‘ಇಲ್ಲಿ ಕೋಮುಸೌಹಾರ್ದತೆಯನ್ನು ಕದಡಲು ಅವಕಾಶ ಕೊಡಬಾರದು’
ಗದಗ:
ನಗರಕ್ಕೆ ಕನ್ನೇರಿ ಸ್ವಾಮಿಯ ಪ್ರವೇಶ ನಿರ್ಬಂಧಿಸುವಂತೆ ಒತ್ತಾಯಿಸಿ ಮಂಗಳವಾರ ‘ಸಮಾನತೆಗಾಗಿ ನಾವು’ ಸಂಘಟನೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
“ಗದಗ ಜಿಲ್ಲೆ ಐತಿಹಾಸಿಕ ಪರಂಪರೆಯುಳ್ಳ ಜಿಲ್ಲೆ. ಇಲ್ಲಿ ಎಲ್ಲ ಸಮಾಜದ ಜನ ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ. ಅನೇಕ ಹಿರಿಯರು ಅದಕ್ಕಾಗಿ ತ್ಯಾಗ ಮಾಡಿದ್ದಾರೆ. ಅಷ್ಟೇ ಅಲ್ಲದೇ ಗದಗ ನಗರದಲ್ಲಿ ವೀರನಾರಾಯಣ, ತ್ರಿಕೂಟೇಶ್ವರ, ಜುಮ್ಮಾ ಮಸೀದಿಗಳನ್ನು ಒಳಗೊಂಡಂತೆ ಪಂಚ ಕಮೀಟಿ ನೇತೃತ್ವದಲ್ಲಿ ಸೌಹಾರ್ದ ಕೂಟ ಸ್ಥಾಪಿಸಲಾಗಿದ್ದು, ಮುಂದುವರೆದು ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮಿಗಳ ಮಹತ್ಕಾರ್ಯಕ್ಕೆ ಕೋಮುಸೌಹಾರ್ದತೆಯ ಬಿರುದು ಸಹ ಗದುಗಿಗೆ ಒದಗಿ ಬಂದಿದೆ”.

“ಇಂತಹ ಸಾಮರಸ್ಯದ ನಾಡಿನಲ್ಲಿ ಸಂವಿಧಾನ ವಿರೋಧಿ, ಸನಾತನವಾದಿ ಕನ್ನೇರಿ ಸ್ವಾಮಿಯ ಗದಗ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧಿಸಬೇಕು” ಎಂದು ಎಲ್ಲ ಸಮಾನ ಮನಸ್ಕರು ಮನವಿಪತ್ರದಲ್ಲಿ ಒತ್ತಾಯಿಸಿದರು.
“ಅನೇಕ ಮಠಾಧೀಶರು ಗದುಗಿನ ಹಿರಿಮೆಯನ್ನು ಹೆಚ್ಚಿಸಲು ಇಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಬಸವಣ್ಣ, ಕನಕ, ಶರೀಫ, ವೀರನಾರಾಯಣನ ಅನುಯಾಯಿಗಳು ಇಲ್ಲಿದ್ದಾರೆ. ಪಂಡಿತ ಪಂಚಾಕ್ಷರಿ ಗವಾಯಿಗಳು, ಶಿರಹಟ್ಟಿಯ ಫಕೀರೇಶ್ವರ ಮಠ ಇನ್ನೂ ಹತ್ತಾರು ಮಠಮಾನ್ಯಗಳು ಗದುಗಿನ ಪರಿಸರವನ್ನು ಶರಣರ ವಚನ ಧಾರೆಗಳಲ್ಲಿ ಕಟ್ಟಿದ್ದಾರೆ. ಇನ್ನು ಕಟ್ಟುತ್ತಿದ್ದಾರೆ.
ಇಂತಹ ಭವ್ಯ ಇತಿಹಾಸವಿರುವ ಗದಗದಲ್ಲಿ ಇವತ್ತಿಗೂ ಯಾವುದೇ ಕೋಮು ಹಿಂಸೆಯಾಗಲಿ, ಕೋಮುದಳ್ಳುರಿಯಾಗಲಿ ನಡೆದಿಲ್ಲ. ಗದಗನ ಜನತೆ ಇಂತಹುದಕ್ಕೆ ಯಾವತ್ತಿಗೂ ಅವಕಾಶ ಕೊಟ್ಟಿಲ್ಲ. ಕೋಮುಸೌಹಾರ್ದತೆಯನ್ನು ಕದಡಲು ಇಲ್ಲಿ ಅವಕಾಶ ಕೊಡಬಾರದು” ಎಂದು ಮನವಿ ಮಾಡಲಾಗಿದೆ.

ಹಿರಿಯ ಸಾಹಿತಿ ಬಸವರಾಜ ಸೂಳಿಬಾವಿ ಈ ಸಂದರ್ಭದಲ್ಲಿ ಮಾತನಾಡಿ, “ಈ ಹಿಂದೂ ಬೃಹತ್ ಸಮಾವೇಶಕ್ಕೆ ಮುಖ್ಯ ಭಾಷಣಕಾರರಾಗಿ ಮಹಾರಾಷ್ಟ್ರದ ಕಾಡಸಿದ್ದೇಶ್ವರ ಕನ್ನೇರಿ ಸ್ವಾಮಿಗಳು ಬರುತ್ತಿದ್ದಾರೆ. ಅವರು ಹೋದಲ್ಲೆಲ್ಲ ಅಶಾಂತಿಯನ್ನು ಉಂಟುಮಾಡುವ ಮಾತುಗಳನ್ನು ಆಡುತ್ತಾರೆ. ಈಗಾಗಲೇ ವಿಜಯಪುರ, ಬಾಗಲಕೋಟೆ, ಧಾರವಾಡ ಜಿಲ್ಲೆಯಲ್ಲಿ ಅವರು ಬರುವುದನ್ನು ನಿಷೇಧಿಸಲಾಗಿತ್ತು.
ಇವರು ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಭಾಷಣ ಮಾಡುತ್ತಾರೆ. ಇಡೀ ಸಂವಿಧಾನದ ಆಶಯದ ವಿರುದ್ಧ ಚಟುವಟಿಕೆ ಮಾಡುವುದರಿಂದ ಇವರನ್ನು 31 ನೇ ದಿನಾಂಕದಂದು ಗದುಗಿನಲ್ಲಿ ನಡೆಯುವ ಹಿಂದೂ ಸಮಾವೇಶಕ್ಕೆ ಅನುಮತಿ ನಿರಾಕರಿಸಿ ಅವರನ್ನು ಗದಗ ಜಿಲ್ಲೆಯ ಪ್ರವೇಶವನ್ನು ನಿರ್ಬಂಧಿಸಬೇಕು” ಎಂದು ಒತ್ತಾಯಿಸಿದರು.
“ಹಿಂದೂ ಸಮಾವೇಶಕ್ಕೆ ನಮ್ಮದು ಯಾವುದೇ ತಕರಾರು ಇಲ್ಲ. ಸಮಾವೇಶ ಮಾಡುವುದು ದೇಶದ ನಾಗರಿಕರ ಹಕ್ಕು. ಆದರೆ ಹಿಂದುತ್ವ ಸಮಾವೇಶದಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಶಿವಶರಣರ ಹೆಸರು, ಅವರ ಹೆಸರಿನಲ್ಲಿ ನಡೆಯುವ ಸಮಾವೇಶಕ್ಕೆ ನಮ್ಮ ವಿರೋಧವಿದೆ” ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡರಾದ ಅಶೋಕ ಬರಗುಂಡಿ ಅವರು ಮಾತನಾಡಿ, “12ನೇ ಶತಮಾನದಲ್ಲಿ ಬಸವಣ್ಣನವರ ಸಮ್ಮುಖದಲ್ಲಿ ನಡೆದ ವಚನ ಚಳುವಳಿ ಈ ನೆಲದ ಎಲ್ಲ ವರ್ಗದ ಕಾಯಕ ಜೀವಿಗಳ ನೇತೃತ್ವದಲ್ಲಿ ಅನುಭವ ಮಂಟಪ ಸ್ಥಾಪಿಸಲಾಗಿತ್ತು. ಈ ಅನುಭವ ಮಂಟಪದಲ್ಲಿ ಎಲ್ಲ ವರ್ಗದ ಶರಣ ಶರಣೆಯರು ತಮ್ಮ ತಮ್ಮ ಆಲೋಚನೆಗಳ ಮೂಲಕ ಪರಸ್ಪರ ಚರ್ಚಿಸುತ್ತಿದ್ದರು. ಆ ಮೂಲಕ ವಚನಗಳ ರಚನೆಯನ್ನು ಮಾಡಿ ಸಮಾಜಕ್ಕೆ ಉತ್ತಮ ಸಂದೇಶಗಳಾಗಿ ಕೊಡುತ್ತಿದ್ದರು” ಎಂದರು.
“ಇಂತಹ ತತ್ವವನ್ನು ಅರಿಯದ ಜನ, ಹಿಂದುತ್ವ ಸಮಾವೇಶ ಹೆಸರಿನಲ್ಲಿ ಶರಣರ ತತ್ವಗಳನ್ನು ತಪ್ಪಾಗಿ ಅರ್ಥೈಸಿಕೊಂಡ ಮನುವಾದಿಗಳು ಪ್ರಜಾಪ್ರಭುತ್ವ, ಸಮಾನತೆಯ ವಿರೋಧಿಗಳಾಗಿದ್ದಾರೆ. ಸಮಾನತೆಯ ವೈರಿಗಳು ಗದುಗಿನ ಜನಸಮುದಾಯವನ್ನು ತಪ್ಪುದಾರಿಗೆ ಎಳೆಯಲು ಯತ್ನಿಸುತ್ತಿದ್ದಾರೆ. ಸಂವಿಧಾನ ಒಪ್ಪದ ಈ ನೆಲದ ಕಾನೂನಿಗೆ ಗೌರವ ನೀಡದ, ಅಸಮಾನತೆಯನ್ನು ಮತ್ತೆ ಸ್ಥಾಪಿಸುವ ಹುನ್ನಾರ ಹೊಂದಿರುವ ಕನ್ನೇರಿ ಸ್ವಾಮಿಯನ್ನು ಗದಗ ನಗರಕ್ಕೆ ಬರದಂತೆ ನಿಷೇಧ ಹೇರಬೇಕೆಂದು ಗದುಗಿನ ಎಲ್ಲ ಸಮಾನತೆ ಬಯಸುವ ಮನಸ್ಸುಗಳ ಒತ್ತಾಯವಾಗಿದೆ” ಎಂದು ಹೇಳಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ‘ಸಮಾನತೆಗಾಗಿ ನಾವು’ ಸಂಘಟನೆಯ ಮುಖಂಡರಾದ ಎಸ್.ಎನ್. ಬಳ್ಳಾರಿ, ಶೇಖಣ್ಣ ಕವಳಿಕಾಯಿ, ಗಿರಿಜಾ ಹಸಬಿ, ವೆಂಕಟೇಶಯ್ಯ, ಸಿದ್ಧರಾಮ ಪಟ್ಟೇದ, ರಮೇಶ ಕೋಳೂರ, ಶರೀಫ ಬಿಳೆಯಲಿ, ಮುತ್ತು ಬಿಳೆಯಲಿ, ಪರಶು ಕಾಳೆ, ರಾಮಚಂದ್ರ ಹಂಸನೂರು, ಅನಿಲ ಕಾಳೆ, ಎಸ್.ಎಸ್. ಕಳಸಾಪುರಶೆಟ್ರ, ವಿ.ಕೆ. ಕರೇಗೌಡ್ರ, ಎಂ.ಬಿ. ಲಿಂಗದಾಳ, ನಾಗಭೂಷಣ ಬಡಿಗಣ್ಣವರ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
