ಬಸವತತ್ವ ದರ್ಶನ ಪ್ರವಚನ: ದೇವರನ್ನು ಹೊರಗಡೆ ಹುಡುಕಬಾರದು

ಶರಣು ಶಿಣ್ಣೂರ್
ಶರಣು ಶಿಣ್ಣೂರ್

(ಕಲಬುರ್ಗಿಯಲ್ಲಿ ನಡೆಯುತ್ತಿರುವ  893ನೇ ಬಸವ ಜಯಂತಿ ಅಂಗವಾಗಿ ‘ಬಸವತತ್ವ ದರ್ಶನ ಪ್ರವಚನ’ ಮುಖ್ಯಾಂಶಗಳು)

ಕಲಬುರ್ಗಿ:

ದಿನಾಂಕ: 13 ಏಪ್ರಿಲ್ 2026

ಪ್ರವಚನಕಾರರು: ಪೂಜ್ಯ ಬಸವೇಶ್ವರಿಮಾತಾಜಿ,, ಬಸವಧಾಮ, ಅತ್ತಿವೇರಿ

ಸ್ಥಳ: ಬಸವ ಮಂಟಪ, ಮಾಕಾ ಲೇಔಟ್‌, ಕಲಬುರಗಿ

ಆಯೋಜನೆ: ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ, ಕಲಬುರಗಿ

ಇಂದಿನ ಪ್ರವಚನದಲ್ಲಿ ಪ್ರವಚನಕಾರರು ಆಧ್ಯಾತ್ಮ, ದೇವರ ಸ್ವರೂಪ, ಅಸ್ತಿತ್ವ ಮತ್ತು ಲಿಂಗಾಯತ ಧರ್ಮದ ಕೆಲವು ತತ್ವಗಳ ಕುರಿತು ತಾರ್ಕಿಕವಾಗಿ ಹಾಗೂ ಅನುಭಾವಾತ್ಮಕವಾಗಿ ವಿವರಣೆ ನೀಡಿದರು.

ಪ್ರವಚನದ ಆರಂಭದಲ್ಲಿ ಶೇಷ್ವರವಾದಿ, ನಿರೀಶ್ವರವಾದಿ ಮತ್ತು ಯಥಾಸ್ಥಿತಿವಾದಿ ಧರ್ಮಗಳ ವ್ಯಾಖ್ಯಾನವನ್ನು ನೀಡುತ್ತಾ, ದೇವರ ಅಸ್ತಿತ್ವದ ಕುರಿತು ಶರಣರ ವಚನಗಳು ಹಾಗೂ ಸರ್ವಜ್ಞನ ತ್ರಿಪದಿಗಳ ಉದಾಹರಣೆಗಳೊಂದಿಗೆ ಖಗೋಳಶಾಸ್ತ್ರ (astronomy) ಮತ್ತು ವಿಶ್ವಸೃಷ್ಟಿಯ (cosmic science) ವೈಶಿಷ್ಟ್ಯಗಳನ್ನು ಸಮ್ಮಿಳನಗೊಳಿಸಿ ಮನೋಜ್ಞವಾಗಿ ನಿರೂಪಿಸಿದರು. ದೇವರ ಸೃಷ್ಟಿಯು ಕ್ರಮಬದ್ಧವಾಗಿದ್ದು, ಪ್ರತಿಯೊಂದಕ್ಕೂ ಪರಸ್ಪರ ಸಂಬಂಧವಿದೆ ಎಂಬುದನ್ನು ಸ್ಪಷ್ಟಪಡಿಸಿದರು.

ಮನುಷ್ಯನ ಸೀಮಿತ ಬುದ್ಧಿಯಿಂದ ದೇವರನ್ನು ನಿರೂಪಿಸುವ ಪ್ರಯತ್ನವನ್ನು ಪ್ರಶ್ನಿಸುತ್ತಾ, ನಾಗರಿಕತೆ ಬೆಳೆದಂತೆ ದೇವರನ್ನು ಮಾನವರ ರೂಪದಲ್ಲಿ ಕಲ್ಪಿಸಿಕೊಂಡಿರುವುದನ್ನು ವಿವರಿಸಿದರು. ದೇವರು ರೂಪರಹಿತ, ದೇಹರಹಿತ, ಅಪ್ರಮಾಣ ಮತ್ತು ಸರ್ವವ್ಯಾಪಿ ಪರಾತ್ಪರ ತತ್ವವಾಗಿದ್ದು, ಅದನ್ನು ಹೊರಗಡೆ ಹುಡುಕದೇ ಅಂತರಂಗದಲ್ಲಿ ಅನುಭವಿಸಬೇಕು ಎಂದು ಹೇಳಿದರು. ಈ ಸಂದರ್ಭ ಅಕ್ಕಮಹಾದೇವಿಯವರ ವಚನಗಳನ್ನು ಉಲ್ಲೇಖಿಸಿ ದೇವರ ಅನುಭವದ ಮಾರ್ಮಿಕತೆಯನ್ನು ಸ್ಪಷ್ಟಪಡಿಸಿದರು.

ಮುಂದುವರೆದು, ದೇವರನ್ನು ಮಾತ್ರ ಪೂಜಿಸಬೇಕು ಹೊರತು ದೇವರನ್ನು ಪೂಜಿಸುವ ಪೂಜಾರಿಗಳನ್ನು ದೇವರೆಂದು ಪೂಜಿಸುವುದು ತಪ್ಪು ಎಂಬ ಸಂದೇಶ ನೀಡಿದರು. ಲೌಕಿಕ ಮತ್ತು ಪಾರಮಾರ್ಥಿಕ ಸತ್ಯಗಳ ವ್ಯತ್ಯಾಸವನ್ನು ವಿವರಿಸಿ, ಲಿಂಗಾಯತ ತತ್ವಗಳಾದ ಚರಲಿಂಗ ಮತ್ತು ನಿಷ್ಕಲಲಿಂಗಗಳ ಕುರಿತು ಸ್ಪಷ್ಟನೆ ನೀಡಿದರು. ಇತ್ತೀಚಿನ ಸಮಾಜದಲ್ಲಿ ಧರ್ಮ ಹಾಗೂ ದೇವರ ಹೆಸರಿನಲ್ಲಿ ನಡೆಯುತ್ತಿರುವ ಕಲಹಗಳ ಬಗ್ಗೆ ವಿಷಾದ ವ್ಯಕ್ತಪಡಿಸಿ, ಒಬ್ಬನೇ ದೇವನನ್ನು ವಿಭಿನ್ನ ಹೆಸರಿನಲ್ಲಿ ಕರೆಯುತ್ತಾ ಜಗಳವಾಡುತ್ತಿರುವ ಸ್ಥಿತಿಯನ್ನು ಖಂಡಿಸಿದರು. ಸಮಾಜದಲ್ಲಿ ಜಾಗೃತಿ ಮೂಡಬೇಕು ಎಂದರೆ ಶರಣರ ಅನುಭಾವದ ಮೂಲಕವೇ ಮಾತ್ರ ಸಾಧ್ಯ ಎಂದರು.

ಬಸವಣ್ಣನವರು ಶೋಷಿತ ವರ್ಗಗಳು ಹಾಗೂ ಮಹಿಳೆಯರಿಗೆ ಧಾರ್ಮಿಕ ಸಂಸ್ಕಾರವನ್ನು ನೀಡಿದ ಮಹತ್ವವನ್ನು ಉಲ್ಲೇಖಿಸಿ, ಅಕ್ಕಮಹಾದೇವಿ ಅವರಂತಹ ಅನೇಕ ನೂರಾರು ಮಹಿಳೆಯರು ಆತ್ಮಸಾಕ್ಷಾತ್ಕಾರವನ್ನು ಪಡೆದಿರುವುದನ್ನು ವಿವರಿಸಿದರು. ದೇವರ ಅಸ್ತಿತ್ವವು ಅಣು ಅಣುವಿನಲ್ಲಿದ್ದು, ಅದು ತಾರ್ಕಿಕತೆಯಿಂದ ಅಲ್ಲ, ಅನುಭವದಿಂದ ಮಾತ್ರ ಅರಿಯಬಹುದೆಂದು ಹೇಳಿದರು. ಕುರುಬರ ಸಿದ್ದಪ್ಪನಂತಹ ಅನುಭಾವಿಗಳ ಉದಾಹರಣೆಗಳ ಮೂಲಕ ಈ ತತ್ವವನ್ನು ಸ್ಪಷ್ಟಪಡಿಸಿದರು.

ಒಟ್ಟಾರೆಯಾಗಿ, ಇಂದಿನ ಪ್ರವಚನವು ದೇವರ ನಿಜಸ್ವರೂಪ, ಆಧ್ಯಾತ್ಮಿಕ ಅನುಭವದ ಮಹತ್ವ ಹಾಗೂ ಸಮಾಜದಲ್ಲಿ ಸಮಾನತೆ ಮತ್ತು ಜಾಗೃತಿಯ ಅಗತ್ಯವನ್ನು ಬೋಧಿಸುವ ಮೂಲಕ ಶ್ರೋತೃಗಳಲ್ಲಿ ಆಳವಾದ ಚಿಂತನೆಗೆ ಹಚ್ಚಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *

ಕಲಬುರ್ಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕಾಯಕ ಮಾಡುತ್ತಾರೆ.