ಸಿಂಧನೂರು :
ನಗರದಲ್ಲಿ ನಡೆದ ವಿಶ್ವಗುರು ಶ್ರೀ ಬಸವೇಶ್ವರರ 893ನೇ ಜಯಂತಿ ಕಾರ್ಯಕ್ರಮದ ಪ್ರವಚನ ಕಾರ್ಯಕ್ರಮದಲ್ಲಿ ಅಗಡಿ ಅಕ್ಕಿಮಠದ ಪೂಜ್ಯ ಗುರುಲಿಂಗ ಸ್ವಾಮೀಜಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಬಗ್ಗೆ ಮಾತನಾಡಿದರು.
ಅಂಬೇಡ್ಕರ್ ಹಾಗೂ ವಿಶ್ವಗುರು ಬಸವಣ್ಣನವರು ಅನುಭವಿಸಿದ ಅವಮಾನ ಅಪಮಾನ ಅಸ್ಟಿಷ್ಟಲ್ಲ. ಬಾಬಾಸಾಹೇಬ ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಸಾಕಷ್ಟು ನೋವನ್ನು ಅನುಭವಿಸಿ ಜ್ಞಾನವನ್ನು ಸಂಪಾದನೆ ಮಾಡಿದರು. ಇಂದು ಅವರು ವಿಶ್ವ ಮಾನ್ಯರಾಗಿದ್ದಾರೆ, ಎಂದು ಹೇಳಿದರು.

ಭಾರತ ದೇಶಕ್ಕೆ ಶ್ರೇಷ್ಠ ಸಂವಿಧಾನವನ್ನು ಕಲ್ಪಿಸಿಕೊಟ್ಟಿದ್ದಾರೆ. ನಾವು ಹಣದ ಬೆನ್ನು ಹತ್ತಿ ಹೋಗಬಾರದು, ಬದಲಾಗಿ ವಿದ್ಯೆಯ ಬೆನ್ನು ಹತ್ತಬೇಕು. ಅದರಿಂದ ಯಶಸ್ಸು ಸಿಗುತ್ತದೆ.
ಯಶಸ್ಸಿನ ಹಿಂದೆ ಹಣ ಹರಿದು ಬರುತ್ತದೆ. ಸಾಧನೆ ಎಂಬುದು ಸಾಧಕನ ಸ್ವತ್ತೆ ಹೊರತು ಮೈಗಳ್ಳನ ಸ್ವತ್ತಲ್ಲ. ಜಗತ್ತಿನ ಜನರ ಕ್ಷುಲ್ಲಕ ಮಾತುಗಳಿಗೆ ಕಿವಿಗೊಡದೆ ನಮ್ಮ ಮನಸ್ಸು ನಿಖರವಾದ ಗುರಿಯತ್ತ ಇರಬೇಕು. ಅದನ್ನು ಬಾಬಾಸಾಹೇಬ ತೋರಿಸಿಕೊಟ್ಟರು.
ಬಸವಾದಿ ಶರಣರು ಹನ್ನೆರಡನೇ ಶತಮಾನದಲ್ಲಿ ಏನೆಲ್ಲವನ್ನು ಎದುರಿಸಿದರು. ಸಾವಿರ ಸಾವಿರ ಸಂಖ್ಯೆಯಲ್ಲಿ ಶರಣರ ಕಗ್ಗೊಲೆಯಾಯಿತು. ಆದರೆ ಅವರು ಎದೆಗುಂದಲಿಲ್ಲ. ಶರಣರಿಗೆ ಚೆನ್ನಾಗಿ ಗೊತ್ತಿತ್ತು, ಒಳ್ಳೆಯದನ್ನು ಸಮಾಜಕ್ಕಾಗಿ ಮಾಡಿದವರಿಗೆ ಮೊದಮೊದಲು ಸಿಗುವುದೇ ಅವಮಾನ. ಎದೆಗುಂದದ ಶರಣರು ಮುನ್ನುಗ್ಗಿ ಸಮಾಜದ ಬದಲಾವಣೆಗೆ ಶ್ರಮಿಸಿದರು. ಶರಣರು ಬೈದವರನ್ನು ಬಂಧುಗಳೆಂದರು. ಅವಮಾನಿಸಿದವರಿಗೆ ಅವಮಾನಿಸದೆ ಉದಾಸೀನವ ಮಾಡಿ ಮುನ್ನಡೆದರು. ಹಾಗಾಗಿ ಶರಣರು ಗತಿಸಿದರೂ ಜೀವಂತವಾಗಿದ್ದಾರೆ. ಅವಮಾನಿಸಿದವರು ಇಲ್ಲವಾಗಿದ್ದಾರೆ. ಅವಮಾನ ಎದುರಿಸಿದ ಬಸವಣ್ಣನವರು ವಿಶ್ವಗುರುವಾದರು. ಬಾಬಾಸಾಹೇಬ ಅಂಬೇಡ್ಕರ್ ವಿಶ್ವ ಮಾನವರಾದರು.

ಸತ್ಯ ಯಾವತ್ತಿಗೂ ಗೆದ್ದೇ ಗೆಲ್ಲುತ್ತದೆ. ಅಂದಿನಿಂದ ಇಂದಿನವರೆಗೂ ಶರಣರ ತತ್ವಕ್ಕೆ ಕೊಂಚ ಹಿನ್ನೆಡೆ ಆಗಿರಬಹುದು. ಆದರೆ ಇಂದು ಬಸವತತ್ವ ಹಾಗೂ ಶರಣರ ವಿಚಾರಗಳು ವಿಶ್ವಮಾನ್ಯವಾಗಿದೆ. ಜಗತ್ತಿನ ಎಲ್ಲಾ ಕಡೆ ಪೂಜಿಸಲ್ಪಡುತ್ತಿದೆ. ಎನ್ನುವುದನ್ನು ಪ್ರತಿಯೊಬ್ಬರು ಅರಿಯಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರೇಶ ಕುರುಕುಂದ ವಹಿಸಿದ್ದರು. ಮಹಾದಾಸೋಹಿಗಳಾದ ವಚನಶ್ರೀ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಹನುಮಂತರಾಯಗೌಡ ಮುದ್ದಾಪುರ, ಲಿಂಗರಾಜ ಪಾಟೀಲ ಹಂಚಿನಾಳ, ಶರಣಪ್ಪ ಹೂಗಾರ, ಶಂಕ್ರಪ್ಪ ದೇಸಾಯಿ, ಬಸವರಾಜ ಹಿರೇಗೌಡ, ಚನ್ನಬಸವಸ್ವಾಮಿ ಹಸನಕಲ್ ಉಪಸ್ಥಿತರಿದ್ದರು.

ಪ್ರವಚನ ಕಾರ್ಯಕ್ರಮದಲ್ಲಿ ನೂರಾರು ಜನ ಬಸವಭಕ್ತರು ಹಾಜರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

ಅತ್ಯುತ್ತಮವಾಗಿ ಅನುಭವವನ್ನು ಹಂಚಿಕೊಂಡಂತಹ ಅನುಭವಿಗಳಿಗೆ ಧನ್ಯವಾದಗಳು