ಅರಿವಿನ ಮನೆಯ ಗುರುಬಸವ ದೇವರು ಲಿಂಗೈಕ್ಯ, ಇಂದು ಸಂಜೆ ಅಂತ್ಯಕ್ರಿಯೆ

ದೇವದುರ್ಗ:

ಇಲ್ಲಿನ ಅರಿವಿನ ಮನೆಯ ಪೂಜ್ಯ ಗುರುಬಸವ ದೇವರು (43) ಬುಧವಾರ ಸಂಜೆ ಲಿಂಗೈಕ್ಯರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದ ಕಾರಣ ರಾಯಚೂರಿನ ಬೆಟ್ಟದೂರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಪೂಜ್ಯರು ರಾಯಚೂರು ತಾಲ್ಲೂಕಿನ ರಂಗಾಪುರ ಎಂಬ ಪುಟ್ಟ ಹಳ್ಳಿಯ ವಾಲ್ಮೀಕಿ ಸಮಾಜ ಮನೆತನದಲ್ಲಿ ಜನಿಸಿದ್ದರು. ಯರಮರಸ ಗ್ರಾಮದ ಆಧ್ಯಾತ್ಮಜೀವಿ ವೀರಭದ್ರಯ್ಯ ತಾತನವರ ಪ್ರಭಾವಕ್ಕೆ ಒಳಗಾಗಿ ಬಸವತತ್ವದತ್ತ ವಾಲಿದ್ದರು.

ಮುಂದೆ ವಟಗಲ್ ಗ್ರಾಮದಲ್ಲಿ ಬಂದು ನೆಲೆಸುತ್ತಾರೆ. ವಟಗಲ್ ಬಸನಗೌಡ, ವೀರಭದ್ರಪ್ಪ ಕುರಕುಂದ, ಚಿಲ್ಕರಾಗಿ ತಿಮ್ಮನಗೌಡ, ಪಿ. ರುದ್ರಪ್ಪ ಮುಂತಾದ ಬಸವತತ್ವದ ಮಹನೀಯರ ಸಂಪರ್ಕಕ್ಕೆ ಬಂದು, ಇವರೆಲ್ಲರ ನಿರ್ದೇಶನದ ಮೇರೆಗೆ ಚಿತ್ರದುರ್ಗ ಮುರುಘಾ ಮಠದಲ್ಲಿ ಸಾಧಕ, ಬೋಧಕ, ಪ್ರಚಾರಕ ಪದವಿಗಳನ್ನು ಸ್ವಾಮೀಜಿ ಪೂರೈಸಿಕೊಂಡರು.

ಲಿಂಗೈಕ್ಯ ಪೂಜ್ಯರು ಬಸವತತ್ವದ ಮೂಲ ಕಾರ್ಯಗಳನ್ನು ಮಾಡುವ ಮೂಲಕ ಕಾಡಲೂರು ಹರಿಜನ ಓಣಿಯ ಎಲ್ಲರನ್ನು ಲಿಂಗವಂತರನ್ನಾಗಿ ಪರಿವರ್ತಿಸಿದರು. ಅವರಿಗೆ ಕಾಯಕದ ಮಹತ್ವ, ಜೀವನ ಮೌಲ್ಯಗಳನ್ನು ಹೇಳಿಕೊಡುವ ಮೂಲಕ ಉತ್ತಮ ಬದುಕಿನ ದಾರಿ ತೋರಿದರು.

ನಂತರ ದೇವದುರ್ಗದಲ್ಲಿ “ಅರಿವಿನ ಮನೆ” ಹೆಸರಿನಲ್ಲಿ ಪ್ರಧಾನ ಕಚೇರಿ ಆರಂಭಿಸಿ, ಆ ಭಾಗದಲ್ಲಿ ಬಹುದೊಡ್ಡ ಸಾಮಾಜಿಕ ಬದಲಾವಣೆ ತಂದರು. ಕಾಡಲೂರು, ಗಣಜಲಿ, ರಾಮನಾಳ, ವಟಗಲ್ ಗ್ರಾಮಗಳಲ್ಲಿ ಅರಿವಿನ ಮನೆಗಳನ್ನು ಆರಂಭ ಮಾಡಿದರು. ಅಲ್ಲಿನ ಶ್ರಮಿಕ ವರ್ಗದ ಜನರನ್ನು ಸಾಮಾಜಿಕವಾಗಿ, ವೈಚಾರಿಕವಾಗಿ ಮೇಲೆತ್ತುವ ಕೆಲಸ ಆ ಮೂಲಕ ಮಾಡಿದರು. ಈ ಎಲ್ಲ ಗ್ರಾಮಗಳಲ್ಲಿ ಪ್ರತಿ ರವಿವಾರ ಮಹಾಂತ ಜೋಳಿಗೆ ಮೂಲಕ ದುಶ್ಚಟ ಬಿಡಿಸುವ ಕೆಲಸ ಮಾಡಿ ಯುವಕರ ಬಾಳಿಗೆ ಬೆಳಕಾಗಿದ್ದರು.

ಪೂಜ್ಯರು ರಾಮನಾಳ ಗ್ರಾಮದಲ್ಲಿದ್ದಾಗ ಯಾವುದೋ ಕಾರಣಕ್ಕೆ ಪಕ್ಕದ ಗ್ರಾಮದವರಿಗೂ ರಾಮನಾಳ ಗ್ರಾಮದವರಿಗೂ ಭಾರಿ ಜಗಳ ನಡೆದಿತ್ತು. ಆ ಸಂದರ್ಭದಲ್ಲಿ ಪೂಜ್ಯರು ದಾರಿಗೆ ಅಡ್ಡನಿಂತು ನನ್ನ ಸಾಯಿಸಿ ನೀವು ಜಗಳ ಮಾಡಿ ಎಂದು ಪಟ್ಟು ಹಿಡಿದರು. ಪೂಜ್ಯರು ಎರಡು ಗ್ರಾಮದವರನ್ನು ಮನವೊಲಿಸಿ ಶಾಂತಗೊಳಿಸಿದ್ದು ಜಿಲ್ಲೆಯಲ್ಲಿಯೇ ಎಲ್ಲರ ಮೆಚ್ಚುಗೆ ಗಳಿಸಿತು. ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ವಾಮೀಜಿ ಅವರನ್ನು ಸನ್ಮಾನ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದನ್ನು ಇಂದು ಜನ ಸ್ಮರಿಸುತ್ತಿದ್ದಾರೆ.

ಪೂಜ್ಯರು ಚಿಕ್ಕವಯಸ್ಸಿನವರಾಗಿದ್ದರೂ ಬಸವತತ್ವ ತಿಳಿದಿದ್ದರು. ಹರಿಜನ ಗಿರಿಜನರಿಗೆ ಲಿಂಗಧಾರಣೆ ಮಾಡಿ ಪ್ರತಿವರ್ಷ ಬಸವ ಜಯಂತಿಯಂದು ಸಾಮೂಹಿಕ ಕಲ್ಯಾಣ ಮಹೋತ್ಸವ ಮಾಡುತ್ತ ಬಂದಿದ್ದರು.

ಲಿಂಗೈಕ್ಯ ಪೂಜ್ಯರ ಅಂತಿಮ ವಿಧಿವಿಧಾನಗಳು ಲಿಂಗಾಯತ ಧರ್ಮ ಪದ್ಧತಿಯಂತೆ ದೇವದುರ್ಗದ ಅರಿವಿನ ಮನೆಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ನಡೆಯಲಿದೆ.

ಪೂಜ್ಯರ ಅಗಲಿಕೆಯಿಂದ ಬಸವ ಭಕ್ತರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *