ಸಾಂಗ್ಲಿ (ಮಹಾರಾಷ್ಟ್ರ)
ಜಿಲ್ಲೆಯ ಜತ್ತ ತಾಲೂಕಿನ ಉಮದಿ ಮತ್ತು ಉಟಗಿ ಗ್ರಾಮಗಳಲ್ಲಿ ಭಕ್ತಿ ಭಂಡಾರಿ, ವಿಶ್ವಗುರು ಬಸವಣ್ಣನವರ 893ನೇ ಬಸವ ಜಯಂತಿಯನ್ನು ಗ್ರಾಮದ ಜನರು ಒಗ್ಗೂಡಿ ಅರ್ಥಪೂರ್ಣವಾಗಿ ಆಚರಿಸಿದರು.
ಉಮದಿ :
ಊರಲ್ಲಿ 19ರಂದು ನಡುಗಟ್ಟೆ ಬಸವೇಶ್ವರ ಮಂದಿರ ಸಮಿತಿ ವತಿಯಿಂದ, ಬಸವೇಶ್ವರ ನಡುಗಟ್ಟೆ ಮುಂದೆ ಐದು ದಿನಗಳ ಕಾಲ ಬಸವ ಚರಿತಾಮೃತ ಪ್ರವಚನವನ್ನು ಬೀದರ, ಬಸವಕಲ್ಯಾಣ ಗುಣತೀರ್ಥವಾಡಿಯ ಪೂಜ್ಯ ಸದ್ಗುರು ಬಸವಪ್ರಭು ಸ್ವಾಮೀಜಿಯವರು ನಡೆಸಿಕೊಟ್ಟರು.

ಗುರು ಬಸವಣ್ಣನವರ ಸಮಗ್ರ ಜೀವನ ಚರಿತ್ರೆ ಜೊತೆಗೆ ಅವರು ಬರೆದ ವಚನಗಳಲ್ಲಿ ಅಡಗಿದ ಮಾನವೀಯ ಮೌಲ್ಯದ ಕುರಿತು ಮನಮುಟ್ಟುವಂತೆ ತಿಳಿಸಿದರು.
ಅಲ್ಲದೆ, ಲಿಂಗ, ವಿಭೂತಿ, ರುದ್ರಾಕ್ಷಿ, ವಚನ ಪುಸ್ತಕದ ದಾಸೋಹ ಮಾಡಿದದರು. ಬೆಳಿಗ್ಗೆ ಸಾಮೂಹಿಕ ಇಷ್ಟಲಿಂಗ ಪೂಜೆ, ಬಸವೇಶ್ವರ ಪೂಜಾವೃತ, ತೊಟ್ಟಿಲು ಕಾರ್ಯಕ್ರಮ ನೆರವೇರಿತು. ಸಂಜೆ ಗುರು ಬಸವಣ್ಣನವರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಚಿದಾನಂದ ಸಾವಕಾರ, ಶಿವಾನಂದ ಪಟ್ಟಣಶೆಟ್ಟಿ, ಅಮಗೊಂಡ ಪಾಟೀಲ, ಎಂ.ಎಂ. ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮುತ್ತುರಾಜ, ಅಕ್ಕನ ಬಳಗದ ದಾನಮ್ಮ ಹನ್ನೂರು, ರಾಜೇಶ್ವರಿ, ಸವಿತಾ ಮತ್ತಿತರರು ಉಪಸ್ಥಿತರಿದ್ದರು.
ಉಟಗಿ :
ಗ್ರಾಮದಲ್ಲಿ 20ರಂದು ಬಸವೇಶ್ವರ ಜಯಂತ್ಯೋತ್ಸವ ಸಮಿತಿ ವತಿಯಿಂದ ಪೂಜ್ಯ ಸದ್ಗುರು ಬಸವಪ್ರಭು ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಷಟಸ್ಥಲ ಧ್ವಜಾರೋಹಣ, ತೊಟ್ಟಿಲು ಕಾರ್ಯಕ್ರಮ, ಉಪನ್ಯಾಸ, ಮೆರವಣಿಗೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ಪೂಜ್ಯ ಬಸವಪ್ರಭು ಸ್ವಾಮೀಜಿಯವರು ಈ ಸಂದರ್ಭದಲ್ಲಿ ಮಾತನಾಡಿ, ಗುರು ಬಸವಣ್ಣನವರು ಅನುಭವ ಮಂಟಪ ಕಟ್ಟುವುದರ ಮೂಲಕ ಸಮಾಜೋ-ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಂಡು ಆ ಮೂಲಕ ಅನೇಕ ಮೂಢನಂಬಿಕೆ, ಅಂಧಶ್ರದ್ಧೆ, ಜಾತಿಯತೆಯನ್ನು ನಿರ್ಮೂಲನೆ ಮಾಡಿದ್ದರು.
ಇಂದು ನಾವೆಲ್ಲ ಗುರು ಬಸವಣ್ಣನವರ ತತ್ವಗಳನ್ನು ಆಚರಣೆಗೆ ತಂದರೆ ಮಾನಸಿಕ ನೆಮ್ಮದಿ, ಸಾಮಾಜಿಕ ಸಾಮರಸ್ಯ ತರಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಷಟಸ್ಥಲ ಧ್ವಜಾರೋಹಣವನ್ನು ಸೋಮಶೇಖರ್ ಮಠಪತಿ ನೆರವೇರಿಸಿದರು, ದಾನಪ್ಪ ಪಟ್ಟಣಶೆಟ್ಟಿ, ಎಂ. ಎಂ. ಪಾಟೀಲ, ಮಹಾಂತೇಶ, ಅರವಿಂದ, ಬಾಬುಗೌಡ ಭಾಲ್ಕಿ ಇನ್ನಿತರ ಗ್ರಾಮದ ಮುಖ್ಯಸ್ಥರು, ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಬಿಜಾಪೂರ ಜಿಲ್ಲೆ ಗಡಿಯಲ್ಲಿರುವ ಚಡಚಣ ಪಟ್ಟಣದಲ್ಲಿ ಸಹ ಬಸವ ಜಯಂತಿ ಆಚರಣೆ ನಡೆಯಿತು.
