(ಕೊಪ್ಪಳದಲ್ಲಿ ನಡೆಯುತ್ತಿರುವ ಪೂಜ್ಯ ಪ್ರಭುದೇವ ಸ್ವಾಮೀಜಿಯವರ ‘ಬಸವ ಭಾಷೆ ‘ಪ್ರವಚನದ ಮುಖ್ಯಾಂಶಗಳು)
15.04.2026
ಕೊಪ್ಪಳ :
ಪೂಜ್ಯ ಪ್ರಭುದೇವ ಮಹಾಸ್ವಾಮಿಗಳು, ಲಿಂಗಾಯತ ಮಹಾಮಠ, ಬೀದರ
ಲಿಂಗಾರ್ಪಿತವಾದುದು ಪ್ರಸಾದವಾದರೆ, ಲಿಂಗಾರ್ಪಿತವಲ್ಲದುದು ಅನ್ನವಾಗುತ್ತದೆ. ಪ್ರಸಾದವನುಂಡವರ ಬಾಳು ಪ್ರಸನ್ನ. ಬದುಕೆಲ್ಲ ಬಂಗಾರ. ಹರುಷದ ಹೊನಲು. ಲಿಂಗಾರ್ಪಿತ ತತ್ವವು ಮಾನವನ ಅಹಂಕಾರ ನಿರಸನಗೊಳಿಸುವ ಮಂತ್ರವೂ ಹೌದು. ವ್ಯಷ್ಟಿ-ಸಮಷ್ಟಿಯ ಸುಂದರ ಬದುಕಿಗೆ ಸತ್ಯಶುದ್ಧ ಕಾಯಕ, ಅಗತ್ಯಕ್ಕೆ ತಕ್ಕಂತೆ ಗಳಿಕೆ, ಗಳಿಸಿದುದೆಲ್ಲ ಲಿಂಗಾರ್ಪಣೆ, ಜಂಗಮ ದಾಸೋಹ, ಉಳಿದದ್ದು ಪ್ರಸಾದ ಇದು ಬಸವ ಬಾಳಿನ ಸೂತ್ರವಾಗಿದೆ.
ಬಸವಣ್ಣನವರ ವಿಶಿಷ್ಟ ಕೊಡುಗೆ ಕಾಯಕ ಸಿದ್ದಾಂತ. ವ್ಯಕ್ತಿಯ ಅಂತರಂಗ-ಬಹಿರಂಗ ಶುದ್ಧಿಗೆ ಇದು ಪೂರಕ, ವ್ಯಕ್ತಿಯ ಉನ್ನತಿ ಜೊತೆಗೆ ಸಮಾಜದ ಅಭಿವೃದ್ಧಿಗೆ ತಾರಕ ಮಂತ್ರ. ನಾನೇ ಮಾಡಿದೆ ನಾನೇ ಗಳಿಸಿದೆ, ನನ್ನಿಂದಲೇ ಎಲ್ಲ ಎಂಬ ಅಹಂ ನಿವಾರಣೆಗೆ ಕಾಯಕದಿಂದ ಬಂದದ್ದು ಲಿಂಗಾರ್ಪಿತವ ಮಾಡಿ ಬಳಸಬೇಕು. ಕಾಯಕ-ಅರ್ಪಣೆ-ಅನುಭಾವ-ಆನಂದದ ಸರಪಳಿ ಬಹುದೊಡ್ಡ ಗಣಿತ. ಎಲ್ಲೇ ಕಿಂಚಿತ್ ತಪ್ಪಿದರೂ ಫಲಿತಾಂಶ ಏರುಪೇರು. ಅತ್ಯಂತ ಅವಧಾನದ ಪ್ರಕ್ರಿಯೆ ಇದು.
ಮಾಡಿದುದೆಲ್ಲವೂ ಕಾಯಕವಲ್ಲ. ತನ್ನ ಮತ್ತು ಲೋಕಹಿತವನ್ನು ಒಳಗೊಂಡುದೇ ಕಾಯಕ. ಕಾಯಕದಿಂದ ಆರ್ಜಿಸಿದ್ದು ಮಾತ್ರ ಅರ್ಪಣೆಗೆ ಯೋಗ್ಯ. ಸಮಾಜದಲ್ಲಿ ಅಲ್ಲ ಸಲ್ಲದ ಕೆಲಸಗಳಿಂದ ದುರಾಚಾರ ದುರ್ಮಾರ್ಗಗಳಿಂದ ಗಳಿಸಿದ್ದು ಲಿಂಗಾರ್ಪಿತಕ್ಕೆ ಯೋಗ್ಯವಲ್ಲ. ದೇವಾಲಯಗಳ ಹುಂಡಿಗಳಲ್ಲಿ ಚಿನ್ನದ ಇಟ್ಟಿಗೆ ಅರ್ಪಿಸುವುದು, ಕ್ವಿಂಟಾಲಗಟ್ಟಲೆ ಬೆಳ್ಳಿ-ಬಂಗಾರ ಅರ್ಪಿಸುವುದು, ವಜ್ರದ ಕಿರೀಟವನ್ನಿಡುವುದು, ಚಿನ್ನದ ರಥವನ್ನು ನೀಡುವುದು ಮುಂತಾದವೆಲ್ಲ ಅರ್ಪಿತವಾಗುವವೆ? ವಾಮಮಾರ್ಗಿಗಳ ಈ ಕಾರ್ಯ ದೇವನೊಂದಿಗೆ ವ್ಯವಹಾರವನ್ನಾಡಿದಂತೆ. ಚೇವನಿಗೆ ಕಪ್ಪ ಕಾಣಿಕೆ ಸಲ್ಲಿಸಿ, ತಮ್ಮ ಕೆಟ್ಟ ಕಾರ್ಯಗಳಿಗೆ ಅವನ ಮುದ್ರೆ ಪಡೆಯುವ ಮೋಸದಾಟ.

ಅವಧಾನವೆಂದಡೆ ಎಚ್ಚರಿಕೆ, ಜಾಗೃತಿ. ಅರ್ಪಿಸುವ ವಸ್ತು ಶುದ್ಧವಾಗಿರಬೇಕು. ಅರ್ಪಿಸುವವರಲ್ಲಿ ಅನ್ಯಾಯ ಸೋಂಕದಿರುವ, ಅರಿಷಡ್ವರ್ಗಗಳು ಮುಟ್ಟದಿರುವುದನ್ನು ಮಾತ್ರ ಅರ್ಪಿಸುವ ಎಚ್ಚರಿಕೆ ಇರಬೇಕು ಹಾಗೆ ಅರ್ಪಿಸಿದುದು ಪ್ರಸಾದವಾಗಿ, ಪ್ರಸಾದ ಅನುಭವಿಸಿದವರು ಪ್ರಸಾದಕಾಯರಾಗುತ್ತಾರೆ. ಪಂಚೇಂದ್ರಿಯಗಳ ವಿಷಯ ಗುಣ ಕಳೆಯುವ ಶಕ್ತಿ ಪ್ರಸಾದಕ್ಕೆ ಇದೆ. ಪರಿಶುದ್ಧತೆ-ಪ್ರಸನ್ನತೆ-ಪ್ರಶಾಂತತೆ ಈ ಮೂರು ಮೌಲ್ಯಗಳುಳ್ಳುದೇ ಅರ್ಪಿತವಾಗುವುದು.
ಶರಣರು ಕಾಯಕ ಮಾಡುವುದು ತಮ್ಮ ಒಡಲ ಹೊರೆಯುವುದಕ್ಕಲ್ಲ. ತಮ್ಮ ಮಡದಿ ಮಕ್ಕಳಿಗಾಗಿ ಮಾತ್ರವಲ್ಲ. ಜಂಗಮ ಅಂದರೆ ಸಮಾಜಕ್ಕೆ ದಾಸೋಹವೆಂದು. ಗುರು ಲಿಂಗ ಜಂಗಮ ಆರಾಧನೆಗೆಂದು. ಪರಿಶುದ್ಧ ಭಾವದಿಂದ ಕಾಯಕಗೈದು, ಬಂದ ಪದಾರ್ಥವನ್ನು ಪ್ರಸನ್ನತೆಯಿಂದ ದಾಸೋಹಗೈದು, ಮಿಕ್ಕುದನ್ನು ಲಿಂಗಪ್ರಸಾದವೆಂದು ಸ್ವೀಕರಿಸುವರು.
“ಹೊತ್ತಾರೆ ಎದ್ದು ಕಣ್ಣ ಹೊಸೆಯುತ್ತಾ ಎನ್ನ ಒಡಲಿಂಗೆ, ಎನ್ನ ಒಡವೆಗೆಂದು ಎನ್ನ ಮಡದಿ ಮಕ್ಕಳಿಗೆಂದು ಕುದಿದೆನಾದಡೆ, ಎನ್ನ ಮನಕ್ಕೆ ಮನವೇ ಸಾಕ್ಷಿ. ಹೊಲೆ ಹೊಲೆಯರ ಮನೆಯ ಹೊಕ್ಕಾದಡೆಯೂ ಸಲೆ ಕೈಕೊಲಿಯ ಮಾಡಿಯಾದಡೆಯೂ, ನಿಮ್ಮ ನಿಲವಿಂಗೆ ಕುದಿವೆನಲ್ಲದ ಎನ್ನ ಒಡಲವಸರಕ್ಕೆ ಕುದಿದೆನಾದಡೆ ತಲೆದಂಡ ಕೂಡಲಸಂಗಮದೇವಾ” ಎಂದು ಬಸವಣ್ಣನವರು ಕಾಯಕದಲ್ಲಿ ಸತ್ಯಶುದ್ಧತೆ, ನೀಡುವ ದಾಸೋಹದಲ್ಲಿ ಸಾರ್ಥಕತೆಯನ್ನು ಪ್ರತಿಜ್ಞೆ ರೂಪದಲ್ಲಿ ಹೇಳಿದ್ದಾರೆ. ಇದು ಬಸವ ಪ್ರತಿಜ್ಞೆ.
ಅನುಭವ ಮಂಟಪದ ಸರ್ವಶರಣರ ಬದುಕಿನಲ್ಲಿ ಕಾಯಕ – ದಾಸೋಹ ಪ್ರತಿಫಲನಗೊಂಡಿತು. ವ್ರತ ತಪ್ಪಿದಡೆ ಸೈರಿಸಬಹುದು. ಕಾಯಕ ತಪ್ಪಿದರೆ ಸೈರಿಸಲಾಗದೆಂಬ ನಿಷ್ಠೆ ಶರಣರದು. ಒಮ್ಮೆ ಅನುಭವ ಮಂಟಪದಲ್ಲಿ ಆಯ್ದಕ್ಕಿ ಮಾರಯ್ಯನವರು ಅನುಭಾವ ಗೋಷ್ಠಿಯಲ್ಲಿ ಮೈ ಮರೆತಿದ್ದಾರೆ. ಕಾಯಕದ ಸಮಯ ಮೀರಿದೆ. ಆಗ ಸತಿ ಲಕ್ಕಮ್ಮ “ಕಾಯಕ ನಿಂದಿತ್ತು, ಹೋಗಯ್ಯಾ ಎನ್ನಾಳನೆ” ಎಂದು ಎಚ್ಚರಿಸಿ, ಅವಸರದಿಂದ ಕಾಯಕಕ್ಕೆ ಕಳಿಸಿದ ಪ್ರಸಂಗ, ಶರಣರು ಕಾಯಕಕ್ಕೆ ಕೊಟ್ಟ ಮಹತ್ವವನ್ನು ತಿಳಿಸುತ್ತದೆ.
“ಅಂಗಗುಣವಿಲ್ಲದ ಲಿಂಗದರಿವಿನಲ್ಲಿ, ಬೇಕೆಂಬ ಭಾವವಿಲ್ಲದ ಕೈಯಲ್ಲಿ, ಬೇಗ ಬೇಗನೆ ಅಮರೇಶ್ವರ ಲಿಂಗಕ್ಕೆಂದು ಅಕ್ಕಿಯನ್ನು ಆಯ್ದು ತಾ ಮಾರಯ್ಯಾ” ಎಂಬಲ್ಲಿ ಕಾಯಕದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದ್ದಾರೆ ಶರಣೆ ಲಕ್ಕಮ್ಮನವರು.

ಮಾರಯ್ಯನವರು ಕಾಯಕದ ಭರದಲ್ಲಿ ದಿನನಿತ್ಯಕ್ಕಿಂತ ಸ್ವಲ್ಪ ಜಾಸ್ತಿ ಅಕ್ಕಿಯನ್ನು ಸಂಗ್ರಹಿಸಿ ತಂದದ್ದು ನೋಡಿ ಲಕ್ಕಮ್ಮನವರು ಸಿಡಿದೇಳುತ್ತಾರೆ. “ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ, ಈಸಕ್ಕಿ ಆಸೆ ನಿಮಗೇಕೆ? ಅಲ್ಲಿಯೇ ಸುರಿದು ಬನ್ನಿ ಮಾರಯ್ಯಾ” ಎಂದು ಹೆಚ್ಚಿನ ಅಕ್ಕಿ ಮರಳಿಸಿದ ಧೀರೆ ಆಕೆ. “ಮನೆಯಲ್ಲಿ ನಮಗೆ ಬಡತನವಿದೆ. ನಾಳೆಗಾಗುತ್ತದೆ ಇರಲಿ ಬಿಡು, ಲಕ್ಕಮ್ಮ” ಎಂದು ಸಮಾಧಾನ ಪಡಿಸಲು ಪ್ರಯತ್ನಿಸಿದ ಪತಿಗೆ, “ಅಮರೇಶ್ವರ ಲಿಂಗ ಸತ್ತಂದಿಗಲ್ಲದೆ ಭಕ್ತರಿಗೆ ಬಡತನವಿಲ್ಲ. ಅತ್ತ ಶುದ್ಧದಲ್ಲಿ ಕಾಯಕ ಮಾಡುವ ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು. ಮೊದಲು ಅಲ್ಲಿಯೇ ಸುರಿದು ಬನ್ನಿ”ಎಂದು ಉತ್ತರಿಸಿದಳು.
ತತ್ವದ ಆಚರಣೆಯಲ್ಲಿ ಎಂತಹ ಕೆಚ್ಚಿರಬೇಕು? ಅಂದು ನಿರ್ಮಣವಾದ ಜನಾಂಗ ನೆನೆಸಿಕೊಂಡರೆ ಮೈ ಜುಂ ಎನ್ನುತ್ತದೆ. ಮನೆ ಮನೆಯ ಸತಿಯರು ಲಕ್ಕಮ್ಮನವರಂತೆ ಅನ್ಯಾಯದ ಗಳಿಕೆ ಧಿಕ್ಕರಿಸಿದರೆ, ವಿಶ್ವದ ಎಲ್ಲಾ ಅನಾಚಾರಗಳಿಗೆ ಪೂರ್ಣ ವಿರಾಮ ಬೀಳುವುದು.
ಶರಣರಲ್ಲಿ ಪ್ರಾಮಾಣಿಕತೆಗೆ ಅಗ್ರಸ್ಥಾನ. ಅದುವೇ ಸದಾಚಾರದ ಬೇರು. ದುಡಿತಕ್ಕಿಂತ ಹೆಚ್ಚಿನ ಧನದಾಸೆ ಅಪವಿತ್ರ. ಕಾಯಕದ ಪಾವಿತ್ರ್ಯತೆಯನ್ನು ನಷ್ಟ ಮಾಡುತ್ತದೆ. “ಕಾರೆಯ ಸೊಪ್ಪಾದರೂ ಕಾಯಕದಿಂದ ಬಂದುದು ಲಿಂಗಾರ್ಪಿತ. ದುರಾಸೆಯಿಂದ ಬಂದುದು ಅನರ್ಪಿತ”, ಸತ್ಯ ಶುದ್ಧ ಕಾಯಕದ ನಿತ್ಯ ದ್ರವ್ಯವೇ ಲಿಂಗಕ್ಕೆ ನೈವೇದ್ಯ. ಲಿಂಗಕ್ಕರ್ಪಿತವಲ್ಲದುದ ಕೊಳ್ಳದ ಬಸವ ಭಾಷೆಯಾಗಿದೆ. ಇದುವೇ ಬಸವ ಸಿದ್ಧಾಂತವಾಗಿದೆ.
ಶರಣರಂತೆ ಲಿಂಗಾರ್ಪಿತಕ್ಕೆ ಯೋಗ್ಯವಾದುದನ್ನೇ ಗಳಿಸುವ ಕಾಯಕ ನಿರ್ಮಾಣವಾಗಲೆಂದು ಬಯಸೋಣ. ಇದರಿಂದ ವ್ಯಕ್ತಿ ಹಾಗೂ ಸಮಾಜ ಶುದ್ಧವಾಗಿ ಸಮೃದ್ಧವಾಗುವುದು. ಇದುವೇ ವಿಶ್ವಕ್ಕೆ ಮಾದರಿ ತತ್ವ ಕೂಡ!
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M
