ಖಾದಿ ರಾಜಕಾರಣಕ್ಕಿಂತ ಜೋರಾದ ಕಾವಿ ರಾಜಕಾರಣ

“ಆನೆಯನೇರಿಕೊಂಡು ಹೋದಿರೇ ನೀವು
ಕುದುರೆಯನೇರಿಕೊಂಡು ಹೋದಿರೇ ನೀವು
ಕುಂಕುಮ ಕಸ್ತೂರಿಯ ಪೂಜಿಸಿಕೊಂಡು ಹೋದಿರೇ ಅಣ್ಣಾ
ಸತ್ಯದ ನಿಲವನರಿಯದೆ ಹೋದಿರಲ್ಲಾ
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ
ಅಹಂಕಾರವೆಂಬ ಸದಮದಗಜವೇರಿ
ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ ನಮ್ಮ ಕೂಡಲಸಂಗಮದೇವನನರಿಯದೆ
ನರಕಕ್ಕೆ ಭಾಜನರಾದಿರಲ್ಲಾ”

ಧರ್ಮ ರಾಜಕಾರಣದಲ್ಲಿ ಕೈ ಹಾಕದಿರುವುದು, ರಾಜನೀತಿಯಲ್ಲಿ ಧರ್ಮ ತಲೆದೋರಿಸುವುದು ಎರಡೂ ಅಪಾಯ. ಇಂತಹ ಅಪಾಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತಿದೆ ಇಂದಿನ ಕಾಲಘಟ್ಟ. ಧರ್ಮಕ್ಕೆ ರಾಜನೀತಿ ಒಂದು ವಿಪತ್ತು ಮತ್ತು ಶಾಪ.

ಧರ್ಮ ಮತ್ತು ರಾಜಕಾರಣದ ಅರಿವಿಲ್ಲದೇ  ಇಂದು ಕಾವಿ ತೊಡುವುದು ಫ್ಯಾಷನ್ ಆದ ಈ ಕಾಲದಲ್ಲಿ ಖಾವಿಧಾರಿಗೂ, ಖಾದಿಧಾರಿಗೂ ಭೇದವಿಲ್ಲವೇನೊ ? ಎನ್ನುವಷ್ಟು ರಾಜಕಾರಣ ಇಂದು ಮಠದೊಳಗೆ ನಡೆಯುತ್ತಿದೆ. ಧರ್ಮ ಸತ್ಯದ ಶೋದನೆ. ಇದರ ಮೂಲ ಹುಡುಕಾಟವೇ ಮನುಷ್ಯನನ್ನು ವಿನಮ್ರನನ್ನಾಗಿಸುವುದು.

ಸರಳತೆಯಿಂದ , ಮುಗ್ದತೆಯಿಂದ ಇರುವಂತೆ ಮಾಡುವುದು.

ಓಶೋ ಒಂದು ಕಡೆ ಹೇಳುತ್ತಾರೆ. “ಧರ್ಮ ಶುಭ್ರ ಹೃದಯವುಳ್ಳದ್ದಾಗಿದೆ. ಸುಂದರ ಗುಲಾಬಿ ಹೂವಿನಂತೆ, ಜೀವನಕ್ಕೆ ಅರ್ಥ ವಿಶೇಷತೆಯನ್ನು ನೀಡುತ್ತದೆ. ರಾಜನೀತಿಗೆ ಹೃದಯವಿಲ್ಲ. ಅದು ಬಂಡೆಗಲ್ಲಿನಂತೆ. ಕಲ್ಲು ಹೂವನ್ನು ನಾಶ ಮಾಡಬಹುದು, ಹೂವಿಗೆ ಯಾವುದೆ ರಕ್ಷಣೆಯಿಲ್ಲ. ರಾಜನೀತಿ ಆಕ್ರಮಣಕಾರಿ. ಧರ್ಮವನ್ನಾಳಲು ಮೂರ್ಖ ರಾಜಕಾರಣಿಗಳ ವಶಕ್ಕೆ  ಬಿಡಲಾಗುವುದಿಲ್ಲ. ರೋಗಗ್ರಸ್ಥ ಜನರು ವೈದ್ಯರನ್ನು ಆಳಿದಂತಾಗುವುದು. “

ಆದರೆ ಇಂದಿನ ದುರಂತವೆಂದರೆ ಕಾವಿ ರಾಜಕಾರಣ ಖಾದಿ ರಾಜಕಾರಣಕ್ಕಿಂತ ಜೋರಾಗಿದೆ. ಕಾವಿ ತೊಟ್ಟು  ಮಾಡಬೇಕಾದ್ದು ಮಾಡುವುದು ಬಿಟ್ಟು ಇನ್ನೇನೊ ಮಾಡಿದ್ದಕ್ಕಾಗಿ ಇಂದು ಕಾವಿಯ ಮೇಲಿನ ಗೌರವವು ಕಡಿಮೆಯಾಗುತ್ತಿದೆ. ಇಂದಿನ ಮಠಗಳು ರಾಜಕೀಯದ ಇನ್ನೊಂದು ರೂಪದಂತೆ ಆಗಿವೆ. ಕಾವಿ ಮತ್ತು ಖಾದಿ ಇಂದು ಒಂದಕ್ಕೊಂದು ಪೂರಕವಾಗಿ ಹೆಜ್ಜೆ ಹಾಕುತ್ತಿವೆ. ಇಂದು ಇವೆರಡು ಮನುಷ್ಯತ್ವದ ವಿರುದ್ಧವಾಗಿ ಒಳಸಂಚು ಮಾಡುತ್ತಲೇ ಇವೆ. ಪ್ರಾಪಂಚಿಕ ಜೀವನ ರಾಜಕಾರಣಿಗೆ ಸಂಬಂಧಿಸಿದ್ದು. ಅಂತರ್ಯದ ಪ್ರಪಂಚ ಕಾವಿ ಸ್ವಾಮಿಗಳಿಗೆ ಸಂಬಂಧಿಸಿದ್ದು ಎಂದು ಹಂಚಿಕೊಂಡು ಮನುಷ್ಯನ ಬಾಹ್ಯ ಮತ್ತು ಆಂತರ್ಯದಲ್ಲಿ  ಪ್ರಪಂಚದ ಮನುಷ್ಯನನ್ನು ಮೋಸಗೊಳಿಸುವ ಹುನ್ನಾರ ಮಾಡುತ್ತಲೆ ಬಂದಿದ್ದಾರೆ.

ಇಂತಹ ಹುನ್ನಾರ ಮಾಡುವವರ ಬಣ್ಣ ಈಗ ಬಯಲಿಗೆ ಬೀಳುತ್ತಿದೆ.  ಧಾರ್ಮಿಕತೆಯ ಮುಖವಾಡವನ್ನು ತೆಗೆದು ತಾವು ಯಾವ ರಾಜಕಾರಣಿಗಳಿಗಿಂತ ಕಡಿಮೆ ಇಲ್ಲ ಎನ್ನುವಷ್ಟು ಇವರ ಹಾವಭಾವಗಳು ಅಹಂಕಾರದಿಂದ ತುಂಬಿಬಿಟ್ಟಿವೆ. ಕುರಿಯ ಚರ್ಮ ಹೊದ್ದ ತೋಳಗಳಿವು ಅಂತ ಸಮಾಜಕ್ಕೆ ಗೊತ್ತಾಗುತ್ತಿದೆ. ಧರ್ಮದ ಹೆಸರಿನಲ್ಲಿ ರಾಜಕೀಯ ಆಟ ಆಡುತ್ತಿರುವವರಷ್ಟೇ. ಧರ್ಮರಾಜಕಾರಣದ ಮುಖ್ಯ ಪಾತ್ರಧಾರಿಗಳು ಈ ಕಾವಿಗಳು.

“ವಿರಕ್ತ ವಿರಕ್ತ ಎಂಬ ಹಕದಿಕಾರರ ವಿರಕ್ತರೆನ್ನಬಹುದೇ”,

ಕಾವಿಯ ಹೊದ್ದು ತಿರುಗುವ ಜೀವಗಳ್ಳರು ವಿರಕ್ತರೇ ಎಂದು ಪ್ರಶ್ನೆ ಮಾಡಿದ ರಾಯಮ್ಮನ ಮಾತು ಇಂದಿಗೂ ಪಸ್ತುತ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *