‘ವಚನ ಸಾಹಿತ್ಯ ದಲಿತರು ಸೃಷ್ಟಿ ಮಾಡಿದ ಮೊಟ್ಟ ಮೊದಲ ಸಾಹಿತ್ಯ’

‘ವಚನ ಸುಧೆ’ ಕೃತಿ ಲೋಕಾರ್ಪಣೆ

ಕಲಬುರಗಿ:

‘ವಚನ ಇಡೀ ಜಗತ್ತಿನ ಸಾಹಿತ್ಯ ಚರಿತ್ರೆಯಲ್ಲಿ ಮೊಟ್ಟ ಮೊದಲು ಸೃಷ್ಟಿಯಾದಂತಹ ದಲಿತ ಸಾಹಿತ್ಯ. ಸಮತೆಯ ಬಗ್ಗೆ ಮಾತಾಡಿದಂತಹ ಸಾಹಿತ್ಯ. ನೊಂದವರ, ಬೆಂದವರ ಬಗ್ಗೆ ಮಾತಾಡಿದ್ದು ಅಷ್ಟೇ ಅಲ್ಲ, ಅವರೇ ಸೃಷ್ಟಿ ಮಾಡಿಕೊಂಡತಹ ಸಾಹಿತ್ಯವಾಗಿದೆ’ ಎಂದು ಚಿಂತಕ ಪ್ರೊ. ಆರ್.ಕೆ. ಹುಡಗಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಮಂಗಳವಾರ ಗಿರಿಜಾ ಪ್ರಕಾಶನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಜಯಕುಮಾರ ವಿ. ಮಾಲಿಪಾಟೀಲ ಅವರ ‘ವಚನ ಸುಧೆ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಚನ ಸಾಹಿತ್ಯ ಯಾವಾಗಲೂ ಸಮಕಾಲೀನ ಸಂದರ್ಭಕ್ಕೆ ಬಹಳ ಅರ್ಥಪೂರ್ಣವಾಗಿ ಕ್ರಾಂತಿಕಾರಿ ರೀತಿಯಲ್ಲಿ ಸ್ಪಂದಿಸಿದಂತಹ ಒಂದು ಸಾಹಿತ್ಯ ಪ್ರಕಾರವಾಗಿದೆ’ ಎಂದರು.

‘ಡಿಎಸ್ಎಸ್ ಹೋರಾಟಕ್ಕೆ ವಚನ ಸಾಹಿತ್ಯವೇ ಸ್ಫೂರ್ತಿ. ನಮ್ಮ ಪ್ರಥಮ ವೈರಿ ಬ್ರಾಹ್ಮಣಶಾಹಿ, ದ್ವಿತೀಯ ವೈರಿ ಬಂಡವಾಳಶಾಹಿ ಆಗಿತ್ತು. ಆದರೆ, ಇಂದು ನಮ್ಮ ವೈರಿ ಹೊಲೆಯರು, ಮಾದಿಗರು, ದಲಿತರು ಅಂತೇಳಿ ಅತ್ಯಂತ ಕೆಳಮಟ್ಟಕ್ಕೆ ಹೋಗಿ ಪರಸ್ಪರ ಹೋರಾಟ, ಕಚ್ಚಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ನಮ್ಮ ನಡುವೆ ಬಂದ ಈ ಭಿನ್ನತೆಯನ್ನು ಸಮಚಿತ್ತದಿಂದ ಚರ್ಚೆ ಮಾಡಿ, ನಮ್ಮ ವೈರಿ ಯಾರು ಅನ್ನುವುದನ್ನು ಮತ್ತೆ ಗುರುತಿಸಬೇಕಿದೆ. ನಾಡಿನ ಸಮಸ್ತ ಶೋಷಿತರು ಬಾಬಾಸಾಹೇಬರ ನೇತೃತ್ವ ಮಾತ್ರ ಒಪ್ಪಿಕೊಂಡು ಒಗ್ಗಟ್ಟಿನಿಂದ ಹೆಜ್ಜೆ ಇಡಬೇಕು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಅನೇಕ ರೀತಿಯ ಸಮಸ್ಯೆ, ತೊಂದರೆಗಳನ್ನು ಅನುಭವಿಸುತ್ತಿರುವ ಈ ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡುವಂಥದ್ದು ವಚನ ಸಾಹಿತ್ಯ. ಆ ಮಾರ್ಗದಲ್ಲಿ ವಚನ ಸುಧೆ ಕೃತಿ ಹೊರಬಂದಿದೆ. ವಾಸ್ತವಿಕ ಅಂಶಗಳನ್ನು ಒಳಗೊಂಡ ಪುಸ್ತಕಗಳು ಸಮಾಜಕ್ಕೆ ಅಗತ್ಯ ಎಂದರು.

ಕೃತಿ ಪರಿಚಯಿಸಿದ ಸಾಹಿತಿ ಪ್ರಭು ಖಾನಾಪುರೆ, ‘ವಚನ ಸುಧೆ’ ಕೃತಿ ವೈಚಾರಿಕತೆಯಿಂದ ಕೂಡಿದೆ. ಲೇಖಕರು ಬಹಳ ಸರಳವಾದ ಶಬ್ದಗಳನ್ನು ಬಳಸಿದ್ದಾರೆ. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಸಾಹಿತ್ಯ ಏಕಾಂತದೊಳಗೆ ಹುಟ್ಟುವಂತಹದ್ದಲ್ಲ. ಲೋಕಾಂತದೊಳಗೆ ಹುಟ್ಟುವಂಥದ್ದು ಎಂದು ಕೃತಿ ಮೂಲಕ ನಿರೂಪಿಸಿದ್ದಾರೆ’ ಎಂದರು.

‘ಸಜ್ಜನರು ಹೇಗೆ ಬದುಕಬೇಕು? ಹೇಗೆ ಬದುಕಬಾರದು ಎಂಬ ಕಿವಿಮಾತನ್ನು ಕೃತಿಯ ಮೂಲಕ ಹೇಳಿದ್ದಾರೆ. ಆದರೆ, ಜಾತಿ ವ್ಯವಸ್ಥೆ, ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಇನ್ನಷ್ಟು ಧ್ವನಿ ಎತ್ತಬೇಕಿತ್ತು’ ಎಂದರು.

ಶರಣಬಸವೇಶ್ವರ ಗುಡಿ ಶಾಲಾ-ಕಾಲೇಜುಗಳ ನಿರ್ದೇಶಕಿ ನೀಲಾಂಬಿಕಾ ಶೇರಿಕಾರ ಮಾತನಾಡಿ, ‘ನೋಡಾ ಮನವೆ’ ಎಂಬ ಅಂಕಿತ ನಾಮದಿಂದ ವಿಜಯಕುಮಾರ ಅವರು ವಚನಗಳನ್ನು ಬರೆದಿದ್ದಾರೆ. ಅವರು ಬಸವಾದಿ ಶಿವಶರಣರಿಂದ ಹಿಡಿದು ಸಿದ್ದಯ್ಯ ಪುರಾಣಿಕರ ತನಕ ವಚನ ಸಾಹಿತ್ಯವನ್ನು ಓದಿಕೊಂಡಿದ್ದಾರೆ. ಅದರ ಫಲವೇ ವಚನ ಸುಧೆಯಾಗಿದೆ’ ಎಂದು ಬಣ್ಣಿಸಿದರು.

ಗಿರಿಜಾ ಪ್ರಕಾಶನದ ಪ್ರಕಾಶಕಿ ಗಿರಿಜಾ ವಿ. ಮಾಲಿಪಾಟೀಲ ಮತ್ತು ಕೃತಿ ಲೇಖಕ ವಿಜಯಕುಮಾರ ವಿ. ಮಾಲಿಪಾಟೀಲ ದಂಪತಿಯನ್ನು ಸನ್ಮಾನಿಸಲಾಯಿತು.

ನಿವೃತ್ತ ಮುಖ್ಯೋಪಾಧ್ಯಾಯ ಪೃಥ್ವಿರಾಜ ವಿ.ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಸಂಘಟನೆಯ ಅಧ್ಯಕ್ಷ ದತ್ತಾತ್ರಯ ಇಕ್ಕಳಕಿ, ಕಲ್ಯಾಣರಾವ ಜಿ.ಪಾಟೀಲ, ಶಿವರಾಜಶಾಸ್ತ್ರಿ ಎನ್. ಹೇರೂರ, ವೀರೇಶಗೌಡ ಬಿ. ಪಾಟೀಲ ಉಪಸ್ಥಿತರಿದ್ದರು.

ಶರಣಗೌಡ ಬಿ. ಪಾಟೀಲ ಸ್ವಾಗತಿಸಿದರು. ಮೋಹನ ಎಂ. ಕಟ್ಟಿಮನಿ ನಿರೂಪಿಸಿದರು. ಸಂಗಮೇಶ್ವರ ಜಿ. ಸರಡಗಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *