ತಿಪಟೂರು :
ವಿಶ್ವಗುರು ಬಸವೇಶ್ವರ ಅವರ ಜಯಂತ್ಯೋತ್ಸವವು ಪಟ್ಟಣದಲ್ಲಿ ಸೋಮವಾರ ಹಲವಾರು ಬಸವ ಸಂಘಟನೆಗಳ ಸಹಯೋಗದಲ್ಲಿ ವಿಜೃಂಭಣೆಯಿಂದ ನಡೆಯಿತು.

ನಗರದ ಕಲ್ಲೇಶ್ವರ ದೇವಾಲಯದಿಂದ ಗುರುಕುಲಾನಂದಾಶ್ರಮ ಕಲ್ಯಾಣ ಮಂಟಪದವರೆಗೆ ಭವ್ಯವಾದ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.
ಕೆರೆಗೋಡಿ ರಂಗಾಪುರದ ಗುರುಪರದೇಶಿಕೇಂದ್ರ ಸ್ವಾಮೀಜಿ, ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ನಗರದ ಪ್ರಮುಖ ರಸ್ತೆಯಲ್ಲಿ ಬಸವಣ್ಣನವರ ಭಾವಚಿತ್ರ, ಪುರದ ಬಸವಣ್ಣರ ಬೃಹತ್ ಮೆರವಣಿಗೆ ನಡೆಯಿತು.

ನಂದಿಧ್ವಜ, ಬಸವ ನಗಾರಿ, ವೀರಗಾಸೆ ಕುಣಿತ, ಕಾಳಿ ಕುಣಿತ, ಹೆಣ್ಣುಮಕ್ಕಳ ವೀರಗಾಸೆ, ಲಿಂಗದವೀರರ ಕುಣಿತ ಮತ್ತಿತರ ವಾದ್ಯ ವೈಭವಗಳೊಂದಿಗೆ ನಗರದ ಕೋಡಿ ವೃತ್ತ, ದೊಡ್ಡಪೇಟೆ ಮತ್ತು ಬಿ.ಎಚ್ ರಸ್ತೆಯ ಮೂಲಕ ಸಾವಿರಾರು ಬಸವಾನುಯಾಯಿಗಳು, ಬಸವಭಕ್ತರು ಮೆರವಣಿಗೆಯಲ್ಲಿ ಸಾಗಿದರು.

ವೇದಿಕೆ ಕಾರ್ಯಕ್ರಮದಲ್ಲಿ ಷಡಕ್ಷರಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ೧೨ನೇ ಶತಮಾನದ ಮಹಾನ್ ಸಮಾಜ ಸುಧಾರಕ ಬಸವಣ್ಣನವರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಿವೆ. ಸಮಾಜದ ಎಲ್ಲ ಯುವಕರೂ ಸೇರಿ ಬಸವ ಜಯಂತಿ ಆಚರಿಸುತ್ತಿರುವುದು ಸಂತೋಷದ ಸಂಗತಿ. ಇದೇ ಉತ್ಸಾಹ ಮುಂದಿನ ವರ್ಷ ಇನ್ನೂ ಹೆಚ್ಚಿನ ಸಿದ್ದತೆಯೊಂದಿಗೆ ತಾಲ್ಲೂಕಿನ ಎಲ್ಲ ಮಠಾಧೀಶರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರೆಲ್ಲ ಸಮಾರಂಭದಲ್ಲಿ ಭಾಗವಹಿಸುವಂತಾಗಿ ಅವರು ಆಶೀರ್ವಾದ ನೀಡಲಿ ಎಂದರು.

ರಾಜ್ಯ ಬಿಜೆಪಿ ವಕ್ತಾರ ಎಚ್.ಎನ್. ಚಂದ್ರಶೇಖರ ಮಾತನಾಡಿ, ಜಗತ್ತಿನಲ್ಲಿಯೇ ಕೇವಲ ಮಾತನಾಡದೇ ಹೇಳಿದ್ದನ್ನು ಮಾಡಿ ತೋರಿಸಿದವರು ಬಸವಣ್ಣನವರು. ಮಹಿಳೆಯರಿಗೆ ಸಮಾನತೆಯನ್ನು ತೋರಿದ ಯಾವುದೇ ಸಮುದಾಯ ಅಥವಾ ಧರ್ಮ ಇದ್ದರೆ ಅದು ವೀರಶೈವ ಲಿಂಗಾಯತ ಧರ್ಮ ಮಾತ್ರ. ಅದರ ರೂವಾರಿ ಕಾಯಕಯೋಗಿ ಬಸವಣ್ಣ ಆಗಿದ್ದರು. ಜೊತೆಗೆ ಅಸ್ಪಶ್ಯತೆ ನಿವಾರಣೆಗಾಗಿ ಆಗಿನ ಕಾಲಘಟ್ಟದಲ್ಲಿಯೇ ಜನರ ವಿರೋಧದ ಮಧ್ಯೆಯೂ ಹೋರಾಟ ಮಾಡಿದವರಾಗಿದ್ದರು. ಅಂದಿನ ದಿನಮಾನದಲ್ಲಿಯೇ ಪ್ರಜಾ ಪ್ರಭುತ್ವದ ರೂಪುರೇಷೆಗಳನ್ನು ಅನುಭವ ಮಂಟಪದ ಮೂಲಕ ಜಾರಿಗೆ ತಂದಿದ್ದರು ಎಂದರು.

ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ ಮಾತನಾಡಿ, ಸಮಾಜದಲ್ಲಿ ಕ್ರಾಂತಿ ಆಗದಿದ್ದರೆ ಸಮಸಮಾಜ ನಿರ್ಮಾಣ ಸಾಧ್ಯವಿಲ್ಲ. ೧೨ನೇ ಶತಮಾನದಲ್ಲಿ ನಡೆದ ಕ್ರಾಂತಿಯ ನೇತೃತ್ವವನ್ನು ಬಸವಣ್ಣನವರು ವಹಿಸಿದ್ದರು. ಸಮಾಜದಲ್ಲಿದ್ದ ಪಿಡುಗುಗಳು, ಶೋಷಣೆ ಹಾಗೂ ಮೌಢ್ಯತೆಗಳ ವಿರುದ್ದ ಬಸವಣ್ಣನವರು ಸಮರ ಸಾರಿದ್ದರು. ವಚನಗಳ ಮೂಲಕ ಸಾಹಿತ್ಯ ರಚಿಸಿ ಸಮಾಜದಲ್ಲಿ ಬದಲಾವಣೆಗೆ ಕಾರಣೀಕರ್ತರಾದರು.
ವೀರಶೈವ ಲಿಂಗಾಯತ ಸಂಘಟನೆಯ ತಾಲ್ಲೂಕು ಅಧ್ಯಕ್ಷ ರೇಣುಕಾರಾಧ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ, ಬಸವಣ್ಣನವರ ಒಂದು ವಚನವನ್ನು ಅರ್ಥೈಸಿಕೊಂಡು ಪಾಲನೆ ಮಾಡಿದರೆ ನಮ್ಮ ಜೀವನ ಪಾವನವಾಗುತ್ತದೆ. ವಿಶ್ವದ ಎಲ್ಲ ಸಮಸ್ಯೆಗಳಿಗೂ ಬಸವಣ್ಣನವರ ವಚನಗಳಲ್ಲಿ ಪರಿಹಾರವಿದೆ ಎಂದು ಹೇಳಿದರು.
ಕುಮಾರ ಆಸ್ಪತ್ರೆಯ ವೈದ್ಯ ಡಾ. ಶ್ರೀಧರ, ಡಾ. ವಿವೇಚನ್, ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ, ಸಿ.ಬಿ. ಶಶಿಧರ, ತಾಲೂಕು ಪಂಚಾಯತನ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ, ಹಾಸನ ಜಿಲ್ಲಾ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ನವಿಲೆ ಪರಮೇಶ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಮಡೆನೂರು ಕಾಂತರಾಜು, ಮಾಜಿ ನಗರಸಭೆ ಸದಸ್ಯ ಪ್ರಸನ್ನಕುಮಾರ, ನಿಜಗುಣ, ರಾಮಮೋಹನ, ಶಶಿಕಿರಣ, ಹಲವಾರು ಸಮಾಜ, ಸಂಘಟನೆಗಳ ನಾಯಕರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ವೀರಶೈವ ಲಿಂಗಾಯತ ಯುವ ವೇದಿಕೆ, ವೀರಶೈವ ಲಿಂಗಾಯತ ಸಂಘಟನೆ, ವೀರಶೈವ ಲಿಂಗಾಯತ ಮಹಾಸಭಾ, ಬಸವತತ್ವ ಅನುಯಾಯಿಗಳ ಒಕ್ಕೂಟದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
