ವಚನಾನಂದ ಸ್ವಾಮೀಜಿಗೆ ಜಾಮೀನು, ಪಂಚಮಸಾಲಿ ಪೀಠದಲ್ಲಿ ನಿಷೇಧಾಜ್ಞೆ

ಬಸವ ಮೀಡಿಯಾ
ಬಸವ ಮೀಡಿಯಾ

ಹರಿಹರ

ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಲಿಂಗಾಯತ ಪಂಚಮಸಾಲಿ ಪೀಠದ ಪದಚ್ಯುತ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಅವರು ಮಂಗಳವಾರ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ನಿರೀಕ್ಷಣಾ ಜಾಮೀನು ಕೋರಿ ಏಪ್ರಿಲ್ 21ರಂದು ಸ್ವಾಮೀಜಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆ.

‘ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು, ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಮತ್ತು ನ್ಯಾಯಾಲಯದ ಅನುಮತಿಯಿಲ್ಲದೆ ವ್ಯಾಪ್ತಿ ಪ್ರದೇಶ ಬಿಟ್ಟು ಹೋಗಬಾರದು’ ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ.

‘ಸ್ವಾಮೀಜಿ ಅವರು ಮಸಾಜ್‌ ಮಾಡಿಸಿಕೊಳ್ಳುತ್ತಾರೆ, ಹೊಡೆಯುತ್ತಾರೆ, ನಿಂದಿಸುತ್ತಾರೆ ಹಾಗೂ ಅನಾರೋಗ್ಯ ಉಂಟಾದಾಗ ಔಷಧ ಕೊಡುವುದಿಲ್ಲ’ ಎಂದು ಮಠದಲ್ಲಿ ಓದುತ್ತಿದ್ದ ಮೂವರು ಮಕ್ಕಳು ಆರೋಪಿಸಿದ್ದಾರೆ.

ಇದರ ಹಿನ್ನಲೆಯಲ್ಲಿ ಏಪ್ರಿಲ್ 17ರಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಂಜುಳಾ ಮಹೇಶ್ ನೇತೃತ್ವದ ತಂಡ ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಈ ಬೆಳವಣಿಗೆಯ ಬೆನ್ನಲ್ಲೇ ಶ್ರೀಗಳಿಗೆ ಬಂಧನದ ಭೀತಿ ಎದುರಾಗಿತ್ತು.

ನಿಷೇಧಾಜ್ಞೆ

ಶಾಂತಿ ಕಾಪಾಡುವ ಉದ್ದೇಶದಿಂದ ಮೇ 4ರಿಂದ ಮೇ 31ರವರೆಗೆ ಗುರುಪೀಠದ ಆವರಣದಲ್ಲಿ ಯಾವುದೇ ಸಭೆ, ಪತ್ರಿಕಾಗೋಷ್ಠಿಗಳನ್ನು ನಡೆಸದಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೋಮವಾರ ಆದೇಶ ಹೊರಡಿಸಿದ್ದಾರೆ.

ಟ್ರಸ್ಟಿಗಳು ಹಾಗೂ ವಚನಾನಂದ ಸ್ವಾಮೀಜಿ ಬೆಂಬಲಿಗರ ನಡುವಣ ಘರ್ಷಣೆಯ ಹಿನ್ನಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

‘ಮಾ.10 ರಿಂದ ಏ.27ರವರೆಗೆ ಮಠದಲ್ಲಿ ಟ್ರಸ್ಟಿಗಳು ಮತ್ತು ವಚನಾನಂದ ಸ್ವಾಮೀಜಿ ಬೆಂಬಲಿಗರು ಸರಣಿ ಸಭೆ ಹಾಗೂ ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ. ಉದ್ರಿಕ್ತ ಭಾಷಣ ಮಾಡಿ, ಹೇಳಿಕೆ ನೀಡಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿದ್ದಾರೆ. ಇದರಿಂದ ಸಾರ್ವಜನಿಕ ಶಾಂತಿಗೆ ಧಕ್ಕೆಯಾಗಿದೆ. ಪ್ರಾಣ ಹಾನಿಯಾಗುವ, ಮಠದ ಆಸ್ತಿಗೆ ಧಕ್ಕೆಯಾಗುವ ಸಾಧ್ಯತೆಗಳು ಇರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವರದಿ ನೀಡಿದ್ದಾರೆ. ಈ ಕಾರಣಕ್ಕೆ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

‘ನಿಷೇಧಾಜ್ಞೆಯು ಸಭೆ, ಸಮಾರಂಭ ಮತ್ತು ಪತ್ರಿಕಾಗೋಷ್ಠಿಗಳಿಗಷ್ಟೇ ಅನ್ವಯಿಸಲಿದ್ದು, ಗುರುಪೀಠದಲ್ಲಿ ನಡೆಯುವ ದೈನಂದಿನ ಧಾರ್ಮಿಕ ಪೂಜಾ ವಿಧಿ ವಿಧಾನಗಳಿಗೆ ಯಾವುದೇ ಅಡ್ಡಿಯಿರುವುದಿಲ್ಲ. ಮೇ 31ರವರೆಗೆ ಯಾವುದೇ ಬಣಗಳು ಶಕ್ತಿ ಪ್ರದರ್ಶನ ಮಾಡಲು ಆಸ್ಪದವಿಲ್ಲ’ ಎಂದು ತಿಳಿಸಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *