‘ವರ್ಣಾಶ್ರಮ ತಿರಸ್ಕರಿಸಿ ಲಿಂಗಾಯತ ಧರ್ಮ ಸ್ಥಾಪಿಸಿದ ಬಸವಣ್ಣ’

ಬಸವ ಮೀಡಿಯಾ
ಬಸವ ಮೀಡಿಯಾ

ಕಂಪ್ಲಿ :

ಜಾತಿಯಿಂದ, ವೃತ್ತಿಯಿಂದ, ಲಿಂಗದಿಂದ ಅನೇಕ ಭೇದಗಳನ್ನು ಸೃಷ್ಟಿಸಿ ಮಾನವನ ಬಂಧುತ್ವಕ್ಕೆ ಕೊಳ್ಳಿಯಿಟ್ಟ ವೈದಿಕ ಮನುಧರ್ಮದ ವರ್ಣಾಶ್ರಮವನ್ನು ತಿರಸ್ಕರಿಸಿ ನೂತನ ಧರ್ಮವನ್ನು ಕೊಟ್ಟವರು ವಿಶ್ವಗುರು ಬಸವಣ್ಣನವರು ಎಂದು ಕೊಪ್ಪಳದ ಬಸವತತ್ವ ಚಿಂತಕರಾದ ಡಾ. ಸಂಗಮೇಶ ಕಲಹಾಳ ಅವರು ಅಭಿಪ್ರಾಯಪಟ್ಟರು.

ಸ್ಥಳೀಯ ಭಕ್ತಿ ಭಂಡಾರಿ ಬಸವೇಶ್ವರ ದಾಸೋಹಾಶ್ರಮ ಮತ್ತು ಸರ್ವ ಸಮಾಜದ ಆಶ್ರಯದಲ್ಲಿ ಹಮ್ಮಿಕೊಂಡ 893ನೇ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪೂಜ್ಯ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಬರೆದ “ಜೀವನ ದರ್ಶನ” ಪುಸ್ತಕ ಬಿಡುಗಡೆ ಮಾಡಿ ವಿಶೇಷ ಅನುಭಾವ ಮಂಡಿಸಿ ಮಾತನಾಡಿದರು.

ಹುಟ್ಟಿನಿಂದ ಮಾನವರೆಲ್ಲ ಒಂದೇ ರೀತಿಯಾಗಿ ಇದ್ದರೂ, ಮನು ಸಂವಿಧಾನದಲ್ಲಿ ವರ್ಣಾಶ್ರಮ ಪದ್ಧತಿಯನ್ನು ಜಾರಿಗೆ ತಂದು ಸಮಾಜದ ಸಮಾನತೆಯ ವ್ಯವಸ್ಥೆಯನ್ನು ಅಣಕಿಸಿದರು. ಇದರಿಂದ ಬೇಸತ್ತ ಬಸವಣ್ಣನವರು ಇವನಾರವ ಇವನಾರವ ಇವನಾರವ ಎನ್ನದೇ ಇವನಮ್ಮವ ಇವನಮ್ಮವ ಇವನಮ್ಮವ ಎಂದು ಸರ್ವರನ್ನೂ ಇಂಬಿಟ್ಟುಕೊಂಡು ಜಾತಿಯ ವ್ಯವಸ್ಥೆಯನ್ನು ಕಿತ್ತೊಗೆದು, ಅಪ್ಪ ಬೊಪ್ಪ ಎಂದು ಕರೆದು ಎಲ್ಲರನ್ನು ಅಪ್ಪಿಕೊಂಡು ಸಮತೆಯ ಕಹಳೆ ಊದಿದರು.

ಯಾರನ್ನು ಶತಶತಮಾನಗಳ ಕಾಲ ದೇವಸ್ಥಾನಗಳಲ್ಲಿ ಬಿಟ್ಟುಕೊಂಡಿರಲಿಲ್ಲವೋ ಅಂತಹ ದೇವಸ್ಥಾನದ ಸಂಸ್ಕೃತಿಯನ್ನೇ ಅಲ್ಲಗಳೆದು ದೇಹವೇ ದೇಗುಲ ಸಂಸ್ಕೃತಿಯನ್ನು ಹುಟ್ಟು ಹಾಕಿದರು. ಪರ್ಯಾಯವಾಗಿ ಜಗದೊಡೆಯ ಪರಮಾತ್ಮನ, ಅರಿವಿನ, ವೈಜ್ಞಾನಿಕ ಕುರುಹಾದ ಇಷ್ಟಲಿಂಗವನ್ನು ಕಂಡು ಹಿಡಿದು ಎಲ್ಲರೂ ಕೈಗೆ ಕೊಟ್ಟು ಪೂಜಿಸಲು ಕಲಿಸಿದರು. ಇಂತಹ ನೂತನ ಧರ್ಮದ ದೃಷ್ಟಾರರಾದ ಬಸವಣ್ಣನವರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವು ಬಸವಧರ್ಮ ಬೆಳೆಸಲು ಸನ್ನದ್ಧರಾಗಬೇಕೆಂದು, ವೈದಿಕರ ಷಡ್ಯಂತ್ರಕ್ಕೆ ಬಲಿಯಾಗಬಾರದೆಂದು ಯುವಕರಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಗುಣತೀರ್ಥವಾಡಿ-ಬಸವಕಲ್ಯಾಣ ಕಲ್ಯಾಣ ಮಹಾಮನೆಯ ಪೂಜ್ಯ ಬಸವಪ್ರಭು ಸ್ವಾಮೀಜಿಯವರು, ವಿಶ್ವಗುರು ಬಸವಾದಿ ಶರಣರು ಮಾನವತಾವಾದಿಗಳು, ಸಮತಾವಾದಿಗಳು ಮಿಗಿಲಾಗಿ ಅಮರಜ್ಯೋತಿಗಳು. ವರ್ಣಾಶ್ರಮ ಪದ್ಧತಿಯ ಮೇಲಸ್ತರದಲ್ಲಿದ್ದ ಬಸವಣ್ಣನವರು ಕೆಳಗಿದ್ದ ಶೂದ್ರರನ್ನು ಅಪ್ಪಿಕೊಂಡು ತನಗೆ ಸಿಕ್ಕ ಎಲ್ಲಾ ಸೌಕರ್ಯಗಳು ಸರ್ವರಿಗೂ ಸಿಗಬೇಕೆಂದು ಹಗಲಿರುಳು ಹೋರಾಡಿದ ಬಸವವಣ್ಣನವರನ್ನು ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು.

ಮನುವಾದಿ ಕುತಂತ್ರಿಗಳು ಬಸವಾದಿ ಶರಣರ ಹಿಂದೂ ಸಮಾವೇಶಗಳ ಮೂಲಕ ಮತ್ತೆ ವಚನಗಳನ್ನು ಹಾಳು ಮಾಡಿ ವೈದಿಕ ಧರ್ಮವನ್ನು ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿರುವರು. ಅವರ ಹುನ್ನಾರದ ಕಾರ್ಯಕ್ರಮವನ್ನು ಪ್ರತಿಯೊಬ್ಬರು ಖಂಡಿಸಬೇಕೆಂದರು.

ಬಸವಾದಿ ಪ್ರಮಥರು ತಮ್ಮ ಜೀವನವನ್ನು ಪಣಕ್ಕಿಟ್ಟು ಜಗತ್ತಿಗೆ ಸಮತೆಯ ಸಂದೇಶ ಸಾರುವ ವಚನಗಳನ್ನು ಉಳಿಸಿದ್ದಾರೆ. ವಚನಗಳಲ್ಲಿ ಶರಣರ ಪ್ರಾಣ ಅಡಗಿದೆ, ಅಂತಹ ವಚನಗಳನ್ನು ನಾವು ಓದುವುದಲ್ಲದೆ ವಚನ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಕಂಪ್ಲಿಯ ಭಕ್ತಿ ಭಂಡಾರಿ ಬಸವೇಶ್ವರ ದಾಸೋಹ ಆಶ್ರಮದ ನಾಲ್ಕನೇ ಪೀಠಾಧಿಕಾರಿಗಳಾದ ಪೂಜ್ಯ ಪಾಮಯ್ಯ ಶರಣರು ತಳವರ್ಗದಲ್ಲಿ ಹುಟ್ಟಿ ಅಸ್ಪೃಶ್ಯತೆಯ ಗಾಳಿಯನ್ನು ಉಸಿರಾಡಿ ಅದರಿಂದ ಹೊರಬರಲು ಬಸವಣ್ಣನವರ ಚಿಂತನೆ ಅಳವಡಿಸಿಕೊಂಡರಲ್ಲದೆ, ಕಂಪ್ಲಿಯ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ  ಲಿಂಗಾಯತ ಧರ್ಮ ಪ್ರಚಾರ ಮಾಡಿ, ಲಿಂಗದೀಕ್ಷೆ ಕೊಟ್ಟು ಅಸ್ಪೃಶ್ಯತೆಯಿಂದ ಅವರನ್ನು ಹೊರತಂದು ಅವರನ್ನು ನಿಜ ಲಿಂಗಾಯತರನ್ನಾಗಿ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರಲ್ಲದೆ, ಅವರಿಗೆ ನಾವೆಲ್ಲ ತನು ಮನ ಧನದಿಂದ ಸಹಕಾರ ಮಾಡಬೇಕೆಂದರು.

ಪೂಜ್ಯ ಪಾಮಯ್ಯ ಶರಣರು ಆಶಿರ್ವಚನ ಮಾಡಿದರು.

ಗಂಗಾವತಿ ರಾಷ್ಟ್ರೀಯ ಬಸವದಳದ ಪಂಪಣ್ಣ, ಹಂದ್ರಾಳ ರಾಷ್ಟ್ರೀಯ ಬಸವದಳದ ಶಿವಗಂಗಮ್ಮ, ರೈತ ಸಂಘದ ಹೋರಾಟಗಾರ ವಸಂತ ಕಹಾಳೆ ಮಾತನಾಡಿದರು.

ಕಂಪ್ಲಿಯ ಉದ್ಯಮಿ ಹೇಮಯ್ಯ ಸ್ವಾಮಿ ಅವರು ಷಟಸ್ಥಲ ಧ್ವಜಾರೋಹಣ ಮಾಡಿದರು. ಕುಮಾರಿ ರಕ್ಷಾ ವಚನ ಗಾಯನ ಮಾಡಿದರು. ನಗರದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ಅರ್ಥಪೂರ್ಣವಾಗಿ ನೆರವೇರಿತು.

ಅಶೋಕ ಹಡಪದ, ಮಾವಿನಹಳ್ಳಿ ಬಸವರಾಜ, ನಿಜಲಿಂಗಪ್ಪ ಮೆಣಸಿಗಿ, ಹಿರೇಜಂತಕಲ್ ರತ್ನಮ್ಮ, ರುದ್ರಯ್ಯ ಬಾವಿಮಠ, ಹಂದ್ರಾಳ ಬಸವನಗೌಡರ, ಆರಳಳ್ಳಿ ಮಲ್ಲಿಕಾರ್ಜುನ, ಕುಮಾರ ಅಂಗಡಿ, ಜ್ಯೋತಿ ಶ್ರೀನಿವಾಸ ಉಪಸ್ಥಿತರಿದ್ದರು.

ಮುಷ್ಟಗಟ್ಟಿ, ಮಣ್ಣೂರು, ಗುಂಡ್ಲವದ್ದಿಗೇರಿ, ತಾಳೂರು, ಬನ್ನಟ್ಟಿ, ಜೋಗಾ, ಬಳ್ಳಾರಿ, ಲೆಗ್ಯುಲೇಟರಿ, ರಾಮಸಾಗರ, ಗುತ್ತಿಗೆನೂರು, ಬೆಳಗೋಡ, ಸಂಡೂರು, ಹೊಸಪೇಟೆಯ ಶರಣರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು.

ಕಾರ್ಯಕ್ರಮದಲ್ಲಿ ಡಾ. ಸುನೀಲ ಪ್ರಾಸ್ತಾವಿಕವಾಗಿ ಮಾತನಾಡಿದರು, ರಾಷ್ಟ್ರೀಯ ಬಸವದಳದ ವೀರೇಶ ಅಸರಡ್ಡಿ ಸ್ವಾಗತಿಸಿದರು, ಚನ್ನಬಸಪ್ಪ ನಿರೂಪಿಸಿ, ಗಂಗಾಂಬಿಕೆ ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *