ಬಸವ ಜಯಂತಿ ಆಚರಣೆ
ಕಲಬುರಗಿ :
ತಳವರ್ಗದವರಿಗೆ, ದಲಿತರಿಗೆ, ಶೋಷಿತರಿಗೆ, ಮಹಿಳೆಯರಿಗೆ ಸಮಾನತೆ ದೊರಕಿಸಿಕೊಟ್ಟಂತಹ ಮಹಾನಾಯಕ. ವರ್ಗರಹಿತ, ವರ್ಣರಹಿತ ಸಮಸಮಾಜಕ್ಕಾಗಿ ಹೋರಾಡಿದ, ಗುಡಿ ಗುಂಡಾರಗಳನ್ನ ತ್ಯಜಿಸಿ ದೇಹವೇ ದೇಗುಲ ಎಂದು ಹೇಳಿ ಸಮಾಜದಲ್ಲಿನ ಮೌಢ್ಯತೆಗಳನ್ನು ಅಂಧಶ್ರದ್ಧೆಗಳನ್ನು ಹೋಗಲಾಡಿಸಿದ ವಿಶ್ವದ ದಾರ್ಶನಿಕ ಅವರೇ ಮಹಾತ್ಮ ಜಗಜ್ಯೋತಿ ಬಸವೇಶ್ವರರು.
ಅವರ ತತ್ವಗಳನ್ನು ಬರೀ ಭಾಷಣದಲ್ಲಿ ಹೇಳಿ ಪುಸ್ತಕಗಳಲ್ಲಿ ಇಟ್ಟು ಇಡುವುದಕ್ಕಿಂತ ನಮ್ಮ ನಡೆಯಲ್ಲಿ ಅಳವಡಿಸಿಕೊಂಡರೆ ಅದ್ಭುತ ಸಮಾಜವನ್ನು ಕಟ್ಟಬಹುದು ಎಂದು ಮಾಜಿ ಕಾರ್ಮಿಕ ಸಚಿವರಾದ ಎಸ್.ಕೆ.ಕಾಂತಾ ಅವರು ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ ಮಾಕಾ ಲೇಔಟ್, ಜೇವರ್ಗಿ ಕಾಲೋನಿ ಆಯೋಜಿಸಿರುವ 893ನೆಯ ಬಸವ ಜಯಂತಿ ಉತ್ಸವದ ನಿಮಿತ್ತ ಆಯೋಜಿಸಿರುವ ಬಸವ ತತ್ವ ದರ್ಶನ ಪ್ರವಚನದ ಸಮಾರೋಪ ಸಮಾರಂಭ ಮತ್ತು ಬಸವ ಜಯಂತಿ ಉತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ವಿಶ್ವಕ್ಕೆ ಪ್ರಪ್ರಥಮ ಅನುಭವ ಮಂಟಪವನ್ನು ಕೊಟ್ಟಂತಹ ನಾಯಕ. ಕಾಯಕವೇ ಕೈಲಾಸ ಎಂದು ನುಡಿದು ಕಾಯಕದ ಮಹತ್ವವನ್ನು ತಿಳಿಸಿದ ಮತ್ತು ಎಲ್ಲಾ ತಳವರ್ಗದ ಶರಣರನ್ನು ಸಂಘಟಿಸಿ ಸಮಾನತೆಗಾಗಿ ಹೋರಾಡಿದ ನಾಯಕ ಮಹಾತ್ಮ ಬಸವೇಶ್ವರರು ಎಂದು ವಿಧಾನ ಪರಿಷತ್ ಸದಸ್ಯರಾದ ಸಚಿನ್ ಜಿ.ನಮೋಶಿಯವರು ಅತಿಥಿಗಳಾಗಿ ಮಾತನಾಡಿದರು.
ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಬಸವತತ್ವ ದರ್ಶನದಂತಹ ಪ್ರವಚನ ಕಾರ್ಯಕ್ರಮವನ್ನು ಹಾಕಿಕೊಂಡು ಜನರಿಗೆ ಬಸವ ಚಿಂತನೆಗಳ ತತ್ವಗಳನ್ನು ತಿಳಿಸಿಕೊಟ್ಟಂತಹ ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿಗೆ ಅಭಿನಂದನೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ 893 ನೆಯ ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಬಾಬುರಾವ ಸೇರಿಕಾರ ಅವರು ಅಧ್ಯಕ್ಷ ಭಾಷಣದಲ್ಲಿ 12 ದಿನಗಳ ಪರ್ಯಂತ ಬಸವತತ್ವದ ಚಿಂತನೆಗಳನ್ನು, ಬಸವತತ್ವದ ಅನೇಕ ವಿಷಯಗಳನ್ನು, 12ನೇ ಶತಮಾನದ ಅನುಭವ ಮಂಟಪವನ್ನೇ ಕಲಬುರ್ಗಿಗೆ ತಂದುಕೊಟ್ಟಂತೆ ಬಸವೇಶ್ವರಿ ಮಾತಾಜಿ ಅವರು ಹೇಳಿಕೊಟ್ಟಿದ್ದಕ್ಕಾಗಿ ಹೃತ್ಪೂರ್ವಕವಾದಂತಹ ಧನ್ಯವಾದಗಳು. ಈ ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಸಮಿತಿಯ ಪದಾಧಿಕಾರಿಗಳಿಗೆ ವಿಶೇಷವಾಗಿ ಮಹಿಳಾ ಘಟಕದ ಸದಸ್ಯರಿಗೆ ಧನ್ಯವಾದಗಳು ಅರ್ಪಿಸಿದರು.
ಪರಮೇಶ್ವರ ಶಟಕಾರ ಸ್ವಾಗತಿಸಿದರು. ಶಿವಾನಂದ ದೊಮ್ಮನಾಳ ವಂದನಾರ್ಪಣೆ ಮಾಡಿದರು. ನಾಗರಾಜ ಕಾಮಾ ನಿರೂಪಿಸಿದರು. ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಅಯ್ಯಣ್ಣ ನಂದಿ ಪ್ರಾಸ್ತಾವಿಕ ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಅತ್ತಿವೇರಿ ಬಸವಧಾಮದ ಪೂಜ್ಯ ಬಸವೇಶ್ವರಿ ಮಾತಾಜಿ ಆಶೀರ್ವಚನ ನೀಡಿದರು.
893ನೇ ಬಸವ ಜಯಂತಿ ಪ್ರಯುಕ್ತ ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿಯು ಹಮ್ಮಿಕೊಂಡಂತ ವಿವಿಧ ಆಟಗಳಲ್ಲಿ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಮಹಿಳೆಯರಿಗೆ, ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅದೇ ರೀತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಂತಹ ಸೂರ್ಯಕಾಂತ ಡುಮ್ಮ ಅವರಿಗೂ ಮತ್ತು ಪ್ರವಚನ ನಡೆಸಿಕೊಟ್ಟಂತಹ ಪೂಜ್ಯ ಬಸವೇಶ್ವರ ಮಾತಾಜಿ ಅವರಿಗೂ ಸನ್ಮಾನ ಮಾಡಲಾಯಿತು.
20 ಏಪ್ರಿಲ್ ಬೆಳಗ್ಗೆ 7:30ಕ್ಕೆ ಬಸವ ತೊಟ್ಟಿಲು ಕಾರ್ಯಕ್ರಮವನ್ನು ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ ಮಹಿಳಾ ಘಟಕದಿಂದ ನೆರವೇರಿಸಲಾಯಿತು. ಇದರ ನೇತೃತ್ವವನ್ನು ಶರಣೆ ಹೀರಾಬಾಯಿ ಎಸ್. ಬಳಗಾನೂರ, ಷಟಸ್ಥಲ ಧ್ವಜಾರೋಹಣವನ್ನು ಉದ್ದಿಮೆದಾರ ಮೋಹನ ಯಾನಗುಂದಿ ನಡೆಸಿದರು.
ಜಯಂತಿ ಅಂಗವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಉದ್ಘಾಟನೆಯನ್ನು ಪ್ರವೀಣ ಪಾಟೀಲ, ಹರವಾಳ ಅಧ್ಯಕ್ಷರು ಜೆಸ್ಕಾಂ ಕಲಬುರ್ಗಿ ನೆರವೇರಿಸಿದರು. ಅತಿಥಿಗಳಾಗಿ, ನಿಖಿಲ ಹರವಾಳ್ ಆಗಮಿಸಿದ್ದರು.
ಮಹಿಳೆಯರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಶಿಬಿರದ ಉದ್ಘಾಟನೆಯನ್ನು ಮಾಜಿ ಮಹಾಪೌರರಾದ ಎಲ್ಲಪ್ಪ ನಾಯ್ಕೋಡಿ ಅವರು ನೆರವೇರಿಸಿದರು. ಅತಿಥಿಗಳಾಗಿ ಡಾ. ಪೂಜಾ ಎಸ್. ಕಲಬುರ್ಗಿ ಸ್ತ್ರೀರೋಗ ತಜ್ಞರು ಆಗಮಿಸಿದ್ದರು.

ಬಸವ ಜಯಂತಿ ಉತ್ಸವ ಸಮಿತಿ ಗೌರವಾಧ್ಯಕ್ಷ ಡಾ. ರವೀಂದ್ರ ಮಾಲಿಪಾಟೀಲ, ಉಪಾಧ್ಯಕ್ಷರಾದ ಆದಪ್ಪ ಬಗಲಿ, ಕೋಶಾಧ್ಯಕ್ಷರಾದ ರಾಜೇಶ್ವರಿ ಜಲದೇ, ಮಹಿಳಾ ಪ್ರತಿನಿಧಿ ಸುಜಾತರೆಡ್ಡಿ ಗೌರವ ಉಪಸ್ಥಿತರಿದ್ದರು.
ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷರಾದ ಅಯ್ಯಣ್ಣ ನಂದಿ, ಉಪಾಧ್ಯಕ್ಷರಾದ ಶಿವಕುಮಾರ ಧರ್ಮಗೊಂಡ, ಕಾರ್ಯದರ್ಶಿ ಡಾ. ಸಂಜೀವ ಶಟಕಾರ, ಸಂಘಟನಾ ಕಾರ್ಯದರ್ಶಿ ನಾಗರಾಜ ಕಾಮಾ, ಕೋಶಧ್ಯಕ್ಷ ಸಿದ್ದರಾಮ ವಾಲಿ, ಸದಸ್ಯ ಸತೀಶ ಸಜ್ಜನ, ರಾಜು ಸಿನ್ನೂರ, ಮಲ್ಲಿಕಾರ್ಜುನ ಜಾಮಗೊಂಡ, ಹನುಮಂತರಾಯ ಐನೊಳಿ, ಧರ್ಮರಾಜ ಹೇರೂರು, ಸಂಗಮೇಶ ಮುಲ್ಗೆ ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M
