ಸಂವಿಧಾನದ ಆಶಯಗಳು ಭಾರತದ್ದು, ಫ್ರೆಂಚ್ ಕ್ರಾಂತಿಯದಲ್ಲ: ಮೋಹನ್‌ ಭಾಗವತ್‌

ಬಸವ ಮೀಡಿಯಾ
ಬಸವ ಮೀಡಿಯಾ

ಸುತ್ತೂರು ಮಠ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಸರ ಸಂಘಚಾಲಕ

ಮೈಸೂರು

ಸಂವಿಧಾನದಲ್ಲಿನ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಫ್ರೆಂಚ್ ಕ್ರಾಂತಿಯಿಂದ ಬಂದಿದ್ದಲ್ಲ. ಈ ಪರಿಕಲ್ಪನೆ ಭಾರತದ್ದು. ಇದು ತಥಾಗತ ಬುದ್ಧ‌ ನೀಡಿದ್ದು, ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕ ಮೋಹನ್‌ ಭಾಗವತ್‌ ಹೇಳಿದರು.

ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾಮಠದ ಆವರಣದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವದ 15ನೇ ವಿಶೇಷ ಉಪನ್ಯಾಸದಲ್ಲಿ ‘ರಾಷ್ಟ್ರೀಯ ಅಭಿವೃದ್ಧಿಗೆ ಸಾಮಾಜಿಕ ಸೌಹಾರ್ದತೆ ಪ್ರೇರಕ’ ವಿಷಯ ಕುರಿತು ಅವರು ಮಾತನಾಡಿದರು.

ರಾಷ್ಟ್ರವೆಂದರೆ ಕೇವಲ ರಾಜಕೀಯ ವ್ಯವಸ್ಥೆ ಅಥವಾ ಭೌಗೋಳಿಕ ಗಡಿಯಲ್ಲ. ಭೂಮಿ, ಜನರು, ಸಂಸ್ಕೃತಿ ಮತ್ತು ಸಾಮೂಹಿಕ ಚೇತನವೇ ರಾಷ್ಟ್ರದ ಮೂಲ ಅಂಶಗಳಾಗಿವೆ.

ಭಾರತದಲ್ಲಿ ವಿವಿಧ ರಾಜ್ಯಗಳು ಇದ್ದರೂ ಏಕತೆಯ ಭಾವನೆ, ಭೂಮಿಯೊಂದಿಗೆ ಹೊಂದಿರುವ ಆತ್ಮೀಯ ಸಂಬಂಧದಿಂದಲೇ ದೇಶ ರೂಪುಗೊಂಡಿದೆ ಎಂದು ವಿಶ್ಲೇಷಿಸಿದರು.

ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಬೆಸೆಯುವ ಕೊಂಡಿಯೇ ಬಂಧುತ್ವ. ಈ ಬಂಧುತ್ವ-ಭಾವ ಇಲ್ಲದಿದ್ದರೆ ದೇಶದ ಸ್ವಾತಂತ್ರ್ಯ ಕಾಪಾಡಿಕೊಳ್ಳುವುದು ಕಷ್ಟ ಎಂದರು.

ಭಾಷೆ, ಜಾತಿ, ಪಂಗಡಗಳನ್ನು ಮೀರಿ ಬಂಧುತ್ವ ನೆಲೆಗೊಳ್ಳಬೇಕು. ಭಾರತೀಯರು ಭ್ರಾತೃತ್ವ ಮತ್ತು ಪರಸ್ಪರ ಸಹಾಯದೊಂದಿಗೆ ನಾಗರಿಕತೆ ಕಟ್ಟಿದ್ದಾರೆ.

ಸಮಾಜದಲ್ಲಿ ಸಾಮರಸ್ಯ ಮೂಡಿಸಲು ವಿವಿಧ ಜಾತಿ, ಧರ್ಮ ಮತ್ತು ಭಾಷೆಯ ಜನರ ಮನೆಗಳಿಗೆ ಭೇಟಿ ನೀಡಿ ಸ್ನೇಹ ಬೆಳೆಸಬೇಕು. ದುರ್ಬಲ ವರ್ಗದವರ ಉದ್ಧಾರಕ್ಕೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು. ಕಟುವಾದ ನುಡಿಗಳನ್ನು ಬಿಟ್ಟು, ಸತ್ಯ ಮತ್ತು ಪ್ರೀತಿಯಿಂದ ಸಂವಹನ ನಡೆಸುವ ಮೂಲಕ ಮನಸ್ಸಿನ ವಿಕಾರಗಳನ್ನು ದೂರ ಮಾಡಬೇಕು ಎಂದು ಅವರು ಹೇಳಿದರು.

ಅಸ್ತಿತ್ವಕ್ಕಾಗಿ ಮತ್ತೊಬ್ಬರ ವಿರುದ್ಧ ಹೋರಾಟ ನಡೆಸುವುದು ಪಾಶ್ಚಾತ್ಯ ಪರಿಕಲ್ಪನೆಯಾಗಿದೆ.

ಪಾಶ್ಚಾತ್ಯ ದೇಶಗಳಲ್ಲಿ ಸಮಾಜ ಸಾಮಾಜಿಕ ಒಪ್ಪಂದದ ಸಿದ್ಧಾಂತದ ಮೇಲೆ ನಿರ್ಮಾಣವಾಗಿದೆ. ಅಲ್ಲಿ ಜನರು ಲಾಭದ ಉದ್ದೇಶದಿಂದ ಒಟ್ಟಿಗೆ ಬದುಕುತ್ತಾರೆ. ಆದರೆ, ಭಾರತೀಯ ಸಮಾಜದ ಪರಿಕಲ್ಪನೆ ಅದಕ್ಕಿಂತ ಭಿನ್ನವಾಗಿದೆ. ಭಾರತದಲ್ಲಿ ಸಮಾಜವೆಂದರೆ ಒಪ್ಪಂದದ ಆಧಾರದ ಮೇಲೆ ನಿರ್ಮಾಣವಾದ ವ್ಯವಸ್ಥೆಯಲ್ಲ. ದೀರ್ಘಕಾಲ ಒಟ್ಟಿಗೆ ಬದುಕಿ, ಆತ್ಮೀಯತೆ, ಒಂದೇತನದ ಭಾವನೆ ಹಾಗೂ ಸಾಮೂಹಿಕ ಗುರಿಯನ್ನು ಹೊಂದಿರುವ ಜನರ ಸಮೂಹವೇ ಸಮಾಜ.

ಪರೋಪಕಾರ ಮತ್ತು ಸೇವೆಯ ಮೌಲ್ಯಗಳೊಂದಿಗೆ ಉನ್ನತ ಜೀವನ ಸಾಗಿಸುವುದೇ ಭಾರತೀಯ ಸಮಾಜದ ಗುರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಾಮರಸ್ಯ, ಸೌಹಾರ್ದತೆಯಿಂದ ಇದ್ದಾಗ ಮಾತ್ರ ದೇಶದ ನಿಜವಾದ ಅಭಿವೃದ್ಧಿ ಆಗುತ್ತದೆ ಎಂದು ಅವರು ಪ್ರತಿಪಾದಿಸಿದರು.

ದೇಶದ ಕೆಲವೇ ಕೆಲವು ಶ್ರೀಮಂತ ವ್ಯಕ್ತಿಗಳ ಏಳಿಗೆಯಿಂದ ದೇಶ ಅಭಿವೃದ್ಧಿಯಾಗಿದೆ ಎಂದು ಹೇಳಲಾಗದು. ದೇಹದ ಒಂದು ಭಾಗ ಪಾರ್ಶ್ವವಾಯುವಿಗೆ ಒಳಗಾಗಿದ್ದರೆ, ಇಡೀ ದೇಹ ಆರೋಗ್ಯವಾಗಿದೆ ಎಂದು ಹೇಗೆ ಹೇಳಲು ಆಗುವುದಿಲ್ಲವೋ ಹಾಗೆಯೇ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯೂ ಆಗದಿದ್ದರೆ ಅದು ನಿಜವಾದ ಅಭಿವೃದ್ಧಿಯಲ್ಲ.

ಧರ್ಮವು ಮಾನವನ ಸರ್ವಾಂಗೀಣ ಪ್ರಗತಿಯ ಅಡಿಪಾಯ. ಸೌಹಾರ್ದತೆಯು ಹಿತವಾದ ಸಂಗೀತದಂತೆ ಇರಬೇಕು. ನಾವು ಸಂಯಮ ಕಳೆದುಕೊಂಡರೆ ಏಕಭಾವ ಮೂಡುವುದಿಲ್ಲ. ಎಲ್ಲರೂ ಒಂದೇ ಎನ್ನುವ ಸಮಭಾವವೇ ಸೌಹಾರ್ದತೆ’ ಎಂದು ಪ್ರತಿಪಾದಿಸಿದರು.

‘ದಯೆಯಿದ್ದಲ್ಲಿ ಧರ್ಮವಿರುತ್ತದೆ. ಆಶ್ರಯ ಅರಸಿ ಬಂದ ಹಕ್ಕಿಯನ್ನು ರಕ್ಷಿಸಲು ತನ್ನನ್ನೇ ಅರ್ಪಿಸಿಕೊಂಡ ಶಿಬಿ ಚಕ್ರವರ್ತಿಯ ತ್ಯಾಗ, ದಯೆ ನಮಗೆ ಬರಬೇಕು. ಈ ತ್ಯಾಗ, ಕರುಣೆ, ದಯೆಯಲ್ಲಿಯೇ ಸೌಹಾರ್ದವಿದೆ’ ಎಂದು ವಿಶ್ಲೇಷಿಸಿದರು.

ಸಹೋದರರನ್ನು ಅಸ್ಪೃಶ್ಯರಾಗಿ ಶತಮಾನಗಳಿಂದ ದೂರವಿಡಲಾಗಿದೆ. ಹೀಗಾಗಿ ಅಂಬೇಡ್ಕರ್ ಅವರ ಸಂವಿಧಾನ ಸಭೆಯ ಭಾಷಣಗಳನ್ನು ಮತ್ತೊಮ್ಮೆ ಓದಿಕೊಳ್ಳಬೇಕಿದೆ. ಸಾಮಾಜಿಕ ಸ್ವಾತಂತ್ರ್ಯ ನೆಲೆಗೊಳ್ಳದೆ ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಸಿಗುವುದಿಲ್ಲ ಎಂದಿದ್ದಾರೆ ಎಂದರು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸತ್ಯಸಾಯಿ‌ ಆಶ್ರಮದ ಮಧುಸೂದನ ಸಾಯಿ ಅವರ 14ನೇ ಉಪನ್ಯಾಸದ ‘ಆತ್ಮಾನೊ ಮೋಕ್ಷಂ ಜಗತ್ ಹಿತಾಯಚ’ ಕೃತಿಯನ್ನು ಬಿಡುಗಡೆ ಮಾಡಿದರು.

ಗಾಯಕಿಯರಾದ ಕೆ.ಜಿ.ವಿನುತಾ, ಅಮೂಲ್ಯ ಅವರು ಪುರುಷೋತ್ತಮ್, ಎಸ್.ನಾಗರಾಜ್ ಅವರ ಪಕ್ಕಾವಾದ್ಯದ ಸಾಂಗತ್ಯದಲ್ಲಿ ವಚನಗಳನ್ನು ಹಾಡಿದರು.

ಜೆಎಸ್ಎಸ್ ಉನ್ನತ ಶಿಕ್ಷಣ ಸಂಶೋಧನಾ ಅಕಾಡೆಮಿಯ ಪ್ರೊ ಚಾನ್ಸಲರ್ ಪ್ರೊ.ಬಿ.ಸುರೇಶ್ ಸ್ವಾಗತಿಸಿದರು. ಜೆಎಸ್ಎಸ್ ಕಾನೂನು ಕಾಲೇಜಿನ ಕಾರ್ಯಕಾರಿ ಮುಖ್ಯಸ್ಥ ಪ್ರೊ.ಕೆ.ಎಸ್.ಸುರೇಶ್ ಉಪನ್ಯಾಸದ ನಂತರ ಸಂವಾದ ನಡೆಸಿಕೊಟ್ಟರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
2 Comments
  • ನುಡಿದಂತೆ ನಡೆಯುವ ಜಾಯಮಾನ ನಿಮ್ಮದಲ್ಲ ಬಿಡಿ ಮೋಹನ್ ರವರೇ ಗುಲಾಮಗಿರಿ ಮತ್ತು ಮೂಢನಂಬಿಕೆ ಸಂಸ್ಕೃತಿ ಯನ್ನು ಭಿತ್ತಿ ಬೆಳೆ ತಗೆಯುವ ಕಾಯಕ ನಿಮ್ಮದು ಈ ಕಾಯ೯ಕ್ಕೆ ನಮ್ಮ ಸುತ್ತೂರು ಶ್ರೀಗಳು ಕೂಡ ನಿಮ್ಮ ಜೊತೆ ಇದ್ದಾರೆ ಬಿಡಿ ಲಾಭವಿಲ್ಲದೆ ಯಾವುದೇ ಕಾಯಕ ಮಾಡುವುದಿಲ್ಲ ಅವರು

  • ಬಸವಣ್ಣನ ನಾಡಲ್ಲಿ ಬುದ್ಧನ ಸ್ಮರಣೆ, ತಪ್ಪೇನಿಲ್ಲ. ಆದರೆ ಬಸವಣ್ಣನವರ ಆಶಯಗಳೇ ಸಂವಿಧಾನದ ಆಶಯಗಳು ಎಂಬುದರ ಕೊರತೆ ಇದ್ದಂತೆ ಕಾಣುತ್ತದೆ. ಸುತ್ತೂರು ಶ್ರೀಗಳು ಬಸವಣ್ಣನವರ ಆಶಯಗಳ ಹಿಂದಿ ಅನುವಾದಿತ ಕೃತಿಯನ್ನು ಉಡುಗೊರೆಯಾಗಿ ನೀಡಿ ಪರಿಚಯಿಸಿದ್ದರೆ ಪ್ರಯೋಜನವಾಗುತ್ತಿತ್ತು. ದಯೆಯಿದ್ದಲ್ಲಿ ಧರ್ಮವಿರುತ್ತದೆ.

Leave a Reply

Your email address will not be published. Required fields are marked *