ಕಲಬುರಗಿಯಲ್ಲಿ ಬಸವಾದಿ ಶರಣರ ಅದ್ಧೂರಿ ಸಾಂಸ್ಕೃತಿಕ ಮೆರವಣಿಗೆ

ಕಲಬುರಗಿ:

ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವೇಶ್ವರ ಅವರ ಜಯಂತ್ಯುತ್ಸವದ ಅಂಗವಾಗಿ ನಗರದಲ್ಲಿ ಸೋಮವಾರ ಬಸವಣ್ಣನವರ ಹಾಗೂ ಕಾಯಕ ಶರಣರ ಭಾವಚಿತ್ರಗಳ ಅದ್ಧೂರಿ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.

ನಗರೇಶ್ವರ ಶಾಲೆಯ ಆವರಣದಲ್ಲಿ ಮೆರವಣಿಗೆ ಆರಂಭಗೊಂಡು, ಅಲ್ಲಿಂದ ಹೊರಟು ನಗರದ ಪ್ರಮುಖ ವ್ಯಾಪಾರ ಕೇಂದ್ರಗಳಾದ ಹುಮನಾಬಾದ್ ಬೇಸ್, ಸೂಪರ್ ಮಾರ್ಕೆಟ್, ಸಿಟಿ ಸೆಂಟ್ರಲ್ ಮಾಲ್ ಮೂಲಕ ಹಾದು ಅಂತಿಮವಾಗಿ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿ ಇರುವ ಸ್ಥಳ ತಲುಪಿತು.

ಮೆರವಣಿಗೆಯ ಮಾರ್ಗದುದ್ದಕ್ಕೂ ಸಾಲು ಸಾಲಾಗಿ ನಿಂತಿದ್ದ ಜನರು ಬಸವಣ್ಣನವರ ಸ್ತಬ್ಧಚಿತ್ರಕ್ಕೆ ಹೂಮಳೆಗೈದರು, ಜಯಘೋಷ ಗಳನ್ನು ಹಾಕಿದರು.

ಮೆರವಣಿಗೆಯಲ್ಲಿ ಬಸವಣ್ಣನವರ ಮೂರ್ತಿ, ನುಲಿಯ ಚಂದಯ್ಯ, ಅಕ್ಕಮಹಾದೇವಿ, ಡೋಹರ ಕಕ್ಕಯ್ಯ, ಜೇಡರ ದಾಸಿಮಯ್ಯ, ಮಾದರ ಚನ್ನಯ್ಯ, ಅಂಬಿಗರ ಚೌಡಯ್ಯ, ಮೇದಾರ ಕೇತಯ್ಯನವರು, ಸೇರಿದಂತೆ ಅನೇಕ ಶರಣರ ಭಾವಚಿತ್ರಗಳಿದ್ದು ಎಲ್ಲರ ಗಮನ ಸೆಳೆದವು.

ಆಕರ್ಷಕ ಸಾಂಸ್ಕೃತಿಕ ಕಲಾ ತಂಡಗಳು:

ಮೆರವಣಿಗೆಗೆ ಸಾಂಸ್ಕೃತಿಕ ಕಳೆ ನೀಡಲು ನಾಡಿನ ಅನೇಕ ಕಡೆಗಳಿಂದ ಆಗಮಿಸಿದ್ದ ಜಾನಪದ ಕಲಾ ತಂಡಗಳು ಜನರ ಗಮನ ಸೆಳೆದವು. ರಾಮನಗರದ ಪೂಜಾ ಕುಣಿತ ಹಾಗೂ ಬಳ್ಳಾರಿಯ ಕಹಳೆ ವಾದನ, ಕಲಬುರಗಿ ಜಿಲ್ಲೆಯ ಶ್ರೀಚಂದ ಗ್ರಾಮದ ಕಲಾವಿದರ ಡೊಳ್ಳು ಕುಣಿತ, ಹಲಗೆ ವಾದನ, ಲೇಜಿಮು, ಲಂಬಾಣಿ ನೃತ್ಯ ಹಾಗೂ ಶಹನಾಯಿ ಮೇಳಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು, ಎಲ್ಲರ ಗಮನ ಸೆಳೆದವು.

ನೂರಾರು ಮಹಿಳೆಯರು ಕಳಸ ಹೊತ್ತು ಶಿಸ್ತುಬದ್ದವಾಗಿ ಹೆಜ್ಜೆ ಹಾಕಿದರು. ಯುವಜನತೆ ಡಿಜೆ ಗೀತೆಗಳ ಸದ್ದಿಗೆ ನೃತ್ಯ ಮಾಡುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.

ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರು ಮೆರವಣಿಗೆಗೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಹಾಗೂ ಮೆರವಣಿಗೆಯುದ್ದಕ್ಕೂ ಸಚಿವ ಶರಣಬಸಪ್ಪ ದರ್ಶನಾಪುರ, ಉತ್ಸವ ಸಮಿತಿ ಅಧ್ಯಕ್ಷ ಬಿ.ಆರ್. ಪಾಟೀಲ, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂ‌ರ್, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕೆಎಂಎಫ್ ಅಧ್ಯಕ್ಷ ಆ‌ರ್.ಕೆ. ಪಾಟೀಲ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಕುಮಾ‌ರ ಮೋದಿ ಇದ್ದರು.

ಮುಖಂಡರಾದ ಅಮರನಾಥ ಪಾಟೀಲ, ಭೀಮಾಶಂಕರ ಬಿಲಗುಂದಿ, ಸೋಮಶೇಖರ ಗೋನಾಯಕ, ಅರುಣಕುಮಾರ ಪಾಟೀಲ ಕೊಡಲಹಂಗಾರಗಾ, ಶಿವಕಾಂತ ಮಹಾಜನ, ನಳಿನಿ ಮಹಾಗಾಂವ್ಕರ, ರವೀಂದ್ರ ಶಾಬಾದಿ, ಜಾಗತಿಕ ಲಿಂಗಾಯತ ಮಹಾಸಭಾದ ಆರ್.ಜಿ. ಶೆಟಗಾರ, ಜಗನಾಥ ಶೇಗಜಿ, ಡಾ. ಸುಧಾ ಹಾಲಕಾಯಿ, ಗೌರಿ ಚಿಚಕೋಟಿ, ಲಿಂಗರಾಜ ಕಣ್ಣಿ, ಶರಣು ಭೂಸನೂರ ಸೇರಿದಂತೆ ಸಾವಿರಾರು ಬಸವಾನುಯಾಯಿಗಳು, ಬಸವಭಕ್ತರು ಪಾಲ್ಗೊಂಡಿದ್ದರು.

ಬಸವ ಜಯಂತಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಬಿ.ಜಿ. ಪಾಟೀಲ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಬಸವೇಶ್ವರ ಪುತ್ಥಳಿಗೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಿಸಿದರು. ಬೆಳಿಗ್ಗೆ ಜಿಲ್ಲಾಡಳಿತದಿಂದ ಬಸವೇಶ್ವರ ವೃತ್ತದಲ್ಲಿ ಜಯಂತಿ ಆಚರಣೆ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *