ಮುಂಡರಗಿ:
ಗದಗನಲ್ಲಿ ಮೇ ೩೧ ರಂದು ಕನ್ನೇರಿ ಕಾಡಸಿದ್ಧೇಶ್ವರ ಶ್ರೀಗಳ ನೇತತ್ವದಲ್ಲಿ ಬಸವಾದಿ ಶರಣರ ಹಿಂದೂ ಹೆಸರಿನಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ವಿರೋಧವಿದೆ. ಬಸವಾದಿ ಶರಣರ ಹೆಸರಿನ ದುರ್ಬಳಕೆಯಾಗುತ್ತಿದೆ ಎಂದು ತಾಲೂಕಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಎ.ವೈ. ನವಲಗುಂದ ಹೇಳಿದರು.
ಅವರು ಹಿಂದೂ ಸಮಾವೇಶ ನಿರ್ಬಂಧಿಸಬೇಕು ಎಂದು ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದರು.
ಶರಣರ ತತ್ವಕ್ಕೂ ಮತ್ತು ಹಿಂದೂ ಸಮಾವೇಶ ಎಂದು ಹೇಳಿಕೊಳ್ಳುವವರ ವಿಚಾರಕ್ಕೆ ಬಹಳಷ್ಟು ವ್ಯತ್ಯಾಸಗಳಿದ್ದು, ಸಮಾನತೆ ತತ್ವ ಅಳವಡಿಸಿಕೊಂಡಿರುವ ಶರಣರ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಇಂತಹ ಸಂದರ್ಭದಲ್ಲಿ ಶರಣರ ಹೆಸರು ಬಳಸಿಕೊಂಡು ಹಿಂದುತ್ವ ಸಮಾವೇಶ ಮಾಡುತ್ತಿರುವುದು ಖಂಡನೀಯ. ಜತೆಗೆ ಇಂತಹ ಸಮಾವೇಶ ನಿರ್ಬಂಧಿಸಬೇಕು ಎಂದರು.
ಈ ಸಮಾವೇಶವನ್ನು ವಿರೋಧಿಸಿ ಗದಗನ ೩೫ ವಾರ್ಡುಗಳಲ್ಲಿಯೂ ಶರಣರ ವಚನಗಳ ಬಿತ್ತಿಪತ್ರ ನೀಡಿ ಜಾಗೃತಗೊಳಿಸಲಾಗುವದು. ಮೇ ೩೦ರಂದು ಮೌನ ಮೆರವಣಿಗೆ ಮೂಲಕ ತಾತ್ವಿಕ ವಿರೋಧ ವ್ಯಕ್ತಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾಸಭಾ ಘಟಕದ ಪದಾಧಿಕಾರಿಗಳಾದ ಕೊಟ್ರೇಶ ಅಂಗಡಿ, ಬಸವರಾಜ ರಾಮೇನಹಳ್ಳಿ, ಬಿ.ವಿ. ಮುದ್ದಿ, ಪಾಲಾಕ್ಷಿ ಗಣದಿನ್ನಿ, ವೆಂಕಟೇಶ ಗುಗ್ಗರಿ, ಶಿವಯೋಗಿ ಕೊಪ್ಪಳ, ರಾಮೇನಹಳ್ಳಿ ದೇವೇಂದ್ರಪ್ಪ, ಎಸ್.ಎಸ್. ಗಡ್ಡದ, ಎಂ.ಎಂ. ಹೆಬ್ಬಾಳ, ಕಾಶಿನಾಥ ಶಿರಬಡಗಿ, ಅಡಿವೆಪ್ಪ ಚಲವಾದಿ ಮತ್ತಿತರರು ಪಾಲ್ಗೊಂಡಿದ್ದರು. ತಹಸೀಲ್ದಾರ ಪಿ.ಎಸ್. ಯರ್ರಿಸ್ವಾಮಿ ಮನವಿಪತ್ರ ಸ್ವೀಕರಿಸಿದರು.
