‘ಜಾತಿ, ಧರ್ಮ, ವಾರ, ನಕ್ಷತ್ರಗಳಿಲ್ಲದೆ ನಡೆಯುವ ಸಾಮೂಹಿಕ ವಿವಾಹಗಳು’

ಬಸವ ಮೀಡಿಯಾ
ಬಸವ ಮೀಡಿಯಾ

‘ಸತಿ-ಪತಿಗಳು ಬಾಗಿದ ತಲೆ ಮುಗಿದ ಕೈಯಾಗಿರಬೇಕು’

ಚಿತ್ರದುರ್ಗ :

ಮುರುಘಾಮಠದಲ್ಲಿ ಪ್ರತಿತಿಂಗಳು 5ನೇ ತಾರೀಕು ನಡೆಯುವ ಸಾಮೂಹಿಕ ವಿವಾಹಗಳು ಸಂಪ್ರದಾಯದ ನಡೆಯಲ್ಲ, ಬದಲಾಗಿ ಸಾಮಾಜಿಕ ಬದಲಾವಣೆಯ ಅಸ್ಮಿತೆ ಎಂದು ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.

ನಗರದ ಬಸವಕೇಂದ್ರ ಮುರುಘಾ ಮಠದ ಅನುಭವ ಮಂಟಪದಲ್ಲಿ ಈಚೆಗೆ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಧೂವರರಿಗೆ ಪುಷ್ಪವೃಷ್ಠಿಗೈದು ಶುಭ ಹಾರೈಸಿ ಮಾತನಾಡಿದರು.

ಯಾವುದು ಸರಳವೋ, ಯಾವುದು ಸತ್ಯವೋ ಅದು ಸುಂದರವಾಗಿರುತ್ತದೆ. ಯಾವ ವ್ಯಕ್ತಿತನ್ನ ಜೀವಿತದಲ್ಲಿ ಬಾಗಿ ನಡೆಯುತ್ತಾನೋ ಅವನ ಬದುಕು ಬಂಗಾರವಾಗಿರುತ್ತದೆ. ಸತಿ-ಪತಿಗಳಿಬ್ಬರೂ ಕೂಡ ಬಾಗಿದ ತಲೆಗೆ ಮುಗಿದ ಕೈಯಾಗಿರಬೇಕೆಂದು ಹೇಳಿದರು.

ಯಾವುದೇ ಜಾತಿ ಧರ್ಮಗಳ ಗೊಡವೆಯಿಲ್ಲದೆ ವಾರ, ತಿಥಿ, ನಕ್ಷತ್ರಗಳ ಲೆಕ್ಕಾಚಾರವಿಲ್ಲದೆ ಪ್ರತಿ ತಿಂಗಳು 5ನೇ ತಾರೀಕಿನಂದು ನಡೆಯುವ ಸಾಮೂಹಿಕ ವಿವಾಹಗಳಿಗೆ 36 ವರ್ಷಗಳ ಇತಿಹಾಸವಿದೆ. ದೇಶ ಹಾಗೂ ತಮ್ಮ ಕುಟುಂಬದ ದುಂದುವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ ತಾವೆಲ್ಲ ಸರಳ ವಿವಾಹಕ್ಕೆ ಅಣಿಯಾಗಿದ್ದೀರಿ. ನಿಮ್ಮ ಬದುಕು ಸುಂದರವಾಗಿರುತ್ತದೆ.

ಬಸವಾದಿ ಶರಣರ ಆಶಯದಂತೆ ಶ್ರೀಮಠದಲ್ಲಿ ನಡೆಯುವ ವಚನ ಮಾಂಗಲ್ಯದಲ್ಲಿ 18 ಜೋಡಿ ವೈವಾಹಿಕ ಜೀವನಕ್ಕೆ ಸರಳ ಬದುಕಿಗೆ ಸಾಕ್ಷಿಯಾಗಿದ್ದೀರಿ. 4 ಜೋಡಿಗಳು ಅಂತರ್ಜಾತಿ ವಿವಾಹಕ್ಕೆ ಒಳಗಾಗಿದ್ದೀರಿ. ಶ್ರೀಮಠವು ಯಾವಾಗಲೂ ಸಾಮಾಜಿಕ ಸಮಾನತೆಯ ಪರ ಕಾರ್ಯನಿರ್ವಹಿಸುತ್ತಿದೆ ಎಂದರು.

ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಸಂಸಾರದ ಜೀವನ ಚೆನ್ನಾಗಿರಲು ನಾಲ್ಕು ವಿಚಾರಗಳನ್ನು ಅಳವಡಿಸಿಕೊಂಡಿರಬೇಕು. ಪರಸ್ಪರರ ನಗು ಸಂಸಾರವನ್ನು ಸುಂದರವಾಗಿಸುತ್ತದೆ. ಸಂಸಾರದಲ್ಲಿ ಆಗುವಂತಹ ಮನಸ್ತಾಪ, ಜಗಳವನ್ನು ಮೌನ ತಪ್ಪಿಸುತ್ತದೆ. ನದಿ ದಾಟಲು ತೆಪ್ಪ ಬೇಕು. ಅದೇ ರೀತಿ ಸಂಸಾರದ ನದಿ ದಾಟಲು ತೆಪ್ಪಗಿರಬೇಕಾಗುತ್ತದೆ. ತಾಳ್ಮೆ ದಾಂಪತ್ಯ ಜೀವನದಲ್ಲಿ ಬಹಳ ಮುಖ್ಯವಾದುದು. ಇದು ಪುರುಷ ಮಹಿಳೆಯರಿಬ್ಬರಲ್ಲೂ ಇರಬೇಕು. ತಾಳ್ಮೆಯಿಂದ ಮಾತ್ರ ಸಂಸಾರವನ್ನು ಜಯಿಸಲು ಸಾಧ್ಯ. ಹಾಗಾಗಿ ಹೊಸ ಜೀವನಕ್ಕೆ ಕಾಲಿಡುತ್ತಿರುವ ದಂಪತಿಗಳು ನಗು, ಮೌನ, ವಿಶ್ವಾಸ, ತಾಳ್ಮೆಯನ್ನು ಅಳವಡಿಸಿಕೊಂಡು ಉತ್ತಮ ಬದುಕನ್ನು ಕಟ್ಟಿಕೊಳ್ಳಿ ಎಂದು ಹರಸಿದರು.

ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಒಂದು ಮದುವೆ ಮಾಡಲು ಆ ಕುಟುಂಬ ಎಷ್ಟೊಂದು ಕಷ್ಟ ಅನುಭವಿಸುತ್ತದೆ. ಹೀಗಿರುವಾಗ ಶ್ರೀಮಠವು ನಿರಂತರವಾಗಿ 36 ವರ್ಷಗಳಿಂದ ಪ್ರತಿತಿಂಗಳು ಈ ಕಾರ್ಯವನ್ನು ಮಾಡಿಕೊಂಡು ಬರುತ್ತಿದೆ. ಬಸವಾದಿ ಶರಣರ ಆದರ್ಶಗಳ ಪರಿಕಲ್ಪನೆಯಲ್ಲಿ ನಡೆಯುತ್ತಿದೆ. ಬಸವಣ್ಣನವರು ಇಷ್ಟಲಿಂಗವನ್ನು ಕೊಟ್ಟಿದ್ದಾರೆ.

ಇಷ್ಟಲಿಂಗವನ್ನು ಧ್ಯಾನಿಸುವುದರ ಮೂಲಕ ಸಮಾಜದ ಸಾಮರಸ್ಯ ಮತ್ತು ಸ್ವಾಸ್ಥ್ಯವನ್ನು ಕಾಪಾಡಬೇಕೆಂದರು.

ಶಿರಸಂಗಿಯ ಬಸವ ಮಹಾಂತ ಸ್ವಾಮೀಜಿ ಮಾತನಾಡಿ, ಪುಟ್ಟ ಮಕ್ಕಳು ಕೂಡ ಮೊಬೈಲ್ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ. ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಿ ಮೊಬೈಲ್ ವ್ಯಾಮೋಹವನ್ನು ಬಿಡಿಸಬೇಕು. ಸತಿ-ಪತಿಗಳು ಪರಸ್ಪರ ನಂಬಿಕೆ ಮೂಲಕ ಸ್ನೇಹಿತರಂತೆ ಬದುಕು ಸಾಗಿಸಬೇಕು ಎಂದರು.

ಬಿಜೆಪಿ ಮುಖಂಡ ರಾಜು ಕೋರಿ, ಮೆದುಳು ಮತ್ತು ನರರೋಗ ತಜ್ಞ ಡಾ. ಸುನೀಲ ಕಲ್ಲೂರ ಅವರನ್ನು ಸನ್ಮಾನಿಸಲಾಯಿತು. ಬಸವ ಮಲ್ಲಿಕಾರ್ಜುನ ಸ್ವಾಮಿಗಳು, ಬಸವಲಿಂಗಮೂರ್ತಿ ಶರಣರು, ಪತ್ರಕರ್ತ ಲಿಂಗರಾಜು, ಪೈಲ್ವಾನ್ ತಿಪ್ಪೇಸ್ವಾಮಿ, ಚುಟುಕು ಕವಿ ಗಂಗಾಧರಪ್ಪ ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಶಿಕ್ಷಕ ಗಿರೀಶಾಚಾರ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *