ಗುರುಬಸವ ಮಂಟಪ ಟ್ರಸ್ಟ್ ವತಿಯಿಂದ ಮಾದರಿ ಬಸವ ಜಯಂತಿ ಕಾರ್ಯಕ್ರಮ

ಹುಬ್ಬಳ್ಳಿ:

ಶ್ರೀಗುರುಬಸವ ಮಂಟಪ ಟ್ರಸ್ಟ್, ವತಿಯಿಂದ ಮಾದರಿ ಕಾರ್ಯಕ್ರಮಗಳ ಮುಖಾಂತರ ಬಸವ ಜಯಂತಿ ಆಚರಣೆ ನಡೆಯಿತು. ಮೂರುದಿನಗಳ ಕಾಲ ಬಸವತತ್ವ ಚಿಂತಕರಿಂದ ಅನುಭಾವ ಗೋಷ್ಠಿಗಳು ನಡೆದವು. ಯಾವುದೇ ರಾಜಕಾರಣಿಗಳನ್ನು ಆಹ್ವಾನಿಸಿರಲಿಲ್ಲ. ಯಾರಿಂದಲೂ ದೇಣಿಗೆ ಕೇಳದೇ, ಎಲ್ಲ ಖರ್ಚು ವೆಚ್ಚವನ್ನು ಶ್ರೀ ಗುರುಬಸವ ಮಂಟಪ ಟ್ರಸ್ಟ್ ವಹಿಸಿಕೊಂಡಿತ್ತು.

ಮೊದಲ ದಿನ ಧಾರವಾಡ ಮುರುಘಾಮಠದ ಪೂಜ್ಯ ಮಲ್ಲಿಕಾರ್ಜುನ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಧಾರವಾಡ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕರಾದ ಡಾ. ಗಿರೀಶ ದೇಸೂರ ಅವರು ‘ತನ್ನ ತಾನಾರೆಂದೊಡೆ ತಾನೇ ದೇವ’ ವಿಷಯದ ಮೇಲೆ ಅನುಭಾವ ನೀಡಿದರು.

ಮಹಾದಾಸೋಹಿ ನೀಲಾಂಬಿಕಾ ತಾಯಿ ಬಳಗದ ಶರಣೆಯರಿಂದ ವೈರಾಗ್ಯನಿಧಿ ಮಹಾದೇವಿ ಅಕ್ಕಗಳ ಯೋಗಾಂಗ ತ್ರಿವಿಧಿ ಪಾರಾಯಣ ನಡೆಯಿತು.

ಎರಡನೇ ದಿನ ಡಾ. ಬಸವಲಿಂಗ ಮಹಾಸ್ವಾಮಿಗಳು ಮಹಾಂತತೀರ್ಥ, ಶಿರೂರು ಅವರ ಸಾನಿಧ್ಯದಲ್ಲಿ ಅನುಬಾವಿಗಳು ಹಾಗೂ ಪ್ರಾಧ್ಯಾಪಕರಾದ ಧಾರವಾಡದ ಶಂಭು ಹೆಗಡಾಳ ಅವರು ‘ಲಿಂಗವ ಪೂಜಿಸಿ ಫಲವೇನಯ್ಯ?’ ಈ ವಿಷಯದ ಮೇಲೆ ಅನುಭಾವ ನೀಡಿದರು.

ಶ್ರೀ ಗುರುಬಸವ ಮಂಟಪದ ವಚನ ಸುನಾದ ಸಂಗೀತ ತರಬೇತಿ ಕೇಂದ್ರದ ತಾಯಂದರಿಂದ ಸರ್ವಜ್ಞರ ತ್ರಿಪದಿಗಳಲ್ಲಿ ‘ಗುರುಬಸವ ದರ್ಶನ’ ಗಾಯನ ಪ್ರಸ್ತುತಪಡಿಸಿದರು.

ಮೂರನೆಯ ದಿನ  ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಪೂಜ್ಯ ಗುರುಸಿದ್ಧೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜಿ.ಎ. ತಿಗಡಿ ಅನುಭಾವಿಗಳು ಹಾಗೂ ವಿಶ್ರಾಂತ ಪ್ರಾಧ್ಯಾಪಕರು, ಧಾರವಾಡ ಇವರು ‘ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ’ ವಿಷಯದ ಮೇಲೆ ಅನುಭಾವ ನೀಡಿದರು.

ಮಹಾದಾಸೋಹಿ ನೀಲಾಂಬಿಕಾ ತಾಯಿ ಬಳಗದ ಶರಣೆಯರಿಂದ ರೂಪಕ ‘ತವನಿಧಿ’ ಜೇಡರ ದಾಸಿಮಯ್ಯನವರ ಪ್ರಸಂಗಗಳ ಸನ್ನಿವೇಶವನ್ನು ಅಭಿನಯಿಸಿದರು. ಮಕ್ಕಳಿಗೆ ವಚನ ಕಂಠಪಾಠ ಸ್ಪರ್ಧೆ ಸಹ ಏರ್ಪಡಿಸಲಾಗಿತ್ತು.

20 ಸಂಜೆ ಷಟಸ್ಥಲ ಧ್ವಜಾರೋಹಣವನ್ನು ಚನ್ನಬಸವಗೌಡ್ರು ಪಾಟೀಲ ಬಸವತತ್ವ ಅನುಭಾವಿಗಳು ಹಾಗೂ ಪ್ರಗತಿಪರ ಕೃಷಿಕರು ನೆರವೇರಿಸಿದರು.

ವಾಹನದಲ್ಲಿ ಶ್ರೀ ಗುರು ಬಸವಣ್ಣನವರ ಭಾವಚಿತ್ರ, ವಚನ ಗ್ರಂಥಗಳನ್ನು ಇಟ್ಟು, ಬಸವಣ್ಣನವರ ವೇಷಭೂಷಣ ಧರಿಸಿದ ಯುವಕನನ್ನು ಕುದುರೆಯ ಮೇಲೆ ಕೂಡಿಸಿ ಭವ್ಯವಾದ ಮೆರವಣಿಗೆಯನ್ನು ಮಾಡಲಾಯಿತು. ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಜಾಂಝ್ ಮೇಳ, ಬ್ರಾಸ್ ಬ್ಯಾಂಡ್, ಮಹಿಳೆಯರಿಂದ ಕೋಲಾಟ, ಬಸವ ಧ್ವಜ ಹಿಡಿದ ಶರಣ ಶರಣೆಯರು, ಯಾವುದೇ ಸಿನಿಮಾ ಗೀತೆಗಳು ಇಲ್ಲದ, ಕೇವಲ ಬಸವ ವಂದನೆಯ ಹಾಡುಗಳನ್ನು ಹಾಕಲಾಗಿತ್ತು. ಹಾಡಿನ ತಾಳಕ್ಕೆ ಭಕ್ತಿ ಭಾವದಿಂದ ಎಲ್ಲರೂ ಹೆಜ್ಜೆ ಹಾಕಿದರು.

ಜಯಂತಿ ಕಾರ್ಯಕ್ರಮ ಹಾಗೂ ಮೆರವಣಿಗೆ ಬಸವ ಅನುಯಾಯಿಗಳಿಗೊಂದು ಮಾದರಿಯಾಗಿತ್ತು ಎನ್ನಬಹುದು. ಚಂದ್ರಶೇಖರ ಕರವೀರಶೆಟ್ಟರ, ವಿ. ಎಸ್. ಲಿಗಾಡೆ, ಸುಧೀರ ಸಾದರಳ್ಳಿ, ಶೋಭಾ ತಾಯಿ, ಬಸವೇಶ ಹಾಗೂ ಶಶಿಧರ ಕರವೀರಶೆಟ್ಟರ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವು ಅತ್ಯಂತ ಶಿಸ್ತುಬದ್ಧವಾಗಿ ನೆರವೇರಿತು.

ನಿರ್ಮಲಾ ಬುರ್ಲಬಡ್ಡಿ, ಶಾರದಾ ಪಾಟೀಲ, ರೇಖಾ ನಾರಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮದ ನಾಲ್ಕು ದಿನವೂ ಪ್ರಸಾದ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ನೂರಾರು ಶರಣ ಶರಣೆಯರು ಪಾಲ್ಗೊಂಡು ಬಸವ ಜಯಂತಿ ಅರ್ಥಪೂರ್ಣಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
1 Comment

Leave a Reply

Your email address will not be published. Required fields are marked *