ಬಸವ ಭಾಷೆ : ‘ಒಳ ಹೊರಗೊಂದಾಗಿರುವ ಭಾಷೆ’

(ಕೊಪ್ಪಳದಲ್ಲಿ ನಡೆಯುತ್ತಿರುವ ಪೂಜ್ಯ ಪ್ರಭುದೇವ ಸ್ವಾಮೀಜಿಯವರ ‘ಬಸವ ಭಾಷೆ ‘ಪ್ರವಚನದ ಮುಖ್ಯಾಂಶಗಳು)

17.04.2026

ಕೊಪ್ಪಳ :

ಪೂಜ್ಯ ಪ್ರಭುದೇವ ಮಹಾಸ್ವಾಮಿಗಳು, ಲಿಂಗಾಯತ ಮಹಾಮಠ, ಬೀದರ

ಒಳ ಎಂದರೆ ಅಂತರಂಗ, ಮನದ ಆಲೋಚನೆ. ಹೊರ ಎಂದರೆ ಬಹಿರಂಗ, ತನುವಿನ ಕ್ರಿಯೆ. ಆಲೋಚನೆಯಂತೆ ಆಚಾರ ಅಥವಾ ಆಚಾರದಂತೆ ಆಲೋಚನೆ ಇಲ್ಲದಿದ್ದರೆ ಜೀವನ ಪಥದಲ್ಲಿ ಅವಘಡ ನಿಶ್ಚಿತ. ಬಸವಣ್ಣನವರು ಅಂತರಂಗ ಬಹಿರಂಗ ಎರಡರ ಶುದ್ಧಿಗೂ ಸಮಾನ ಪ್ರಾಮುಖ್ಯತೆ ನೀಡಿರುವರು. ಎರಡರ ಶುದ್ಧಿಯಿಂದ ಮಾತ್ರ ಪರಮೋಚ್ಚ ದೇವನ ಸಾಧನೆ ಸಾಧ್ಯ. ದೈಹಿಕ ಕ್ರಿಯೆಗಳು ಮತ್ತು ಮನದ ಯೋಜನೆಗಳು,  ಮನದ ಕೋಣೆಯಲ್ಲಿಯೇ ರೂಪುಗೊಳ್ಳುತ್ತವೆ. ಯೋಜನೆಗಳನ್ನು ಕ್ರಿಯಾಶೀಲಗೊಳಿಸುವ ಸಾಧನವೇ ದೇಹ. ದೇಹ ಮತ್ತು ಮನ ಇವೆರಡೂ ಒಂದಾದಾಗ ಮಹತ್ಸಾಧನೆಯ ಸಿದ್ಧಿಯಾಗುತ್ತದೆ.

ಬಸವಣ್ಣನವರು “ಒಲವಿಲ್ಲದ ಪೂಜೆ ನೇಹವಿಲ್ಲದ ಮಾಟ ಆ ಪೂಜೆಯು ಆ ಮಾಟವು ಚಿತ್ರದ ರೂಹು ಕಾಣಿರಣ್ಣಾ ಚಿತ್ರದ ಕಬ್ಬು ಕಾಣಿರಣ್ಣಾ ಅಪ್ಪಿದಡೆ ಸುಖವಿಲ್ಲ ಮೆಲಿದಡೆ ರುಚಿಯಿಲ್ಲ ಕೂಡಲಸಂಗಮದೇವ ನಿಜವಿಲ್ಲದವನ ಭಕ್ತಿ” ಎಂದಿದ್ದಾರೆ. ಮನದೊಳಗೆ ದುರಾಸೆ, ದುರ್ವಿಷಯ ಮತ್ತು ದುಃಶ್ಚಿಂತನೆಗಳನ್ನು ತುಂಬಿಕೊಂಡು, ಹೊರಗೆ ಪ್ರದರ್ಶನಕ್ಕಾಗಿ ಪೂಜೆ ಜಪ ದಾನ ಧರ್ಮಗಳನ್ನು ಮಾಡಿದರೂ ದೇವರಿಗೆ ಒಪ್ಪಿತವಾಗದು. ಅರಸರಿಯದ ಬಿಟ್ಟಿ ಕೆಲಸದಂತೆ ವ್ಯರ್ಥ.

ಪ್ರೇಮ ಪೂರಿತವಲ್ಲದ, ಮನಪೂರ್ವಕವಲ್ಲದ, ಯಾವ ಕಾರ್ಯವೂ ಕೈಗೂಡದು. ಮನಸಹಿತವಾಗಿ ಮಾಡಿದ್ದು, ಮಾಂತ್ರಿಕ ಶಕ್ತಿಯನ್ನೀಯುತ್ತದೆ. ಕೇವಲ ಯಾಂತ್ರಿಕವಾಗಿ ತನುವಿನಿಂದ ಮಾಡುವ ಶ್ರಮ ನಿಷ್ಪಲ. ಅದು ಕೇವಲ ಚಿತ್ರಪಟದಲ್ಲಿರುವ ಸುಂದರ ರೂಪಸಿಯಂತೆ, ಚಿತ್ರದ ಕಬ್ಬಿನಂತೆ, ಅಪ್ಪಿದರೆ ಸುಖವಿಲ್ಲ. ಮೆಲಿದಡೆ ರುಚಿಯಿಲ್ಲ. ಪ್ರಪಂಚವೇ ಆಗಲಿ, ಪಾರಮಾರ್ಥವೇ ಆಗಲಿ, ತನು ಮನ ಅರಿವು ಆಚಾರ ಒಂದಾಗಿರುವುದು ಅವಶ್ಯ. ಪ್ರಪಂಚದಲ್ಲಿ ಇವೆರಡು ಭಿನ್ನವಾದರೆ ವ್ಯವಹಾರ ಸಾಗದು. ಭೌತಿಕ ಸುಖ ದೊರೆಯದು. ಪರಮಾರ್ಥದ ಆತ್ಯಂತಿಕ ಆನಂದ, ಪರಮ ಕರುಣೆಗಳು ದೂರ ದೂರವಾಗುತ್ತವೆ. ಹೀಗಾಗಿ ಲೌಕಿಕ ಅಲೌಕಿಕ ಎರಡರಲ್ಲಿಯೂ ಒಳ ಹೊರಗೊಂದಾಗುವಿಕೆ ಅಗತ್ಯ.

ದೃಷ್ಟಾಂತ ಸಹಿತ ಬಸವಣ್ಣನವರು ಮುಂದುವರೆದು ಹೇಳುತ್ತಾರೆ, “ಎರದೆಲೆಯಂತೆ ಒಳಗೊಂದು ಹೊರಗೊಂದಾದಡೆ ಮೆಚ್ಚುವನೆ ? ಬಾರದ ಭವಂಗಳ ಬರಿಸುವನಲ್ಲದೆ ಮೆಚ್ಚುವನೆ? ಅಘೋರ ನರಕವನುಣಿಸುವನಲ್ಲದೆ ಮೆಚ್ಚುವನೆ ? ಉಡುವಿನ ನಾಲಗೆಯಂತೆ ಎರಡಾದಡೆ ಕೂಡಲಸಂಗಮದೇವಯ್ಯ ಮೆಚ್ಚುವನೆ ?” ಎಂಧು. ಎರದೆಲೆಯ ಒಳಮೈ ನುಣುಪು. ಹೊರಮೈ ಒರಟು. ಕೆಲವರು ಮನ ನೋಯಿಸುವಂಥ ಮಾತನಾಡಿ ಹಿಂಸಿಸುವರು. ನಂತರ ಅಯ್ಯೋ ಬರಿ ಮಾತನಾಡಿದರೇನಾಯಿತು ? ತಮ್ಮ ಮನಸ್ಸು ಹಾಗಲ್ಲ. ಮನಸ್ಸಿನಿಂದ ನಿಮ್ಮ ಬಗ್ಗೆ ಕೆಟ್ಟ ವಿಚಾರ ಮಾಡುವುದಿಲ್ಲ ಎನ್ನುವರು. ಮತ್ತೆ ಕೆಲವರು ಹೊರಗೆ ನಯ ವಿನಯವಾಗಿ

ಮಾತನಾಡಿ, ಮನದಲ್ಲಿ ಕೇಡನ್ನೆ ಬಯಸುತ್ತಾ ಇರುವರು. ಇವರು ಒಳಗೆ ಅವರು ಹೊರಗೆ, ಒಟ್ಟಾರೆ ಕೆಟ್ಟದ್ದು ಎಲ್ಲಿಯೇ ಇರಲಿ, ಅದು ಕೆಟ್ಟದ್ದೆ ಆಗಿರುತ್ತದೆ.

ತನುವಿನಲ್ಲಿ ಲಿಂಗಪೂಜೆ, ಮನದಲ್ಲಿ ಲಿಂಗಧ್ಯಾನವಾದರೆ ತನು ಮನಗಳೆರಡೂ ದೇವಮಯವಾಗುತ್ತದೆ. ಒಳ-ಹೊರಗೆಂಬ ಭಾವವು ಅಳಿಯುತ್ತವೆ. ಮನ ಮಂಗಳವಾದುದನೆ ಚಿಂತಿಸುವುದು. ತನು ಮಂಗಳಕರವಾದುದನ್ನೇ ಮಾಡುವುದು. ಲೇಸನೇ ಬಯಸಿ, ಲೇಸನ್ನೆ ಮಾಡುವ ಒಳ ಹೊರಗೊಂದಾದ ಭಕ್ತಿ ದೇವರಿಗೆ ಪ್ರಿಯವಾಗಿದೆ.

ಸರ್ವರ ಬದುಕು ಒಳ ಹೊರಗೊಂದಾದರೆ ಅನ್ಯಾಯ ಅನಾಚಾರಗಳಿಗೆ ಆಸ್ಪದವಿರದು. ಅನುಮಾನ ದೂರಾಗಿ, ಪರಸ್ಪರ ವಿಶ್ವಾಸ ಅಳವಡುವುದು. ಜಗತ್ತಿನ ಸಮಯ ಶ್ರಮದ ಉಳಿತಾಯಕ್ಕೆ ನಾಂದಿಯಾಗುತ್ತದೆ. ಬನ್ನಿ, ಹೊರಗೊಂದಾಗುವ ಬಸವ ಭಾಷೆಗೆ ನಾವೂ ಬದ್ಧರಾಗಿ ಕಲ್ಯಾಣ ರಾಜ್ಯ ಕಟ್ಟೋಣ.

ಮಕ್ಕಳ ಕಾರ್ಯಾಗಾರ

ಇಂದು ಒಂದು ದಿನದ “ಮಕ್ಕಳಿಗಾಗಿ ಶರಣ ಸಂಸ್ಕೃತಿ ಕಾರ್ಯಾಗಾರ ನಡೆಯಿತು. ಕಾರ್ಯಾಗಾರ ನಡೆಸಿಕೊಟ್ಟ ಪೂಜ್ಯ ಪ್ರಭುದೇವ ಮಹಾಸ್ವಾಮಿಗಳು, ಲೋಕೇಶ ಯೋಗ ಗುರೂಜಿ, ಶರಣೆ ಅರ್ಚನಾ ಸಸಿಮಠ ಮತ್ತು ಡಾ. ಸಂಗಮೇಶ ಕಲಹಾಳ ಅವರೊಂದಿಗೆ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *