ಬಸವಣ್ಣನವರಿಗೆ ಜನಿವಾರ ತೊಡಿಸಲು ಹೊರಟಿದ್ದಾರೆ ಎಚ್ಚರ

ಇಂದು ಬಹಳಷ್ಟು ಜನ ಕಾವಿ ಧರಿಸಿದವರು ಇದ್ದಾರೆ. ಜನ ಸಾಮಾನ್ಯ ಕಾವಿ ಧರಿಸಿದವರು ಶ್ರೇಷ್ಠರು, ಜ್ಞಾನಿಗಳು, ತ್ಯಾಗಿಗಳು, ವಿರಾಗಿಗಳು ಎಂದು‌ ಭಾವಿಸಿದ್ದಾರೆ. ಆದ್ದರಿಂದಲೆ ಇಂದಿನ ವೈಜ್ಞಾನಿಕ ಯುಗದಲ್ಲೂ ಕಾವಿ ಕಂಡರೆ ಡೈ ಹೊಡೆಯುವ ಜನರೆ ಅಸಂಖ್ಯವಾಗಿದ್ದಾರೆ.

ಕಾವಿ ತ್ಯಾಗದ, ಜ್ಞಾನದ ಸಂಕೇತವಾಗಿ ಈಗ ಉಳಿದಿಲ್ಲ. ಯಾರು ಇನ್ನಾರೊ ತಮ್ಮ ರಾಜಕೀಯ ತೆವಲಿಗೆ ಕಾವಿಯನ್ನು ಬಳಸಿಕೊಂಡು ತಮ್ಮ ಅಜೆಂಡಾವನ್ನು ಸಾಧಿಸಿದ್ದಾರೆ. ಇದರ ಅರಿವಿಲ್ಲದ ಕೆಲವರು, ಅರಿವಿದ್ದೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಹಲವರು ಮುಂದೆ ಬಂದು ಸಮಾಜದಲ್ಲಿ ವಿಷಮ ಬೀಜಗಳನ್ನು‌ ಬಿತ್ತುತ್ತಿದ್ದಾರೆ. ಮೂಲಭೂತವಾದ, ಮೌಢ್ಯಗಳನ್ನೇ ಧರ್ಮದ ತಿರುಳು ಎಂದು ನಂಬಿಸಿ ಜನರನ್ನು‌ ವಂಚಿಸುತ್ತಿದ್ದಾರೆ.

ಅದರಲ್ಲೂ ಬಸವಣ್ಣನವರ ಆಶಯಗಳನ್ನು ವಿರೂಪಗೊಳಿಸಲು ಬಹುದೊಡ್ಡ ಸಂಚೊಂದು ರಾಷ್ಟ್ರದಲ್ಲಿ ಪ್ರಜ್ಞಾಪೂರ್ವಕವಾಗಿ ನಡೆದಿದೆ. ಬಸವಣ್ಣನವರ ಸಿದ್ಧಾಂತಗಳನ್ನು ನಾಶ ಮಾಡಬೇಕು ಎಂದು ಪಣ ತೊಟ್ಟಿರುವ ಕಾವಿ ವೇಷಧಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಬಸವಣ್ಣನವರ ಸರಳ ಸಜ್ಜನಿಕೆಯ ಆದರ್ಶದ ನಡೆ ನುಡಿಗಳನ್ನು ಗಾಳಿಗೆ ತೂರಿ ಅವರನ್ನೂ ವೇದಮೂರ್ತಿಗಳನ್ನಾಗಿ ಮಾಡುವ ವ್ಯವಸ್ಥಿತ ಸಂಚು ನಡೆದಿದೆ. ಅಣ್ಣ ಬಸವಣ್ಣ, ಅಪ್ಪ ಬಸವಣ್ಣ, ಗುರು ಬಸವಣ್ಣನವರಾಗಿ ಪರಿಚಯವಾಗಿದ್ದ ಬಸವಣ್ಣನವರನ್ನು ದೇವರನ್ನಾಗಿಸುತ್ತಿದ್ದಾರೆ. ಬಸವಣ್ಣನವರನ್ನು ದೇವರನ್ನಾಗಿಸಿ ಬಿಟ್ಟರೆ ಅವರ ತತ್ವಗಳನ್ನೂ ಕಲ್ಲಾಗಿಸಬಹುದು ಎಂಬುದು ಇವರ ಹಂಬಲ. ಯಾವತ್ತು ಬಸವಣ್ಣನವರ ಗುಡಿ ಕಟ್ಟಲು ನಾವು ಆರಂಭಿಸುತ್ತೇವೋ ಅಂದು ಬಸವಣ್ಣನವರು ಸತ್ವವಿಹೀನ ವ್ಯಕ್ತಿಯಾಗುತ್ತಾರೆ. ಸಮ ಸಮಾಜದ ಕನಸು ಕಂಡಿದ್ದ ಬಸವಣ್ಣನವರ ಆಶಯ ಸಮಾಧಿಗೊಳ್ಳುತ್ತವೆ.

ವೇದ ಭಂಜಕ ಬಸವಣ್ಣ, ವೇದ ಮೂರ್ತಿಗಳ ಕೈ ಸೇರುತ್ತಾರೆ. ಮುಂದೊಂದು ದಿನ ಬಸವಣ್ಣನವರ ಪ್ರತಿಮೆಯ ಮುಂದೆ ವೇದಘೋಷಗಳು ಮೊಳಗಬಹುದು. ವೇದ ಶಾಸ್ತ್ರ ಆಮಗ ಪುರಾಣಗಳ ಹೂರಣ ಬಿಚ್ಚಿಟ್ಟ ಬಸವಣ್ಣನವರ ಬಗೆಗೆ ಅನುಮಾನ ಮೂಡಲು ಆರಂಭವಾಗುತ್ತವೆ. ಬಸವಣ್ಣನವರನ್ನು ಹತ್ತರೊಳಗಿನ ಹನ್ನೊಂದನೆಯ ಪ್ರವಾದಿಯನ್ನಾಗಿ ಮಾಡಲು ಯೋಚಿಸಿದ ಪುರೋಹಿತಶಾಹಿ ಸೋತಿದೆ, ಅದರ ಪ್ರಯತ್ನ ನಿಂತಿಲ್ಲ.

ಫ್ಯಾಸಿಸ್ಟ್ ಮನೋಭಾವದ, ಸಮಾಜ ದ್ರೋಹಿಗಳ ಕೆಲಸವನ್ನು ಜನಸಾಮಾನ್ಯ ಬೆಂಬಲಿಸಬೇಡಿ ಎಂಬುದು ನನ್ನ ಮನದಾಳದ ಮನವಿ. ವೇಷದಲ್ಲಿ ಮಹೇಶ್ವರನಾಗಿರುವ ವೇಷ ಡಂಬಕರ ಮೆಚ್ಚದಿರಿ. ಅವರಲ್ಲಿ ನಿಮ್ಮನ್ನು ಸುಧಾರಿಸುವ, ಸರಿಯಾದ ವಿವೇಕ ಹೇಳುವ ಯಾವ ಉಮೇದು ಇಲ್ಲ. ಬಸವಣ್ಣನವರು ಜನಿವಾರ ವೈದಿಕತ್ವದ ಅಸಮಾನತೆಯ ಸಂಕೇತ ಎಂದು ಭಾವಿಸಿ ಅದನ್ನು ಕಿತ್ತೆಸೆದರೋ ಮತ್ತೇ ಬಸವಣ್ಣನವರಿಗೆ ಜನಿವಾರ ತೊಡಿಸಲು ಹೊರಟಿದ್ದು ಅಕ್ಷಮ್ಯ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *