‘ಬಸವಣ್ಣನವರಿಗೆ ಅಪಮಾನ ಮಾಡುತ್ತಿರುವ ಕನ್ನೇರಿ ಸ್ವಾಮಿಯನ್ನು ಗಡೀಪಾರು ಮಾಡಿ’

ಬಸವ ಮೀಡಿಯಾ
ಬಸವ ಮೀಡಿಯಾ

‘ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿದರೆ ಕೋಮುವಾದಿಗಳಿಗೆ ಅದೇ ಭಾಷೆಯಲ್ಲಿ ಉತ್ತರ’

ಬೀದರ್

ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಯನ್ನು ರಾಜ್ಯದಿಂದ ಗಡೀಪಾರು ಮಾಡಲು ಬಸವಪರ, ದಲಿತಪರ, ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಸರಕಾರವನ್ನು ಆಗ್ರಹಿಸಿದ್ದಾರೆ.

ನಗರದಲ್ಲಿ ಗುರುವಾರ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರಿಗೆ ಅಪಮಾನ ಮಾಡುತ್ತಿರುವ ಕನ್ನೇರಿ ಸ್ವಾಮಿಯ ರಾಜ್ಯ ಪ್ರವೇಶ ನಿರ್ಬಂಧಿಸಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಹೇಳಿದರು.

ಸಾಂಸ್ಕೃತಿಕ ನಾಯಕ ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿದರೆ ಕೋಮುವಾದಿಗಳಿಗೆ ಅದೇ ಭಾಷೆಯಲ್ಲಿ ಉತ್ತರ ಕೊಡಲಾಗುವುದು, ಎಂದು ಸಾಮಾಜಿಕ ಕಾರ್ಯಕರ್ತ ವಿನಯ್‌ ಕುಮಾರ್‌ ಮಾಳಗೆ ಎಚ್ಚರಿಕೆ ನೀಡಿದರು..

ಕನ್ನೇರಿ ಸ್ವಾಮಿ ಬಸವಾದಿ ಶರಣರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತ ಸಮಾಜದಲ್ಲಿ ಗೊಂದಲ, ಅಶಾಂತಿ ಮೂಡಿಸುತ್ತಿದ್ದಾರೆ. ಮನುವಾದಿಗಳ ಕುಮ್ಮಕ್ಕಿನಿಂದ ಬಸವಾದಿ ಶರಣರ, ಪ್ರಗತಿಪರ ಮಠಾಧೀಶರ ವಿರುದ್ಧ ಮಾತನಾಡುತ್ತಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್‌ ಅವರ ತತ್ವಗಳನ್ನು ಅಪ್ರಸ್ತುತಗೊಳಿಸುವ ಹುನ್ನಾರ ನಡೆಸುತ್ತಿದ್ದಾರೆ.

ಕನ್ನೇರಿ ಸ್ವಾಮಿ ಭಾಷಣದ ಬಗ್ಗೆ ಸ್ವತಃ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಛೀಮಾರಿ ಹಾಕಿದೆ. ಹೀಗಿದ್ದರೂ ಅವರು ಸುಧಾರಿಸಿಕೊಂಡಿಲ್ಲ. ಆದಕಾರಣ ಅವರನ್ನು ರಾಜ್ಯ ಪ್ರವೇಶಿಸುವುದಕ್ಕೆ ನಿರ್ಬಂಧ ಹೇರುವುದು ಸೂಕ್ತ ಎಂದರು.

ಸಮಾನತೆಯಲ್ಲಿ ನಂಬಿಕೆ ಇರುವಂಥದ್ದು ಬಸವತತ್ವ. ಅದಕ್ಕೆ ವಿರುದ್ಧವಾದುದು ಸನಾತನ ವ್ಯವಸ್ಥೆ. ಬಸವಾದಿ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ಎನ್ನುವುದೇ ಹಾಸ್ಯಾಸ್ಪದ.

“ಬಸವಾದಿ ಶರಣರ ವಿಚಾರಗಳನ್ನು ಕೋಮುವಾದೀಕರಣಗೊಳಿಸಿ, ಹೈಜಾಕ್‌ ಮಾಡಲು ಮನುವಾದಿಗಳು ಹುನ್ನಾರ ನಡೆಸುತ್ತಿದ್ದು, ಅದಕ್ಕೆ ಪ್ರತ್ಯುತ್ತರ ನೀಡಲಾಗುವುದು,” ಎಂದು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಬಾಬುರಾವ್ ಪಾಸ್ವಾನ್‌ ಹೇಳಿದರು.

ಮೇ 18ರಂದು ಯಾದಗಿರಿಯ ಶಹಾಪುರದಲ್ಲಿ ಹಮ್ಮಿಕೊಂಡಿರುವ ಬಸವಾದಿ ಶರಣರ ಹಿಂದೂ ಸಮಾವೇಶವನ್ನು ಜನ ದಿಕ್ಕರಿಸಬೇಕು. ಜನರಲ್ಲಿ ಅರಿವು ಮೂಡಿಸಲೆಂದೇ ಮೇ 15ರಂದು ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಎಲ್ಲ ಪ್ರಗತಿಪರ ವಿಚಾರವಂತರು ಇದರಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

“ಹಿಂದೂ ಸಮಾವೇಶಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುವುದು ಸರಿಯಲ್ಲ. ಇದು ಬಸವಣ್ಣನ ಆಶಯಕ್ಕೆ ವಿರುದ್ಧ,” ಎಂದು ಲಿಂಗಾಯತ ಯುವ ಒಕ್ಕೂಟ ಅಧ್ಯಕ್ಷ ಆನಂದ್‌ ದೇವಪ್ಪ ಹೇಳಿದರು.

ಲಿಂಗಾಯತ ಸ್ವತಂತ್ರ ಧರ್ಮ

ಬಸವಣ್ಣನವರು ಸ್ವತಂತ್ರ ಲಿಂಗಾಯತ ಧರ್ಮ ಸಂಸ್ಥಾಪಕರು. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರ ವರದಿ ಆಧರಿಸಿ ರಾಜ್ಯ ಸರ್ಕಾರ ಲಿಂಗಾಯತ ಸ್ವತಂತ್ರ ಧರ್ಮವೆಂದು ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದೆ. ಈ ಹಿಂದೆ ಬ್ರಿಟಿಷರು ಕೂಡ ಲಿಂಗಾಯತ ಸ್ವತಂತ್ರ ಧರ್ಮ ಎಂದು ಹೇಳಿದ್ದಾರೆ. ದಾಖಲೆಗಳು ಕೂಡ ಅದನ್ನೇ ಹೇಳುತ್ತವೆ.

ಬಸವಾದಿ ಶರಣರು ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಹೊಸ ವಿಚಾರಗಳನ್ನು ಕೊಟ್ಟಿದ್ದಾರೆ. ಹೀಗಿರುವಾಗ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಬಸವಪರ ಸಂಘಟನೆಗಳ ಮುಖಂಡರಾದ ಬಸವರಾಜ ಬುಳ್ಳಾ, ಕುಶಾಲರಾವ್‌ ಪಾಟೀಲ್‌ ಗಾದಗಿ, ಆನಂದ್‌ ದೇವಪ್ಪ, ಓಂಪ್ರಕಾಶ್‌ ರೊಟ್ಟೆ, ಶಿವಶರಣಪ್ಪ ಹುಗ್ಗೆ ಪಾಟೀಲ, ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರಾದ ವಿನಯ್‌ ಕುಮಾರ್‌ ಮಾಳಗೆ, ಮಹೇಶ್‌ ಗೋರನಾಳಕರ್‌, ಬಾಬುರಾವ್‌ ಪಾಸ್ವಾನ್‌, ಮಾರುತಿ ಬೌದ್ಧೆ, ಅನಿಲ್‌ಕುಮಾರ್‌ ಬೇಲ್ದಾರ್‌ ಮಾತನಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
1 Comment
  • ಸುದ್ದಿ ಇನ್ನೋಂದಿಷ್ಟು ಮಾಹಿತಿಯೊಂದಿಗೆ ಬರಲಿ ಇದರಲ್ಲಿ ಇರುವವರು ಪೈಕಿ ಒಬ್ಬರು ಶಹಾಬಾದಗೆ ಹೊರಡುತ್ತಿಲ್ಲ.
    ಅದರಲ್ಲಿರುವ ಲಿಂಗಾಯತ ನಾಯಕರು ಬರಿ ಪ್ರಚಾರ ಪ್ರಿಯರು ಯಾವೊಬ್ಬರು ಸಮಯ ಸಮರ್ಪಿಸಲು ಸಿದ್ದರಿಲ್ಲ.
    ಇದುವೂ ಸುದ್ದಿ ಮಾಡಿ. ನಿಮಗೆ ಸುದ್ದಿ ಕಳಿಸಿದವರು ಎಲ್ಲಿದ್ದಾರೆ ಕೇಳಿ ?

Leave a Reply

Your email address will not be published. Required fields are marked *