ಕೂಡಲಸಂಗಮ ನದಿದಂಡೆ ಸ್ವಚ್ಛಗೊಳಿಸಿದ ರಾಷ್ಟ್ರೀಯ ಬಸವದಳದ ಕಾರ್ಯಕರ್ತರು

ಬಸವ ಮೀಡಿಯಾ
ಬಸವ ಮೀಡಿಯಾ

ಕೂಡಲಸಂಗಮ :

ಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲಸಂಗಮ ತ್ರಿವೇಣಿ ಸಂಗಮ ನದಿಪಾತ್ರದ (ಮಲಪ್ರಭ, ಘಟಪ್ರಭ ಮತ್ತು ಕೃಷ್ಣ ನದಿಗಳ ಸಂಗಮ) ಸ್ವಚ್ಛತಾ ಕಾರ್ಯವನ್ನು ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರು ಈಚೆಗೆ ನಡೆಸಿದರು.

ನಾಡಿನ ವಿವಿಧ ಭಾಗಗಳಿಂದ ಬಂದು, ಕೂಡಲಸಂಗಮದಲ್ಲಿ ನಡೆದ ಲಿಂಗಾಯತ ಧರ್ಮ ಅಧ್ಯಯನ ಶಿಬಿರದಲ್ಲಿ ಭಾಗವಹಿಸಿದ್ದ 100ಕ್ಕೂ ಹೆಚ್ಚು ಬಸವ ದಳದ ಯುವಕ-ಯುವತಿಯರು ಈ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.

ಮಾಡಿದ ಸ್ವಚ್ಛತಾ ಕಾರ್ಯದಿಂದ ಸುಮಾರು 2 ಟ್ಯಾಕ್ಟರನಷ್ಟು ಕಸ-ಕಡ್ಡಿ, ಚಿಂದಿ-ಬಟ್ಟೆಗಳನ್ನು ನದಿಯಿಂದ ಹೊರತೆಗೆದು ಸೂಕ್ತ ಜಾಗಕ್ಕೆ ಒಯ್ದು ಅದನ್ನು ಅಲ್ಲಿ ಹೂಳಲಾಯಿತು.

ನೆಲ, ಜಲದ ಸ್ವಚ್ಛತೆ ಕಾಪಾಡುವುದು, ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ ಎಂಬ ಸಂದೇಶವನ್ನು ರಾಷ್ಟ್ರೀಯ ಬಸವದಳ ಈ ಕಾರ್ಯದ ಮೂಲಕ ಸಾರಿತು.

ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಜಾಗೃತಿಯ ಉದ್ದೇಶದಿಂದ ಕೈಗೊಂಡ ಈ ಕಾರ್ಯದ ನೇತೃತ್ವವನ್ನು ಪೂಜ್ಯ ಬಸವಯೋಗಿ ಸ್ವಾಮೀಜಿ, ವಿಶ್ವಕಲ್ಯಾಣ ಮಿಷನ್, ಬೆಂಗಳೂರು ಹಾಗೂ ಬಸವದೇವರು ಬಸವತತ್ವ ಪ್ರಸಾರಕರು, ಬಸವಕಲ್ಯಾಣ ಅವರುಗಳು ವಹಿಸಿದ್ದರು.

ರಾಷ್ಟ್ರೀಯ ಬಸವ ದಳದ ಯುವ ಪಡೆ, ಬಸವಾದಿ ಶರಣರ ವಿಚಾರಗಳೊಂದಿಗೆ ಬದುಕೋಣ ಎಂಬ ಧ್ಯೇಯದೊಂದಿಗೆ ಮುಂದೆ ಕೂಡ ನೆಲ, ಜಲ ಮತ್ತು ಭಾಷೆಯ ರಕ್ಷಣೆಗೆ ಸದಾ ನಿಂತುಕೊಳ್ಳುವುದಾಗಿ ತಿಳಿಸಿತು. ಇನ್ನಷ್ಟು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲು ಸಹ ನಾವು ಸಿದ್ಧರಿದ್ದೇವೆ ಎಂದು ಕಾರ್ಯಕರ್ತರು ಹೇಳಿದರು.

ಕೂಡಲಸಂಗಮದ ಗ್ರಾಮಸ್ಥರು, ದೇವಸ್ಥಾನಕ್ಕೆ ಬರುವ ಭಕ್ತರು ರಾಷ್ಟ್ರೀಯ ಬಸವ ದಳದ ಈ ಸೇವಾ ಕಾರ್ಯವನ್ನು ನೋಡಿ ಹರ್ಷ ವ್ಯಕ್ತಪಡಿಸಿ ಯುವ ಪಡೆಗೆ ಅಭಿನಂದನೆ ಸಲ್ಲಿಸಿದರು.

ಘಟಪ್ರಭಾ, ಮಲಪ್ರಭಾ ಮತ್ತು ಕೃಷ್ಣೆಯ ಸಂಗಮವಾದ ಈ ಸುಕ್ಷೇತ್ರಕ್ಕೆ ಬರುವಂತಹ ಭಕ್ತರ ಪಾಲಿಗೆ ಇದು ಪುಣ್ಯಕ್ಷೇತ್ರವು ಹೌದು. ಆದರೆ ಇಲ್ಲಿನ ಸುತ್ತಮುತ್ತಲಿನ ಪರಿಸರ ಬಹಳಷ್ಟು ಕಲುಷಿತಗೊಂಡಿರುತ್ತದೆ.

ನದಿ ಸ್ನಾನಘಟ್ಟದಲ್ಲಿ ಸ್ನಾನ ಮಾಡಿ ಬಟ್ಟೆಗಳನ್ನು ಅಲ್ಲಿಯೇ ಬಿಸಾಡಿ, ಪ್ಲಾಸ್ಟಿಕ್ ಕಸ, ಹೂಗಳನ್ನು ಹಾಗೆಯೇ ನದಿಯಲ್ಲಿ ಬಿಸಾಡುವ ಕೆಟ್ಟ ಮನಸ್ಥಿತಿ ಇಲ್ಲಿ ಹೆಚ್ಚಾಗಿದೆ. ಇದನ್ನೆಲ್ಲ ಗಮನಿಸಿ ಅಭಿವೃದ್ಧಿ ಪ್ರಾಧಿಕಾರ ಸ್ವಚ್ಛಗೊಳಿಸುವ ಕಾರ್ಯ ಮಾಡಬೇಕು, ಆದರೆ ಅದಾಗುತ್ತಿಲ್ಲ ಎಂದು ರಾಷ್ಟ್ರೀಯ ಬಸವದಳದ ಕಾರ್ಯಕರ್ತರು ಹೇಳುತ್ತಾರೆ.

ಸ್ವಚ್ಛತೆಯ ಬಗ್ಗೆ ಅಲ್ಲಿನ ಆಡಳಿತ ಮಂಡಳಿಗೆ ಪ್ರಾಧಿಕಾರಕ್ಕೆ ಮತ್ತು ಸುತ್ತಲಿನ ಜನಕ್ಕೆ ಮನವರಿಕೆ ಮಾಡಿಕೊಡುವುದಲ್ಲದೆ ಮುಂದಿನ ದಿನಗಳಲ್ಲಿ ಅಲ್ಲಿ ಹೆಣ್ಣುಮಕ್ಕಳಿಗೆ ಬಟ್ಟೆ ಬದಲಾಯಿಸುವ ಕೊಠಡಿ ಮತ್ತು ಕಸದ ಬುಟ್ಟಿ ಇಡುವ ವ್ಯವಸ್ಥೆಯನ್ನು ರಾಷ್ಟ್ರೀಯ ಬಸವದಳ ಮಾಡುತ್ತದೆ ಎಂಬ ಅಭಿಪ್ರಾಯವನ್ನು ಕೆಲವರು ಹೇಳಿದರು. ಅಷ್ಟೇ ಅಲ್ಲ ಜನರಿಗೆ ಅರಿವು ಮೂಡಿಸುವ ಕೆಲಸ ಕಾರ್ಯದಲ್ಲಿ ತೊಡಗಿಕೊಳ್ಳಲು ಇದು ಮೊದಲ ಮೆಟ್ಟಿಲಾಗಿ ಆರಂಭಗೊಂಡಿದೆ ಎಂದರು.

ನಡೆದಂತಹ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರಾದ ಪ್ರಕಾಶ ಜೀರಗೆ, ಕಿರಣ ಬೆಲ್ಲದ, ಪ್ರವೀಣ ಕೊಚ್ಚಾಕಿ, ಸಿದ್ದರಾಮ ಶೇಟಕರ, ಪ್ರವೀಣ ಎಕಲಾರೆ, ಸಿದ್ದಲಿಂಗೇಶ್ವರ ಪಾಟೀಲ, ಶೀಲಾ ಗಿರೀಶ, ತೇಜಸ್ವಿನಿ ರುದ್ರೇಶ, ಜ್ಞಾನದೇವಿ ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *