ಗದಗ :
ಬಾಬಾಸಾಹೇಬರ ಬದುಕೆ ವಿಶಿಷ್ಟಮಯವಾಗಿದೆ. ಹುಟ್ಟಿನಿಂದ ತಮ್ಮ ಸಾವಿನ ತನಕವೂ ಅವರು ವ್ಯವಸ್ಥೆಯ ವಿರುದ್ಧ ಸದಾ ಹೋರಾಡುತ್ತಲೇ, ನಮ್ಮ ದೇಶದ ಸಂವಿಧಾನ ಬರೆಯದೇ ಹೋಗಿದ್ದರೆ ಇಂದು ಒಂದಷ್ಟು ಜನರನ್ನು ಹೊರತುಪಡಿಸಿ ಬಹುಸಂಖ್ಯೆಯ ಜನರ ಬದುಕು ಪಶುಗಳಿಗಿಂತ ಕೀಳಾಗಿರುತ್ತಿತ್ತು.
ಕೆಲವೇ ಜನರ ಅಡಿಯಾಳಾಗಿ ಇರಬೇಕಾಗಿತ್ತು. ಹಲವರನ್ನು ಬಿಟ್ಟರೆ ಉಳಿದವರಿಗೆ ವಿದ್ಯೆ ಕಲಿಯಲು, ಗೌರವದಿಂದ ಬದುಕಲು, ಸಮಾನತೆಯಿಂದ ಇರಲು, ಆತನಿಗೆ ಬೇಕಾದ ಉದ್ಯೋಗ ಪಡೆಯಲು ಅವಕಾಶವೇ ಇರಲಿಲ್ಲ. ಇದು ಭಾರತದ ಬಹುಜನರಿಗೆ ಅಂಬೇಡ್ಕರ ಮಾಡಿದ ಬಹುದೊಡ್ಡ ಉಪಕಾರವೆಂದು ಶಿಕ್ಷಕರಾದ ರಾಮಣ್ಣ ಕಳ್ಳಿಯವರು ತಿಳಿಸಿದರು.

ಅವರು ಬಸವದಳದ ೧೬೯೩ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ನಡೆದ “ಸಂವಿಧಾನ ಶಿಲ್ಪಿ ಬಿ. ಆರ್. ಅಂಬೇಡ್ಕರ” ಅವರ ಬಗ್ಗೆ ಮಾತನಾಡುತ್ತಾ, ಅಂಬೇಡ್ಕರರು ೧೮೯೧ರಲ್ಲಿ ಹುಟ್ಟಿದಾಗ ಭಾರತ ಜಾತಿ, ವರ್ಗ, ವರ್ಣಗಳ ಶ್ರೇಣಿಕೃತ ವ್ಯವಸ್ಥೆಯಲ್ಲಿ ಹೂತು ಹೋಗಿತ್ತು. ಅಂತಹ ಸಂದಿಗ್ಧ ಸಂದರ್ಭದಲ್ಲಿ ಹೊಂಗೀರಣದಂತೆ ಬಾಬಾಸಾಹೇಬರು ೧೮೯೧ರಲ್ಲಿ ರಾಮ್‌ಜಿ ಮಾಲೋಜಿ ಸಕ್ಪಾಲ್, ಭೀಮಾಬಾಯಿ ಇವರ ಮಗನಾಗಿ ಜನಿಸಿದರು.
ದಲಿತ ವರ್ಗದಿಂದ ಬಂದ ರಾಮ್‌ಜಿಯವರು ಸೈನಿಕರಾಗಿದ್ದರು. ಅದಕ್ಕೆ ಕಾರಣ ಉದಾರವಾದಿ ಬ್ರಿಟೀಷರ ಸರ್ಕಾರ ಅಸ್ತಿತ್ವದಲ್ಲಿತ್ತು. ಇಲ್ಲದೇ ಇದ್ದರೆ ಅವರಿಗೆ ಸೈನಿಕ ಹುದ್ದೆ ಸಿಗಲು ಸಾಧ್ಯವೇ ಇರಲಿಲ್ಲ.
ಅಂದು ಜಾತೀಯ ದಾಸ್ಯ ಕ್ಯಾನ್ಸರ್ ಹುಣ್ಣಿನಂತೆ ಇಡೀ ದೇಶವನ್ನೇ ಆವರಿಸಿತ್ತು. ಆದರೆ ಸೈನಿಕರಾಗಿ ಹೊರ ಜಗತ್ತನ್ನು ನೋಡಿದ್ದ ರಾಮಜಿ ಸತ್ಪಾಲರಿಗೆ ಶಿಕ್ಷಣದ ಮಹತ್ವ ಗೊತ್ತಿತ್ತು. ಆ ಕಾರಣ ತಮ್ಮ ಮಗ ಬಾಬಾಸಾಹೇಬರನ್ನು ಶಾಲೆಗೆ ಸೇರಿಸಿದರು.
ಆ ಶಾಲೆ ಭಾರತದ ಅಂದಿನ ಸ್ಥಿತಿಯಂತೆ ಇತ್ತು. ಒಳಗಡೆ ಕೊಠಡಿಯಲ್ಲಿ ಮೇಲು ವರ್ಗದವರ ಮಕ್ಕಳಿಗೆ ಕುಳಿತುಕೊಳ್ಳಲು ಅವಕಾಶವಿದ್ದರೆ ಕೊಠಡಿಯ ಹೊರಗಡೆ ಅಸ್ಪಶ್ಯರ ಮಕ್ಕಳು ಕುಳಿತುಕೊಂಡು ಪಾಠ ಕೇಳಬೇಕಿತ್ತು. ಹೀಗೆ ಅಂಬೇಡ್ಕರರ ಬಾಲ್ಯದ ಬದುಕು ಕಲ್ಲುಮುಳ್ಳಿನ ಹಾದಿಯಲ್ಲಿತ್ತು.
ಇಂಥ ಸಂದೀಗ್ಧತೆಯಲ್ಲಿಯೇ ಅಂಬೇಡ್ಕರ ಎಂಬ ಶಿಕ್ಷಕರ ಕಣ್ಣಿಗೆ ಬಾಬಾಸಾಹೇಬರು ಬೀಳುವರು. ಆತನಲ್ಲಿದ್ದ ಕಲಿಯವ ತವಕ, ಪ್ರತಿಭೆ ಕಂಡು ಅಚ್ಚರಿಗೆ ಒಳಗಾದರು. ಬಾಬಾಸಾಹೇಬರು ಅವರ ಅಚ್ಚುಮೆಚ್ಚಿನ ಶಿಷ್ಯನಾದ. ಆ ಕಾರಣದಿಂದ ಅವರಿಗೆ ಅಂಬೇಡ್ಕರ ಎಂಬ ಹೆಸರು ಬಂದಿತು.
ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿಸಿದರು. ಬರೋಡಾದ ಮಹಾರಾಜರಾದ ಗಾಯಕ್ವಾಡರ ವಿದ್ಯಾರ್ಥಿವೇತನದ ನೆರವಿನಿಂದ ಅಮೇರಿಕಾದಲ್ಲಿ ಉನ್ನತ ಶಿಕ್ಷಣವನ್ನು ಮುಗಿಸಿದರು. ಶಿಕ್ಷಣದ ಜೊತೆಗೆ ವಿಪರೀತ ಓದುವ ಶ್ರದ್ಧೆ ಅವರಲ್ಲಿತ್ತು. ಆ ಕಾರಣ ಅವರಲ್ಲಿ ಸಾಮಾಜಿಕ ಕಳಕಳಿ, ಚಿಂತನೆಗಳು ದೊಡ್ಡ ಪ್ರಮಾಣದಲ್ಲಿ ಮೂಡಿದವು.
ಜೊತೆಗೆ ತುಳಿತಕ್ಕೊಳಗಾದವರ ಹಕ್ಕುಗಳಿಗಾಗಿ ಹೋರಾಡಲು ಸಂಘಟನೆಯನ್ನು ಆರಂಭಿಸಿದರು. ಇದು ಭಾರತದ ಬಹುದೊಡ್ಡ ತಿರುವುಗಳಲ್ಲೊಂದು. ಅಸ್ಪೃಶ್ಯತೆ, ಅಸಮಾನತೆ, ಪುರೋಹಿತ ವರ್ಗದವರ ನಡವಳಿಕೆ ವಿರುದ್ಧ ಅವರು ದಲಿತ ಜನಾಂಗದವರಲ್ಲಿ ದೊಡ್ಡ ತಿಳುವಳಿಕೆ ಮೂಡಿಸಿದರು. ಅವರನ್ನು ತಮ್ಮ ಹಕ್ಕುಗಳಿಗಾಗಿ ಹೋರಾಡುವಂತೆ ಪ್ರೇರೆಪಿಸಿ ಸಂಘಟಿಸಿದರು.
ಭಾರತದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ದೇಶಕ್ಕೆ ಅದ್ಭುತವೆನ್ನುವ ಸಮಾನತೆಯ ಸಂವಿಧಾನವನ್ನು ನೀಡಿದರು. ಜೊತೆಗೆ ಭಾರತದ ಮೊದಲ ಕಾನೂನು ಸಚಿವರಾಗಿಯೂ ಗಮನಾರ್ಹ ಸೇವೆ ಸಲ್ಲಿಸಿದರು. ಇಂತಹ ಬಹುದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದರೂ ಅವರಿಗೆ ಜಾತಿಯ ಭೂತ ಎಡಬಿಡದೇ ಕಾಡುತ್ತಿತ್ತು. ಇದರಿಂದ ಬಹುವಾಗಿ ನೊಂದಿದ್ದ ಅವರು ಪುರೋಗಾಮಿ ಶಕ್ತಿಗಳ ವಿರುದ್ಧ ಸತತ ಹೋರಾಡುತ್ತಲೇ ತಮ್ಮ ಆಯುಷ್ಯವನ್ನು ಕಳೆದರು.
ಕೊನೆಗೆ ಇದೇ ನೋವಿನಲ್ಲಿ ಅವರು ಬೌದ್ಧಧರ್ಮ ಅಪ್ಪಿಕೊಂಡರು. ೧೯೫೬ರಲ್ಲಿ ಅವರು ದೆಹಲಿಯಲ್ಲಿ ನಿಧನರಾದರು. ಅವರು ಬರೆದ ಪುಸ್ತಕಗಳು ಚಿಂತನೆಗೆ ಹಚ್ಚುವವು. ಈ ದೇಶದ ಕತೆಯನ್ನು ಹೇಳುತ್ತವೆ. ಸಮಾನತೆಯ ಕನಸು ಹೊಂದಿದವರಿಗೆ ಸ್ಪೂರ್ತಿಯಾಗುತ್ತವೆಂದು ರಾಮಣ್ಣ ಕಳ್ಳಿಮನಿಯವರು ನುಡಿದರು.
ನಂತರ ಇದೇ ವಿಷಯದ ಮೇಲೆ ಮತ್ತೋರ್ವ ಶರಣತತ್ವ ಚಿಂತಕರಾದ ಎಸ್. ಎ. ಮುಗದವರು ಮಾತನಾಡುತ್ತಾ, ಅಂಬೇಡ್ಕರರನ್ನು ವಿಚಾರವಾದಿ, ಸಮಾನತೆಯ ಚಿಂತಕರನ್ನಾಗಿ ಮಾಡಿದ್ದು ಅವರ ಸತತ ಓದೇ ಕಾರಣವಾಗಿತ್ತು. ಅವರು ಬೆಳಗಿನ ಹೊತ್ತು ಲೈಬ್ರರಿಗೆ ತೆರಳಿದರೆ ರಾತ್ರಿ ಆ ಲೈಬ್ರರಿ ಮುಚ್ಚುವ ಕಾರಣದಿಂದ ಹೊರಬರುತ್ತಿದ್ದರು. ಈ ಕಾರಣಕ್ಕಾಗಿ ಜಗತ್ತಿನ ಬಹುದೊಡ್ಡ ಓದುಗರೆಂದರೆ ಅಂಬೇಡ್ಕರರವರಾಗಿದ್ದಾರೆ.

ಅಂದು ೧೨ನೇ ಶತಮಾನದಲ್ಲಿ ಸಮಾನತೆಯ ಕನಸು ಕಂಡ ಬಸವಾದಿ ಶರಣರ ವಚನಸಾಹಿತ್ಯದ ಆಶಯಗಳೇ ಅಂಬೇಡ್ಕರ ಬರೆದ ಸಂವಿಧಾನದಲ್ಲಿವೆ.
ಬುದ್ಧ ಈ ಜಗತ್ತಿಗೆ ಹೇಗೆ ಬದುಕಬೇಕೆಂಬುದನ್ನು ಹೇಳಿದ. ಬಸವಾದಿ ಶರಣರು ಬದುಕಿ ತೋರಿಸಿದರು. ಬುದ್ಧ, ಬಸವ, ಅಂಬೇಡ್ಕರ ಈ ಮೂವರು ಮಹಾತ್ಮರ ಚಿಂತನೆಗಳು ಒಂದೇ ಅವು ಸಮಾನತೆಯ ಚಿಂತನೆಗಳಾಗಿವೆ ಎಂದರು.
ಶಾಲಾ ಬಾಲಕ ಕೊಠಡಿಯ ಹೊರಗಡೆ ಕುಳಿತು ಕಲಿಯಬೇಕಿತ್ತು, ಮುಂದೇ ದೇಶದ ಸಂವಿಧಾನ ರಚಿಸುತ್ತಾನೆಂದರೆ ಅವರ ಬದುಕೇ ಅದ್ಭುತವಾದುದು. ಅಂದು ಮನುಕುಲಕ್ಕೆ ಕಳಂಕದಂತಿದ್ದ, ಮೇಲುಕೀಳಿನ ಸಿದ್ಧಾಂತದ ಮನುಸ್ಮತಿಯನ್ನು ಸುಟ್ಟು ಹಾಕಿದ್ದು ಬಾಬಾ ಅವರಲ್ಲಿದ್ದ ಧೈರ್ಯ, ಸೈದ್ದಾಂತಿಕ ಬದ್ದತೆಯನ್ನು ತೋರಿಸುತ್ತದೆ. ಮೀಸಲಾತಿ ಸೌಲಭ್ಯ ಎಲ್ಲರೂ ಪಡೆಯುವಂತಾಗಿದ್ದೆ ಅಂಬೇಡ್ಕರ್ ಅವರ ಸಂವಿಧಾನದಿಂದ ಎಂದರು.
ಗಿರಿಜಕ್ಕ ಧರ್ಮರೆಡ್ಡಿ ಮಾತನಾಡಿದರು. ಬಸವದಳ ಕಾರ್ಯಾಧ್ಯಕ್ಷರಾದ ಎಂ.ಬಿ. ಲಿಂಗದಾಳರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಂಜೀವಿನಿ ಬಂಡಿವಡ್ಡರ ಪ್ರಾರ್ಥಿಸಿದರು. ಗಂಗಮ್ಮ ಹೂಗಾರ ನಿರೂಪಿಸಿದರು. ಸ್ವಾಗತವನ್ನು ಎಸ್. ಎ. ಮುಗದ ಮಾಡಿದರು. ಶರಣು ಸಮರ್ಪಣೆ ಸಹನಾ ಆಲತಗಿ ನೆರವೇರಿಸಿದರು. ಕುಮಾರ ಶಿವಬಸವ ಕೆಂಭಾವಿ ವಚನ ಹೇಳಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga
