ಶಹಾಪುರ:
ಹನ್ನೆಡನೆಯ ಶತಮಾನದ ಕಾರಣಿಕ ಪುರುಷ ಬಸವಣ್ಣ ಆತನಿಲ್ಲದೆ ಬದುಕಲು ದುಸಾಧ್ಯ. ತತ್ವಗಳು ಕೇವಲ ಹೇಳುವಂತಾಗಬಾರದು. ಅದು ಬದುಕುವ ಮಾರ್ಗವಾಬೇಕು. ಬಸವಾದಿ ಶರಣರು ಕೇವಲ ಜೀವನ ಮಾರ್ಗದ ಕುರಿತು ಹೇಳಿದವರಲ್ಲ. ಹೇಳಿದಂತೆಯೆ ಬದುಕಿದರು. ಬಸವಣ್ಣನವರ ಮಾರ್ಗ ಮತ್ತು ಕಡಕೋಳ ಮಡಿವಾಳಪ್ಪನ ವಿಚಾರ ಎರಡೂ ಭಿನ್ನ ಭಿನ್ನವೇನಲ್ಲ.
ಕಡಕೋಳ ಮಡಿವಾಳಪ್ಪನ ಅನುಭಾವದ ಹಾಡುಗಳನ್ನು ಜನತೆಗೆ ಮುಟ್ಟಿಸುವ ಜವಾಬ್ದಾರಿ ಪ್ರಜ್ಞಾವಂತರೆಲ್ಲರ ಮೇಲಿದೆ ಎಂದು ಬಸವಮಾರ್ಗ ಪ್ರತಿಷ್ಠಾನ, ಮತ್ತು ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್ ಏರ್ಪಡಿಸಿದ್ದ ತಿಂಗಳ ಬಸವ ಬೆಳಕು- 133 ನೇ ಕಾರ್ಯಕ್ರಮದಲ್ಲಿ ಕಡಕೋಳ ಮಠದ ಪೀಠಾಧಿಪತಿ ಡಾ. ರುದ್ರಮುನಿ ಶಿವಾಚಾರ್ಯರು ಬಸವ ಜಯಂತೋತ್ಸವ ನಿಮಿತ್ಯ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.
ಸಮಾಜದಲ್ಲಿ ಅಮಾಯಕರ ಮೇಲೆ ನಡೆಯುವ ಶೋಷಣೆಗಳನ್ನು ಖಂಡ ತುಂಡವಾಗಿ ಖಂಡಿಸಿ ಹಾಡು ಬರೆದವರು ಮಡಿವಾಳಪ್ಪ. ಮೌಡ್ಯ, ಕಂದಾಚಾರಗಳನ್ನು ಕಂಡರೆ ಅವರು ಕೆಂಡದಂತೆ ಪ್ರತಿಕ್ರಿಯಿಸಿ ಬಿಡುತ್ತಿದ್ದರು. ಜಾತಿ ಎಂಬ ಬೇಲಿಯನ್ನು ಕಿತ್ತಿ ಎಸೆದ ಕ್ರಾಂತಿ ಪುರುಷ, ಮುಟ್ಟು ಮೈಲಿಗೆ ಎನ್ನುವವರಿಗೆ ಚಾಟಿ ಏಟಿನ ಹಾಡು ಬರೆದು ‘ಮುಟ್ಟಾದ ಮೂರು ದಿನ ಹುಟ್ಟಿ ಬಂದಿದಿ ನೀನು ಮುಡಚಟ್ಟು ಎಲ್ಯಾದ ಹೇಳಣ್ಣ? ತೊಗಲೊಳಗ ತೊಗಲೊಕ್ಕು ತಗಲಿ ಬಂದಿದಿ ನೀನು ತಗಲು ಮಾತಾಡೋದು ಯಾಕಣ್ಣ?’ ಎಂಬ ತೀರಾ ಕಟುವಾದ, ಹಾಗೂ ವಾಸ್ತವಿಕ ಸತ್ಯದ ಮಾತುಗಳನ್ನು ಆಡಿ ಕರ್ಮಠರ ಬಾಯಿ ಮುಚ್ಚಿಸಿದಾತ ಮಡಿವಾಳಪ್ಪನವರು.
ಸಾಮಾನ್ಯ ಜನಗಳ ಮನಸ್ಥಿತಿಯನ್ನು ಅರಿತುಕೊಂಡು ಅವರೊಳಗಿನ ಅಜ್ಞಾನವನ್ನು ಹೊರತೆಗೆದರು. ಕುಲ ಕುಲ ಅಂತೀದಿ ಕುಲಗೇಡಿ, ಕುಲದ ಕೂನ ಹೇಳೋ ನಿಜ ನೋಡಿ ಎಂಬಂಥ ನೂರಾರು ಹಾಡುಗಳನ್ನು ಬರೆದು ಬಸವಣ್ಣನವರನ್ನು ಹದಿನೇಳನೆಯ ಶತಮಾನದಲ್ಲಿ ಮತ್ತೊಮ್ಮೆ ನೆನಪಿಸಿ ಹೋದವರು ಕಡಕೋಳದ ಮಡಿವಾಳಪ್ಪನವರು ಎಂದು ಕಡಕೋಳದ ಮಡಿವಾಳಪ್ಪನ ಹತ್ತಾರು ಅನುಭಾವದ ಹಾಡುಗಳನ್ನು ಉಲ್ಲೇಖಿಸಿ ಸಭೆಗೆ ವಿವರಿಸಿದರು.

ಪ್ರಾಸ್ತಾವಿಕವಾಗಿ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡುತ್ತಾ, ತಳವರ್ಗದವರು ಬಸವ ಪ್ರಣೀತ ಲಿಂಗಾಯತ ಧರ್ಮದ ವಾರಸುದಾರರು, ಕಾಯಕ ಜೀವಿಗಳು. ವಿವಿಧ ವೃತ್ತಿಯಲ್ಲಿ ತೊಡಗಿದ್ದ ಜನರನ್ನು ಒಂದೆಡೆ ಸಂಕಲಿಸಿ, ಅವರಿಗೆ ಅಕ್ಷರಗಳ ಅಭ್ಯಾಸ ಮಾಡಿಸಿ, ಅರಿವು ನೀಡಿ ಅವರ ಜೀವನಾನುಭವವನ್ನ ವಚನ ರಚನೆ ಮಾಡುವಂಥ ಶಕ್ತಿ ನೀಡಿದವರು ಬಸವಣ್ಣನವರು.
ಗೊತ್ತಿಲ್ಲದ ಜಗತ್ತಿನ ಕುರಿತು ಮಾತನಾಡುತ್ತ ಹೇಳುತ್ತ ಇಹದ ಬದುಕನ್ನು ಕಡೆಗಣಿಸುವಂತೆ ಮಾಡಿದ್ದ ಪುರೋಹಿತರ ತಂತ್ರಗಳನ್ನೆಲ್ಲ ಬಸವಣ್ಣನವರು ಬಿಚ್ಚಿಟ್ಟರು.
ನಡೆ ನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ. ನುಡಿ ಶ್ರೇಷ್ಠ ನಡೆ ಅಧಮವಾದಲ್ಲಿ ಬಿಡುಗಡೆಯಿಲ್ಲದ ಹೊಲೆ ಎಂಬುದನ್ನು ಅರಿತುಕೊಳ್ಳಬೇಕು. ಪ್ರತಿಯೊಬ್ಬರಲ್ಲಿ ಅರಿವು ಮೂಡಿದಾಗ ಸಹಜವಾಗಿ ಅಜ್ಞಾನಕ್ಕೆ ಹಿನ್ನೆಡೆಯಾಗುತ್ತದೆ. ಬಸವ ಬೆಳಕು ಬಿದ್ದಂತ್ತೆಲ್ಲ ಆಷಾಢಭೂತಿಗಳ ಕೊಳಕು ಕಾಣತೊಡಗುತ್ತದೆ.
ಶೋಷಣೆಯಿಂದ ಮುಕ್ತವಾದ ಜೀವನ ನಡೆಸುವುದೆ ಬಸವ ಪ್ರಜ್ಞೆ, ಇದನ್ನು ಮೈಗೂಡಿಸಿಕೊಂಡು ಬಾಳಬೇಕಾದುದು ಅಗತ್ಯ ಎಂದವರು ಪ್ರತಿಪಾದಿಸಿದರು.
ಮುಖ್ಯ ಅತಿಥಿಯಾಗಿ ಲಕ್ಷ್ಮಣ ಲಾಳಸೇರಿ ಮಾತನಾಡಿ, ಬಸವಣ್ಣ ನಂದಿ ಅಲ್ಲ, ಆತ ಶಿವನ ವಾಹನವೂ ಅಲ್ಲ. ತಳಕ್ಕೆ ಬಿದ್ದು ಶೋಷಣೆಗೆ ಗುರಿಯಾಗಿದ್ದ ನೂರಾರು ಜನರನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡು ಮೇಲೆತ್ತಿದಾತ ಬಸವಣ್ಣನವರು. ಬಸವ ಜಯಂತಿಯ ಆಚರಣೆಯ ದಿನ ನಂದಿಯನ್ನು ಮತ್ತು ದನವನ್ನು ಪೂಜಿಸುವ ಮೂಲಕ ಬಸವಣ್ಣನವರ ವಿಚಾರ ಧಾರೆಗೆ ದ್ರೋಹ ಬಗೆಯಲಾಗುತ್ತಿದೆ. ಇಂಥ ಅರ್ಥಹೀನ ನಡವಳಿಕೆಗಳನ್ನು ಜನತೆ ಕೈ ಬಿಡಬೇಕು ಎಂದರು.
ಬಸವ ಬೆಳಕು ಸಭೆಯಲ್ಲಿ ರಾಜಶೇಖರ ನಗನೂರು ಮತ್ತು ಭೂ ಮಾಪನಾ ಇಲಾಖೆಯ ಇಕ್ಬಾಲ ಅಹ್ಮದ ಮಕಾನದಾರ ಅವರನ್ನು ಸನ್ಮಾನಿಸಲಾಯಿತು. ಪೂಜಾ ಮತ್ತು ಫಜಲುದ್ದೀನ ರಹಮಾನಖಾನ ವಚನ ಗೀತೆ ಹಾಡಿದರು. ಪಂಪಣ್ಣಗೌಡ ಮಳಗ ಸ್ವಾಗತಿಸಿದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಷಣ್ಮುಖ ಅಣಬಿ ವಂದನಾರ್ಪಣೆ ಮಾಡಿದರು.
ಸಭೆಯಲ್ಲಿ ನಾಗರಾಜ ಗುಡಗುಂಟಿ, ಬಸವರಾಜ ಗುಡಿಮನಿ, ಸಿದ್ದರಾಮ ಹೊನ್ಕಲ್, ಹಣಮಂತ ಕೊಂಗಂಡಿ, ಭೀಮಣ್ಣ ಮೇಟಿ, ಶಿವು ಆವಂಟಿ, ದೇವೇಂದ್ರ ಬಡಿಗೇರ, ಖಾಜಾ ಪಟೇಲ, ನೇತ್ರಾ ಗುಡಗುಂಟಿ, ಸಂಗಮ್ಮ ಹರನೂರ, ಶರಣಮ್ಮ ಪಾಟೀಲ, ಪ್ರಮೋದ ಶಾಬಾದಿ, ಬಸವರಾಜ ನಂದಿ, ಚಂದ್ರು ಕಟ್ಟಿಮನಿ ಮುಡಬೂಳ ಮುಂತಾದವರು ಭಾಗವಹಿಸಿದ್ದರು.

🙏🙏
ಅಂಗದ ಮೇಲೆ ಇಷ್ಟಲಿಂಗ ಧರಿಸದೆ ಕೇವಲ
ಬಸವಣ್ಣನವರ ತತ್ವ ವಿಚಾರ ಭಾಷಣ ಮಾಡುವವರನ್ನು ಒಲೈಸುವುದು ಸರಿಯೇ ? ಬಸವಣ್ಣ ತತ್ವ ವಿಚಾರ ವಿಶ್ವವ್ಯಾಪಿ ಯಾರನ್ನು ವಿರೋಧಿಸುವ ದೂಷಿಸುವ ಅಗತ್ಯವಿಲ್ಲ ಅರಿವು ಆಚಾರ ಅನುಭಾವದಿಂದ
ಸಂಘಟಿತ ರಾಗೋಣ🙏🙏