ತುಮಕೂರಲ್ಲಿ ಬಸವ ಜಯಂತಿ, ಇಷ್ಟಲಿಂಗ ವೈಜ್ಞಾನಿಕ ಪ್ರಾತ್ಯಕ್ಷಿಕೆ
ತುಮಕೂರು :
‘ಬಸವ ಜಯಂತಿ’ ಕಾರ್ಯಕ್ರಮ ಮತ್ತು ‘ಇಷ್ಟಲಿಂಗದ ವೈಜ್ಞಾನಿಕ ಪರಿಕಲ್ಪನೆ’ ವಿಷಯವಾಗಿ ಉಪನ್ಯಾಸ ಕಾರ್ಯಕ್ರಮ ಇಲ್ಲಿನ ಜಯದೇವ ಮುರುಘರಾಜೇಂದ್ರ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಚಿಕ್ಕೋಡಿಯ ವೈದ್ಯರಾದ ಡಾ. ದಯಾನಂದ ನೂಲಿ ಅವರು ರಚಿಸಿದ “ಶರಣರ ಶಿವಯೋಗ” ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು. ನಂತರ ಡಾ. ದಯಾನಂದ ನೂಲಿ ಮಾತನಾಡಿ, ಗ್ರಂಥವನ್ನು ರಚಿಸುವುದಕ್ಕೆ ಕಾರಣಗಳೇನು ಎನ್ನುವುದನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟು, ಲಿಂಗಾಯತರಲ್ಲಿ ಶಿವಯೋಗದ ಪರಿಕಲ್ಪನೆಯನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಜಾಗೃತಗೊಳಿಸಬೇಕಾಗಿದೆ ಎಂದು ಹೇಳಿದರು.

ವಿಶೇಷ ಉಪನ್ಯಾಸದಲ್ಲಿ ಬಸವಕಿರಣ ಶರಣರು, ಬಸವಣ್ಣನವರದು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಾಮಾಜಿಕ ಕ್ರಾಂತಿ ಎಂದು ಬಣ್ಣಿಸಿದರು. ಸುಮಾರು ಒಂದು ಗಂಟೆಗಳ ಕಾಲ ಬಸವಣ್ಣನವರ ವ್ಯಕ್ತಿತ್ವವನ್ನು ಕುರಿತು ಶ್ರೇಷ್ಠ ವಿಚಾರಧಾರೆಗಳನ್ನು ಮಂಡಿಸಿದರು.
ಯುವ ನಾಯಕರಾದ ರಾಯಸಂದ್ರ ರವಿಕುಮಾರ ಅವರು ಲಿಂಗಾಯತ ಯುವಕರು ಸಂಘಟಿತರಾಗಬೇಕಾದ ಅನಿವಾರ್ಯತೆಯ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಬಸವ ವಿರೋಧಿಗಳಿಗೆ ಉತ್ತರಿಸಲು ತಂಡ ರಚಿಸಿ
ವಚನಸಾಹಿತ್ಯ ಮಂದಾರ ಫೌಂಡೇಶನ್ನ ಅಧ್ಯಕ್ಷರಾದ ಡಾ. ವಿಜಯಕುಮಾರ ಕಮ್ಮಾರ ಅವರು ಮಾತನಾಡಿ, ಹಿಂದೆಂದಿಗಿಂತಲೂ ಲಿಂಗಾಯತ ಧರ್ಮ ಅಪಾಯದ ಅಂಚಿನಲ್ಲಿದೆ. ಬಸವತತ್ವ ವಿರೋಧಿಗಳು ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ, ಪುಸ್ತಕಗಳನ್ನು ಪ್ರಕಟಿಸುವುದರ ಮೂಲಕ ಲಿಂಗಾಯತ ಧರ್ಮವನ್ನು ಅವಹೇಳನ ಮಾಡುತ್ತಿದ್ದಾರೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ತಂಡಗಳನ್ನು ರಚಿಸಿ, ಬಸವತತ್ವ ವಿರೋಧಿಗಳನ್ನು ಮಣಿಸಬೇಕಾದ ಅವಶ್ಯಕತೆ ಇದೆ ಎನ್ನುವ ಗರ್ಜನೆಯನ್ನು ಮೊಳಗಿಸಿದರು. ಇದಕ್ಕೆ ಸೂಕ್ತವಾದ ಸ್ಪಂದನೆ ಸಭೆಯಲ್ಲಿ ಮೂಡಿ ಬಂತು.
ಕದಳಿ ವೇದಿಕೆಯ ಅಧ್ಯಕ್ಷರಾದ ಶಿವಲಿಂಗಮ್ಮ ಅವರು ಮಹಿಳೆಯರ ಜಾಗೃತಿಯನ್ನು ಕುರಿತು ಮಾತನಾಡಿದರು.

ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದ ಬೆಟ್ಟದಹಳ್ಳಿ ಗವಿಮಠದ ಪೂಜ್ಯ ಚಂದ್ರಶೇಖರ ಮಹಾಸ್ವಾಮಿಗಳು, ಇಂಥ ಕಾರ್ಯಕ್ರಮಗಳನ್ನು ಆಯೋಜನ ಮಾಡಿದ ಎಲ್ಲರಿಗೂ ಶುಭ ಕೋರಿದರು. ಬಸವಣ್ಣನವರ ನೇತೃತ್ವದ ಚಳುವಳಿ ನಮ್ಮೆಲ್ಲರ ಅಸ್ಮಿತೆಯನ್ನು ಜಾಗೃತಗೊಳಿಸಬೇಕಾದ ಸಂದರ್ಭವಿದು. ಹಾಗಾಗಿ ನಾವೆಲ್ಲ ಬಹಳ ಎಚ್ಚರದಿಂದ ಬಸವತತ್ವ, ವಚನ ಸಾಹಿತ್ಯ ಮತ್ತು ಶರಣ ಸಿದ್ಧಾಂತಗಳ ಅರಿವನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎನ್ನುವುದನ್ನು ಹೇಳಿದರು.

ಸಂಜೆ ಡಾ. ದಯಾನಂದ ನೂಲಿಯವರ “ಇಷ್ಟಲಿಂಗದ ವೈಜ್ಞಾನಿಕ ಪರಿಕಲ್ಪನೆಯ ಕಾರ್ಯಕ್ರಮ” ಅದ್ಭುತವಾಗು ಮೂಡಿ ಬಂದು ಜನರ ಮನಗಳಲ್ಲಿ ಶಿವಯೋಗದ ಕುರಿತು ವೈಜ್ಞಾನಿಕವಾಗಿ ಜಾಗೃತಿ ಮೂಡಿಸಿತು. ಸುಮಾರು 1 ಗಂಟೆ 45 ನಿಮಿಷಗಳವರೆಗೆ ನಿರರ್ಗಳವಾಗಿ ವೈಜ್ಞಾನಿಕ ಹಿನ್ನೆಲೆಯನ್ನು ಕುರಿತು ಸ್ವತಃ ಶಸ್ತ್ರ ಚಿಕಿತ್ಸಕರಾಗಿರುವ ವೈದ್ಯ ಡಾ. ದಯಾನಂದ ನೂಲಿಯವರು ಮನೋಜ್ಞವನ್ನು ವಿಸ್ತೃತವಾಗಿ ಪಾವರ್ ಪಾಯಿಂಟ್ ಪ್ರೆಜೆಂಟೇಶನ್ ಮೂಲಕ ಪ್ರಸ್ತುತ ಪಡಿಸಿದರು.
ಬಸವ ಕೇಂದ್ರ, ಜಯದೇವ ವಿದ್ಯಾರ್ಥಿ ನಿಲಯ ಟ್ರಸ್ಟ್, ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ-ಜಿಲ್ಲಾ ಘಟಕ, ತುಮಕೂರು ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವ ಕೇಂದ್ರದ ಅಧ್ಯಕ್ಷರಾದ ಸಿದ್ಧಗಂಗಮ್ಮ ಬಿ. ಸಿದ್ಧರಾಮಣ್ಣ ವಹಿಸಿದ್ದರು.
ಸುಮಾರು 300 ಕ್ಕೂ ಹೆಚ್ಚು ಶರಣ ಶರಣೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬಹುಶಃ ಎಲ್ಲರ ಮನಗಳು ಕೂಡ ಅಂತರಂಗದ ಅರಿವಿನ ಮೂಲಕ ಕೃತಾರ್ಥರಾಗಿದ್ದು ಕಂಡು ಬಂತು.

ಅತ್ಯಂತ ಶ್ರದ್ಧಾಭಕ್ತಿಯಿಂದ ಮತ್ತು ಕಾರ್ಯಕ್ರಮವನ್ನು ಆಯೋಜಿಸಿದ ಚಂದ್ರಶೇಖರ, ಕಾರ್ಯದರ್ಶಿಗಳು ಹಾಗೂ ಕಲ್ಪನಾ ಉಮೇಶ ಬಸವ ಕೇಂದ್ರ, ತುಮಕೂರು ಕಾರ್ಯಕ್ರಮ ನಿರೂಪಣೆ ಮತ್ತು ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.
ತುಮಕೂರು ತಾಲೂಕಿನ ಹೊನಸಗೆರೆಯ ಮಕ್ಕಳು ವಚನ ಗಾಯನಕ್ಕೆ ಅತ್ಯಂತ ಸುಂದರವಾಗಿ ನೃತ್ಯ ಪ್ರದರ್ಶನವನ್ನು ಮಾಡಿ ಎಲ್ಲರ ಮನಸ್ಸನ್ನು ಗೆದ್ದರು.
ಇದೇ ಸಂದರ್ಭದಲ್ಲಿ ವಚನ ಕಂಠಪಾಠ, ವಚನ ಗಾಯನ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನವನ್ನು ವಿತರಿಸಲಾಯಿತು.
ತುಮಕೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರೂ ಹಾಗೂ ಪ್ರಖ್ಯಾತ ಗಮಕಿಗಳಾದ ಶರಣ ಎಮ್. ಜಿ. ಸಿದ್ಧರಾಮಯ್ಯ ಅವರನ್ನು ಸನ್ಮಾನಿಸಲಾಯಿತು.
ಪ್ರಸಾದ ದಾಸೋಹ ಸೇವೆಯನ್ನು ಮಾಡಿದ ಶಿಕ್ಷಕಿ ವಿನುತಾ ಚಂದ್ರಶೇಖರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಮುಂಜಾನೆ ಮತ್ತು ಸಂಜೆಯ ಎರಡೂ ಕಾರ್ಯಕ್ರಮಗಳನ್ನು ಸೇರಿ ಸುಮಾರ 500 ಕ್ಕೂ ಹೆಚ್ಚು ಶರಣ ಶರಣೆಯರು ಭಾಗವಹಿಸಿದ್ದು, ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಯಿತು.
