ನೆಲಮಂಗಲ
ಹನ್ನೆರಡನೆಯ ಶತಮಾನದಲ್ಲಿ ಉದಯವಾದ ವಚನಗಳ ಉಳಿವಿಗಾಗಿ ಶ್ರೀ ಸಿದ್ದಲಿಂಗ ಸ್ವಾಮೀಜಿ ದೊಡ್ಡ ಕ್ರಾಂತಿಯನ್ನೇ ಆರಂಭಿಸಿದ್ದಾರೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಸ್ರೋ ವಿಶ್ರಾಂತ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ತಿಳಿಸಿದರು.
ನಗರದ ಬಸವಣ್ಣದೇವರ ಮಠದ ಆವರಣದಲ್ಲಿ ನಡೆದ ಬಸವ ಜಯಂತಿ ಉತ್ಸವ ಹಾಗೂ ಪವಾಡ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ದೇಶಿಸಿ ಮಾತನಾಡಿದರು.


ಭೂಮಿ ಬಿಟ್ಟು ಚಂದ್ರನ ಅಂಗಳಕ್ಕೆ ಹೋಗುವ ಕಾಲ ಬಂದರೂ ಬಸವಣ್ಣನವರ ವಿಚಾರಗಳು ಪ್ರಸ್ತುತ ಬೇಕಾಗಿರುವ ಅನಿವಾರ್ಯತೆ ಇದೆ. ಬಸವಣ್ಣನವರು ಯಾವ ರೀತಿ ಹರಳಯ್ಯ, ಮಾದರ ಚನ್ನಯ್ಯ, ಡೋಹರ ಕಕ್ಕಯ್ಯರನ್ನು ಅಪ್ಪಿಕೊಂಡರೋ ಅದೇ ರೀತಿ ಸಮಾಜದಲ್ಲಿ ಶೋಷಣೆಗೆ ಒಳಗಾದವರನ್ನು ನಾವು ಅಪ್ಪಿಕೊಳ್ಳಬೇಕು ಎಂದು ಹೇಳಿದರು.


ಶ್ರೀ ಮಠ ನೀಡುವ 2026ರ ಪವಾಡ ಶ್ರೀ ಪ್ರಶಸ್ತಿಯನ್ನು ಡಾ. ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ಪ್ರದಾನಿಸಿ ಅಭಿನಂದಿಸಿದರು.
ಪ್ರಶಸ್ತಿ ಪಡೆದ ಡಾ.ವಿಜಯಲಕ್ಷ್ಮೀ ದೇಶಮಾನೆ ಮಾತನಾಡಿ, ಬಸವಣ್ಣದೇವರ ಮಠದ ಸಮಾರಂಭ ಮಾದರಿಯಾಗಿದೆ. ಬಸವಣ್ಣನವರ ಆದರ್ಶದಲ್ಲಿ ಬದುಕಿದ ನನಗೆ ಪವಾಡ ಶ್ರೀ ಪ್ರಶಸ್ತಿ ಸಿಕ್ಕಿರುವುದು ಸಂತೋಷವಾಗಿದೆ ಎಂದರು.
ಬಸವಣ್ಣನವರ ಸಂದೇಶಗಳನ್ನು ಜಗತ್ತಿಗೆ ತಿಳಿಸುತ್ತಿರುವುದು ಸಂತೋಷವಾಗಿದೆ. ಮಠಕ್ಕೆ ಕ್ಷೇತ್ರದ ಶಾಸಕನಾಗಿ ಅಲ್ಲ ಭಕ್ತನಾಗಿ ಸೇವೆ ಸಲ್ಲಿಸಲು ಸದಾ ಸಿದ್ಧನಿದ್ದೇನೆ, ಎಂದು ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಹೇಳಿದರು.
ರಥೋತ್ಸವ
ಕ್ಷೇತ್ರಾಧಿಪತಿ ಶ್ರೀ ಪವಾಡ ಬಸವಣ್ಣದೇವರ ರಥೋತ್ಸವವನ್ನು 10ಕ್ಕೂ ಹೆಚ್ಚು ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆಸಲಾಯಿತು. ರಥೋತ್ಸವಕ್ಕೆ ವೀರ ಗಾಸೆ, ಗೊಂಬೆಕುಣಿತ, ಕೇರಳ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಮೆರುಗು ತಂದವು. ಸಾವಿರಾರು ಭಕ್ತರು ಭಾಗವಹಿಸಿದ್ದರು.


ಬಸವಣ್ಣನವರ ಜಯಂತಿಯಲ್ಲಿ ಬಸವ ವಚನಾಮೃತ ಕೃತಿ, ಅಕ್ಕನ ವಚನಾಮೃತ ಕೃತಿ, ಬೆನಿಫಿಷಿಯಲ್ ಬೀಡ್ಸ್, ಶಿವಾಷ್ಟೋತ್ತರತವನಿಧಿ ಕೃತಿ, ಬಾಲಚಂದ್ರ ರಚಿತ ಯುಗಾವತಾರಿಯ ಅಮರ ಸಂದೇಶಗಳು ಕೃತಿ ಹಾಗೂ ದೇವಮಾನವನ ದಿವ್ಯ ಸಂದೇಶಗಳು ಎಂಬ ಕೃತಿಗಳನ್ನು ವಿವಿಧ ಗಣ್ಯರು, ಶ್ರೀಗಳು ಲೋಕಾರ್ಪಣೆ ಗೊಳಿಸಿದರು.

ಶಿವಸಂಚಾರ ನಾಟಕೋತ್ಸವ
ಬಸವಣ್ಣದೇವರ ಮಠದಲ್ಲಿ ಏ.18ರಿಂದ ಶಿವಯೋಗಿ ಸಿದ್ದರಾಮೇಶ್ವರ, ಕಳ್ಳರ ಸಂತೆ, ಜಂಗಮದೆಡೆಗೆ ఎంబ ಮೂರು ನಾಟಕಗಳನ್ನು ಶಿವಸಂಚಾರ ನಾಟಕೋತ್ಸವದ ಮೂಲಕ ಪ್ರಸ್ತುತ ಪಡಿಸಲಾಗಿದ್ದು ಸಾವಿರಾರು ಕಲಾವಿದರು, ಭಕ್ತರು ವೀಕ್ಷಣೆ ಮಾಡಿದ್ದಾರೆ.

ಬೆಂಗಳೂರಿನ ನೆಲಮಂಗಲದಲ್ಲಿ ಈ ರೀತಿ ವಚನಗಳ ಪ್ರಸಾರ, ಪ್ರೋತ್ಸಾಹ ನಡೆದಿರುವ ಈ ಮಠವೀಗ ರಾಜ್ಯ ದೆಲ್ಲೆಯ ಬಸವ ಅನುಯಾಯಿಗಳ ಗಮನ ಸೆಳೆದಿದೆ, ಪೂಜ್ಯರಿಗೆ ಶರಣು ಶರಣಾರ್ಥಿಗಳು