“ಬಸವ ಸಿರಿ” ಪ್ರಶಸ್ತಿ ಪ್ರದಾನ ಸಮಾರಂಭ
ಕಲಬುರಗಿ
ಜಗತ್ತಿನಲ್ಲಿ ಬಸವತತ್ವವೇ ಶಾಶ್ವತ, ಲಿಂಗಾಯತರು ಎಷ್ಟೇ ಕಷ್ಟ, ತೊಂದರೆ ಬಂದರೂ ಬಸವತತ್ವವನ್ನು ಮರೆಯಬಾರದು ಎಂದು ಹುಲಸೂರಿನ ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.
ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಇತ್ತೀಚೆಗೆ ಬಸವ ಪ್ರಕಾಶನ ಸಂಸ್ಥಾಪಕರಾದ ಬಸಮ್ಮ ಬ. ಕೊನೇಕ ಅವರ 13ನೇ ಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬಸವ ಸಿರಿ ಪ್ರಶಸ್ತಿ ಪ್ರದಾನ ಹಾಗೂ ಕಾಯಕ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಾನು ಯಾವ ಪ್ರಶಸ್ತಿಗೂ ಅರ್ಜಿ ಹಾಕಿದವನಲ್ಲ. ಬಸವ ಜ್ಞಾನ ಪ್ರಚಾರ, ಪ್ರಸಾರ ಕಾರ್ಯಕ್ಕಾಗಿ ಈ ಪ್ರಶಸ್ತಿ ಕೊಟ್ಟಿರುವುದು ಖುಷಿ ತಂದಿದೆ. ಇದು ಕಾಯಕ ಜೀವಿಗಳ ಪ್ರಶಸ್ತಿ ಎಂದರು.
ಪ್ರಶಸ್ತಿಯು 11 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.

ಕೃತಿಗಳ ಲೋಕಾರ್ಪಣೆ ಮತ್ತು ಪ್ರಶಸ್ತಿ ಪ್ರದಾನ ಮಾಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಿಯುಕೆ ಕುಲಸಚಿವ ಪ್ರೊ. ಆರ್. ಆರ್. ಬಿರಾದಾರ, ‘ಕೊನೇಕ ಕುಟುಂಬದವರು ಬಸವತತ್ವಗಳನ್ನು
ಅಳವಡಿಸಿಕೊಂಡಿದ್ದಾರೆ. ಸಮಾಜಮುಖಿ ಕೆಲಸ ಮಾಡುವವರನ್ನು ಗುರುತಿಸಿ, ಸನ್ಮಾನಿಸಿ, ಗೌರವಿಸುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.
ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಸಲಹಾ ಸಮಿತಿಯ ಹಿರಿಯ ಸದಸ್ಯ ಗವಿಸಿದ್ದಪ್ಪ ಎಚ್. ಪಾಟೀಲ ಅವರು ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಡಾ. ಸಿ.ಆರ್. ಚಂದ್ರಶೇಖರ ಅವರ ಪೋಷಕರಿಗೆ ಕಿವಿಮಾತು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಒಳ್ಳೆಯ ಅಧ್ಯಯನ ವಿಧಾನ, ಉತ್ತಮ ನೆನಪಿನ ಶಕ್ತಿ, ಪ್ರಿಯ ಪಿಯುಸಿ ವಿದ್ಯಾರ್ಥಿ ಹೇಗಿದೆ ನಿನ್ನ ಸ್ಟಡೀಸ್? ಪರೀಕ್ಷಾ ಸಂಭ್ರಮ ಮತ್ತು ಡಾ. ಶರಣಬಸಪ್ಪ ವಡ್ಡನಕೇರಿ ಅವರು ಸಂಪಾದಿಸಿದ ಕಾಯಕ ಶರಣರು ಕೃತಿಗಳನ್ನು ಪರಿಚಯಿಸಿದರು.
ಪ್ರಕಾಶನದ ಸಲಹಾ ಸಮಿತಿ ಸದಸ್ಯೆ ಕಾವ್ಯಶ್ರೀ ಮಹಾಗಾಂವಕರ್ ಮಾತನಾಡಿ, ಯಾವುದೇ ಒಂದು ಉತ್ಕೃಷ್ಟವಾದ ಕೆಲಸ ಆರಂಭವಾಗಬೇಕಾದರೆ ಅಲ್ಲಿ ಮಹಿಳೆ ಇರುತ್ತಾಳೆ, ಅದರಂತೆ ಬಸವರಾಜ ಕೊನೇಕ ಅವರು ಮುಂದಿನ ವರ್ಷದಿಂದ ಪುಸ್ತಕ ವ್ಯಾಪಾರಿಗಳಿಗೆ ಕಾಯಕ ಸಿರಿ ಪ್ರಶಸ್ತಿ ಆರಂಭಿಸಲಿ ಎಂದು ಹಾರೈಸಿದರು.
ಮಹಾಂತಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಿವರಾಜ ಪಾಟೀಲ ಮಾತನಾಡಿ, ಕೊನೇಕ ಪರಿವಾರದ ಹಿಂದೆ ಬಸಮ್ಮ ಕೊನೇಕ ಅವರ ಶ್ರಮ ಇದ್ದಿದ್ದರಿಂದ ಇಂದು ನಾವಿಲ್ಲಿ ಸೇರಿದ್ದೇವೆ ಎಂದರು.

ಸಿದ್ಧಲಿಂಗೇಶ್ವರ ಬುಕ್ ಡಿಪೊ ಮತ್ತು ಪ್ರಕಾಶನದ ಮುಖ್ಯಸ್ಥ ಬಸವರಾಜ ಗು. ಕೊನೇಕ ಅಧ್ಯಕ್ಷತೆ ವಹಿಸಿದ್ದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಸಾಧಕರಾದ ಗಣೇಶ ಭೋಸಲೆ ಮತ್ತು ಸೃಷ್ಟಿ ಪಾಟೀಲ ಅವರಿಗೆ ಪುಸ್ತಕಗಳನ್ನು ನೀಡಿ ಸನ್ಮಾಸಲಾಯಿತು.
ಸಿದ್ಧಲಿಂಗ ಬ. ಕೊನೇಕ, ಶರಣಬಸವ ಬ. ಕೊನೇಕ, ಕಿರಣ ಪಾಟೀಲ, ಡಾ. ಶರಣಬಸಪ್ಪ ವಡ್ಡನಕೇರಿ,
ಸಾಹಿತಿ ಡಾ. ಚಿ.ಸಿ. ನಿಂಗಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
