ನಾಳೆಯಿಂದ ಅದ್ಧೂರಿ ಬಸವ ಜಯಂತಿ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ: ಬಿ.ಆರ್. ಪಾಟೀಲ
ಕಲಬುರಗಿ:
ವಿಶ್ವಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ೮೯೩ನೇ ಜಯಂತಿ ಅಂಗವಾಗಿ ಬಸವ ಜಯಂತಿ ಉತ್ಸವ ಸಮಿತಿ ೨೦೨೬ ವತಿಯಿಂದ ನಗರದ ಮೂರು ದಿನಗಳ ಕಾಲ ವಿಶೇಷ ಉಪನ್ಯಾಸ ಕಾರ್ಯಕ್ರಮ, ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಲಿಂಗದೀಕ್ಷೆ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಬಿ.ಆರ್. ಪಾಟೀಲ ಅವರು ತಿಳಿಸಿದರು.
ನಗರದ ಶ್ರೀ ಶರಣಬಸವೇಶ್ವರ ಸಂಸ್ಥಾನದ ದಾಸೋಹ ಮಹಾಮನೆಯಲ್ಲಿ ಈಚೆಗೆ ಸಮಿತಿಯ ಸರ್ವರೂ ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ಬಸವ ಜಯಂತಿ ಅತ್ಯಂತ ಯಶಸ್ವಿಯಾಗಿ ಜರುಗಿದ್ದು ಈ ಬಾರಿಯೂ ಅದ್ದೂರಿ ಜಯಂತಿ ಆಚರಣೆ ಮಾಡಲಾಗುತ್ತಿದ್ದು, ಇದೇ ಏಪ್ರಿಲ್ ೧೬, ೧೭, ೧೮ರಂದು ಮೂರು ದಿನಗಳ ಕಾಲ ನಡೆಯಲಿರುವ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಶರಣ ಬಸವೇಶ್ವರರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪೂಜ್ಯ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್. ಅಪ್ಪ ಅವರು ಚಾಲನೆ ನೀಡಲಿದ್ದು, ಪೂಜ್ಯ ಪ್ರಭುಶ್ರೀ ಮಾತಾಜಿ ಅಕ್ಕಮಹಾದೇವಿ, ಗದ್ದುಗೆಮಠದ ಚರಲಿಂಗ ಶ್ರೀಗಳು ಹಾಗೂ ಗುರುಮಿಠಕಲ್ ಶಾಂತವೀರ ಶಿವಾಚಾರ್ಯರು ಪ್ರತ್ಯೇಕವಾಗಿ ಆಯಾ ದಿನಾಂಕದಂದು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದ ಅವರು, ಹಲವು ಮಠಾಧೀಶರು,ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಅದೇ ರೀತಿ ಏ.೧೯ರಂದು ನಗರದ ಶರಣಬಸವೇಶ್ವರರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಬೆಳಗ್ಗೆ ೬-೩೦ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಲಿಂಗದೀಕ್ಷೆ ಕಾರ್ಯಕ್ರಮ ನಡೆಯಲಿದ್ದು, ಸಂಜೆ ೫ ಗಂಟೆಗೆ ಜಾತ್ರಾ ಮೈದಾನದಲ್ಲಿ ಬಸವಾಭಿಮಾನಿಗಳ ಬೃಹತ್ ಬಹಿರಂಗ ಸಭೆ ಆರಂಭಗೊಳ್ಳಲಿದೆ. ಬಹಿರಂಗ ಸಭೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಸಚಿವ ಈಶ್ವರ ಖಂಡ್ರೆ ಅವರಿಗೆ ವಿಶೇಷ ಸನ್ಮಾನ ಮಾಡಲಾಗುತ್ತದೆ. ಅಲ್ಲದೆ ಸಭೆಯಲ್ಲಿ ಹಲವು ಮಠಾಧೀಶರು ಹಾಗೂ ಸಮಾಜದ ಗಣ್ಯರು ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಅಲ್ಲದೆ ಬೆಳಗ್ಗೆ ೯.೩೦ಕ್ಕೆ ಕಾರ್ ರ್ಯಾಲಿ ಹಾಗೂ ಸಂಜೆ ೪ ಗಂಟೆಗೆ ಮಹಿಳೆಯರ ಬೈಕ್ ರ್ಯಾಲಿಯನ್ನು ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಜಗತ್ ವೃತ್ತದವರೆಗೂ ಜರುಗಲಿದೆ ಎಂದು ಬಿ.ಆರ್. ಪಾಟೀಲ್ ಅವರು ಮಾಹಿತಿ ನೀಡಿದರು.

ಇನ್ನೂ ಏ.೨೦ರಂದು ಬಸವೇಶ್ವರರ ೮೯೩ನೇ ಜಯಂತಿ ಅಂಗವಾಗಿ ಬೆಳಿಗ್ಗೆ ೮ ಗಂಟೆಗೆ ಜಗತ್ ವೃತ್ತದಲ್ಲಿನ ಬಸವೇಶ್ವರರ ಮೂರ್ತಿ ಆವರಣದಲ್ಲಿ ಷಟಸ್ಥಲ ಧ್ವಜಾರೋಹಣ, ಉಪನ್ಯಾಸ, ವಚನ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ರಕ್ತದಾನ ಶಿಬಿರ ಆಯೋಜಿಸಿದ್ದು, ಸಂಜೆ ೪ ಗಂಟೆಗೆ ನಗರದ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ಬಸವಣ್ಣನವರ ಹಾಗೂ ಕಾಯಕ ಶರಣರ ಭಾವಚಿತ್ರಗಳ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ ಎಂದರು.
ಈ ಬಾರಿಯ ಬಸವ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ವತಿಯಿಂದ ಬೆಳಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ ಪ್ರೊ. ಆರ್.ಕೆ ಹುಡಗಿ ಅವರಿಗೆ ‘ಬಸವಶ್ರೀ’ಪ್ರಶಸ್ತಿ ಪ್ರದಾನ ಹಾಗೂ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸೃಷ್ಟಿ ಅವರಿಗೆ ೧ ಲಕ್ಷ ಹಣದೊಂದಿಗೆ ಪ್ರಶಸ್ತಿ ಫಲಕವನ್ನು ನೀಡಲಾಗುತ್ತಿದೆ. ಅಲ್ಲದೆ ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದ ವಿದ್ಯಾರ್ಥಿ ಬಸವರಾಜ ಗಂಗಾಧರ ಇವರಿಗೂ ಸನ್ಮಾನ ಮಾಡಲಾಗುತ್ತದೆ.ಇದರೊಂದಿಗೆ ಉಮೇಶ ಶೆಟ್ಟಿ ಹಾಗೂ ಸಿದ್ರಾಮಪ್ಪ ಧುಲಂಗೆ ಅವರಿಗೆ ‘ಬಸವ ಸೇವಾ’ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಶಾಸಕ ಬಿ.ಆರ್ ಪಾಟೀಲ ಅವರು ತಿಳಿಸಿದರು.
ಇದೇ ವೇಳೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಅವರು, ಕಳೆದ ಬಾರಿಯಂತೆ ಈ ಬಾರಿಯ ಬಸವ ಜಯಂತಿ ಉತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದ್ದು, ಬಸವಣ್ಣರ ವಿಚಾರಧಾರೆ, ವಚನ ಸಂದೇಶವನ್ನು ಯುವಕರಲ್ಲಿ ಸಾರಿ ಹೇಳುವಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಬಸವಾಭಿಮಾನಿಗಳು ಸಮಾಜದ ಎಲ್ಲಾ ವರ್ಗದವರು ಸಹಕರಿಸಿ ಬಸವ ಜಯಂತಿಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸೋಣ ಎಂದು ಹೇಳಿದ ಅವರು, ಜಯಂತ್ಯುತ್ಸವ ಸಮಿತಿಯೂ ಯಾರ ಹತ್ತಿರವೂ ಹಣ ಸಂಗ್ರಹ ಮಾಡುತ್ತಿಲ್ಲ. ಬಸವ ಜಯಂತಿ ಸಮಿತಿ ಉತ್ಸವದ ಹೆಸರಿನಲ್ಲಿ ಕೆಲ ಕಿಡಿಗೇಡಿಗಳು ಹಣವನ್ನು ಸಂಗ್ರಹ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಸಣ್ಣ ಕೈಗಾರಿಕೆ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಅವರು, ಎಲ್ಲರೂ ಸೇರಿಕೊಂಡು ಒಳ್ಳೆಯ ರೀತಿಯಲ್ಲಿ ಅದ್ಧೂರಿಯಾಗಿ ಬಸವ ಜಯಂತಿಯನ್ನು ಆಚರಿಸೋಣ ಎಂದು ಅವರು ಕರೆ ನೀಡಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು, ಈ ಬಾರಿಯ ಬಸವ ಜಯಂತಿಯನ್ನು ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು ಆ ನಿಟ್ಟಿನಲ್ಲಿ ಸೇವಾ ಕಾರ್ಯಗಳು ಹಾಗೂ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು, ಬಸವ ಜಯಂತಿ ಯಶಸ್ವಿಗೆ ೨೦ಕ್ಕೂ ಹೆಚ್ಚು ಉಪ ಸಮಿತಿಗಳನ್ನು ರಚನೆ ಮಾಡಲಾಗಿದ್ದು ಎಲ್ಲರಿಗೂ ಅವರವರ ಜವಾಬ್ದಾರಿಯನ್ನು ಕೊಡಲಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಜಯಂತಿಯನ್ನು ಆಚರಿಸುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಸಾರುವ ಮೂಲಕ ಸರ್ವರಿಗೂ ಮಾದರಿಯಾಗೋಣ ಎಂದರು.
೧೨ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವನ್ನು ಜಗತ್ತಿನ ಮೊದಲ ಸಂಸತ್ತು ಎಂದು ಪರಿಗಣಿಸಲ್ಪಟ್ಟಿದೆ. ಲಿಂಗ, ಜಾತಿ, ಮತ್ತು ವರ್ಗ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ನೀಡಿದ ಪ್ರಜಾಪ್ರಭುತ್ವದ ಮೂಲ ರೂಪವಾಗಿತ್ತು. ಆ ನಿಟ್ಟಿನಲ್ಲಿ ಬಸವ ಸಮಿತಿ ಅವರು ಮಾಡುತ್ತಿರುವ ಕೆಲಸ ನಿಜಕ್ಕೂ ಶ್ಲಾಘನೀಯವಾಗಿದ್ದು ಇದೇ ರೀತಿ ಸರ್ವರೂ ಒಗ್ಗೂಡಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಬಸವಣ್ಣನವರಿಗೆ ಗೌರವಿಸುವುದರೊಂದಿಗೆ ಅವರ ತತ್ವ ಸಿದ್ಧಾಂತವನ್ನು ಹಾಗೂ ಶಾಂತಿ ಸಂದೇಶವನ್ನು ಜಗತ್ತಿಗೆ ಸಾರುವ ಕಾರ್ಯ ಎಲ್ಲರೂ ಮಾಡೋಣ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧೀಪತಿಯವರಾದ ಪೂಜ್ಯ ದೊಡ್ಡಪ್ಪ ಅಪ್ಪಾ, ಬಸವ ಜಯಂತಿ ಉತ್ಸವ ಸಮಿತಿಯ ಶಾಸಕ ಎಂ. ವೈ ಪಾಟೀಲ್, ಬಿ.ಜಿ ಪಾಟೀಲ, ಬಸವರಾಜ ದೇಶಮುಖ, ಶಶೀಲ್ ಜಿ. ನಮೋಶಿ, ಡಾ. ಭೀಮಾಶಂಕರ ಬಿಲಗುಂದಿ, ಚಂದು ಪಾಟೀಲ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ರಾಜು ಭೀಮಳ್ಳಿ, ಅರುಣಕುಮಾರ ಪಾಟೀಲ ಕೂಡಲಹಂಗರಗಾ, ಪ್ರವೀಣ ಪಾಟೀಲ ಹರವಾಳ, ಡಾ. ಕಿರಣ ದೇಶಮುಖ, ಸಂಗಮೇಶ ನಾಗನಳ್ಳಿ, ಪ್ರಭುಲಿಂಗ ಮಹಾಗಾಂವಕರ, ಆರ್.ಜಿ. ಶೆಟಗಾರ, ರವೀಂದ್ರ ಶಾಬಾದಿ, ಸೋಮಶೇಖರ ಗೋನಾಯಕ, ಸಂಗಮೇಶ ನಾಗನಳ್ಳಿ,
ಶಿವಶಕಾಂತ ಮಹಾಜನ, ಸೋಮಶೇಖರ ಹೀರೆಮಠ, ಸಾವಿತ್ರಿ, ಗೌರಿ ಚಿತಕೋಟೆ, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಅವರು ಸ್ವಾಗತಿಸಿದರು.
