ಭಾಲ್ಕಿ :
ಸಂಸ್ಥಾನ ಹಿರೇಮಠದ ಪಟ್ಟದ್ದೇವರು ಗಡಿಭಾಗದಲ್ಲಿ ಶಾಲಾ, ಕಾಲೇಜುಗಳನ್ನು ಪ್ರಾರಂಭಿಸಿ ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕೃತಿ ನೀಡಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡುತ್ತಿದ್ದಾರೆ ಎಂದು ಔರಾದ ತಹಸೀಲ್ದಾರರಾದ ಮಹೇಶ ಪಾಟೀಲ ಹೇಳಿದರು.
ಸಂತಪೂರ ಅನುಭವ ಮಂಟಪದಲ್ಲಿ ರವಿವಾರ 103ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂತಪೂರ ಸಿದ್ದರಾಮೇಶ್ವರ ಕಾಲೇಜು ಜಿಲ್ಲೆಗೆ, ತಾಲೂಕಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ 8 ವರ್ಷಗಳಿಂದ ಪ್ರತಿಶತ ಫಲಿತಾಂಶ ಮತ್ತು ಅನುಭವ ಮಂಟಪ ಗುರುಕುಲ ಪ್ರೌಢಶಾಲೆ ತಾಲೂಕಿಗೆ ಪ್ರಥಮ ಸ್ಥಾನ, ಜೊತೆಗೆ 16 ವರ್ಷಗಳಿಂದ ಪ್ರತಿಶತ ಫಲಿತಾಂಶ ಪಡೆಯುತ್ತಿರುವುದು ಸಂಪೂರ್ಣ ಶ್ರೇಯಸ್ಸು ಭಾಲ್ಕಿ ಪಟ್ಟದ್ದೇವರಿಗೆ ಸಲ್ಲುತ್ತದೆ ಎಂದರು.
ನೇತೃತ್ವ ವಹಿಸಿದ ಪೂಜ್ಯ ಗುರುಬಸವ ಪಟ್ಟದ್ದೇವರು ಮಾತನಾಡಿ, ಪ್ರತಿಯೊಬ್ಬ ಪ್ರಜೆಗೆ ಸುಖ, ಶಾಂತಿ, ನೆಮ್ಮದಿ ಮತ್ತು ಸಮಾಧಾನ ದೊರಕಬೇಕಾದರೆ ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು. ಜ್ಞಾನಕ್ಕೆ ಇಡೀ ಜಗತ್ತೇ ತಲೆಬಾಗುತ್ತದೆ. ವಿದ್ಯಾರ್ಥಿಗಳು ಜ್ಞಾನದ ರತ್ನಗಳಾಗಬೇಕು. ಸಂತಪೂರ ಸಿದ್ದರಾಮೇಶ್ವರ ಕಾಲೇಜು, ಅನುಭವ ಮಂಟಪ ಗುರುಕುಲ, ಜ್ಞಾನಭಾರತಿ ಶಾಲೆ ಮಕ್ಕಳ ಸಾಧನೆ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆ ಎಂದರು.
ತಾಲೂಕಾ ಪಂಚಾಯತ ಸಹಾಯಕ ನಿರ್ದೇಶಕರಾದ ಶಿವಕುಮಾರ ಘಾಟೆ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ. ರತಿಕಾಂತ ಸ್ವಾಮಿ ಮಾತನಾಡಿದರು.

ಡಾ. ಸಂಜೀವಕುಮಾರ ಜುಮ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜಕುಮಾರ ಮಾಳಗೆ ಗುತ್ತಿಗೆದಾರರು ಹೈದ್ರಾಬಾದ ಗುರುಬಸವ ಪೂಜೆ ನೆರವೇರಿಸಿದರು. ಡಾ. ಅಭಿಷೇಕ ಸ್ವಾಮಿ, ಬಸವರಾಜ ಬಿರಾದರ ಇದ್ದರು.

ಪ್ರಾಂಶುಪಾಲ ನವೀಲಕುಮಾರ ಉತ್ಕಾರ ಸ್ವಾಗತಿಸಿದರು. ಮುಖ್ಯಗುರುಗಳಾದ ಶಿವಕುಮಾರ ಹಿರೇಮಠ ವಂದಿಸಿದರು. ಸಂಗಮೇಶ ಬ್ಯಾಳೆ ನಿರೂಪಿಸಿದರು. ಹಾವಗಿರಾವ ಶೆಂಬೆಳ್ಳಿ ಮತ್ತು ಗೋವಿಂದರೆಡ್ಡಿ ವಚನ ಸಂಗೀತ ನಡೆಸಿಕೊಟ್ಟರು.
