ಹೊಸಪೇಟೆ :
12ನೇ ಶತಮಾನದಲ್ಲಿ ಬಸವಾದಿ ಶರಣರು ಬಹುತೇಕ ತಳಸಮುದಾಯದ ನೆಲಮೂಲ ಸಂಸ್ಕೃತಿಯ ಜನರಾಗಿದ್ದು, ಇವರೆಲ್ಲರ ಪ್ರತಿನಿಧಿ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿದ್ದಾರೆ ಎಂದು ಶರಣ ಚಿಂತಕರಾದ ಡಾ. ಟಿ ಹೆಚ್. ಬಸವರಾಜ ಅವರು ಹೇಳಿದರು.

ಶರಣ ಸಾಹಿತ್ಯ ಪರಿಷತ್ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲಾ ಘಟಕ ಹಾಗೂ ಶ್ರೀಮತಿ ಅಂಗಡಿ ವೀರಮ್ಮ ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೂಡ್ಲಿಗಿ ಸಹಯೋಗದೊಂದಿಗೆ ಆಯೋಜಿಸಿದ್ದ 893ನೇ ಬಸವ ಜಯಂತಿ ಪ್ರಯುಕ್ತ ಶ್ರೀಮತಿ ಅಂಗಡಿ ವೀರಮ್ಮ ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಕೂಡ್ಲಿಗಿ ಕಾಲೇಜಲ್ಲಿ ವಿದ್ಯಾರ್ಥಿಗಳಿಗೆ ‘ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಶತಶತಮಾನಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದ ಈ ತಳಸಮುದಾಯಕ್ಕೆ ಮೊದಲ ಬಾರಿಗೆ ವ್ಯವಸ್ಥಿತವಾಗಿ ಶಿಕ್ಷಣವನ್ನು ನೀಡಿ ಅವರ ಬೌದ್ಧಿಕ ಬೆಳವಣಿಗೆಗೆ ಕಾರಣವಾಗಿ, ಆ ತಳ ಸಮುದಾಯದವರಿಂದ ರಚಿತವಾದ 23 ಸಾವಿರ ವಚನಗಳು ಇಂದು ಲಭಿಸಿದ್ದು, ವಿದ್ಯಾರ್ಥಿಗಳು ಈ ವಚನಗಳನ್ನು ಅರಿತು ಜೀವಿಸಿದ್ದೆ ಆದರೆ ಸುಶಿಕ್ಷಿತ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಕರೆ ನೀಡಿದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಕೆ. ರವೀಂದ್ರನಾಥ ಪ್ರಾಸ್ತಾವಿಕ ನುಡಿ ಆಡುತ್ತಾ, ಪ್ರಸ್ತುತ ಕರ್ನಾಟಕದ ಅನೇಕ ಸಾಂಸ್ಕೃತಿಕ ನಾಯಕರ ಜಯಂತಿಗಳು ಆ ಸಮುದಾಯದ ಜನರಿಗೆ ಮಾತ್ರ ಸೀಮಿತವಾಗಿ ಆಚರಣೆ ಮಾಡಿಕೊಳ್ಳುತ್ತಿರುವುದು ದುರಂತವಾಗಿದೆ. ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಯಾಕೆ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ ಆ ಬಸವಾದಿ ಶರಣ ಶರಣೆಯರು ಯಾವ ತತ್ವ ಸಿದ್ಧಾಂತಗಳ ವಿರುದ್ಧ ಹೋರಾಡಿದರು, ಯಾರಿಗಾಗಿ ಹೋರಾಡಿದರು, ಯಾಕಾಗಿ ಹೋರಾಡಿದರೂ ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡು ಈ ರಾಷ್ಟ್ರದ ಭವಿಷ್ಯತ್ತಿನ ಪ್ರಜೆಗಳಾದ ವಿದ್ಯಾರ್ಥಿಗಳು ಸಾಂಸ್ಕೃತಿಕ ನಾಯಕರ ವಿಚಾರಧಾರೆಗಳನ್ನು ತಿಳಿದು ಸಮಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಬೇಕಾಗಿದೆ.
ಹಾಗಾಗಿ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಅನುಕೂಲಕರವಾಗಲಿ ಎನ್ನುವ ಕಾರಣಕ್ಕಾಗಿ ಈ ಕಾರ್ಯಕ್ರಮನ್ನ ಪದವಿ ಕಾಲೇಜುಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಟಿ. ಜಿ. ಮಲ್ಲಿಕಾರ್ಜುನಗೌಡ ಅವರು ಕಾರ್ಯಕ್ರಮ ಉದ್ಘಾಟಿಸಿದರು, ಅವರು ಮಾತನಾಡಿ, ಬಸವಣ್ಣ ಕೇವಲ ಯಾವುದೇ ಒಂದು ಜನಾಂಗಕ್ಕೆ, ಯಾವುದೇ ಒಂದು ಸಮುದಾಯಕ್ಕೆ, ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಅವರ ತತ್ವಗಳು ಜಾಗತಿಕ ಮನ್ನಣೆಯನ್ನ ಗಳಿಸಿವೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಷಣ್ಮುಖನಗೌಡ ಸಂಕಳ ವಹಿಸಿಕೊಂಡಿದ್ದರು. ಕನ್ನಡ ಪ್ರಾಧ್ಯಾಪಕ ಡಾ. ತಾತಪ್ಪ ಕಾರ್ಯಕ್ರಮ ನಿರೂಪಿಸಿದರು, ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರಾದ ಎಸ್. ಬಸವರಾಜ ಮಾವಿನಹಳ್ಳಿ ಅವರು ವಂದನೆಗಳು ಸಲ್ಲಿಸಿದರು.

ವೇದಿಕೆಯಲ್ಲಿ ಎಸ್. ರಾಜೇಂದ್ರ ಪ್ರಸಾದ, ನಂದಿ ಬಸವರಾಜ, ಲೋಕೇಶ ಅವರಾದಿ, ಸುನಿಲಗೌಡ, ಅಕ್ಕಿ ಮಲ್ಲಿಕಾರ್ಜುನ, ಸತೀಶಗೌಡ ಮತ್ತಿತರರು ಉಪಸ್ಥಿತರಿದ್ದರು.
