ಅವಗುಣ ಕಳೆದುಕೊಂಡು ಲಿಂಗಗುಣ ಅಳವಡಿಸಿಕೊಳ್ಳುವುದೇ ಶಿವಯೋಗ
ದಾವಣಗೆರೆ :
ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ವತಿಯಿಂದ ಬಸವ ಜಯಂತಿ ಕಾರ್ಯಕ್ರಮ ಈಚೆಗೆ ಆಂಜನೇಯ ಬಡಾವಣೆ, ಯೋಗ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಪ್ರಾಸ್ತಾವಿಕ ನುಡಿಗಳನ್ನಾಡಿದ ವಿನೋದ ಅಜಗಣ್ಣ ಅವರು, ಬಸವಾದಿ ಶಿವಶರಣರ ವಚನಗಳು ನಮ್ಮ ದೈನಂದಿನ ಬದುಕಿಗೆ ನೀಡಿದ ಅಪಾರ ಸಂಪತ್ತಾಗಿದೆ. ವಚನಗಳ ಅಧ್ಯಯನದಿಂದ ನಮ್ಮ ಜೀವನದ ಅನೇಕ ಸಮಸ್ಯೆಗಳಿಗೆ ಉತ್ತರ ದೊರಕುತ್ತದೆ. ಲಿಂಗಾಯತರಾಗಿ ನಾವು ಅರಿವಿನ ಜೊತೆ ಆಚರಣೆಯನ್ನು ತಂದುಕೊಂಡರೆ ನಮ್ಮ ಜೀವನವು ಸಾರ್ಥಕವಾಗುತ್ತದೆ ಎಂದರು. ಜೊತೆಗೆ ಮಹಿಳಾ ಘಟಕ ಸ್ಥಾಪನೆಯಾದಾಗಿನಿಂದ ಅದು ನಡೆದು ಬಂದ ದಾರಿಯನ್ನು ಸಂಕ್ಷಿಪ್ತವಾಗಿ ತಿಳಿಸಿದರು.

ಬಸವಣ್ಣನವರ ದೃಷ್ಟಿಯಲ್ಲಿ ಶಿವಯೋಗ ವಿಷಯವಾಗಿ ಬಸವ ಬಳಗದ ಬಸವತತ್ವ ಚಿಂತಕರಾದ ಲೀಲಾವತಿ ರಾಜಣ್ಣ ಅವರು ಮಾತನಾಡುತ್ತಾ, ಜಗತ್ತಿನ ಜೀವರಾಶಿಗಳಲ್ಲೆಲ್ಲ ಮಾನವ ಜನ್ಮ ಶ್ರೇಷ್ಠವಾದದ್ದು.
ಶಿವನೊಡನೆ ಬೆರೆತು ಒಂದಾಗುವುದೇ ಶಿವಯೋಗ. ಈ ಶ್ರೇಷ್ಠವಾದ ಶಿವಯೋಗದ ಆಚರಣೆಯನ್ನು ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮವೆಂದು ಇಷ್ಟಲಿಂಗ ಪೂಜೆ ಮಾಡುತ್ತಾ ಪಂಚಾಂಗಗಳ ಮೂಲಕ ಸನ್ಮಾರ್ಗದಿಂದ ನಡೆಯಬೇಕು.

ಅಷ್ಟಾವರಣಗಳ ರಕ್ಷಾ ಕವಚದಿಂದ ಷಟಸ್ಥಲ ಮೆಟ್ಟಿಲುಗಳನ್ನು ದಾಟಿ, ಅಜ್ಞಾನವೆಂಬ ಕತ್ತಲೆಯನ್ನು ಕಳೆದುಕೊಂಡು ಸುಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಆಗ ನಮ್ಮ ಅಂತರಂಗ ಬಹಿರಂಗದ ಶುದ್ಧಿಯಾಗಿ ಆಚರಣೆಗಳ ಅನುಷ್ಠಾನದಿಂದ ಅನುಭವವಾಗಿ ನಡೆ-ನುಡಿಗಳಿಂದಾದ ಬದುಕು ನಮ್ಮದಾಗುತ್ತದೆ. ನಮ್ಮಲ್ಲಿರುವ ಅವಗುಣಗಳನ್ನು ಕಳೆದುಕೊಂಡು ಲಿಂಗಗುಣಗಳನ್ನ ಅಳವಡಿಸಿಕೊಳ್ಳುವುದೇ ಶಿವಯೋಗ ಎಂದು ಅನುಭಾವ ನೀಡಿದರು.
ಇಷ್ಟಲಿಂಗ ಪೂಜಾ ಪ್ರಾತ್ಯಕ್ಷತೆಯನ್ನು ನಡೆಸಿಕೊಟ್ಟ ವೀಣಾ ಮಂಜುನಾಥ ಮತ್ತು ಸುವರ್ಣ ಕೊಟ್ರೇಶ ಅವರು ನಮ್ಮದೇ ಅರುವಿನ ಕುರುಹಾದ ಲಿಂಗವನ್ನು ಸದಾ ನಮ್ಮ ಅಂಗದಲ್ಲಿ ಧರಿಸಿರಬೇಕು. ಜಾತಿ, ಮತ, ಲಿಂಗ ಬೇಧವಿಲ್ಲದೆ ಬಸವಣ್ಣನವರ ತತ್ವಗಳನ್ನು ಒಪ್ಪಿಕೊಳ್ಳುವವರು ಯಾರಾದರೂ ಇಷ್ಟಲಿಂಗ ಪೂಜೆಯನ್ನು ಮಾಡಬಹುದಾಗಿದೆ. ಇಷ್ಟಲಿಂಗ ಪೂಜೆಯನ್ನು ಕ್ರಮವಾಗಿ ಮಾಡುವ ವಿಧಾನ, ವೈಜ್ಞಾನಿಕವಾಗಿ ಅದರ ಉಪಯೋಗಗಳನ್ನು ತಿಳಿಸಿಕೊಟ್ಟರು.
ಬಸವ ಬಳಗ ಅಧ್ಯಕ್ಷರಾದ ಭುವನೇಶ್ವರಿ ತಾಯಿಯವರು ಅನುಭಾವ ಮಾಡಿದರು. ಬಸವತತ್ವ ಅನುಯಾಯಿಗಳಾದ ಸುಜಾತ ಅಗಡಿ ಅವರು ಕುಟುಂಬದಲ್ಲಿ ಮಹಿಳೆಯರು ಶರಣ ಸಂಸ್ಕೃತಿಯನ್ನು ಅಳವಡಿಸಿಕೊಂಡರೆ ಮುಂದಿನ ಪೀಳಿಗೆಯವರು ಅನುಕರಿಸಲು ಅನುಕೂಲವಾಗುತ್ತದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಪ್ರೇಮ ಮಂಜುನಾಥ ಅವರು ವಚನ ಲಿಖಿತ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಮತಾ ನಾಗರಾಜ ಅವರು ಪುಸ್ತಕಗಳ ಪ್ರಾಯೋಜಕರಾಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಮಧುಮತಿ ಗಿರೀಶ್ ರವರು ಪ್ರಸಾದ ಮತ್ತು ಸ್ಮರಣಿಕೆಗಳ ಪ್ರಾಯೋಜಕತ್ವ ವಹಿಸಿದ್ದರು.
ಅಧ್ಯಕ್ಷತೆ ವಹಿಸಿ ಘಟಕದ ಅಧ್ಯಕ್ಷೆ ಕುಸುಮ ಲೋಕೇಶ ಅವರು ಮಾತನಾಡಿ, ಮಹಿಳೆಯರು ಮೌಢ್ಯತೆಯ ವೈದಿಕ ಆಚರಣೆಗಳನ್ನು ಮಾಡದೆ ಬಸವಣ್ಣನವರು ಅತ್ಯಂತ ಸರಳವಾಗಿ, ನಮ್ಮ ಅಂಗೈಗೆ ಕೊಟ್ಟಿರುವ ಇಷ್ಟಲಿಂಗ ಪೂಜೆಯೊಂದಿಗೆ ನಡೆ ನುಡಿ ಒಂದಾದ, ಕಾಯಕ ದಾಸೋಹ ತತ್ವಗಳನ್ನು ಮೈಗೂಡಿಸಿಕೊಂಡರೆ ನಮ್ಮ ಬದುಕು ಸಾರ್ಥಕವಾಗುತ್ತದೆ.
ಪ್ರಸ್ತುತ ಬಸವಣ್ಣನವರು ನಮಗೆ ಎಲ್ಲಾ ಕೊಟ್ಟಿದ್ದಾರೆ ನಾವು ಅನುಷ್ಠಾನಗೊಳಿಸಿಕೊಳ್ಳುವುದು ಮುಖ್ಯವಾಗಿದೆ ಎಂದರು.

ವಚನ ಪ್ರಾರ್ಥನೆ ಘಟಕದ ಸದಸ್ಯರಿಂದ ನಡೆಯಿತು.
ಸ್ವಾಗತ ಮಧುಮತಿ ಗಿರೀಶ ಮಾಡಿದರು. ಲಲಿತ ಕಲ್ಲೇಶ ಅವರು ಶರಣು ಸಮರ್ಪಣೆ ಮಾಡಿದರು. ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಬಸವಾನುಯಾಯಿಗಳು, ಬಡಾವಣೆಯ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಚನಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
