ವಚನ ಹಾಡುವ ಮೊದಲು ವಚನದ ಸಾರ ತಿಳಿಯಬೇಕು
ಧಾರವಾಡ :
ಬದ್ಧತೆ ಮತ್ತು ಸ್ವರದ ಶುದ್ಧತೆಯಿಂದ ಸಂಗೀತವನ್ನು ಜನಮಾನಸಕ್ಕೆ ಹೇಗೆ ತಲುಪಿಸಬೇಕು, ಕೀರ್ತಿ ಪ್ರಶಂಸೆಯಿಂದ ದೂರವಿದ್ದು ಸಂಗೀತಕ್ಕಾಗಿ ಹೇಗೆ ಬದುಕಬೇಕೆಂಬುದನ್ನು ಸ್ವರದ ಮೂಲಕ ಜೀವನ ಕಟ್ಟಿಕೊಟ್ಟವರು ಪಂಡಿತ ಸಂಗಮೇಶ್ವರ ಗುರವ ಅವರು ಎಂದು ಡಾ. ಮೃತ್ಯುಂಜಯ ಶೆಟ್ಟರ ಹೇಳಿದರು.
ನಗರದ ಸ್ವರಸೇನ ಪಂಡಿತ ಸಂಗಮೇಶ್ವರ ಗುರವ ಪ್ರತಿಷ್ಠಾನವು ಗುರುವಾರ ಸಂಜೆ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಪಂಡಿತ ಸಂಗಮೇಶ್ವರ ಗುರವ ಅವರ ೧೩ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಚನ ಗಾಯನ ತರಬೇತಿ ಶಿಬಿರವನ್ನು ಉದ್ಘಾಟಿಸಿದ ಮಾತನಾಡುತ್ತಿದ್ದರು.

ಪಂಡಿತ ಗುರವ ಅವರು ಯಾವುದೇ ಘರಾಣೆಯ ಸಂಗೀತ ಹಾಡುವ ಅಪರೂಪದ ಶಕ್ತಿ ಹೊಂದಿದ್ದರು. ಅವರು ಸಂಗೀತ ಸಾಧನೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಯೋಗಿವರೇಣ್ಯರಾಗಿದ್ದರು ಎಂದರು.
ವಚನ ಗಾಯನ ಪರಂಪರೆಯನ್ನು ನೋಡಿದಾಗ, ಬಹಳಷ್ಟು ಮಹನೀಯರನ್ನು ನಾವು ನೆನೆಯಲೇಬೇಕು. ಡಾ. ಫ.ಗು. ಹಳಕಟ್ಟಿ, ಹರ್ಡೇಕರ್ ಮಂಜಪ್ಪ, ಶಿ.ಶಿ. ಬಸವನಾಳರು, ಡಾ. ಎಂ.ಎಂ.ಕಲಬುರ್ಗಿ ಅವರಂತವರ ವಚನಗಳ ಸಂರಕ್ಷಣೆಯ ಕಾರ್ಯ ಸ್ಮರಣೀಯವಾದುದು.
ವಚನ ಎಂದರೆ ವಾಂಙ್ಮಯ. ಕನ್ನಡ ಭಾಷೆಯ ಅಸ್ಮಿತೆಯ ಪ್ರಖರ ಪ್ರತೀಕಗಳಾಗಿ ಹೊರಹೊಮ್ಮಿದ ವಚನ ವಾಂಙ್ಮಯವು ವಿಶ್ವವನ್ನೇ ಪಸರಿಸಿದೆ ಎಂದರು. ವಚನ ಹಾಡುವ ಮೊದಲು ವಚನದ ಸಾರವನ್ನು ತಿಳಿಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಸುಪ್ರಿಯಾ ಮಲಶೆಟ್ಟಿ ಅವರು ವಚನಗಳ ಮಹತ್ವದ ಕುರಿತು ಮಾತನಾಡುತ್ತ, ವಚನ ಅಂದರೆ ಭಾಷೆ ಕೊಡು, ನಡೆ-ನುಡಿಗಳೊಂದಾಗಬೇಕು. ೧೨ನೇ ಶತಮಾನದ ಬಸವಾದಿ ಶರಣರು ಅನೇಕ ವಚನಗಳನ್ನು ಕಟ್ಟಿಕೊಟ್ಟಿದ್ದಾರೆ. ಅವರು ಕೇವಲ ವಚನಗಳನ್ನು ಬರೆಯಲಿಲ್ಲ, ತಮ್ಮ ಜೀವನಾನುಭವಗಳನ್ನು ಸಮಾಜದಲ್ಲಿ ಜರುಗಿದ ಘಟನೆಗಳನ್ನು ಕಣ್ಣಾರೆ ಕಂಡು, ಸಮಾಜೋದ್ಧಾರಕ ಬದಲಾವಣೆಗಳಿಗೆ ಕ್ರಾಂತಿಯನ್ನೇ ಮಾಡಿ ರಚಿಸಿರುವ ವಚನಗಳು ಸಾಕ್ಷೀಭೂತವಾಗಿ ನಿಂತಿವೆ. ೧೨ನೇ ಶತಮಾನದ ವಚನಗಳು ಇಂದಿನ ಎ.ಐ. ಯುಗದಲ್ಲೂ ಪ್ರಸ್ತುತವಾಗಿವೆ ಎಂದರು.
ವಚನಗಳು ಚುಂಬಕ ಶಕ್ತಿಯಿದ್ದಂತೆ, ಅವುಗಳನ್ನು ನಾವು ಓದುತ್ತಾ ಓದುತ್ತಾ ಹೋದಂತೆ ಅವು ನಮ್ಮನ್ನು ಆಕರ್ಷಿಸುತ್ತವೆ. ವಚನಗಳು ತನ್ನದೇ ಆದ ಮುಕ್ತ ಛಂದಸ್ಸನ್ನು ಹೊಂದಿವೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಶಶಿಧರ ತೋಡಕರ್ ಅವರು ಅದ್ಯಕ್ಷತೆ ವಹಿಸಿ ಮಾತನಾಡುತ್ತ, ಪಂಡಿತ ಸಂಗಮೇಶ್ವರ ಗುರವ ಅವರ ಪುಣ್ಯಸ್ಮರಣೆಯು ಕೇವಲ ಸ್ಮರಣೆಯಷ್ಟೇ ಆಗದೇ ಅದೊಂದು ವಚನ ಗಾಯನ ಕಲಿಕಾ ಶಿಬಿರವಾಗುವುದರ ಮೂಲಕ ಅರ್ಥಪೂರ್ಣಗೊಂಡಿದೆ ಎಂದರು.

ಉಪಾಧ್ಯಕ್ಷರಾದ ಪಿ.ಎಚ್. ನೀರಲಕೇರಿ, ಪಂಡಿತ ಕೈವಲ್ಯಕುಮಾರ ಗುರವ, ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ, ಡಾ. ಸುಮಿತ್ರಾ ಕಾಡದೇವರಮಠ, ಪಂಡಿತ ನಂದಿಕೇಶ್ವರ ಗುರವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರವಿ ಕುಲಕರ್ಣಿ ನಿರೂಪಿಸಿದರು. ಭಾರತಿ ಪರ್ವತೀಕರ ಪ್ರಾರ್ಥಿಸಿದರು. ವಿದುಷಿ ಸುಜಾತಾ ಗುರವ ಸ್ವಾಗತಿಸಿದರು. ಅಶೋಕ ಕಮ್ಮಾರ ವಂದಿಸಿದರು.
