ಯುವಕರಿಗೆ ಬಸವಣ್ಣನ ಪರಿಚಯಿಸುವುದು ಅಗತ್ಯ
ಕಲಬುರಗಿ:
ಯುವಕರು ಬಸವಾದಿ ಶರಣರ ಜೀವನ ಸಾಧನೆ ಹಾಗೂ ಅವರ ವ್ಯಕ್ತಿತ್ವವನ್ನು ಅರಿತು ನಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ 893ನೇ ಬಸವ ಜಯಂತ್ಯುತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ. ಬಿ.ಜಿ. ಪಾಟೀಲ ಹೇಳಿದರು.
ಕಲಬುರಗಿ ಬಸವ ಸಮಿತಿ ಬಸವಾಭಿಮಾನಿಗಳ ಬಳಗ, ಮತ್ತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಜಯನಗರದ ಅನುಭವ ಮಂಟಪದಲ್ಲಿ ೮೯೩ನೇ ಬಸವ ಜಯಂತ್ಯೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ವಚನ ಸಾಹಿತ್ಯಾಧಾರಿತ ಜಿಲ್ಲಾಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಭದ್ರಾವತಿಯ ಗಂಗಾಂಬಿಕಾ ಬಸವರಾಜ, ಈ ಹಿಂದೆ ಶಾಲೆಗಳಲ್ಲಿ ನೀತಿಪಾಠ ಇರುತ್ತಿತ್ತು. ಆದರೆ ಇದೀಗ ಅದಿಲ್ಲ. ಮಕ್ಕಳ ಮನಸ್ಸು ಹಸಿ ಗೋಡೆ ಇದ್ದ ಹಾಗೆ, ವಚನ ಸಾಹಿತ್ಯದ ಪರಿಚಯ ಮಕ್ಕಳಿಗೆ ಮೊದಲು ಆಗಬೇಕು. ಮನುಕುಲಕ್ಕೆ ಬೇಕಾದ, ಬೆಳಕಾಗಬಲ್ಲ ವಚನಗಳು ಉತ್ತಮ ಬದುಕಿಗೆ ಭದ್ರ ಬುನಾದಿ ಆಗಿವೆ.
ಬಸವಣ್ಣನವರು ವಿಶ್ವದ ಮೊಟ್ಟ ಮೊದಲ ಪ್ರಜಾಪ್ರಭುತ್ವದ ಹರಿಕಾರ. ಬಸವಾದಿ ಶರಣರ ವಿಚಾರಗಳು ಮನುಕುಲಕ್ಕೆ ಬೇಕಾದ ಬೆಳಕಾಗಬಲ್ಲ ವಚನಗಳು. ಉತ್ತಮ ಬದುಕಿಗೆ ವಚನಗಳು ಭದ್ರ ಬುನಾದಿ. ಮೊಬೈಲ್ ಪ್ರಭಾವಕ್ಕಾಗಿ ಒಳಗಾಗಿ ನಮ್ಮ ಸಮಯ ವ್ಯರ್ಥವಾಗುತ್ತಿದೆ. ಕಾಲ, ದೇಶ, ಸಂಸ್ಕೃತಿ, ವಿಜ್ಞಾನ, ಸುಜ್ಞಾನ ಒಳಗೊಂಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಬಸವ ಸಮಿತಿ ಅದ್ಯಕ್ಷೆ ವಿಲಾಸವತಿ ಖೂಬಾ ಮಾತನಾಡಿ, ಈ ರಸಪ್ರಶ್ನೆ ಕಾರ್ಯಕ್ರಮ ಸಂಘಟಿಸಿದವರ ನಾಮ ಬೇರೆ ಬೇರೆ ಇರಬಹುದು. ಆದರೆ ಇವುಗಳ ನೇಮ ಮಾತ್ರ ಬಸವಣ್ಣ ಎಂದರು.
ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಶಾಬಾದಿ, ಮಕ್ಕಳಿಗೆ ಪ್ರೇರಣಾದಾಯಕ ಕಾರ್ಯಕ್ರಮಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದು ತಿಳಿಸಿದರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಜಿ. ಶೆಟಗಾರ, ಮಾಕಾ ಲೇಔಟ್ ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಅಯ್ಯಣ್ಣ ನಂದಿ ವೇದಿಕೆಯಲ್ಲಿದ್ದರು.
ಬಸವಾಭಿಮಾನಿಗಳ ಬಳಗದ ಸಂಯೋಜಕ ಚಂದ್ರಶೇಖರ ಪಾಟೀಲ ಬಿರಾಳ ಪ್ರಾಸ್ತಾವಿಕ ಮಾತನಾಡಿದರು. ನಾಗಣ್ಣ ಶಾಬಾದಿ ವಂದಿಸಿದರು. ಡಾ.ಡಿ.ಎನ್. ಪಾಟೀಲ ನಿರೂಪಿಸಿದರು. ಡಾ. ಶಿವರಂಜನ ಸತ್ಯಂಪೇಟೆ ಸ್ವಾಗತಿಸಿದರು. ಉಮೇಶ ಶೆಟ್ಟಿ, ಬಸವರಾಜ ಧೂಳಾಗುಂಡಿ, ನಾಗಣ್ಣ ಶಾಬಾದಿ, ಜ್ಯೋತಿ ಕಡಾಳೆ, ಬಸವರಾಜ ಮೊರಬದ, ರೇವಣಸಿದ್ಧಯ್ಯ ಮಠಪತಿ, ಹಣಮಂತರಾಯ ಕುಸನೂರ ಇತರರಿದ್ದರು.
