು ಲೆಕ್ಕಕಿಲ್ಲ. ವಿರಕ್ತ ಮಠ ಪರಂಪರೆಯ ಮುಂಚೂಣಿ ಮಠ ಇಲಕಲ್ ಮಹಾಂತ ಮಠ ಸಕ್ರಿಯವಾಗಿ ಇಂತಹ ವಿಷಯಗಳನ್ನು ಎತ್ತುವುದಿಲ್ಲ‌. ಅಂತಃಶಕ್ತಿ ಇದ್ದರೆ, ಶಾಸಕರನ್ನು‌ ಮಠಕ್ಜೆ ಕರೆಯಿಸಿ. ಇದು ಬಸವನ ಕಾರ್ಯ ಮಾಡ ಬೇಕೆಂದು‌ ತಾಕೀತು ಮಾಡುತ್ತಿದ್ದರು. ಶಾಸಕನಿಗ ಹೇಳುವ ಶಕ್ತಿ ಇವರಲ್ಲಿ ಇಲ್ಲ. ಬಾಯಲ್ಲಿ ಬಸವ ಕೈಯಲ್ಲಿ ಮಠವೊಂದಿದ್ದರೆ ಸಾಕು ಎನ್ನುವ ಮಠಗಳೆ ಹೆಚ್ಚು ಜಿಲ್ಲೆಯಲ್ಲಿ. ಏನು ಮಾಡಲು ಆಗುವುದಿಲ್ಲ. ಬಸವನೆ ಮಾಡಿಸಿ ಕೊಳ್ಳಲಿ ಎಂದಾಗುತ್ತೆ ಆಗಲಿ. ಜೈ ಬಸವ.

  • ಇದು ತುರ್ತಾಗಿ ನಡೆಯಬೇಕಿರುವ ಚರ್ಚೆ. ಬಸವ ಮೀಡಿಯಾ ಈ ವಿಷಯದಲ್ಲಿ ಎಲ್ಲರ ಅಭಿಪ್ರಾಯವನ್ನು ಒಗ್ಗೂಡಿಸುವ ಜವಾಬುದಾರಿ ತೆಗೆದುಕೊಳ್ಳಲು ವಿನಂತಿ ಮಾಡುತ್ತಿದ್ದೇನೆ.

    • ಅನುಭವ ಮಂಟಪ ಮತ್ತೊಂದು ಸ್ಥಾವರ ಪೂಜಾ ಸ್ಥಳ ವಾಗದೇ, 12 ನೇ ಶತಮಾನದ ಅನುಭವ ಮಂಟಪದ ಅನುರೂಪದ ಕೇವಲ ಕಟ್ಟಡ ಮಾತ್ರವಾಗದೇ ನಿಜ ಅರ್ಥದಲ್ಲಿ ವೈವಾರಿಕ ಕೇಂದ್ರವಾಗಬೇಕು.

  • ನನ್ನ ಮನಸ್ಸಿನಲ್ಲಿ ಇರುವ ಆತಂಕವನ್ನ ಜಾಮದಾರ್ ಸರ್ ಬರೆದಿದ್ದಾರೆ.

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ