ಬಸವತತ್ವ ದರ್ಶನ: ಲಿಂಗಾಯತ ಧರ್ಮ ಕೇವಲ ಸನ್ಯಾಸಿಗಳಿಗಲ್ಲ

ಶರಣು ಶಿಣ್ಣೂರ್
ಶರಣು ಶಿಣ್ಣೂರ್

ಪ್ರವಚನಕಾರರು: ಪೂಜ್ಯ ಬಸವೇಶ್ವರಿ ಮಾತಾಜಿ, ಬಸವಧಾಮ ಅತ್ತಿವೇರಿ

ಸ್ಥಳ: ಬಸವ ಮಂಟಪ, ಮಾಕಾ ಲೇಔಟ್‌, ಕಲಬುರಗಿ

ಆಯೋಜನೆ: ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ

ದಿನಾಂಕ: 19 ಏಪ್ರಿಲ್ 2026

ಇಂದಿನ ಪ್ರವಚನದಲ್ಲಿ ಪ್ರವಚನಕಾರರು ಬಸವಣ್ಣನವರ ತತ್ವ-ಸಿದ್ಧಾಂತಗಳ ಮಹತ್ವವನ್ನು ವಿಶ್ಲೇಷಣಾತ್ಮಕವಾಗಿ ವಿವರಿಸಿದರು.

ಸೃಷ್ಟಿಯ ನಿಯಮದಲ್ಲಿ ಅಡಗಿರುವ ಸತ್ಯವನ್ನು ಅರಿಯುವ ಮಾರ್ಗವನ್ನು ಮಾನವಕುಲಕ್ಕೆ ತೋರಿಸಿದವರು ಬಸವಣ್ಣನವರು ಎಂದು ಅವರು ಹೇಳಿದರು. ಲಿಂಗಾಯತ ಧರ್ಮವು ಕೇವಲ ಸನ್ಯಾಸಿಗಳಿಗಲ್ಲ, ಸಂಸಾರಿಕರಿಗೂ ಸಮಾನವಾಗಿ ಅನ್ವಯಿಸುವ ಜೀವನ ಮಾರ್ಗವಾಗಿದೆ ಎಂದು ಸ್ಪಷ್ಟಪಡಿಸಿದರು.

ಮಾನವನು ಸತ್ಯದ ಮಾರ್ಗದಲ್ಲಿ ಸಾಗುವಾಗ ಅಷ್ಟಮಧಗಳು, ಅರಿಷಡ್ವರ್ಗಗಳು, ಮಾಯೆ ಹಾಗೂ ತಾಪತ್ರಯಗಳು ಸೇರಿದಂತೆ ಅನೇಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಗುರುವಿನ ಅನುಗ್ರಹ ಪಡೆದು ಆತ್ಮೋನ್ನತಿಯತ್ತ ಸಾಗಬೇಕು ಎಂದು ಶರಣರ ವಚನಗಳನ್ನು ಉಲ್ಲೇಖಿಸಿ ತಿಳಿಸಿದರು.

ಬುದ್ಧನ ಸತ್ಯಾನ್ವೇಷಣೆಯ ಉದಾಹರಣೆಯನ್ನು ನೀಡುತ್ತಾ, ಅನುಭವ ಮಂಟಪವು ಜಗತ್ತಿನ ವಿವಿಧ ಭಾಗಗಳಿಂದ ಬಂದ ಶರಣ-ಶರಣೆಯರ ಆಧ್ಯಾತ್ಮಿಕ ಸಾಧನೆಯ ಕೇಂದ್ರವಾಗಿತ್ತು. ಸತ್ಯದ ಅನ್ವೇಷಣೆಯೇ ಮಾನವ ಜೀವನದ ಪರಮ ಗುರಿ ಎಂದು ಒತ್ತಿ ಹೇಳಿದರು.

ಅಂಬಿಗರ ಚೌಡಯ್ಯ ಹಾಗೂ ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿ, ಮಾನವನು ಭೌತಿಕ ಆಕರ್ಷಣೆಗಳಿಗೆ ಒಳಗಾಗದೆ ಜೀವನದ ಸಾರ್ಥಕತೆಯನ್ನು ಅರಿತುಕೊಳ್ಳಬೇಕು ಮತ್ತು ಕಾಲವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂದೇಶ ನೀಡಿದರು.

ದೇವರು ಸೃಷ್ಟಿಸಿದ ಮೂರು ವಿಧದ ಜೀವಾತ್ಮಗಳ ಕುರಿತು ವಿವರಿಸುತ್ತಾ, ಉರಿಲಿಂಗ ಪೆದ್ದಿ ಎಂಬ ಕಳ್ಳನೊಬ್ಬ ಶರಣ ದಾರ್ಶನಿಕನಾಗಿ ರೂಪಾಂತರಗೊಂಡ ಘಟನೆಯನ್ನು ಉದಾಹರಿಸಿ, ಬಸವತತ್ವದ ಪರಿವರ್ತನಾತ್ಮಕ ಶಕ್ತಿಯನ್ನು ವಿವರಿಸಿದರು.

ಚೆನ್ನಬಸವಣ್ಣ, ಅಲ್ಲಮಪ್ರಭು ಸೇರಿದಂತೆ ಅನೇಕ ಶರಣರ ವಚನಗಳನ್ನು ಉಲ್ಲೇಖಿಸಿ, ಬಸವಣ್ಣನವರು ಲಿಂಗಾಯತ ಧರ್ಮದ ಸ್ಥಾಪಕರಾಗಿದ್ದು, ಲಿಂಗಾಯತರಿಗೆ ತಂದೆಯಾದರೆ, ವಚನ ಸಾಹಿತ್ಯ ತಾಯಿಯಾಗಿದೆ ಎಂದು ಹೇಳಿದರು. ಲಿಂಗಾಯತ ಸಮಾಜವನ್ನು ಒಂದು ಸಜೀವ ವ್ಯವಸ್ಥೆಯಾಗಿ ಪರಿಗಣಿಸಿ, ಅದರ ಕೇಂದ್ರಬಿಂದುವಾಗಿ ಬಸವಣ್ಣನವರ ಪಾತ್ರವನ್ನು ವಿಶ್ಲೇಷಿಸಿದರು.

ಮುಂದುವರೆದು, ಲಿಂಗಾಯತ ಧರ್ಮದ ಮೂಲ ತತ್ವಗಳಿಗೆ ಧಕ್ಕೆ ತರುವ ಪ್ರಯತ್ನಗಳ ಬಗ್ಗೆ ಎಚ್ಚರಿಕೆ ನೀಡಿದ ಅವರು, ಲಿಂಗಾಯತರು ಬಹಳಷ್ಟು ಜಾಗೃತರಾಗಿರಬೇಕು ಎಂದು ಕರೆ ನೀಡಿದರು. ಅನುಭವ ಮಂಟಪದಲ್ಲಿ ಬಸವಾದಿ ಶರಣರು ನೀಡಿದ ಮೌಲ್ಯಗಳು ಮಾನವ ಪರಿಪೂರ್ಣತೆಗೆ ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.

ಸುಮಾರು 770 ಶರಣರು ಸಾಮೂಹಿಕವಾಗಿ ಮುಕ್ತಾತ್ಮರಾಗಿರುವುದು ವಿಶ್ವದಲ್ಲೇ ಅಪೂರ್ವ ಘಟನೆ ಎಂದು ಉಲ್ಲೇಖಿಸಿ, ಬಸವಣ್ಣನವರ ಬಗ್ಗೆ ಗೌರವ ಮತ್ತು ಅರಿವು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಸವ ಜಯಂತಿಯನ್ನು ಕೇವಲ ಆಚರಣೆಯಾಗಿ ಮಾತ್ರವಲ್ಲ, ಅದರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಅವರು ಕರೆ ನೀಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *

ಕಲಬುರ್ಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕಾಯಕ ಮಾಡುತ್ತಾರೆ.