ಜಹಿರಾಬಾದ (ತೆಲಂಗಾಣ):
ನಗರದಲ್ಲಿ ಗುರುವಾರ ಲಿಂಗಾಯತ ಸಮಾಜದಿಂದ ವೀರವಿರಾಗಿಣಿ, ಮಹಾಶರಣೆ ಅಕ್ಕಮಹಾದೇವಿ ಅವರ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ನಗರದ ಶ್ರೀ ಬಸವೇಶ್ವರ ಮಂದಿರದಿಂದ ಜಗನ್ಮಾತೆ ಅಕ್ಕಮಹಾದೇವಿಯವರ ಭಾವಚಿತ್ರದ ಮೆರವಣಿಗೆ ಆರಂಭವಾಗಿ ರಾಚಣ್ಣಸ್ವಾಮಿ ಮಂದಿರ ತಲುಪಿ, ಅಲ್ಲಿಂದ ಅನುಭವ ಮಂಟಪಕ್ಕೆ ಬಂದು ಸೇರಿತು.
ಪುಟ್ಟಮಕ್ಕಳು ಅಕ್ಕಮಹಾದೇವಿ ಹಾಗೂ ಬಸವಾದಿ ಶರಣರ ವೇಷಭೂಷಣಗಳನ್ನು ಧರಿಸಿದ್ದರು. ಹೆಣ್ಣುಮಕ್ಕಳು ಬಸವಾದಿ ಶರಣರ ವಚನ ಗಾಯನ, ಭಕ್ತಿಗೀತೆಗೆ ತಕ್ಕಂತೆ ಕೋಲಾಟವನ್ನು ಹಾಕುತ್ತಾ ಯಾತ್ರೆಯಲ್ಲಿ ಸಾಗಿಬಂದರು.
ನಂತರ ಅನುಭವ ಮಂಟಪದೊಳಗೆ ವೇದಿಕೆ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಬೀದರ ಜಿಲ್ಲೆಯ ಬಸವತತ್ವ ಪ್ರಚಾರಕರು, ಉಪನ್ಯಾಸಕರಾದ ಡಾ. ಧನಲಕ್ಷ್ಮಿ ಪಾಟೀಲ ಭಾಗವಹಿಸಿ ಶರಣೆ ಅಕ್ಕಮಹಾದೇವಿ ಅವರ ಜೀವನ ಕುರಿತು ಉಪನ್ಯಾಸ ನೀಡಿದರು.

ಧನಲಕ್ಷ್ಮಿ ಅವರು, 12ನೇ ಶತಮಾನದಲ್ಲಿ ಬಸವಾದಿ ಶರಣರು ಸರ್ವರಿಗೂ ಸಮಾನತೆಯನ್ನು ಸಾರಿದರು. ಬಸವಾದಿ ಶರಣರು ಅನುಸರಿಸಿ ತೋರಿಸಿಕೊಟ್ಟ ಆದರ್ಶಗಳನ್ನು ನಾವೆಲ್ಲ ಬದುಕಿನಲ್ಲಿ ಅಳವಡಿಸಿಕೊಂಡು ಬದುಕಿದರೆ ನಮಗೆ ರಕ್ಷಣೆ ಸಿಗುತ್ತದೆ ಎಂದರು.
ಅಕ್ಕಮಹಾದೇವಿಯವರ ವಚನಗಳನ್ನು ಓದಿ ಅವರ ಆಧ್ಯಾತ್ಮದ ಹಾದಿಯನ್ನು ಅರಿಯೋಣ. ಅವರ ದಿಟ್ಟತನದ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳೋಣ ಎಂದರು.

ಬಸವಾದಿ ಶರಣರ ವೇಷಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಾಗೂ ಕೋಲಾಟ ಆಡಿದ ಮಕ್ಕಳಿಗೆ ಮುಖ್ಯ ಅತಿಥಿಗಳಿಂದ ಬಹುಮಾನ ವಿತರಣೆ ನಡೆಯಿತು. ಶರಣೆ ಅಕ್ಕಮಹಾದೇವಿ ಅವರ ನಾಮಕರಣ ಕಾರ್ಯಕ್ರಮವೂ ನಡೆಯಿತು.

ಲಿಂಗಾಯತ ಸಮಾಜ, ಅಕ್ಕನ ಬಳಗ ಪದಾಧಿಕಾರಿಗಳು, ಸದಸ್ಯರು, ಯುವ ಘಟಕದ ಮುಖಂಡರು, ಸದಸ್ಯರು ಪಾಲ್ಗೊಂಡು ಜಯಂತಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ಪ್ರಸಾದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

Tumba khushiyenisutide Telangana da ee karyakrama nodi