ಬಸವಣ್ಣ ತೋರಿದ ದಾರಿ ಬಿಟ್ಟು ಮತ್ತೆ ವೈದಿಕ ದಾರಿ ಹಿಡಿಯಬೇಡಿ: ಬಿ.ಆರ್. ಪಾಟೀಲ

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರಗಿ:

ನಾವು ಬಸವಣ್ಣ ತೋರಿರುವ ದಾರಿಯಿಂದ ಹಿಂದೆ ಸರಿದು ಮತ್ತೆ ವೈದಿಕ ವ್ಯವಸ್ಥೆಯತ್ತ ಮುಖ ಮಾಡುತ್ತಿದ್ದೇವೆ, ಎಂದು 893ನೇ ಜಿಲ್ಲಾ ಬಸವ ಣ್ಣನವರ ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಬಿ.ಆರ್. ಪಾಟೀಲ ಕಳವಳ ವ್ಯಕ್ತಪಡಿಸಿದರು.

ಲಿಂಗಾಯತರು ಮತ್ತು ವೀರಶೈವರು ತಮ್ಮದೇ ಆದ ಪದ್ಧತಿ, ಪರಂಪರೆಗಳನ್ನು ಉಳಿಸಿಕೊಳ್ಳಬೇಕು. ಬಸವಾದಿ ಶರಣರ ವಚನ ಸಾಹಿತ್ಯವೇ ನಮ್ಮ ಸಂಪತ್ತು. ಅದೇ ನಮಗೆ ಭಗವದ್ಗೀತೆ, ರಾಮಾಯಣ, ಕುರ್‌ಆನ್, ಬೈಬಲ್ ಎಲ್ಲವೂ ಆಗಿದೆ ಎಂದು ಅವರು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಈಚೆಗೆ ಆಯೋಜಿಸಿದ್ದ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 893ನೇ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣ ಜಗತ್ತಿನ ಮೊದಲ ಅಪ್ಪಟ ಸಮಾಜವಾದಿಯಾಗಿದ್ದರು. ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದವರು. ಸಂಪತ್ತಿನ ಕ್ರೋಡೀಕರಣವನ್ನು ತೀವ್ರವಾಗಿ ವಿರೋಧಿಸಿದರು. ಜಾತಿಭೇದ, ಅಸ್ಪೃಶ್ಯತೆ, ಹಸಿವು ಸೇರಿದಂತೆ ಜಗತ್ತಿನ ಹಲವು ಸಮಸ್ಯೆಗಳಿಗೆ ಬಸವಾದಿ ಶರಣರ ವಚನ ಸಾಹಿತ್ಯವೇ ಪರಿಹಾರ ಎಂದು ಪ್ರತಿಪಾದಿಸಿದರು.

ವಚನ ಸಾಹಿತ್ಯ ವಿಶ್ವಮಟ್ಟಕ್ಕೆ ತಲುಪಬೇಕು,ವಚನಗಳು ಕನ್ನಡದಲ್ಲಿ ರಚನೆಯಾದ ಕಾರಣ ಹೆಚ್ಚು ಪ್ರಚಾರ ಪಡೆಯಲಿಲ್ಲ. ಕಳೆದ ಎರಡು ದಶಕಗಳಲ್ಲಿ ಬಸವ ಸಮಿತಿಯವರು ಅನೇಕ ಭಾಷೆಗಳಿಗೆ ಅನುವಾದಿಸಿ ತಲುಪಿಸುತ್ತಿದ್ದಾರೆ. ಆದರೆ ಅದು ಸಾಕಾಗದು. ಸರ್ಕಾರ ಹಾಗೂ ಸಮಾಜ ಒಟ್ಟಾಗಿ ಬಸವ ಧರ್ಮ ಮತ್ತು ವಚನ ಸಾಹಿತ್ಯವನ್ನು ವಿಶ್ವದಾದ್ಯಂತ ಹರಡಬೇಕು ಎಂದು ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಟಿ.ಆರ್. ಚಂದ್ರಶೇಖರ ವಿಶೇಷ ಉಪನ್ಯಾಸ ನೀಡಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಶಶೀಲ ನಮೋಶಿ, ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಪೌಜಿಯಾ ತರನ್ನುಮ್, ಎಸ್ಪಿ ಅಡ್ಡೂರು ಶ್ರೀನಿವಾಸಲು, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಚಿಂತಕ ಪ್ರೊ. ಆರ್.ಕೆ. ಹುಡಗಿ ಅವರಿಗೆ ‘ಬಸವ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₹1 ಲಕ್ಷ ನಗದು ಬಹುಮಾನ ಒಳಗೊಂಡಿತ್ತು.

ಇದೇ ವೇಳೆ, ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸೃಷ್ಟಿ ಪಾಟೀಲ ಅವರಿಗೆ ₹1 ಲಕ್ಷ ಪ್ರೋತ್ಸಾಹಧನ ನೀಡಿ ಸನ್ಮಾನಿಸಲಾಯಿತು. ಸಮಾಜ ಸೇವಕರಾದ ಉಮೇಶ ಶೆಟ್ಟಿ ಹಾಗೂ ಸಿದ್ರಾಮಪ್ಪ ದುಲಂಗೆ ಅವರನ್ನೂ ಗೌರವಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶರಣಬಸವೇಶ್ವರ ಸಂಸ್ಥಾನದ ದಾಕ್ಷಾಯಿಣಿ ಅಪ್ಪ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ, ಪ್ರತಿವರ್ಷ ಬಸವ ಜಯಂತಿಗೆ ಸುಲಫಲ ಮಠದ ಸಾರಂಗಧರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸುವುದು ಸಂಪ್ರದಾಯವಾಗಿದ್ದರೂ, ಈ ಬಾರಿ ಅವರನ್ನು ಆಹ್ವಾನಿಸದ ಕುರಿತು ಕೆಲ ಹೊತ್ತು ಸಮುದಾಯದ ಮುಖಂಡರ ನಡುವೆ ವಾಗ್ವಾದವೂ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *