ರಾಯಚೂರು:
ಜಿಲ್ಲಾಡಳಿತ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ವಿಶ್ವಗುರು ಬಸವೇಶ್ವರ ಜಯಂತಿಯನ್ನು ಆಚರಿಸಲಾಯಿತು.
ಏಪ್ರಿಲ್ 20 ಹಾಗೂ 21 ನಡೆದ ಎರಡು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಗಣ್ಯರು ಹಾಗೂ ಸಮಾಜದ ಮುಖಂಡರು ಪಾಲ್ಗೊಂಡರು.
ಮೊದಲಿಗೆ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮುಖಾಂತರ ಜಯಂತಿ ಆಚರಣೆಗೆ ಚಾಲನೆ ನೀಡಲಾಯಿತು. ನಂತರ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಬಸವ ಜಯಂತಿಯ ವೇದಿಕೆ ಕಾರ್ಯಕ್ರಮ ನಡೆಯಿತು. ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಸಮಾಜದ ವಿವಿಧ ಮುಖಂಡರು ಭಾಗವಹಿಸಿದ್ದರು.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಶರಣತತ್ವ ಚಿಂತಕರಾದ ಶಿವಬುದ್ಧಿ ಹಲ್ಲರೆಯವರು ಉಪನ್ಯಾಸ ನೀಡಿದರು.

ಅವರು, 12ನೇ ಶತಮಾನದ ಉತ್ಕ್ರಾಂತಿಯ ಬಗ್ಗೆ ತಿಳಿಸುತ್ತ ವಚನಗಳಲ್ಲಿನ ಕೆಲವು ಪರಿಕಲ್ಪನೆಗಳ ಬಗ್ಗೆ ಉದಾಹರಿಸಿದರು. ಭಕ್ತಿ, ಕಾಯಕ, ದಾಸೋಹ, ದೇಹವೇ ದೇಗುಲ, ಶರಣಸತಿ ಲಿಂಗಪತಿ, ಕಾಯಕವೇ ಕೈಲಾಸ, ಲಿಂಗಾಯತ ಧರ್ಮ ಸ್ಥಾಪನೆ, ಅನುಭವ ಮಂಟಪ, ಮ್ಯಾಗ್ನಾಕಾರ್ಟ ಮತ್ತು ವಿಶ್ವ ಸಂವಿಧಾನಕ್ಕೆ ಅನುಭವ ಮಂಟಪದ ಕೊಡುಗೆ, ಕಾರ್ಲ್ ಮಾರ್ಕ್ಸ್ ನ ಸಮಾನತಾ ತತ್ವಕ್ಕೆ ಬಸವಣ್ಣನವರು ಪ್ರೇರಣೆಯಾದದ್ದು ಹಾಗೂ ಶೂದ್ರ ಮತ್ತು ಅತಿಶೂದ್ರರನ್ನು ಬಸವಣ್ಣನವರು ಲಿಂಗವಂತರನ್ನಾಗಿ ಮಾಡಿ, ಜಾತಿರಹಿತ ಧರ್ಮಸಹಿತ ಶರಣ ಸಂಸ್ಕೃತಿ ನಿರ್ಮಾಣ ಮಾಡಿದರು.

ಆ ಮೂಲಕ ಕನ್ನಡ ನುಡಿಯಲ್ಲಿ ಕನ್ನಡ ಧರ್ಮಕಟ್ಟಿ, ವಿಶ್ವಕಲ್ಯಾಣಕ್ಕೆ ನಾಂದಿಯಾಡಿದುದನ್ನು ಬಹುರೂಪಿ ಚೌಡಯ್ಯ, ಅಲ್ಲಮಪ್ರಭುದೇವರು, ಇನ್ನು ಮುಂತಾದ ಶರಣರ ವಚನಗಳು ಹಾಗೂ ದೇಶಿ ಮತ್ತು ವಿದೇಶಿ ಸಂತರ ದೃಷ್ಠಾಂತಗಳೊಡನೆ ಮನಮುಟ್ಟುವಂತೆ ವಿವರಿಸಿದರು. ಬಸವ ಜಯಂತಿಯ ಸಾಫಲ್ಯದ ಬಗ್ಗೆ ಅರುಹಿ ನೆರೆದಿದ್ದವರೆಲ್ಲರ ಮನಕ್ಕೆ ಬಸವ ತತ್ವಾಮೃತವನು ಬಲ್ಲರೆ ಅವರು ಉಣಬಡಿಸಿದರು.
ವೇದಿಕೆಯಲ್ಲಿದ್ದ ಸ್ಥಳೀಯ ಶಾಸಕರಾದ ಶಿವರಾಜ ಪಾಟೀಲ, ಜಿಲ್ಲಾಧಿಕಾರಿಗಳು, ಪೋಲೀಸ್ ವರಿಷ್ಠಾಧಿಕಾರಿಗಳು, ಸಂಘಟನೆಗಳ ಮುಖಂಡರು ಬಸವಣ್ಣನವರ ಕುರಿತು ಮಾತನಾಡಿದರು. ಆರಂಭದಲ್ಲಿ ವಚನಗಾಯನ, ಸ್ವಾಗತ ಹಾಗೂ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು.

21ರಂದು ಸಾಯಂಕಾಲ ಬಸವ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ಬಸವಾಭಿಮಾನಿಗಳು, ಶಾಸಕರು, ಸಮಾಜದ ಮುಖಂಡರು ಅನೇಕ ಕಲಾತಂಡಗಳು, ಮಹಿಳೆಯರು ಉತ್ಸವದಲ್ಲಿ ಭಾಗವಹಿಸಿ ಸಾಂಸ್ಕೃತಿಕ ನಾಯಕ, ಲಿಂಗಾಯತ ಧರ್ಮ ಸ್ಥಾಪಕ ಬಸವಣ್ಣ ಪರ ಘೋಷಣೆಗಳು ಹೇಳುತ್ತಾ ಮೆರವಣಿಗೆಯಲ್ಲಿ ಸಾಗಿದರು.
