ಗುಳೇದಗುಡ್ಡ:
ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ, ಬಸವ ಕೇಂದ್ರದ ವತಿಯಿಂದ ಅನಿಲ ಚೆನ್ನಪ್ಪ ಬರಗುಂಡಿ ಅವರ ಮನೆಯಲ್ಲಿ ನಡೆಯಿತು.
ಚಿಂತನೆಗೆ ಆಯ್ದುಕೊಂಡ ವ್ಯೋಮಮೂರ್ತಿ ಅಲ್ಲಮರ ವಚನ ಹೀಗಿದೆ –
ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ,
ತುಟ್ಟ ತುದಿಯ ಮೇರುಗಿರಿಯ ಮೆಟ್ಟಿ ಕೋಗಿದಡಿಲ್ಲ,
ನಿತ್ಯ ನೇಮದಿಂದ ತನುವ ಮುಟ್ಟಿಕೊಂಡಡಿಲ್ಲ.
ನಿಚ್ಚಕ್ಕಿನ ಗಮನವಂದಂದಿಗೆ; ಅತ್ತಲಿತ್ತ ಹರಿವ ಮನವ
ಚಿತ್ತದಲಿ ನಿಲಿಸಬಲ್ಲಡೆ ಬಚ್ಚಬರಿಯ ಬೆಳಗು
ಗುಹೇಶ್ವರನೆಂಬ ಲಿಂಗವು.

ವಚನಕಾರ ಮಹಾಜ್ಞಾನಿ ಅಲ್ಲಮಪ್ರಭುಗಳ ಕಿರು ಪರಿಚಯವನ್ನು ಪ್ರಾರಂಭದಲ್ಲಿ ಪ್ರೊ ಶ್ರೀಕಾಂತ ಗಡೇದ ಅವರು ಮಾಡಿಕೊಡುತ್ತಾ, ಯಾವುದೇ ಕಾರ್ಯ ಮಾಡಿದರೂ ಅದಕ್ಕೊಂದು ಅರ್ಥವಿರಬೇಕು. ವ್ಯರ್ಥವಾಗಿ ಭಕ್ತಿಯ ಹೆಸರಿನಲ್ಲಿ ಜೀವನವನ್ನು ವ್ಯರ್ಥ ಮಾಡಿಕೊಳ್ಳಬಾರದು. ಕಂಡ ಕಂಡಲ್ಲಿ ಕಲ್ಲು ಮಣ್ಣು ಮರಗಳನ್ನೇ ದೇವರೆಂದು ಭ್ರಮಿಸಿ ಸುತ್ತಾಡುವುದರಿಂದ ಯಾವ ಲಾಭವೂ ಇಲ್ಲ. ಮನಸ್ಸಿನ ಚಂಚಲತೆಗೆ ಕಾರಣವಾಗದೆ ಅದನ್ನು ಲಿಂಗದಲ್ಲಿ ಕೇಂದ್ರೀಕರಿಸುವ ಮೂಲಕ ಗುಹೇಶ್ವರನನ್ನು ಕಾಣಬಹುದೇ ಹೊರತು ಅನ್ಯಮಾರ್ಗದಿಂದಲ್ಲ ಎಂದು ಅಭಿಪ್ರಾಯ ಪಟ್ಟರು.
ಅನುಭಾವಿ ಶರಣ ಮಹಾಲಿಂಗಪ್ಪ ಕರನಂದಿ ಅವರು ಮಾತನಾಡುತ್ತಾ, ಅಲ್ಲಮಪ್ರಭುಗಳು ಗುಹೇಶ್ವರನನ್ನು ಕಾಣುವ ಬಗೆಯನ್ನು ಈ ವಚನದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಬಾಹ್ಯಾಡಂಬರ ಆಚರಣೆಗಳಿಂದ ಏನನ್ನೂ ಸಾಧಿಸಲಾಗದು. ಮೋಕ್ಷವೆಂಬುದು ವ್ಯಕ್ತಿಗತ ಕಲ್ಪನೆಯನ್ನಾಗಿಸಿಕೊಂಡು, ಅಲ್ಲಿ ಇಲ್ಲಿ ಸುತ್ತಾಡಿ ವ್ಯರ್ಥ ಬಳಲಿದರಾಗದು ಮನಸ್ಸನ್ನು ನಿಲ್ಲಿಸಿ ಮಹಾಲಿಂಗದಲ್ಲಿ ತಾನು ಒಂದಾಗಬೇಕು ಅದೇ ಬಚ್ಚ ಬರಿಯ ಬಯಲು ಎಂಬುದಾಗಿ ವಿಶ್ಲೇಷಿಸಿದರು.

ಪ್ರೊ. ಸುರೇಶ ರಾಜನಾಳ ಅವರು ಈ ವಚನ ಕುರಿತು ಚಿಂತನೆಯಲ್ಲಿ ತೊಡಗಿ, ಬುದ್ಧ ಪೂರ್ಣಿಮೆಯ ದಿನವೇ ವ್ಯೋಮಮೂರ್ತಿ ಅಲ್ಲಮಪ್ರಭುದೇವರ ವಚನವನ್ನು ನಿರ್ವಚನಕ್ಕೆ ಆಯ್ದುಕೊಂಡಿರುವುದು ಸಮಂಜಸವಾಗಿದೆ. ಬುದ್ಧನ ಶಾಂತಿ ಸಮಾಧಾನಗಳನ್ನು ಸಾಮಾಜೀಕರಣಗೊಳಿಸುವುದು ಶರಣರ ಉದ್ದೇಶವಾಗಿತ್ತು. ಸಮಾಜಕ್ಕೆ ಕೊಡ ಮಾಡುವ ಸಮಾನತೆ, ಭ್ರಾತೃತ್ವ ಇವೆಲ್ಲ ಸುಮ್ಮನೆ ಕೊಡಲು ಸಾಧ್ಯವಿಲ್ಲ ಅವು ಒಳಗಿನಿಂದಲೇ ಮೂಡಿ ಬರಬೇಕು, ಅಂತಹ ಸ್ಥಿತಿಯೇ ಗುಹೇಶ್ವರನ ನಿಲವು ಎಂದು ಬಣ್ಣಿಸಿದರು.
ಇದೇ ವಚನದ ಸಮಾರೋಪಗೈಯುತ್ತ ಪ್ರೊ. ಸಿದ್ದಲಿಂಗಪ್ಪ ಬರಗುಂಡಿ ಅವರು, ಅಂದಿನ ಕಾಲದಲ್ಲಿ ಇಲ್ಲದ ಸ್ವರ್ಗ ನರಕಗಳನ್ನು ಕಲ್ಪಿಸಿಕೊಂಡು, ಮೋಕ್ಷ ಪಡೆಯಬೇಕೆಂಬ ಭ್ರಾಂತಿಯಲ್ಲಿ ನೂರಾರು ದೇವತೆಗಳನ್ನು ಸೃಷ್ಟಿಸಿಕೊಂಡಿದ್ದರು. ಅವಕ್ಕೆ ಪುಣ್ಯಕ್ಷೇತ್ರ ಪುಣ್ಯತೀರ್ಥಂಗಳೆಂದು ಕರೆದು, ತಿರುಗಾಡಿ ಜೀವನವನ್ನೇ ವ್ಯರ್ಥಗೊಳಿಸುತ್ತಿದ್ದರು.
ವರ್ಗ, ವರ್ಣ, ಲಿಂಗಭೇದವನ್ನು ಉಂಟು ಮಾಡಿ, ಪಥ ಭ್ರಾಂತರಾಗಿದ್ದರು. ಅದಕ್ಕಾಗಿ ಪ್ರಭುಗಳು ಅವರಿಗೆಲ್ಲ ಸರಿದಾರಿ ತೋರಿಸುವ ಹಾಗೆ ಈ ವಚನವನ್ನು ರಚಿಸಿದಂತಿದೆ.

ಭಗವಂತನನ್ನು ಅರಸುತ್ತ ಬಳಲದೆ, ತಾನೇ ಭಗವಂತನಾಗುವ ಮಾರ್ಗವನ್ನು ಶರಣರು ತೋರಿದರು. ದೇಹವನ್ನೇ ದೇವಾಲಯವನ್ನಾಗಿಸಿ, ಕಾಣಬರುವ ಜಗತ್ತೇ ಆ ವಿಶ್ವಚೈತನ್ಯವಾಗಿದ್ದು, ತಾನು ಕೂಡ ಆ ವಿಶ್ವಚೇತನದ ಒಂದು ಭಾಗವೇ ಎಂಬುದಾಗಿ ಮನವರಿಕೆ ಮಾಡಿಕೊಟ್ಟರು.
ಹೀಗಾಗಿ ಕಂಡ ಕಂಡಲ್ಲೆಲ್ಲ ಇಲ್ಲದ ದೇವರಿಗಾಗಿ ಹಂಬಲಿಸಿ ಕೆಡದೆ, ಕಂಡ ಕಂಡ ನೀರಿನ ಕುಂಡಗಳಲ್ಲಿ, ನದಿಗಳಲ್ಲಿ ಮುಳಗಿ ಪಾವನವಾದೆವೆಂಬ ಭ್ರಮೆಯನ್ನು ಪಡದೆ, ತನ್ನ ಚಂಚಲ ಮನಸ್ಸನ್ನೇ ನಿಲ್ಲಿಸಿ, ಪರಶಿವನಲ್ಲಿ ಒಂದಾಗಬೇಕು.
ಇದನ್ನು ಸಾಧಿಸಲೆಂದೇ ಅರುಹಿನ ಕುರುಹು ಇಷ್ಟಲಿಂಗವಿದೆ. ಅದು ಶರೀರ ಮನಸ್ಸು ಮತ್ತು ಭಾವವನ್ನು ಶುದ್ಧೀಕರಿಸಿ ತನ್ನಂತೆ ಮಾಡಿಕೊಳ್ಳುತ್ತದೆ. ಬೆಳಗಿನಲ್ಲಿ ಬೆಳಗಾಗಿಸಿಕೊಳ್ಳುತ್ತದೆ. ಅದನ್ನೇ ಐಕ್ಯ, ಸಮರಸ ಮುಂತಾಗಿ ಕರೆಯುತ್ತೇವೆ. ಅದೇ ಮನುಷ್ಯ ಮಹಾದೇವ ಅಂದರೆ ಗುಹೇಶ್ವರನಾಗುವ ಪರಿ ಎಂದು ಅಲ್ಲಮರು ಹೇಳಿದ್ದಾರೆ ಎಂದು ಬರಗುಂಡಿಯವರು ತಿಳಿಸಿದರು.
ಪ್ರಾರಂಭದಲ್ಲಿ ಶರಣೆ ಜಯಶ್ರೀ ಬರಗುಂಡಿ ಅವರು ವಚನ ಪ್ರಾರ್ಥನೆ, ಕೊನೆಯಲ್ಲಿ ವಚನ ಮಹಾಮಂಗಲ ನೇರವೇರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಪಾಂಡಪ್ಪ ಕಳಸಾ, ಡಾ. ಗೀರಿಶ ನೀಲಕಂಠಮಠ, ಹುಚ್ಚೇಶ ಯಂಡಿಗೇರಿ, ನೇತ್ರಾವತಿ ರಕ್ಕಸಗಿ, ರೇವಣಸಿದ್ಧೇಶ್ವರಮಠ, ಬಸವರಾಜ ಕಟ್ಟಿ, ರಾಚಣ್ಣ ಕೆರೂರು, ಗೀತಾ ತಿಪ್ಪಾ, ಮಹಲಿಂಗಪ್ಪ ಕರನಂದಿ, ಬಸವರಾಜ ಖಂಡಿ, ದಾಕ್ಷಾಯಣಿ ತೆಗ್ಗಿ, ವಿಶಾಲಕ್ಷಿ ಗಾಳಿ, ಸುರೇಖಾ ಗೆದ್ದಲಮರಿ ಇನ್ನಿತರು, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು ಮೊದಲಾದರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು ಪ್ರೊ. ಮಹಾದೇವಯ್ಯ ಪಂ. ನೀಲಕಂಠಮಠ, ಮಹೇಂದ್ರಕರ, ಶಿರೂರ ಸರ್, ಪ್ರೊ. ಚಂದ್ರಶೇಖರ ಹೆಗಡೆ, ಡಾ. ಶೈಲಾ ಬೆನಕನಾಳ, ಡಾ. ಸಣ್ಣವೀರಣ್ಣ ದೊಡ್ಡಮನಿ, ಶ್ರೀಮತಿ ಜ್ಯೋತಿ ಶೇಬಿನಕಟ್ಟಿ, ಕವಿತಾ ಬರಗುಂಡಿ, ಶಿವಾನಂದ ಸಿಂದಗಿ, ಕಲಬುರ್ಗಿಯಿಂದ ಮಂಗಳೂರ ಸಿ. ಎಸ್., ಮಹೇಂದ್ರಕರ, ಬೆಂಗಳೂರಿನಿಂದ ಶಿರೂರ ಸರ್ ಮುಂತಾದವರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ನಿರೂಪಕರು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಗೈದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa
